ಭಾರ್ತಿ ಹೆಕ್ಸಾಕಾಮ್ ಭರ್ಜರಿ ಬೆಲೆಗೆ ಷೇರು ಮಾರುಕಟ್ಟೆಗೆ ಸೇರ್ಪಡೆ; ಐಪಿಒ ಬೆಲೆ 570 ರೂ, ಲಿಸ್ಟಿಂಗ್ ಬೆಲೆ 755 ರೂ

|

Updated on: Apr 12, 2024 | 10:36 AM

Bharti Hexacom Shares Listed at 32.4pc Premium: ಫಿಕ್ಸೆಡ್ ಲೈನ್ ಟೆಲಿಫೋನ್ ಮತ್ತು ಬ್ರಾಡ್​ಬ್ಯಾಂಡ್ ಸರ್ವಿಸ್ ಒದಗಿಸುವ ಭಾರ್ತಿ ಹೆಕ್ಸಾಕಾಮ್​ನ ಷೇರುಪೇಟೆ ಪದಾರ್ಪಣೆ ಭರ್ಜರಿ ಯಶಸ್ಸು ಕಂಡಿದೆ. ಐಪಿಒದಲ್ಲಿ ಇದ್ದ ಬೆಲೆಗಿಂತ ಶೇ. 32.4ರಷ್ಟು ಹೆಚ್ಚಿನ ಬೆಲೆಗೆ ಷೇರು ಮಾರುಕಟ್ಟೆಯಲ್ಲಿ ಅದು ಲಿಸ್ಟ್ ಆಗಿದೆ. ಏರ್ಟೆಲ್​ನ ಅಂಗಸಂಸ್ಥೆಯಾದ ಭಾರ್ತಿ ಹೆಕ್ಸಾಕಾಮ್ ಐಪಿಒದಲ್ಲಿ 570 ರೂ ಬೆಲೆ ಹೊಂದಿತ್ತು. ಇಂದು ಏಪ್ರಿಲ್ 12ರಂದು ಷೇರು ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಪಡೆದು 755 ರೂಗೆ ಲಿಸ್ಟ್ ಆಗಿದೆ.

ಭಾರ್ತಿ ಹೆಕ್ಸಾಕಾಮ್ ಭರ್ಜರಿ ಬೆಲೆಗೆ ಷೇರು ಮಾರುಕಟ್ಟೆಗೆ ಸೇರ್ಪಡೆ; ಐಪಿಒ ಬೆಲೆ 570 ರೂ, ಲಿಸ್ಟಿಂಗ್ ಬೆಲೆ 755 ರೂ
ಭಾರ್ತಿ ಹೆಕ್ಸಾಕಾಂ
Follow us on

ನವದೆಹಲಿ, ಏಪ್ರಿಲ್ 12: ಭಾರ್ತಿ ಏರ್ಟೆಲ್ ಮಾಲಕತ್ವದ ಭಾರ್ತಿ ಹೆಕ್ಸಾಕಾಂ (Bharti Hexacom) ಷೇರು ಮಾರುಕಟ್ಟೆಯಲ್ಲಿ ಅಮೋಘ ಬೇಡಿಕೆ ಪಡೆದುಕೊಂಡಿದೆ. ಐಪಿಒದಲ್ಲಿದ್ದ ಬೆಲೆಗಿಂತ ಶೇ. 32.4ರಷ್ಟು ಹೆಚ್ಚಿನ ಬೆಲೆಗೆ ಷೇರು ಲಿಸ್ಟ್ ಆಗಿದೆ. ಶೇ. 12ರಿಂದ 15ರಷ್ಟು ಹೆಚ್ಚಿನ ಬೆಲೆಗೆ ಲಿಸ್ಟ್ ಆಗಬಹುದು ಎಂದು ನಿರೀಕ್ಷಿಸಿಲಾಗಿತ್ತು. ಅದನ್ನೂ ಮೀರಿಸಿ ಬೇಡಿಕೆ ಗಿಟ್ಟಿಸಿದೆ. ಏಪ್ರಿಲ್ 3ರಿಂದ 5ರವರೆಗೆ ನಡೆದ ಐಪಿಒ ಅಥವಾ ಆರಂಭ ಸಾರ್ವಜನಿಕ ಕೊಡುಗೆಯಲ್ಲಿ (IPO) 570 ರೂ ಬೆಲೆಗೆ ಷೇರು ವಿತರಿಸಲಾಗಿತ್ತು. ಬಿಎಸ್​ಇ ಮತ್ತು ಎನ್​ಎಸ್​ಇ ಎರಡರಲ್ಲೂ ಇಂದು ಶುಕ್ರವಾರ ಭಾರ್ತಿ ಹೆಕ್ಸಾಕಾಮ್ ಬರೋಬ್ಬರಿ 755 ರೂಗೆ ಲಿಸ್ಟ್ ಆಗಿದೆ. ಇದು ಈ ಹಣಕಾಸು ವರ್ಷದ ಮೊದಲ ಐಪಿಒ ಆಗಿದ್ದು ಷೇರು ಮಾರುಕಟ್ಟೆಗೆ ಶುಭಾರಂಭ ಸಿಕ್ಕಂತಾಗಿದೆ.

ಬ್ರಾಡ್​ಬ್ಯಾಂಡ್ ಮತ್ತು ಫಿಕ್ಸೆಡ್ ಲೈನ್ ಫೋನ್ ಸರ್ವಿಸ್ ನೀಡುವ ಕಂಪನಿಯಾದ ಭಾರ್ತಿ ಹೆಕ್ಸಾಕಾಮ್​ನಲ್ಲಿ ಭಾರ್ತಿ ಏರ್ಟೆಲ್ ಶೇ. 70ರಷ್ಟು ಷೇರು ಪಾಲು ಹೊಂದಿದೆ. ಶೇ. 30ರಷ್ಟು ಪಾಲು ಹೊಂದಿದ್ದ ಟೆಲಿಕಮ್ಯೂನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಈ ಪೈಕಿ ಶೇ. 15ರಷ್ಟನ್ನು ಆಫ್​ಲೋಡ್ ಮಾಡಿದೆ. ಅಂದರೆ 7.5 ಕೋಟಿ ಸಂಖ್ಯೆಯಷ್ಟು ಈಕ್ವಿಟಿ ಷೇರುಗಳು ಐಪಿಒ ಮೂಲಕ ಬಿಕರಿಯಾಗಿದ್ದವು. ಈ ಷೇರು ಮಾರಾಟದಿಂದ 4,275 ಕೋಟಿ ರೂ ಬಂಡವಾಳ ಬಂದಂತಾಗಿದೆ.

ಈ 7.5 ಕೋಟಿ ಷೇರುಗಳಲ್ಲಿ ಮುಕ್ಕಾಲು ಭಾಗದ ಷೇರುಗಳನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ (ಕ್ಯುಐಬಿ) ಮೀಸಲಿರಿಸಲಾಗಿದೆ. ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ ಶೇ. 15 ಹಾಗೂ ಇನ್ನುಳಿದ ಷೇರುಗಳು ರೀಟೇಲ್ ಹೂಡಿಕೆದಾರರಿಗೆ ಆಫರ್ ಮಾಡಲಾಗಿತ್ತು. ಐಪಿಒದಲ್ಲಿ ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಜನರು ಷೇರು ಖರೀದಿಗೆ ಮುಗಿಬಿದ್ದಿದ್ದರು.

ಇದನ್ನೂ ಓದಿ: ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಳದಿಂದ ಜಾಗತಿಕವಾಗಿ ಪರಿಣಾಮಗಳೇನಿರಬಹುದು? ಉದ್ಯಮಿ ಉದಯ್ ಕೋಟಕ್ ಎಚ್ಚರಿಸಿದ ಅಂಶಗಳಿವು

ಐಪಿಒದಲ್ಲಿ ನೀಡಲಾಗಿದ್ದ ಆಫರ್​ಗೆ ನಿಗದಿಗಿಂತ 30 ಪಟ್ಟು ಹೆಚ್ಚು ಬಾರಿ ಸಬ್​ಸ್ಕ್ರಿಪ್ಷನ್ ನಡೆದಿತ್ತು. ಕ್ವಾಲಿಫೈಡ್ ಇನ್ಸ್​ಟಿಟ್ಯೂಶನಲ್ ಇನ್ವೆಸ್ಟರ್​ಗಳಿಂದಂತೂ 48.57ಕ್ಕೂ ಹೆಚ್ಚು ಬಾರಿ ಸಬ್​ಸ್ಕ್ರಿಪ್ಷನ್ ಆಗಿತ್ತು. ಎನ್​ಐಐ ಅಥವಾ ಸಾಂಸ್ಥಿಕೇತರ ಹೂಡಿಕೆದಾರರಿಂದ 10.52 ರಷ್ಟು ಬಾರಿ ಸಬ್​ಸ್ಕ್ರಿಪ್ಷನ್ ನಡೆದರೆ ರೀಟೇಲ್ ಹೂಡಿಕೆದಾರರಿಗೆ ನಿಗದಿ ಇದ್ದ ಷೇರುಗಳು 2.83 ಬಾರಿ ಸಬ್​ಸ್ಕ್ರೈಬ್ ಆಗಿತ್ತು. ಈ ಹಿನ್ನೆಲೆಯಲ್ಲಿ ಭಾರ್ತಿ ಹೆಕ್ಸಾಕಾಮ್ ಐಪಿಒ ಬೆಲೆಗಿಂತ ಶೇ. 12ರಿಂದ 15ರಷ್ಟು ಹೆಚ್ಚಿನ ಬೆಲೆಗೆ ಷೇರು ವಿನಿಮಯ ಕೇಂದ್ರದಲ್ಲಿ ಲಿಸ್ಟ್ ಆಗಬಹುದು ಎಂದು ತಜ್ಞರು ಅಂದಾಜಿಸಿದ್ದರು. ಇಲ್ಲೂ ಕೂಡ ಭಾರ್ತಿ ಹೆಕ್ಸಾಕಾಮ್ ಎಲ್ಲರ ನಿರೀಕ್ಷೆ ಮೀರಿಸಿ ಶೇ. 32.4ರಷ್ಟು ಹೆಚ್ಚಿನ ಬೆಲೆಗೆ ಲಿಸ್ಟ್ ಆಗಿ ಸೂಪರ್ ಹಿಟ್ ಎನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:33 am, Fri, 12 April 24