
ನವದೆಹಲಿ, ಜುಲೈ 28: ದೇಶದ ಲಕ್ಷಾಂತರ ಕಾರು ಮತ್ತು ದ್ವಿಚಕ್ರ ವಾಹನ ಮಾಲೀಕರಿಗೆ ಗುಡ್ ನ್ಯೂಸ್ ನೀಡುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಹೊಸ ಪ್ರಸ್ತಾವನೆ ಮುಂದಿಟ್ಟಿದೆ. BS6 (ಭಾರತ್ ಸ್ಟೇಜ್-6) ಖಾಸಗಿ ವಾಹನಗಳಿಗೆ ನೀಡುವ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್ (PUC/PUCC) ಅಥವಾ ಮಾಲಿನ್ಯ ಪ್ರಮಾಣಪತ್ರ ನವೀಕರಣ ಅವಧಿಯನ್ನು ಈಗಿನ ಒಂದು ವರ್ಷದ ಬದಲು ಮೂರು ವರ್ಷಗಳಿಗೆ ವಿಸ್ತರಿಸುವ ಕರಡು ಅಧಿಸೂಚನೆಯನ್ನು ಸಚಿವಾಲಯ ಪ್ರಕಟಿಸಿದೆ.
ಪ್ರಸ್ತಾವನೆ ಅಂತಿಮಗೊಂಡರೆ, ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ BS6 ವಾಹನಗಳು ಪ್ರತಿವರ್ಷ ಪೊಲ್ಯೂಷನ್ ಸರ್ಟಿಫಿಕೇಟ್ ಮಾಡಿಸಬೇಕಾದ ಅಗತ್ಯ ಇರುವುದಿಲ್ಲ. ಬದಲಾಗಿ ಮೂರು ವರ್ಷಕ್ಕೊಮ್ಮೆ ಪರೀಕ್ಷೆ ನಡೆಸಿದರೆ ಸಾಕಾಗಲಿದೆ. ಇದರಿಂದ ವಾಹನ ಮಾಲೀಕರಿಗೆ ಸಮಯ ಮತ್ತು ವೆಚ್ಚ ಎರಡರಲ್ಲೂ ಅನುಕೂಲ ಆಗಲಿದೆ.
ಕರಡು ಅಧಿಸೂಚನೆಯ ಪ್ರಕಾರ, BS6 ವಾಹನಗಳಿಗೆ ವಯಸ್ಸಿನ ಆಧಾರದ ಮೇಲೆ ಪೊಲ್ಯೂಷನ್ ಸರ್ಟಿಫಿಕೇಟ್ ನವೀಕರಣ ಅವಧಿಯನ್ನು ನಿಗದಿಪಡಿಸಲು ಪ್ರಸ್ತಾಪಿಸಲಾಗಿದೆ.
BS6 ವಾಹನಗಳಿಗೆ ಸಡಿಲಿಕೆ ನೀಡುವ ಪ್ರಸ್ತಾವನೆಯ ಜೊತೆಗೆ, ಹೆಚ್ಚು ಮಾಲಿನ್ಯ ಉಂಟುಮಾಡುವ ಹಳೆಯ ವಾಹನಗಳಿಗೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲು ಕರಡು ಅಧಿಸೂಚನೆ ಸೂಚಿಸಿದೆ.
BS (Bharat Stage) ಎನ್ನುವುದು ಭಾರತದಲ್ಲಿ ವಾಹನಗಳ ಹೊರಸೂಸುವ ಹೊಗೆ ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಜಾರಿಗೊಳಿಸಿರುವ ಹೊರಸೂಸುವಿಕೆ ಮಾನದಂಡವಾಗಿದೆ. ಕಾರ್ಬನ್ ಮಾನಾಕ್ಸೈಡ್, ನೈಟ್ರೋಜನ್ ಆಕ್ಸೈಡ್, ಹೈಡ್ರೋಕಾರ್ಬನ್ ಮತ್ತು ಕಣಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಮಾನದಂಡ ಜಾರಿಯಲ್ಲಿದೆ.
ಭಾರತದಲ್ಲಿ 2020ರ ಏಪ್ರಿಲ್‌ನಿಂದ BS6 ಮಾನದಂಡ ಜಾರಿಗೆ ಬಂದಿದೆ. ದೇಶವು BS5 ಹಂತವನ್ನು ಬಿಟ್ಟು ನೇರವಾಗಿ BS6 ಜಾರಿಗೆ ತಂದಿದ್ದು, ಕಡಿಮೆ ಸಲ್ಫರ್ ಇರುವ ಇಂಧನ ಬಳಕೆ ಮತ್ತು ಕಡಿಮೆ ಮಾಲಿನ್ಯ ಹೊರಸೂಸುವಿಕೆಗೆ ಇದು ನೆರವಾಗಿದೆ.
ಸದ್ಯ ಇದು ಕರಡು ಪ್ರಸ್ತಾವನೆ ಮಾತ್ರ. ಸಾರ್ವಜನಿಕರು ಮತ್ತು ಸಂಬಂಧಿತ ವಲಯಗಳಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಅವುಗಳನ್ನು ಪರಿಶೀಲಿಸಿದ ಬಳಿಕ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲಿದೆ. ಪ್ರಸ್ತಾವನೆ ಯಥಾವತ್ತಾಗಿ ಜಾರಿಯಾದರೆ, ದೇಶದ ಲಕ್ಷಾಂತರ BS6 ವಾಹನ ಮಾಲೀಕರಿಗೆ ಪ್ರತಿವರ್ಷ ಮಾಲಿನ್ಯ ಪರೀಕ್ಷೆ ಮಾಡಿಸುವ ತೊಂದರೆ ತಪ್ಪಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ