Petrol, diesel price: ಬಿಜೆಪಿ ಆಡಳಿತದ 9 ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ತೆರಿಗೆ ಇಳಿಕೆ; ಯಾವ ರಾಜ್ಯದಲ್ಲಿ ಎಷ್ಟು ದರ?
ಭಾರತೀಯ ಜನತಾ ಪಕ್ಷ ಆಡಳಿತದಲ್ಲಿ ಇರುವ 9 ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕಡಿಮೆ ಮಾಡಿದ್ದು, ಕೇಂದ್ರದಿಂದ ಅಬಕಾರಿ ಸುಂಕ ಇಳಿಸಿದ ಬೆನ್ನಲ್ಲೇ ಈ ನಿರ್ಧಾರ ಬಂದಿದೆ.
ಬಿಜೆಪಿ ಆಡಳಿತದ ಒಂಬತ್ತು ರಾಜ್ಯಗಳು, ಅಂದರೆ ಅಸ್ಸಾಂ, ತ್ರಿಪುರಾ, ಮಣಿಪುರ, ಕರ್ನಾಟಕ, ಗೋವಾ, ಉತ್ತರ ಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (VAT) ಇಳಿಕೆ ಮಾಡಲಾಗಿದೆ. ದೀಪಾವಳಿಯ ಮುನ್ನಾದಿನದಂದು ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ ಲೀಟರ್‌ಗೆ 5 ರೂಪಾಯಿ ಮತ್ತು 10 ರೂಪಾಯಿಯಷ್ಟು ಕಡಿಮೆ ಮಾಡಿದ ಕೆಲವೇ ಗಂಟೆಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚುವರಿ ಕಡಿತವನ್ನು ರಾಜ್ಯ ಸರ್ಕಾರಗಳಿಂದ ಘೋಷಿಸಲಾಗಿದೆ. ಏರುತ್ತಿರುವ ಇಂಧನ ಬೆಲೆಗಳ ಪ್ರಭಾವದಿಂದ ತತ್ತರಿಸುತ್ತಿರುವ ಜನರಿಗೆ ಸಮಾಧಾನ ತರುವ ಪ್ರಯತ್ನದಲ್ಲಿ ಈ ಘೋಷಣೆ ಬಂದಿದೆ. ಇಡೀ ದೇಶವು ದೀಪಾವಳಿಯನ್ನು ಆಚರಿಸುವ ಗುರುವಾರದಿಂದ ಬೆಲೆ ಕಡಿತ ಜಾರಿಗೆ ಬರಲಿದೆ.
ಕೇಂದ್ರದಿಂದ ಅಬಕಾರಿ ಸುಂಕ ಇಳಿಸುವ ಜೊತೆಗೆ ಅಸ್ಸಾಂ, ತ್ರಿಪುರಾ, ಮಣಿಪುರ, ಕರ್ನಾಟಕ ಮತ್ತು ಗೋವಾ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡರ ಬೆಲೆಯನ್ನೂ ಲೀಟರ್‌ಗೆ 7 ರೂಪಾಯಿಯಷ್ಟು ಕಡಿಮೆ ಮಾಡಿವೆ. ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅನ್ನು ರಾಜ್ಯದಲ್ಲಿ ಲೀಟರ್‌ಗೆ ರೂ. 2 ಕಡಿಮೆ ಮಾಡಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಬುಧವಾರ ಹೇಳಿದ್ದಾರೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ತಮ್ಮ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.
“ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದ ನಿರ್ಧಾರವನ್ನು ಅನುಸರಿಸಿ. ತ್ರಿಪುರಾ ಸರ್ಕಾರವು ನಾಳೆಯಿಂದ 7 ರೂಪಾಯಿಯಷ್ಟು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಲು ನಿರ್ಧರಿಸಿದೆ,” ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಬುಧವಾರ ಟ್ವೀಟ್ ಮಾಡಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಬೇಕೆಂದು ರಾಜ್ಯಗಳು ಬಹಳ ಹಿಂದಿನಿಂದಲೂ ಕೇಂದ್ರವನ್ನು ಒತ್ತಾಯಿಸಿದ್ದವು. ಕಳೆದ ಕೆಲವು ತಿಂಗಳಿಂದ ಇಂಧನ ಬೆಲೆ ಏರಿಕೆಯಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 120 ರೂಪಾಯಿ ತಲುಪಿದ್ದರೆ, ಮೂರು ಮಹಾನಗರಗಳಲ್ಲಿ ಡೀಸೆಲ್ ಲೀಟರ್‌ಗೆ 100 ರೂಪಾಯಿ ದಾಟಿದೆ.
ಇಂಧನ ಬೆಲೆ ಏರಿಕೆ ಬಗ್ಗೆ ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ನವೆಂಬರ್ 1ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, “ತೆರಿಗೆ ಸುಲಿಗೆ” ಎಂಬ ಹ್ಯಾಶ್ ಟ್ಯಾಗ್ ಜೊತೆಗೆ “ಪಿಕ್ ಪಾಕೆಟ್ಸ್” ಬಗ್ಗೆ ಎಚ್ಚರದಿಂದಿರಿ ಎಂದು ಟ್ವೀಟ್ ಮಾಡಿದ್ದಾರೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಬುಧವಾರ ಲೀಟರ್‌ಗೆ 110.04 ರೂಪಾಯಿಯಷ್ಟಿದ್ದರೆ, ಡೀಸೆಲ್ ಲೀಟರ್‌ಗೆ ರೂ. 98.42ಕ್ಕೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 115.85 ರೂಪಾಯಿಯಷ್ಟಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 106.62 ರೂಪಾಯಿ ಇತ್ತು. ಇತ್ತೀಚಿನ ತಿಂಗಳಲ್ಲಿ ಕಚ್ಚಾ ತೈಲ ಬೆಲೆ ಜಾಗತಿಕವಾಗಿ ಏರಿಕೆಗೆ ಸಾಕ್ಷಿಯಾಗಿದೆ. ಪರಿಣಾಮವಾಗಿ, ಇತ್ತೀಚಿನ ವಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ದೇಶೀಯ ಬೆಲೆಗಳು ಗಗನಕ್ಕೇರಿವೆ. “ಇಂದಿನ ನಿರ್ಧಾರವು ಒಟ್ಟಾರೆ ಆರ್ಥಿಕತೆ ಚಕ್ರವನ್ನು ತಿರುಗಲು ಮತ್ತಷ್ಟು ಉತ್ತೇಜಿಸುವ ನಿರೀಕ್ಷೆಯಿದೆ,” ಎಂದು ಕೇಂದ್ರ ಸರ್ಕಾರವು ಹೇಳಿಕೆ ನೀಡಿದೆ.
ಇದನ್ನೂ ಓದಿ: Petrol Price Today: ವಾಹನ ಸವಾರರಿಗೆ ಗುಡ್ ನ್ಯೂಸ್; ಲೀಟರ್ ಪೆಟ್ರೋಲ್ ದರದಲ್ಲಿ 5 ರೂ. ಡೀಸೆಲ್ ದರದಲ್ಲಿ 10 ರೂ. ಇಳಿಕೆ!