ಬಿಪಿಎಲ್ ಗ್ರೂಪ್ ಸಂಸ್ಥಾಪಕ ಗೋಪಾಲನ್ ನಂಬಿಯಾರ್ ನಿಧನ; ರಾಜೀವ್ ಚಂದ್ರಶೇಖರ್​ಗೆ ಮಾವ ವಿಯೋಗ

|

Updated on: Oct 31, 2024 | 6:42 PM

BPL group founder TPG passes away: ಭಾರತದ ಖ್ಯಾತ ಕನ್ಸೂಮರ್ ಬ್ರ್ಯಾಂಡ್ ಎನಿಸಿದ್ದ ಬಿಪಿಎಲ್​ನ ಸಂಸ್ಥಾಪಕ 94 ವರ್ಷದ ಉದ್ಯಮಿ ಟಿ.ಪಿ. ಗೋಪಾಲನ್ ನಂಬಿಯಾರ್ ಅಕ್ಟೋಬರ್ 31, ಬೆಳಗ್ಗೆ 10:15ಕ್ಕೆ ನಿಧನರಾಗಿದ್ದಾರೆ. ಕೆಲ ಕಾಲದಿಂದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಟಿಪಿಜಿ ಮಾವನಾಗಿದ್ದರು.

ಬಿಪಿಎಲ್ ಗ್ರೂಪ್ ಸಂಸ್ಥಾಪಕ ಗೋಪಾಲನ್ ನಂಬಿಯಾರ್ ನಿಧನ; ರಾಜೀವ್ ಚಂದ್ರಶೇಖರ್​ಗೆ ಮಾವ ವಿಯೋಗ
ಗೋಪಾಲನ್ ನಂಬಿಯಾರ್
Follow us on

ಬೆಂಗಳೂರು, ಅಕ್ಟೋಬರ್ 31: ಬಿಪಿಎಲ್ ಗ್ರೂಪ್​ನ ಸಂಸ್ಥಾಪಕರಾದ ಟಿ.ಪಿ. ಗೋಪಾಲನ್ ನಂಬಿಯಾರ್ ಇಂದು ಗುರುವಾರ (ಅ. 31) ಬೆಳಗ್ಗೆ 10:15ಕ್ಕೆ ನಿಧನರಾಗಿದ್ದಾರೆ ಎನ್ನುವ ಸುದ್ದಿ ಬಂದಿದೆ. ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ 94 ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿರುವ ತಮ್ಮ ಸ್ವಗೃಹದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಟಿಪಿಜಿ ಎಂದೇ ಖ್ಯಾತರಾಗಿದ್ದ ಟಿ.ಪಿ. ಗೋಪಾಲನ್ ನಂಬಿಯಾರ್ ಅವರು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್​ಗೆ ಮಾವ. ಅವರು ಸಂಸ್ಥಾಪಿಸಿದ ಬಿಪಿಎಲ್ ಗ್ರೂಪ್ ಒಂದು ಕಾಲದಲ್ಲಿ ಭಾರತದ ಪ್ರಮುಖ ಬಿಸಿನೆಸ್ ಗ್ರೂಪ್​ಗಳಲ್ಲಿ ಒಂದೆನೆನಿಸಿತ್ತು.

ಇದನ್ನೂ ಓದಿ: ಭಾರತ ಈ ಜಾಗತಿಕ ಆರ್ಥಿಕತೆಯ ಪ್ರಮುಖ ಶಕ್ತಿಯಾಗುವುದು ನಿಶ್ಚಿತ: ಇತಿಹಾಸಕಾರ ವಿಲಿಯಂ ಡಾಲ್​ರಿಂಪಲ್

ಗೋಪಾಲನ್ ನಂಬಿಯಾರ್ ನಿಧನಕ್ಕೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಪಿಎಂ ನರೇಂದ್ರ ಮೋದಿ, ರಾಜೀವ್ ಚಂದ್ರಶೇಖರ್, ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

‘ಶ್ರೀ ಟಿಪಿಜಿ ನಂಬಿಯಾರ್ ಅವರು ಪ್ರಮುಖ ಉದ್ಯಮಿಯಾಗಿದ್ದರು. ಭಾರತವನ್ನು ಆರ್ಥಿಕವಾಗಿ ಬಲಿಷ್ಠ ಮಾಡುವ ಹೆಬ್ಬಯಕೆ ಹೊಂದಿದ್ದರು. ಅವರು ಇಹಲೋಕ ಬಿಟ್ಟು ಹೋಗಿರುವುದು ನೋವು ತಂದಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಹೇಳಬಯಸುತ್ತೇನೆ,’ ಎಂದು ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಹೀಗೂ ಉಂಟೆ..! ಗೂಗಲ್​ಗೆ 2.5 ಡೆಸಿಲಿಯನ್ ಡಾಲರ್ ದಂಡ ಹಾಕಿದ ರಷ್ಯಾ; ಇಡೀ ವಿಶ್ವದಲ್ಲಿರುವ ದುಡ್ಡು ತಂದು ಸುರಿದರೂ ಸಾಕಾಗಲ್ಲ

‘ನನ್ನ ಮಾವನವರಾದ ಟಿಪಿಜಿ ನಂಬಿಯಾರ್ ಅವರು ನಿಧನ ಹೊಂದಿರುವರೆಂದು ಹೇಳಲು ದುಃಖಿಸುತ್ತಿದ್ದೇನೆ. ಭಾರತದ ಅತ್ಯಂತ ವಿಶ್ವಾಸಾರ್ಹ ಕನ್ಸೂಮರ್ ಬ್ರಾಂಡ್ ಅನ್ನು ಕಟ್ಟಿದ ಧೀಮಂತ ಅವರು. ನನ್ನ ಚುನಾವಣಾ ಪ್ರಚಾರ ಕೆಲಸವನ್ನು ಸ್ಥಗಿತಗೊಳಿಸಿ ಬೆಂಗಳೂರಿಗೆ ಮರಳುತ್ತಿದ್ದೇನೆ’ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ