ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಳದಿಂದ ಜಾಗತಿಕವಾಗಿ ಪರಿಣಾಮಗಳೇನಿರಬಹುದು? ಉದ್ಯಮಿ ಉದಯ್ ಕೋಟಕ್ ಎಚ್ಚರಿಸಿದ ಅಂಶಗಳಿವು
US Inflation Rate Effect: ಅಮೆರಿಕದಲ್ಲಿ ನಿನ್ನೆ ಬುಧವಾರ ಬಿಡುಗಡೆಯಾದ ದತ್ತಾಂಶದ ಪ್ರಕಾರ ಮಾರ್ಚ್ ತಿಂಗಳಲ್ಲಿ ಹಣದುಬ್ಬರ ಶೇ. 3.50ಕ್ಕೆ ಏರಿದೆ. ಬ್ರೆಂಟ್ ಕ್ರೂಡ್ ತೈಲ ಬೆಲೆಯೂ ಹೆಚ್ಚಿನ ಮಟ್ಟದಲ್ಲಿದೆ. ಇದರಿಂದಾಗಿ, ಜಾಗತಿಕವಾಗಿ ವಿವಿಧ ದೇಶಗಳು ಬಡ್ಡಿದರವನ್ನು ಹೆಚ್ಚಿನ ಮಟ್ಟದಲ್ಲೇ ಇರಿಸುವುದು ಅನಿವಾರ್ಯವಾಗಬಹುದು ಎಂದು ಭಾರತದ ಉದ್ಯಮಿ ಉದಯ್ ಕೋಟಕ್ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ, ಏಪ್ರಿಲ್ 11: ಅಮೆರಿಕದಲ್ಲಿ ಮಾರ್ಚ್ ತಿಂಗಳ ಹಣದುಬ್ಬರ (US Inflation rate) ನಿರೀಕ್ಷೆಗಿಂತಲೂ ಹೆಚ್ಚಿನ ಮಟ್ಟಕ್ಕೆ ಏರಿದೆ. ಫೆಬ್ರುವರಿಯಲ್ಲಿ ಶೇ. 3.2ರಷ್ಟಿದ್ದ 12 ತಿಂಗಳ ಸರಾಸರಿ ಹಣದುಬ್ಬರ ಮಾರ್ಚ್ನಲ್ಲಿ 3.50ಕ್ಕೆ ಏರಿದೆ. ಇಳಿಕೆಯಲ್ಲಿ ಹಾದಿಯಲ್ಲಿದ್ದ ಹಣದುಬ್ಬರ ಹೆಚ್ಚಾಗಿದ್ದು ಬಹಳ ಮಂದಿಗೆ ಅಚ್ಚರಿ ಮೂಡಿಸಿದೆ. ಜಾಗತಿಕವಾಗಿ ವಿವಿಧ ಮಾರುಕಟ್ಟೆಗಳು ನಿರಾಸೆಗೊಂಡಿವೆ. ಭಾರತದ ಉದ್ಯಮಿ ಉದಯ್ ಕೋಟಕ್ (Uday Kotak) ಅವರು ಅಮೆರಿಕದ ಈ ಹೆಚ್ಚಿನ ಮಟ್ಟದ ಹಣದುಬ್ಬರವು ಜಾಗತಿಕವಾಗಿ ವಿಚಲನೆಗೆ ಕಾರಣವಾಗಬಹುದು ಎಂದಿದ್ದಾರೆ. ಅಮೆರಿಕದ ಹೆಚ್ಚಿನ ಹಣದುಬ್ಬರ ಮತ್ತು ಹೆಚ್ಚಿನ ತೈಲ ಬೆಲೆ ಇವೆರಡು ಅಂಶಗಳು ವಿಶ್ವಾದ್ಯಂತ ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿ ಬಡ್ಡಿದರ ಹೆಚ್ಚಿನ ಮಟ್ಟದಲ್ಲೇ ಇರಿಸುವಂತೆ ಮಾಡಬಹುದು ಎಂಬುದು ಉದಯ್ ಕೋಟಕ್ ಅನಿಸಿಕೆ.
ಅಮೆರಿಕದ ಹಣದುಬ್ಬರ ಹೆಚ್ಚಳದಿಂದ ಏನು ಪರಿಣಾಮ?
ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಜೂನ್ ಅಥವಾ ಆಗಸ್ಟ್ನಲ್ಲಿ ಬಡ್ಡಿದರ ಕಡಿತಗೊಳಿಸಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಮಾರ್ಚ್ ತಿಂಗಳಲ್ಲಿ ಬಡ್ಡಿದರ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿರುವುದರಿಂದ ಸದ್ಯದ ಮಟ್ಟಿಗೆ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಬಹಳ ಕಡಿಮೆ. ಉದಯ್ ಕೋಟಕ್ ಅವರ ಅಂದಾಜು ಪ್ರಕಾರ ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪದಲ್ಲಿ ಬಡ್ಡಿದರ ಇಳಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಡಿಜಿಟಲ್ ಆಗಿ ತಲುಪಿಸುವ ಸೇವೆಗಳ ರಫ್ತು: ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿ ಭಾರತ
‘ಅಮೆರಿಕದ ಹಣದುಬ್ಬರ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿದೆ. ಬಡ್ಡಿದರ ಕಡಿತ ಮಾಡುವುದೇ ಆದರೆ ಅಧ್ಯಕ್ಷೀಯ ಚುನಾವಣೆ ಸಮೀಪ ಇದ್ದಾಗ ಆಗಬಹುದು. ಬ್ರೆಂಟ್ ಆಯಿಲ್ ಈಗ 90 ಡಾಲರ್ ಇದೆ. ಇದು ಭಾರತವನ್ನೂ ಒಳಗೊಂಡಂತೆ ವಿಶ್ವಾದ್ಯಂತ ಬಡ್ಡಿದರ ಹೆಚ್ಚಿನ ಮಟ್ಟದಲ್ಲಿ ಇರಬೇಕಾಗಬಹುದು. ಒಂದೇ ವೈಲ್ಡ್ ಕಾರ್ಡ್ ಎಂದರೆ ಚೀನಾ ಒಳಗಿಂದೊಳಗೆ ಕುಸಿಯುತ್ತಿರುವುದು. ಜಾಗತಿಕ ವಿಚಲನೆಗೆ ಸಿದ್ಧವಾಗಿರಿ,’ ಎಂದು ಉದಯ್ ಕೋಟಕ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಚೀನಾದಲ್ಲಿ ಡೀಫ್ಲೇಶನ್ ಸಮಸ್ಯೆ ಕಾಡಿದ್ದು, ಮಾರುಕಟ್ಟೆ ಬೇಡಿಕೆಗೆ ಬಲ ತುಂಬಲು ಅಲ್ಲಿನ ಸರ್ಕಾರ ಇನ್ನಷ್ಟು ಉತ್ತೇಜಕ ಪ್ಯಾಕೇಜ್ಗಳನ್ನು ಬಿಡುಗಡೆ ಮಾಡಬೇಕಾಗಬಹುದು.
ಚಿನ್ನದ ಬೆಲೆ ಇಳಿಕೆ ಸಾಧ್ಯತೆ
ಅಮೆರಿಕದಲ್ಲಿ ಹಣದುಬ್ಬರದಿಂದಾಗಿ ಬಡ್ಡಿದರ ಸದ್ಯಕ್ಕೆ ಕಡಿತಗೊಳ್ಳುವುದಿಲ್ಲ ಎನ್ನುವ ಸಾಧ್ಯತೆ ಇರುವುದರಿಂದ ಚಿನ್ನ, ಬೆಳ್ಳಿ ಬೆಲೆ ಇಳಿಕೆಗೊಳ್ಳಬಹುದು. ಈಗಾಗಲೇ ಇವೆರಡು ಲೋಹಗಳ ಬೆಲೆ ಇಳಿಯತೊಡಗಿದೆ. ಅಮೆರಿಕದಲ್ಲಿ ಬಡ್ಡಿದರ ಕಡಿತಗೊಳ್ಳುತ್ತದೆ ಎನ್ನುವ ಆತಂಕದಲ್ಲಿ ಚಿನ್ನದತ್ತ ವಾಲಿದ್ದ ಹೂಡಿಕೆದಾರರು ಈಗ ಮರಳಿ ಹೋಗಬಹುದು.
ಇದನ್ನೂ ಓದಿ: ಇದು ಅವರಲ್ಲ, ಅವರಲ್ಲ..! ಎನ್ಎಸ್ಇ ಸಿಇಒ ಆಶೀಶ್ಕುಮಾರ್ ಚೌಹಾಣ್ ಡೀಪ್ಫೇಕ್ ವಿಡಿಯೋ
ಷೇರು ಮಾರುಕಟ್ಟೆ ಬೀಳುವ ಸಂಭವ
ಅಮೆರಿಕದ ಹಣದುಬ್ಬರ ಹೆಚ್ಚಳವು ಜಾಗತಿಕವಾಗಿ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ. ಭಾರತದ ಸ್ಟಾಕ್ ಮಾರುಕಟ್ಟೆಗೆ ತಾತ್ಕಾಲಿಕವಾಗಿ ಹಿನ್ನಡೆ ತರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ