ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸ್ಥಾಪನೆಯಾಗಿ 149 ವರ್ಷ ಗತಿಸಿ, 150ನೇ ವರ್ಷಕ್ಕೆ ಕಾಲಿಟ್ಟಿದೆ. 1875ರ ಜುಲೈ 9ರಂದು ಇದರ ಸ್ಥಾಪನೆಯಾಗಿದೆ. ಇದು ಭಾರತದ ಮೊದಲ ಷೇರು ವಿನಿಮಯ ಕೇಂದ್ರವಾಗಿದೆ. ಭಾರತ ಮಾತ್ರವಲ್ಲ ಏಷ್ಯಾದ ಚೊಚ್ಚಲ ಸ್ಟಾಕ್ ಮಾರ್ಕೆಟ್ ಕೂಡ ಹೌದು. ವಿಶ್ವದ 10ನೇ ಅತಿ ಹಳೆಯ ಮಾರುಕಟ್ಟೆ ಅದು. ಆಲದ ಮರದ ಕೆಳಗೆ ಆರಂಭವಾದ ಬಿಎಸ್ಇ ಇವತ್ತು ವಿಶ್ವದ ಪ್ರಮುಖ ಷೇರು ವಿನಿಮಯ ಕೇಂದ್ರಗಳಲ್ಲಿ ಒಂದಾಗಿದೆ. ಬಿಎಸ್ಇ ಬಳಿಕ ದೇಶದಲ್ಲಿ ಹಲವು ಸ್ಟಾಕ್ ಎಕ್ಸ್ಚೇಂಜ್ಗಳು ಸ್ಥಾಪನೆಯಾದವರಾದರೂ ಅಂತಿಮವಾಗಿ ಈಗ ಬಿಎಸ್ಇ ಮತ್ತು ಎನ್ಎಸ್ಇ ಮಾತ್ರವೇ ಉಳಿದುಕೊಂಡಿರುವುದು.
ಭಾರತದಲ್ಲಿ ಷೇರು ಮಾರುಕಟ್ಟೆಯ ಹುಟ್ಟಿನ ಕಥೆ ಬಹಳ ಇಂಟರೆಸ್ಟಿಂಗ್ ಆಗಿದೆ. 1855ರಲ್ಲಿ 22 ಮಂದಿ ಕಾಟನ್ ಮಾರಾಟಗಾರರು ಮುಂಬೈನ ಟೌನ್ ಹಾಲ್ ಸಮೀಪ ಸಂತೆಯ ರೀತಿಯಲ್ಲಿ ಸೇರಿ ವ್ಯವಹಾರ ನಡೆಸತೊಡಗದರು. ಕ್ರಮೇಣ ವರ್ತಕರ ಸಂಖ್ಯೆ ಹೆಚ್ಚತೊಡಗಿತು. ಸ್ಥಳ ಬದಲಾವಣೆ ಮಾಡಲಾಯಿತು. 20 ವರ್ಷದ ಬಳಿಕ 1875ರ ಜುಲೈ 9ರಂದು ನೇಟಿವ್ ಶೇರ್ ಅಂಡ್ ಸ್ಟಾಕ್ ಬ್ರೋಕರ್ಸ್ ಅಸೋಸಿಯೇಶನ್ ಸಂಸ್ಥೆ ಸ್ಥಾಪನೆ ಆಯಿತು. ಈ ರೀತಿಯಲ್ಲಿ ಷೇರು ವಿನಿಮಯ ಕೇಂದ್ರವೊಂದು ಸ್ಥಾಪನೆ ಆಯಿತು.
ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಎಫ್ ಅಂಡ್ ಒ ವ್ಯವಹಾರಕ್ಕೆ ಕಡಿವಾಣ ಹಾಕಲು ಸೆಬಿ ಕ್ರಮ; ಹೊಸ ನಿಯಮಗಳು ಸದ್ಯದಲ್ಲೇ ಜಾರಿ
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಆರಂಭವಾದಾಗ ನೊಂದಾಯಿತ ಸದಸ್ಯರ ಸಂಖ್ಯೆ 318 ಇತ್ತು. ಆಗ ಪ್ರವೇಶ ಶುಲ್ಕ ಒಂದು ರೂ ಇತ್ತು. 1895ರವರೆಗೂ ಅಧಿಕೃತ ಕಚೇರಿ ಎಂಬುದಿರಲಿಲ್ಲ. 1928ರಲ್ಲಿ ದಲಾಲ್ ಸ್ಟ್ರೀಟ್ನಲ್ಲಿ ಈಗಿರುವ ಬಿಎಸ್ಇ ಕಚೇರಿ ಸ್ಥಳವನ್ನು ಖರೀದಿಸಲಾಯಿತು. ಈಗಿರುವ ಸ್ಟಾಕ್ ಎಕ್ಸ್ಚೇಂಜ್ ಕಟ್ಟಡ ನಿರ್ಮಾಣ ಆಗಿದ್ದು 1930ರಲ್ಲಿ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಅನ್ನು ಮೂಲತಃ ಸ್ಥಾಪನೆ ಮಾಡಿದ್ದು ಪ್ರೇಮ್ಚಂದ್ ರಾಯ್ಚಂದ್ ಎಂಬುವರು. ಈಗಿರುವ ಷೇರು ವಿನಿಮಯ ಕೇಂದ್ರದ ಕಟ್ಟಡಕ್ಕೆ ಫಿರೋಜ್ ಜೀಜೀಭಾಯ್ ಟವರ್ ಎಂದು ಹೆಸರಿಸಲಾಗಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಮಾಜಿ ಛೇರ್ಮನ್ ಫಿರೋಜ್ ಜಮ್ಶೆಡ್ಜಿ ಜೀಜೀಭಾಯ್ ಅವರ ಸ್ಮರಣಾರ್ಥವಾಗಿ ಈ ಕಟ್ಟಡಕ್ಕೆ ಆ ಹೆಸರು ಇಡಲಾಗಿದೆ.
ಇದನ್ನೂ ಓದಿ: ಜೂನ್ನಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಖಾತೆ ರಚನೆ; ಷೇರುಪೇಟೆಯತ್ತ ಮುಗಿಬಿದ್ದ ಹೊಸಬರು
ಬಿಎಸ್ಇ ಸೆನ್ಸೆಕ್ಸ್ ಎಂಬುದು ನಿರ್ದಿಷ್ಟ ಷೇರುಗಳ ಮೌಲ್ಯ ಒಳಗೊಂಡಿರುವ ಸೂಚ್ಯಂಕವಾಗಿದೆ. ಇದು ಭಾರತದ ಮೊದಲ ಷೇರು ಸೂಚ್ಯಂಕವಾಗಿದೆ. 1986ರಲ್ಲಿ ಸೆನ್ಸೆಕ್ಸ್ ಮೊದಲಿಗೆ ಅನಾವರಣಗೊಂಡಿತು. ಆಗ ಇದಕ್ಕೆ ಮೂಲಾಂಕವಾಗಿ 1,000 ಇತ್ತು. ಈ ಮಟ್ಟವನ್ನು ದಾಟಲು ನಾಲ್ಕು ವರ್ಷ ಬೇಕಾಯಿತು. ಈಗ 80,000 ಅಂಕಗಳ ಗಡಿ ದಾಟಿದೆ. ಇನ್ನೊಂದು ವರ್ಷದಲ್ಲಿ ಸೆನ್ಸೆಕ್ಸ್ 1,00,000 ಅಂಕಗಳ ಗಡಿ ದಾಟಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Wed, 10 July 24