ನವದೆಹಲಿ, ಫೆಬ್ರವರಿ 1: ಮಧ್ಯಂತರ ಬಜೆಟ್ (Union Budget 2024) ಮಂಡನೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) 3 ಕೋಟಿ ಮಹಿಳೆಯರನ್ನು ಸರ್ಕಾರದ ‘ಲಖ್ಪತಿ ದೀದಿ (ಲಕ್ಷಾಧಿಪತಿ ದೀದಿ) ಯೋಜನೆ (Lakhpati Didi)’ ವ್ಯಾಪ್ತಿಗೆ ತರಲಾಗುವುದು ಎಂದರು. ಇದಕ್ಕಾಗಿ ಸರ್ಕಾರವೂ ಅಗತ್ಯ ಅನುದಾನ ನೀಡಲಿದೆ ಎಂದು ಹೇಳಿದರು. ಅಷ್ಟಕ್ಕೂ ಈ ಸ್ಕೀಮ್ ಯಾವುದು ಮತ್ತು ಲಖ್ಪತಿ ದೀದಿ ಎಂದರೆ ಯಾರು? ಈ ಕುರಿತ ವಿವರ ಇಲ್ಲಿದೆ.
ಇದುವರೆಗೆ ದೇಶದ 1 ಕೋಟಿ ಮಹಿಳೆಯರು ‘ಲಖ್ಪತಿ ದೀದಿ ಯೋಜನೆ’ಯ ಪ್ರಯೋಜನ ಪಡೆದಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಆರಂಭದಲ್ಲಿ ಈ ಯೋಜನೆಯ ಮೂಲಕ 2 ಕೋಟಿ ಮಹಿಳೆಯರನ್ನು ತಲುಪುವ ಗುರಿ ಹೊಂದಲಾಗಿತ್ತು, ಈಗ ಅದನ್ನು 3 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ಸುಮಾರು 83 ಲಕ್ಷ ಮಹಿಳಾ ಸ್ವಸಹಾಯ ಗುಂಪುಗಳಿವೆ. ಸುಮಾರು 9 ಕೋಟಿ ಮಹಿಳೆಯರು ಅವರೊಂದಿಗೆ ಸಂಬಂಧ ಹೊಂದಿದ್ದಾರೆ, ಅವರು ಸ್ವಾವಲಂಬಿಗಳಾಗಿದ್ದಾರೆ. ಈ ಸ್ವಸಹಾಯ ಗುಂಪುಗಳಿಗೆ ಸಂಬಂಧಿಸಿದಂತೆ ಮತ್ತು ಇವುಗಳ ಮೂಲಕ ಮಹಿಳೆಯರ ಆದಾಯವನ್ನು ಹೆಚ್ಚಿಸಲು ಸರ್ಕಾರವು ‘ಲಖ್ಪತಿ ದೀದಿ ಯೋಜನೆ’ಯನ್ನು ಪ್ರಾರಂಭಿಸಿದೆ. ಇಲ್ಲಿಯವರೆಗೆ ಒಂದು ಕೋಟಿ ಮಹಿಳೆಯರು ಇದರ ಪ್ರಯೋಜನ ಪಡೆದಿದ್ದಾರೆ. ಲಖ್ಪತಿ ದೀದಿ ಎಂಬುದರ ಅರ್ಥ ಕುಟುಂಬಕ್ಕೆ ವಾರ್ಷಿಕ ಆದಾಯ ಕನಿಷ್ಠ 1 ಲಕ್ಷ ರೂ. ಇರುವ ಮಹಿಳೆ ಎಂದಾಗಿದೆ.
ಲಖ್ಪತಿ ದೀದಿ ಯೋಜನೆಯು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಸ್ವಸಹಾಯ ಗುಂಪುಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಸರ್ಕಾರದಿಂದ ಹಲವು ರೀತಿಯ ಸೌಲಭ್ಯಗಳು, ಆರ್ಥಿಕ ಮತ್ತು ಕೌಶಲ್ಯ ತರಬೇತಿ ನೀಡಲಾಗುತ್ತದೆ. ಇದು ಆಕೆಯ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಅವಳು ಲಕ್ಷಾಧಿಪತಿಯಾಗಬಹುದಾಗಿದೆ. ಈ ಯೋಜನೆಯಡಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಎಲ್‌ಇಡಿ ಬಲ್ಬ್‌ಗಳ ತಯಾರಿಕೆ, ಕೊಳಾಯಿ, ಡ್ರೋನ್ ದುರಸ್ತಿ ಮುಂತಾದ ತಾಂತ್ರಿಕ ಕೆಲಸಗಳನ್ನು ಕಲಿಸುವ ಮೂಲಕ ಅವರ ಆದಾಯವನ್ನು ಹೆಚ್ಚಿಸಲು ನೆರವಾಗಲಾಗುತ್ತದೆ.
ಇದನ್ನೂ ಓದಿ: ವಂದೇ ಭಾರತ್ ಗುಣಮಟ್ಟಕ್ಕೆ 40 ಸಾವಿರ ಕೋಚ್ಗಳ ಪರಿವರ್ತನೆ, ಬಜೆಟ್‌ನಲ್ಲಿ ಘೋಷಣೆ
ಲಖ್ಪತಿ ದೀದಿ ಯೋಜನೆ ಅಡಿಯಲ್ಲಿ, ಮಹಿಳೆಯರಿಗೆ ಅನೇಕ ರೀತಿಯ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಅವರ ಆರ್ಥಿಕ ತಿಳುವಳಿಕೆಯನ್ನು ಸುಧಾರಿಸಲು ಅವರಿಗೆ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ ಮತ್ತು ಉಳಿತಾಯ ಆಯ್ಕೆಗಳು, ಸಣ್ಣ ಸಾಲಗಳು, ವೃತ್ತಿಪರ ತರಬೇತಿ, ಉದ್ಯಮಶೀಲತೆ ಬೆಂಬಲ ಮತ್ತು ವಿಮಾ ರಕ್ಷಣೆ ಒದಗಿಸಲಾಗುತ್ತದೆ. ಸರ್ಕಾರ ಅವರಿಗೆ ಉತ್ತಮ ಮಾರುಕಟ್ಟೆ ಬೆಂಬಲವನ್ನು ನೀಡುತ್ತದೆ. ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಮಹಿಳೆಯರು ಸ್ವಸಹಾಯ ಗುಂಪಿನ ಭಾಗವಾಗಿರಬೇಕು.
ಮತ್ತಷ್ಟು ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ