BPCL Q4 Results: ಬಿಪಿಸಿಎಲ್ ಲಾಭದಲ್ಲಿ ನಾಲ್ಕು ಪಟ್ಟು ಹೆಚ್ಚಳ; ಪ್ರತಿ 10 ರೂಪಾಯಿ ಷೇರಿಗೆ ರೂ. 58 ಡಿವಿಡೆಂಡ್ ಘೋಷಣೆ
ಬಿಪಿಸಿಎಲ್ ತೈಲ ಕಂಪೆನಿಯ 2020- 21ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಜನವರಿಯಿಂದ ಮಾರ್ಚ್ ತನಕದ ಫಲಿತಾಂಶ ಬಂದಿದ್ದು, ಲಾಭದ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದೆ.

ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ಬುಧವಾರದಂದು 2021ರ ಜನವರಿಯಿಂದ ಮಾರ್ಚ್ ತನಕದ ಹಣಕಾಸು ಫಲಿತಾಂಶವನ್ನು ಪ್ರಕಟಿಸಿದೆ. ಇದು FY21 (2020- 21ನೇ ಸಾಲಿನ) ನಾಲ್ಕನೇ ತ್ರೈಮಾಸಿಕದ ಫಲಿತಾಂಶವಾಗಿದ್ದು, ಈ ಹಿಂದಿನ ತ್ರೈಮಾಸಿಕದಲ್ಲಿ ಬಂದಿದ್ದ ರೂ. 2777 ಕೋಟಿಗಿಂತ ನಾಲ್ಕು ಪಟ್ಟು ಹೆಚ್ಚಿನ ಲಾಭವಾದ ರೂ. 11,940 ಕೋಟಿ ದಾಖಲಿಸಿದೆ. ಒಂದು ವರ್ಷದ ಹಿಂದೆ, ಅಂದರೆ 2020ನೇ ಇಸವಿಯ ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ ನಿವ್ವಳ ನಷ್ಟ 1361 ಕೋಟಿ ರೂಪಾಯಿ ಆಗಿತ್ತು. ಮಂಡಳಿಯ ನಿರ್ದೇಶಕರು ಅಂತಿಮ ಡಿವಿಡೆಂಡ್ ಪ್ರತಿ ಷೇರಿಗೆ ರೂ. 58 (ಇದರಲ್ಲಿ ಪ್ರತಿ 10 ರೂಪಾಯಿ ಮುಖಬೆಲೆಯ ಷೇರಿಗೆ ಒಂದು ಸಲದ ವಿಶೇಷ ಡಿವಿಡೆಂಡ್ ರೂ. 35) ಶಿಫಾರಸು ಮಾಡಿದ್ದಾರೆ.
ಅಂದಹಾಗೆ ಇದು ಮಾರ್ಚ್ 31, 2021ಕ್ಕೆ ಕೊನೆಯಾದ ಹಣಕಾಸು ವರ್ಷಕ್ಕೆ ಘೋಷಣೆ ಮಾಡಿದ ಡಿವಿಡೆಂಡ್ ಆಗಿದ್ದು, ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಷೇರುದಾರರಿಂದ ಅನುಮತಿ ಪಡೆಯಬೇಕಿದೆ. ಎಜಿಎಂನಲ್ಲಿ ಘೋಷಣೆ ಮಾಡಿದ 30 ದಿನದೊಳಗಾಗಿ ಅಂತಿಮ ಡಿವಿಡೆಂಡ್ ಪಾವತಿಸಲಾಗುತ್ತದೆ. ಬಿಪಿಸಿಎಲ್ ಕಾರ್ಯನಿರ್ವಹಣೆಯಿಂದ ಬಂದಿರುವ ಆದಾಯವು 2020- 21ರ ಸಾಲಿಗೆ 3,01,864.98 ಕೋಟಿ ರೂಪಾಯಿ ಆಗಿದೆ. ಒಟ್ಟು ಆದಾಯ 1,04,420 ಕೋಟಿ ರೂಪಾಯಿ ದಾಖಲೆ ಮಾಡಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ 88,095 ಕೋಟಿ ರೂಪಾಯಿ ಬಂದಿತ್ತು.
ಬಿಪಿಸಿಎಲ್ನಿಂದ 2444 ಹೊಸ ತೈಲ ಸ್ಟೇಷನ್ಗಳನ್ನು ಆರಂಭಿಸಲಾಗಿದೆ. ಆ ಮೂಲಕ ಜಾಲದಲ್ಲಿ ಇರುವ ಸ್ಟೇಷನ್ಗಳ ಸಂಖ್ಯೆ 18,637 ಆಗಿದೆ. ಭಾರತದಲ್ಲಿ ಇರುವ ಎರಡಮೇ ಅತಿ ದೊಡ್ಡ ರೀಟೇಲ್ ಜಾಲ ಇದಾಗಿದೆ. ಇನ್ನು ಕಂಪೆನಿಯಲ್ಲಿ ಹಲ್ದಿಯಾದಲ್ಲಿ 1 MMTPA ಸಾಮರ್ಥ್ಯದ ಎಲ್ಪಿಜಿ ಆಮದು ಟರ್ಮಿನಲ್ ಈ ತ್ರೈಮಾಸಿಕದಲ್ಲಿ ಶುರು ಮಾಡಲಾಗಿದೆ. “ಡೀಸೆಲ್ನ ನಮ್ಮ ಮಾರುಕಟ್ಟೆ ಮಾರಾಟಲ್ಲಿ ಶೇ 5.98ರಷ್ಟು ಬೆಳವಣಿಗೆ ಆಗಿದೆ ಮತ್ತು ಪೆಟ್ರೋಲ್ ಶೇ 9.89ರಷ್ಟು ಏಇದೆ. ನಮ್ಮ ಸಾಲದ ಮಟ್ಟವು ಸಾಮಾನ್ಯ ಮಟ್ಟವಾದ ರೂ. 26,000 ಕೋಟಿಗೆ ಬಂದಿದೆ,” ಎಂದು ಕಂಪೆನಿಯ ನಿರ್ದೇಶಕ (ಹಣಕಾಸು) ಎನ್.ವಿಜಯಗೋಪಾಲ್ ಹೇಳಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ 5 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
(BPCL FY21 Q4 announced on Wednesday, profit jumped by 4 times and Rs 58 dividend declared for every Rs 10 share)



