ಎಬಿಆರ್ವೈ ಸ್ಕೀಮ್ ಮೂಲಕ ನಿರೀಕ್ಷೆಮೀರಿ ಹೊಸ ಉದ್ಯೋಗಸೃಷ್ಟಿ; ಸರ್ಕಾರದಿಂದ ದತ್ತಾಂಶ ಬಿಡುಗಡೆ
Atmanirbhar Rozgar Yojana: ಹೊಸ ಉದ್ಯೋಗಸೃಷ್ಟಿಗೆ ಉತ್ತೇಜನ ನೀಡಲೆಂದು ರೂಪಿಸಲಾದ ಸ್ವಾವಲಂಬಿ ಭಾರತ ಉದ್ಯೋಗ ಯೋಜನೆ ಅಥವಾ ಆತ್ಮನಿರ್ಭರ್ ರೋಜಗಾರ್ ಯೋಜನೆ (ಎಬಿಆರ್ವೈ) ತನ್ನ ಆರಂಭಿಕ ಗುರಿಯನ್ನು ಸುಲಭವಾಗಿ ದಾಟಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿದೆ.
ನವದೆಹಲಿ, ಆಗಸ್ಟ್ 31: ಉದ್ಯೋಗಸೃಷ್ಟಿಗೆಂದು ಕೇಂದ್ರ ಸರ್ಕಾರ ರೂಪಿಸಿದ ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆ (ABRY- Atmanirbhar Rozgar Yojana) ಶುಭಾರಂಭ ಮಾಡಿರುವುದು ತಿಳಿದುಬಂದಿದೆ. ಕೋವಿಡ್-19 ಸಾಂಕ್ರಾಮಿಕ ಸಂದರ್ಭದಿಂದ ಉದ್ಯೋಗ ವಾತಾವರಣದ ಚೇತರಿಕೆ ಮತ್ತು ಉದ್ಯೋಗಸೃಷ್ಟಿಸಲು ಅಂದುಕೊಂಡಿದ್ದ ಆರಂಭಿಕ ಗುರಿಯನ್ನು ಸುಲಭವಾಗಿ ಮುಟ್ಟಲಾಗಿರುವುದು ತಿಳಿದುಬಂದಿದೆ. ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಹೇಳಿಕೆ ಪ್ರಕಾರ ರೋಜಗಾರ್ ಯೋಜನೆಗೆ ನೊಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕವಾಗಿರುವ 2022ರ ಮಾರ್ಚ್ವರೆಗೆ ಭಾರತದಾದ್ಯಂತ 71.8 ಲಕ್ಷ ಮಂದಿಗೆ ಉದ್ಯೋಗ ಕೊಡುವ ಗುರಿ ಇಡಲಾಗಿತ್ತು. ಆದರೆ, 2023ರ ಜುಲೈ 31ರೊಳಗೆ 75.8 ಲಕ್ಷ ಹೊಸ ಉದ್ಯೋಗಿಗಳ ನೊಂದಣಿ ಆಗಿದೆ ಎನ್ನಲಾಗಿದೆ.
60,44,155 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡ 1,52,3890 ಸಂಸ್ಥೆಗಳು ಆತ್ಮನಿರ್ಭರ್ ರೋಜಗಾರ್ ಯೋಜನೆ ಅಡಿಯಲ್ಲಿ 9,669 ಕೋಟಿ ರೂನಷ್ಟು ಅನುಕೂಲಗಳನ್ನು ಪಡೆದುಕೊಂಡಿವೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮಾಹಿತಿ ನೀಡಿದೆ.
2020ರಲ್ಲಿ ಆರಂಭವಾದ ಎಬಿಆರ್ವೈ ಸ್ಕೀಮ್ನ ಮುಖ್ಯ ಉದ್ದೇಶವು ಹೊಸ ಉದ್ಯೋಗಾವಕಾಶಗಳಿಗೆ ಉತ್ತೇಜನ ನಿಡುವುದು. ಇಪಿಎಫ್ಒಗೆ ನೊಂದಾಯಿತವಾಗಿರುವ ಸಂಸ್ಥೆಗಳ ಉದ್ಯೋಗದಾತರಿಗೆ ಹಣಕಾಸು ನೆರವನ್ನು ಈ ಯೋಜನೆ ಕೊಡುತ್ತದೆ.
ಇದನ್ನೂ ಓದಿ: ಅದಾನಿ ಕಂಪನಿಗಳ ವಿರುದ್ಧ ಮತ್ತೆ ವಂಚನೆ ಆರೋಪ; ಇದು ಸೋರೋಸ್ ಪಿತೂರಿ ಎಂದ ಅದಾನಿ ಗ್ರೂಪ್
ಉದಾಹರಣೆಗೆ, ಕೆಲಸ ಕಳೆದುಕೊಂಡಿರುವ ಮತ್ತು ನಿರುದ್ಯೋಗಿಗಳಾಗಿರುವ ವ್ಯಕ್ತಿಗಳಿಗೆ ಕೆಲಸ ಕೊಟ್ಟರೆ ಎಪಿಎಫ್ ಖಾತೆಗೆ ಕೊಡಲಾಗುವ ವೇತನದ ಶೇ. 24ರಷ್ಟು ಹಣವನ್ನು ಈ ಯೋಜನೆಯಿಂದಲೇ ಒದಗಿಸಲಾಗುತ್ತದೆ. ಅಂದರೆ ಉದ್ಯೋಗಿಯ ಕೊಡುಗೆ ಮತ್ತು ಕಂಪನಿಯ ಕೊಡುಗೆ ಎರಡನ್ನೂ ಸರ್ಕಾರವೇ ಭರಿಸುತ್ತದೆ. ಒಂದು ಸಂಸ್ಥೆಯಲ್ಲಿ ಒಂದು ಸಾವಿರ ಉದ್ಯೋಗಿಗಳವರೆಗೆ ಈ ಕೊಡುಗೆ ಇರುತ್ತದೆ. ಆದರೆ, ಒಂದು ಸಾವಿರಕ್ಕಿಂತ ಹೆಚ್ಚಿನ ಉದ್ಯೋಗಿಗಳು ಇದ್ದಲ್ಲಿ ಹೊಸ ಉದ್ಯೋಗಿಗಳ ಇಪಿಎಫ್ ಖಾತೆಗೆ ಶೇ. 12ರಷ್ಟು ಹಣವನ್ನು ಮಾತ್ರ ಯೋಜನೆಯಿಂದ ನೀಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ