Brahmins Foods Founder Dies: ಸಾಂಬಾರ್ ಕಿಂಗ್ ವಿಷ್ಣು ನಂಬೂದಿರಿ ನಿಧನ; ಸೈಕಲ್ನಲ್ಲಿ ಸಾಂಬಾರ್ ಪುಡಿ ಮಾರುತ್ತಿದ್ದ ಬ್ರಾಹ್ಮಿಣ್ಸ್ ಫೂಡ್ಸ್ ಸ್ಥಾಪಕ ದೊಡ್ಡ ಬ್ಯುಸಿನೆಸ್ ಕಟ್ಟಿದ ಕಥೆ
V Vishnu Namboothiri Passes Away: ಬ್ರಾಹ್ಮಿಣ್ಸ್ ಫೂಡ್ಸ್ ಎಂಬ ಖ್ಯಾತ ಬ್ರ್ಯಾಡ್ ಕಟ್ಟಿ ಬೆಳೆಸಿದ ವಿ ವಿಷ್ಣು ನಂಬೂದಿರಿ ಅವರು ಕೇರಳದ ತಮ್ಮ ಸ್ವಂತ ಊರಿನಲ್ಲಿ ನಿಧನರಾಗಿದ್ದಾರೆ. 36 ವರ್ಷಗಳ ಹಿಂದೆ ಅವರು ಕಟ್ಟಿದ ಕಂಪನಿ ಇಂದು ವಿಶ್ವಾದ್ಯಂತ ಮಾರುಕಟ್ಟೆ ಹೊಂದಿದೆ.
ವಿವಿಧ ದೇಶಗಳಲ್ಲಿ ನೆಲಸಿರುವ ಭಾರತೀಯರ ಪಾಲಿಗೆ ಬ್ರಾಹ್ಮಿಣ್ಸ್ ಫೂಡ್ಸ್ (Brahmins Foods) ಬ್ರ್ಯಾಂಡ್ ಹೆಸರು ಬಹಳ ಚಿರಪರಿಚಿತ. ಈ ಸಂಸ್ಥೆಯ ಸ್ಥಾಪಕ ವಿ ವಿಷ್ಣು ನಂಬೂದಿರಿ (V Vishnu Namboothiri) ಅವರು ನಿಧನರಾಗಿರುವ ವಾರ್ತೆ ಕೇಳಿಬಂದಿದೆ. ಕೇರಳದ ಇಡುಕ್ಕಿ ಜಿಲ್ಲೆಯ ತೋಡುಪುಳ (Thodupuzha) ಎಂಬಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಂಬೂದಿರಿ ಜೂನ್ 27ರಂದು ಇಹಲೋಕ ತ್ಯಜಿಸಿದ್ದಾರೆ. 68 ವರ್ಷ ವಯಸ್ಸಾಗಿದ್ದ ಅವರು ಪತ್ನಿ ಮಂಜರಿ, ಮಗ ಶ್ರೀನಾಥ್ ವಿಷ್ಣು ಮತ್ತು ಮಗಳು ಸತ್ಯ ವಿಷ್ಣು ಅವರನ್ನು ಅಗಲಿದ್ದಾರೆ.
ಸೈಕಲ್ನಲ್ಲಿ ಸಾಂಬಾರ್ ಪುಡಿ ಮಾರುತ್ತಿದ್ದ ವಿಷ್ಣು ನಂಬೂದಿರಿ
1987ರಲ್ಲಿ ವಿ ವಿಷ್ಣು ನಂಬೂದಿರಿ ಅವರು ತಮ್ಮ ಸ್ವಂತ ಊರಾದ ತೋಡುಪುಳದಲ್ಲಿ ಸಾಂಬಾರ್ ಪುಡಿ ಘಟಕ ಆರಂಭಿಸಿದರು. ಸಾಂಬಾರ್ ಪುಡಿ ತಯಾರಿಸಲು ಇಬ್ಬರು ಮಹಿಳೆಯರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಅವರು ತಮ್ಮ ಕಂಪನಿಗೆ ತಾವೇ ಸೇಲ್ಸ್ ಮ್ಯಾನ್ ಆಗಿದ್ದರು. ಆಗ ಜನರು ಮನೆಯಲ್ಲೇ ಹೆಚ್ಚಾಗಿ ಸಾಂಬಾರ್ ಪುಡಿ ತಯಾರಿಸುತ್ತಿದ್ದರಿಂದ ಅದಕ್ಕೆ ಮಾರುಕಟ್ಟೆ ಹೆಚ್ಚು ಇರಲಿಲ್ಲ. ಸೈಕಲ್ ಹತ್ತಿ ಊರೂರು ಸುತ್ತಾ ಅಂಗಡಿ ಮುಂಗಟ್ಟುಗಳಿಗೆ ಹೋಗಿ ಸಾಂಬಾರ್ ಪುಡಿ ಮಾರಲು ವಿಷ್ಣು ನಂಬೂದಿರಿ ಬಹಳ ಹರಸಾಹಸ ನಡೆಸಿದ್ದರು.
ಆದರೆ, ತಮ್ಮ ಪ್ರಯತ್ನವನ್ನು ನಂಬೂದಿರಿ ನಿಲ್ಲಿಸಲಿಲ್ಲ. ತಮ್ಮ ಉತ್ಪನ್ನದ ಗುಣಮಟ್ಟದ ಬಗ್ಗೆ ಅವರಿಗೆ ವಿಶ್ವಾಸ ಇತ್ತು. ಕೊನೆಗೆ ಅವರ ಸಾಂಬಾರ್ ಪುಡಿಯ ರುಚಿ ಮತ್ತು ಗುಣಮಟ್ಟದಿಂದಾಗಿಯೇ ಅವರ ಉತ್ಪನ್ನಕ್ಕೆ ಬೇಡಿಕೆ ಹೆಚ್ಚತೊಡಗಿತು. ಆ ಕಾಲಕ್ಕೆ ಎರಡು ಗ್ರೈಂಡಿಂಗ್ ಮೆಷೀನ್ಗಳನ್ನು ಸ್ಥಾಪಿಸಿ ಸಾಂಬಾರ್ ಪುಡಿ ಉತ್ಪನ್ನದ ಪ್ರಮಾಣ ಹೆಚ್ಚಿಸಿದರು.
ದಿನೇ ದಿನೇ ಅವರ ಪದಾರ್ಥಗಳಿಗೆ ಮಾರುಕಟ್ಟೆ ಹೆಚ್ಚತೊಡಗಿತು. ಸೈಕಲ್ ಹೋಗಿ, ಸ್ಕೂಟರ್, ಮಿನಿ ವ್ಯಾನ್, ಟ್ರಕ್ ಇತ್ಯಾದಿ ಬಂದವು. ಅವರ ಸಾಂಬಾರ್ ಉತ್ಪನ್ನಗಳು ತೋಡುಪುಳದಿಂದ ಹೊರಗೆ ಹೋಗಿ ಇಡುಕ್ಕಿ ಜಿಲ್ಲೆ, ನಂತರ ತಮಿಳುನಾಡು, ಕೇರಳದ ವಿವಿಧೆಡೆ ಸೇಲ್ ಆಗತೊಡಗಿದವು. ವಿದೇಶಗಳಲ್ಲೂ ಬ್ರಾಹ್ಮಿಣ್ಸ್ ಫೂಡ್ಸ್ನ ಉತ್ಪನ್ನಗಳಿಗೆ ಒಳ್ಳೆಯ ಮಾರ್ಕೆಟ್ ಸಿಕ್ಕಿತು.
ಎಂಟಿಆರ್ ರೀತಿಯಲ್ಲಿ ಬ್ರಾಹ್ಮಿಣ್ಸ್ ಫೂಡ್ಸ್ ಅಡುಗೆಗೆ ಸಿದ್ಧವಾದ 100ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತದೆ. ಸಾಂಬಾರ್ ಪುಡಿ ಮಾತ್ರವಲ್ಲದೇ, ದೋಸೆ ಹಿಟ್ಟು, ಇಡ್ಲಿ ಹಿಟ್ಟು, ವಿವಿಧ ಉಪ್ಪಿನಕಾಯಿ ಹೀಗೆ ನಾನಾ ಖಾದ್ಯಗಳಿಗೆ ಸಿದ್ಧಪದಾರ್ಥಗಳನ್ನು ತಯಾರಿಸುತ್ತದೆ. ಕೇರಳದ ಎರ್ನಾಕುಲಂನ ನೆಲ್ಲಾದ್ ಬಳಿ ಇರುವ ಕಿನ್ಫ್ರಾ ಇಂಡಸ್ಟ್ರಿಯಲ್ ಪಾರ್ಕ್ನಲ್ಲಿ ಬ್ರಾಹ್ಮಿಣ್ಸ್ ಫೂಡ್ಸ್ನ ಫ್ಯಾಕ್ಟರಿಗಳಿವೆ. ಇಲ್ಲಿ ವರ್ಷಕ್ಕೆ 9,300 ಟನ್ಗಳಷ್ಟು ಆಹಾರ ಪದಾರ್ಥಗಳ ತಯಾರಿಕೆ ಆಗುತ್ತದೆ.
ಪಶ್ಚಿಮ ಏಷ್ಯಾ, ಯೂರೋಪ್, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿ ಬ್ರಾಹ್ಮಿಣ್ಸ್ ಫೂಡ್ಸ್ ಕಂಪನಿಯ ಉತ್ಪನ್ನಗಳು ಮಾರಾಟವಾಗುತ್ತವೆ. ಇತ್ತೀಚೆಗಷ್ಟೇ ವಿಪ್ರೋ ಕನ್ಸೂಮರ್ ಕೇರ್ ಸಂಸ್ಥೆ ಬ್ರಾಹ್ಮಿಣ್ಸ್ ಫೂಡ್ಸ್ ಕಂಪನಿಯನ್ನು ಖರೀದಿಸಿದೆ. ವಿಷ್ಣು ನಂಬೂದಿರಿ ಅವರ ಮಗ ಶ್ರೀನಾಥ್ ಮತ್ತು ಮಗಳು ಸತ್ಯಾ ಅವರು ಬ್ರಾಹ್ಮಿಣ್ಸ್ ಫೂಡ್ಸ್ನ ಎಂಡಿ ಮತ್ತು ನಿರ್ದೇಶಕಿಯಾಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ