ಮುಂಬೈ, ಆಗಸ್ಟ್ 31: ಬೆಂಗಳೂರು ಮೂಲದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿ ಸಂಸ್ಥೆ (BHEL) ಷೇರುಬೆಲೆ ಏರುಗತಿಯಲ್ಲಿ ಮುಂದುವರಿದಿದೆ. ಉಷ್ಣ ವಿದ್ಯುತ್ ಸ್ಥಾವರ (Thermal Power Plant) ಸ್ಥಾಪಿಸಲು ಎನ್ಟಿಪಿಸಿಯಿಂದ 15,530 ಕೋಟಿ ರೂ ಗುತ್ತಿಗೆ ಪಡೆದ ಒಂದು ದಿನದ ಬಳಿಕ ಆಗಸ್ಟ್ 31ರಂದು ಬಿಎಚ್ಇಎಲ್ ಷೇರುಬೆಲೆ 52 ವಾರಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಗುರುವಾರ ಬಿಎಚ್ಇಎಲ್ ಷೇರುಬೆಲೆ ಶೇ. 1.7ರಷ್ಟು ಏರಿ 121.15 ರೂ ಮಟ್ಟಕ್ಕೆ ತಲುಪಿತ್ತು. ಇದರೊಂದಿಗೆ ಕಳೆದ ಐದು ದಿನದಲ್ಲಿ ಅದರ ಬೆಲೆ ಶೇ. 6ರಷ್ಟು ಹೆಚ್ಚಾಯಿತು. ಸದ್ಯ ಬಿಎಚ್ಇಎಲ್ ಷೇರು 120.65 ರೂ ಬೆಲೆಯಲ್ಲಿ ವಹಿವಾಟು ಕಾಣುತ್ತಿದೆ. ನಿನ್ನೆ ದಿನಾಂತ್ಯದಲ್ಲಿ (ಆಗಸ್ಟ್ 30) ಅದು 118 ರೂ ಬೆಲೆಯಲ್ಲಿ ಅಂತ್ಯಗೊಂಡಿತ್ತು.
ಛತ್ತೀಸ್ಗಡದ ಲಾರಾ ಎಂಬಲ್ಲಿ 2×800 ಮೆಗಾವ್ಯಾಟ್ ಸೂಪರ್ಕ್ರಿಟಿಕಲ್ ಥರ್ಮಲ್ ಪವರ್ ಪ್ರಾಜೆಕ್ಟ್ನ ಎರಡನೇ ಹಂತದ ಯೋಜನೆಯ ಗುತ್ತಿಗೆಯನ್ನು ಎನ್ಟಿಪಿಸಿ ವತಿಯಿಂದ ಬಿಎಚ್ಇಎಲ್ಗೆ ನೀಡಲಾಗಿದೆ. ಅಂತಾರಾಷ್ಟ್ರೀಯ ಬಿಡ್ಡಿಂಗ್ ಮೂಲಕ ಬಿಎಚ್ಇಎಲ್ ಪಡೆದಿರುವ ಈ ಗುತ್ತಿಗೆಯ ಮೊತ್ತ 15,530 ಕೋಟಿ ರೂ ಆಗಿದೆ.
ಇದನ್ನೂ ಓದಿ: ಎಬಿಆರ್ವೈ ಸ್ಕೀಮ್ ಮೂಲಕ ನಿರೀಕ್ಷೆಮೀರಿ ಹೊಸ ಉದ್ಯೋಗಸೃಷ್ಟಿ; ಸರ್ಕಾರದಿಂದ ದತ್ತಾಂಶ ಬಿಡುಗಡೆ
ಫ್ಯಾಕ್ಟರಿಯ ವಿನ್ಯಾಸ, ಎಂಜಿನಿಯರಿಂಗ್, ತಯಾರಿಕೆ, ಸರಬರಾಜು, ಕಟ್ಟಡನಿರ್ಮಾಣ, ಟೆಸ್ಟಿಂಗ್ ಮತ್ತು ಕಮಿಷನಿಂಗ್ ಇತ್ಯಾದಿ ಇನ್ನೂ ಹಲವು ಕಾರ್ಯಗಳು ಈ ಗುತ್ತಿಗೆಯಲ್ಲಿ ಒಳಗೊಂಡಿವೆ. ಎರಡು ಯೂನಿಟ್ಗಳನ್ನು ಮಾಡಲಾಗಿದ್ದು ಪ್ರತಿಯೊಂದಕ್ಕೂ ನಿಗದಿತ ಗುರಿ ನೀಡಲಾಗಿದೆ. ಯೂನಿಟ್-1 ಅನ್ನು ಪೂರ್ಣಗೊಳಿಸಲು 48 ತಿಂಗಳು (4 ವರ್ಷ), ಯೂನಿಟ್-2 ಅನ್ನು ಪೂರ್ಣಗೊಳಿಸಲು 52 ತಿಂಗಳ ಕಾಲಾವಕಾಶ ಕೊಡಲಾಗಿದೆ. ಈ ಡೆಡ್ಲೈನ್ ಒಳಗೆ ಪ್ರಾಜೆಕ್ಟ್ ಮುಗಿಯಬೇಕೆಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ.
ಎನ್ಟಿಪಿಸಿ ಗುತ್ತಿಗೆ ಪಡೆಯುವ ಮುನ್ನ ಬಿಎಚ್ಇಎಲ್ ಸಂಸ್ಥೆ ಎನ್ಎಚ್ಪಿಸಿ ಮತ್ತು ಅದಾನಿ ಕಂಪನಿಯಿಂದ ಇತ್ತೀಚೆಗಷ್ಟೇ ಎರಡು ಗುತ್ತಿಗೆಗಳನ್ನು ಪಡೆದಿತ್ತು.
ಇದನ್ನೂ ಓದಿ: ಅದಾನಿ ಕಂಪನಿಗಳ ವಿರುದ್ಧ ಮತ್ತೆ ವಂಚನೆ ಆರೋಪ; ಇದು ಸೋರೋಸ್ ಪಿತೂರಿ ಎಂದ ಅದಾನಿ ಗ್ರೂಪ್
ಎನ್ಎಚ್ಪಿಸಿಯಿಂದ 2,242 ಕೋಟಿ ರೂ ಮೊತ್ತದ ಪ್ರಾಜೆಕ್ಟ್ ಸಿಕ್ಕಿದೆ. ಇನ್ನು, ಮಹಾನ್ ಎನರ್ಜೆನ್ ಲಿ ಸಂಸ್ಥೆಯಿಂದ 2×800 ಮೆಗಾವ್ಯಾಟ್ ಪವರ್ ಪ್ರಾಜೆಕ್ಟ್ ಮಧ್ಯಪ್ರದೇಶದ ಬಂಧೋರಾ ಎಂಬಲ್ಲಿ ಸ್ಥಾಪನೆಯಾಗಲಿದೆ. ಇದರ ಗುತ್ತಿಗೆ ಮೊತ್ತ 4,000 ಕೋಟಿ ರೂ ಆಗಿದೆ. ಮಹಾನ್ ಎನರ್ಜೆನ್ ಸಂಸ್ಥೆ ಅದಾನಿ ಪವರ್ನ ಅಂಗಸಂಸ್ಥೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ