ನವದೆಹಲಿ, ಅಕ್ಟೋಬರ್ 22: ವಿಶ್ವದಲ್ಲಿ ಬಿಲಿಯನೇರ್ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಸಿರಿವಂತರ ಸಂಪತ್ತೂ ಕೂಡ ಗಣನೀಯವಾಗಿ ಏರಿಕೆ ಆಗುತ್ತಿದೆ. ಫೋರ್ಬ್ಸ್ ಬಿಲಿಯನೇರ್ಗಳ ರಿಯಲ್ ಟೈಮ್ ಪಟ್ಟಿಯಲ್ಲಿ ಒಂದು ಬಿಲಿಯನ್ ಡಾಲರ್ಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವವ ಸಂಖ್ಯೆ 2,800ಕ್ಕೂ ಹೆಚ್ಚಿದೆ. ಇದರಲ್ಲಿ ಅಮೆರಿಕದವರ ಸಂಖ್ಯೆಯೇ 813 ಇದೆ. ಭಾರತದ 200 ಜನರು ಬಿಲಿಯನೇರ್ಗಳ ಪಟ್ಟಿಗೆ ಸೇರಿದ್ದಾರೆ. ಅತಿಹೆಚ್ಚು ಬಿಲಿಯನೇರ್ಗಳನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಅಮೆರಿಕ, ಚೀನಾ ಮತ್ತು ಭಾರತ ಟಾಪ್-3 ದೇಶಗಳೆನಿಸಿವೆ. ಭಾರತೀಯ ಉಪಖಂಡದಲ್ಲಿ ಭಾರತ ಬಿಟ್ಟರೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನೇಪಾಳ ಮಾತ್ರವೇ. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಬರ್ಮಾ, ಭೂತಾನ್ ಇತ್ಯಾದಿ ದೇಶಗಳಲ್ಲಿ ಒಬ್ಬರೂ ಬಿಲಿಯನೇರ್ಗಳಿಲ್ಲ.
ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಬಿಲಿಯನೇರ್ ಬಿನೋದ್ ಚೌಧರಿ. ಇವರ ಬಳಿ ಇರುವ ಆಸ್ತಿಮೌಲ್ಯ 1.8 ಬಿಲಿಯನ್ ಡಾಲರ್. ವಾಯ್ ವಾಯ್ ನೂಡಲ್ಸ್ ಎಂಬ ಕಂಪನಿ ಕಟ್ಟಿ ಅಗಾಧವಾಗಿ ಬೆಳೆಸಿದ್ದಾರೆ ಇವರು.
ಕಠ್ಮಂಡುವಿನ ಖ್ಯಾತ ಬಿಸಿನೆಸ್ ಫ್ಯಾಮಿಲಿಯಲ್ಲಿ ಜನಿಸಿದ ಬಿನೋದ್ ಚೌಧರಿ, ಭಾರತದಲ್ಲಿ ಸಿಎ ಓದಲು ಬಯಸಿದ್ದರಾದರೂ ತಮ್ಮ ತಂದೆಯ ಅನಾರೋಗ್ಯ ಕಾರಣಕ್ಕೆ ಬಹಳ ಬೇಗನೇ ಫ್ಯಾಮಿಲಿ ಬಿಸಿನೆಸ್ ನಿರ್ವಹಣೆಗೆ ಇಳಿಯಬೇಕಾಯಿತು. ನೂಡಲ್ಸ್ ಮಾತ್ರವಲ್ಲ, ವಿವಿಧ ಬಿಸಿನೆಸ್ಗಳನ್ನು ಅವರು ನಡೆಸಿದ್ದಾರೆ.
ಇದನ್ನೂ ಓದಿ: ಎಚ್ಎಸ್ಬಿಸಿ 160 ವರ್ಷ ಇತಿಹಾಸದಲ್ಲಿ ಸಿಎಫ್ಒ ಆದ ಮೊದಲ ಮಹಿಳೆ; ಭಾರತ ಮೂಲದ ಕೌರ್ ಹೊಸ ಇತಿಹಾಸ
ಬಿನೋದ್ ಚೌಧರಿ ಒಮ್ಮೆ ಥಾಯ್ಲೆಂಡ್ ಪ್ರವಾಸಕ್ಕೆ ಹೋದಾಗ ಅಲ್ಲಿ ಇನ್ಸ್ಟೆಂಟ್ ನೂಡಲ್ಸ್ ಜನಪ್ರಿಯವಾಗಿರುವುದನ್ನು ಗಮನಿಸಿದ್ದಾರೆ. ಆಗ ಅವರಿಗೆ ನೇಪಾಳದಲ್ಲೂ ಇನ್ಸ್ಟೆಂಟ್ ನೂಡಲ್ಸ್ ಪರಿಚಯಿಸುವ ಐಡಿಯಾ ಹೊಳೆಯಿತು. ಆಗಲೇ ಸ್ಥಾಪನೆಯಾಗಿದ್ದು ವಾಯ್ ವಾಯ್ ನೂಡಲ್ಸ್ (Wai Wai Noodles). ಈ ನೂಡಲ್ಸ್ ತನ್ನ ರುಚಿ ಹಾಗೂ ವೈವಿಧ್ಯತೆಯಿಂದಾಗಿ ಬಹಳ ಬೇಗ ಖ್ಯಾತವಾಗಿದೆ. ಭಾರತೀಯ ಮಾರುಕಟ್ಟೆಯಲ್ಲೂ ಇದು ಜನಪ್ರಿಯವಾಗಿದೆ. ನೂಡಲ್ಸ್ ಮಾರುಕಟ್ಟೆಯಲ್ಲಿ ಮ್ಯಾಗಿ ಪ್ರಾಬಲ್ಯ ಇದ್ದರೂ ವಾಯ್ ವಾಯ್ ಬ್ರ್ಯಾಂಡ್ ಕೂಡ ಗಟ್ಟಿಯಾಗಿ ತಳವೂರಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ