ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಭಾರೀ ಕುಸಿತ ಕಂಡಿದೆ. ಜೂನ್ 13ನೇ ತಾರೀಕಿನ ಸೋಮವಾರದ ಆರಂಭದ ವಹಿವಾಟಿನಲ್ಲಿ ಬೆಳಗ್ಗೆ 10 ಗಂಟೆ ಹೊತ್ತಿಗೆ ಸೆನ್ಸೆಕ್ಸ್ 1448.13 ಪಾಯಿಂಟ್ಸ್ ಅಥವಾ ಶೇ 2.67ರಷ್ಟು ಕುಸಿತ ಕಂಡು, 52,855.31 ಪಾಯಿಂಟ್ಸ್ನಲ್ಲಿ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ 414.10 ಪಾಯಿಂಟ್ಸ್ ಅಥವಾ ಶೇ 2.56ರಷ್ಟು ನೆಲ ಕಚ್ಚಿ, 15,787.70 ಪಾಯಿಂಟ್ಸ್ನಲ್ಲಿತ್ತು. 508 ಕಂಪೆನಿಗಳ ಷೇರು ಏರಿಕೆ ದಾಖಲಿಸಿದರೆ, 2428 ಕಂಪೆನಿಯ ಷೇರು ಇಳಿಕೆಯಲ್ಲಿತ್ತು. 105 ಕಂಪೆನಿ ಷೇರುಗಳಲ್ಲಿ ಯಾವುದೇ ದರ ಬದಲಾವಣೆ ಆಗಲಿಲ್ಲ. ವಲಯವಾರು ಗಮನಿಸಿದರೆ, ಬಿಎಸ್ಇ ಮತ್ತು ಎನ್ಎಸ್ಇ ಎರಡರಲ್ಲೂ ಎಲ್ಲ ವಲಯಗಳೂ ಕುಸಿತ ದಾಖಲಿಸಿದ್ದವು. ಬಿಎಸ್ಇಯಲ್ಲಿ ರಿಯಾಲ್ಟಿ ಶೇ 3.09ರಷ್ಟು ನಷ್ಟ ಕಂಡಿತು. ಕ್ಯಾಪಿಟಲ್ ಗೂಡ್ಸ್, ಮಾಹಿತಿ ತಂತ್ರಜ್ಞಾನ, ಲೋಹ, ತೈಲ ಮತ್ತು ಅನಿಲ ವಲಯಗಳು ಶೇ 2ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದವು. ಇನ್ನು ಬಿಎಸ್ಇ ಮಿಡ್ಕ್ಯಾಪ್ ಶೇ 2.09 ಮತ್ತು ಸ್ಮಾಲ್ ಕ್ಯಾಪ್ ಶೇ 2.27ರಷ್ಟು ನಷ್ಟ ಅನುಭವಿಸಿದವು.
ನಿಫ್ಟಿ ಸೂಚ್ಯಂಕದಲ್ಲಿ ಪಿಎಸ್ಯು ಬ್ಯಾಂಕ್ ಶೇ 3.33ರಷ್ಟು ನಷ್ಟ, ಮಾಹಿತಿ ತಂತ್ರಜ್ಞಾನ ಶೇ 3.16ರಷ್ಟು ನಷ್ಟ ಕಂಡವು. ತಜ್ಞರ ಪ್ರಕಾರ ಅಲ್ಪಾವಧಿಯಲ್ಲಿ ಮಾರುಕಟ್ಟೆ ಟ್ರೆಂಡ್ ದುರ್ಬಲವಾಗಿದೆ. ಅಮೆರಿಕದ ಮೇ ತಿಂಗಳ ಹಣದುಬ್ಬರ ಶೇ 8.3ರಷ್ಟಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ಶೇ 8.6ರಷ್ಟಾಗಿದೆ. ಇದರಿಂದಾಗಿ ಅಲ್ಲಿನ ಕೇಂದ್ರ ಬ್ಯಾಂಕ್ ಶೇ 0.50 ಬಡ್ಡಿ ದರ ಏರಿಕೆ ಮಾಡುವ ಅವಕಾಶಗಳಿವೆ. ಇದರಿಂದ ಈಕ್ವಿಟಿ ಮಾರುಕಟ್ಟೆಗೆ ಪೆಟ್ಟು ಬೀಳುವ ಅವಕಾಶಗಳಿವೆ. ಜತೆಗೆ ಜಾಗತಿಕ ಬೆಳವಣಿಗೆಗೂ ಇದು ಒಳ್ಳೆ ಸುದ್ದಿ ಅಲ್ಲ. ಅಮೆರಿಕ ಮಾರುಕಟ್ಟೆ ಸ್ಥಿರವಾದ ಮೇಲಷ್ಟೇ ಭಾರತದ ಮಾರುಕಟ್ಟೆ ಸ್ಥಿರವಾಗಲು ಸಾಧ್ಯ. ಆದ್ದರಿಂದ ಮಾರುಕಟ್ಟೆ ಟ್ರೆಂಡ್ ಬಗ್ಗೆ ಸ್ಪಷ್ಟತೆ ದೊರೆಯಬೇಕು ಎಂದಾದಲ್ಲಿ ಹೂಡಿಕೆದಾರರು ಇನ್ನಷ್ಟು ಸಮಯ ಕಾಯಬೇಕಾಗುತ್ತದೆ.
ಈ ಸುದ್ದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 1529.99 ಪಾಯಿಂಟ್ಸ್ ಅಥವಾ ಶೇ 2.82 ಹಾಗೂ ನಿಫ್ಟಿ 444 ಅಥವಾ ಶೇ 2.74ರಷ್ಟು ಕುಸಿದು 15,757 ಪಾಯಿಂಟ್ಸ್ನಲ್ಲಿ ವಹಿವಾಟು ನಡೆಸುತ್ತಿದ್ದವು.
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಬಜಾಜ್ ಫಿನ್ಸರ್ವ್ ಶೇ -5.24
ಇಂಡಸ್ಇಂಡ್ ಬ್ಯಾಂಕ್ ಶೇ -4.88
ಬಜಾಜ್ ಫೈನಾನ್ಸ್ ಶೇ -4.70
ಐಸಿಐಸಿಐ ಬ್ಯಾಂಕ್ ಶೇ -4.55
ಟಾಟಾ ಮೋಟಾರ್ಸ್ ಶೇ -4.45
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್