AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm FASTag: ಪೇಟಿಎಂ ಫಾಸ್​ಟ್ಯಾಗ್, ವ್ಯಾಲಟ್ ಬಳಕೆ ನಿಲ್ಲಿಸಬೇಕಿಲ್ಲ; ಅಷ್ಟಕ್ಕೂ ಆರ್​ಬಿಐ ನಿರ್ಬಂಧ ಹಾಕಿದ್ದು ಯಾಕೆ, ಡೀಟೇಲ್ಸ್ ನೋಡಿ

RBI vs Paytm: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯಾವುದೇ ಹೊಸ ಡೆಪಾಸಿಟ್ ಪಡೆಯುವಂತಿಲ್ಲ ಎಂದು ಆರ್​ಬಿಐ ನಿರ್ಬಂಧ ಹಾಕಿದೆ. ಆದರೆ, ಪೇಟಿಎಂ ವ್ಯಾಲಟ್, ಫಾಸ್​ಟ್ಯಾಗ್ ಸೇವೆ ನಿಲ್ಲುವುದಿಲ್ಲ. ನಿಮ್ಮ ರೀಚಾರ್ಜ್ ಹಣ ಇರುವವರೆಗೂ ಬಳಸಬಹುದು. ಪೇಮೆಂಟ್ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದು ಅದರಲ್ಲಿ ಹಣ ಇದ್ದರೆ ಚಿಂತೆ ಬೇಕಿಲ್ಲ. ಹಣ ಹಿಂಪಡೆಯಲು ಸಮಸ್ಯೆ ಇರುವುದಿಲ್ಲ.

Paytm FASTag: ಪೇಟಿಎಂ ಫಾಸ್​ಟ್ಯಾಗ್, ವ್ಯಾಲಟ್ ಬಳಕೆ ನಿಲ್ಲಿಸಬೇಕಿಲ್ಲ; ಅಷ್ಟಕ್ಕೂ ಆರ್​ಬಿಐ ನಿರ್ಬಂಧ ಹಾಕಿದ್ದು ಯಾಕೆ, ಡೀಟೇಲ್ಸ್ ನೋಡಿ
ಪೇಟಿಎಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 01, 2024 | 4:39 PM

Share

ನವದೆಹಲಿ, ಫೆಬ್ರುವರಿ 1: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ವಹಿವಾಟು ಮೇಲೆ ಆರ್​ಬಿಐ ನಿರ್ಬಂಧ (RBI restrictions) ಹಾಕಿರುವುದು ಬಹಳಷ್ಟು ಜನರನ್ನು ಗೊಂದಲಕ್ಕೆ ಕೆಡವಿದೆ. ಕೋಟ್ಯಂತರ ಜನರು ಪೇಟಿಎಂ ಬಳಕೆ ಮಾಡುತ್ತಿದ್ದು, ಅವರೀಗ ಆ್ಯಪ್​ನಲ್ಲಿ ವಹಿವಾಟು ನಡೆಸಬೇಕೋ ಬೇಡವೋ ಎಂಬ ಸಂದಿಗ್ಧತೆಯಲ್ಲಿದ್ದಾರೆ. ಪೇಟಿಎಂ ಆ್ಯಪ್​ನಲ್ಲಿ (Paytm) ಕೇವಲ ಯುಪಿಐ ವಹಿವಾಟು ಮಾತ್ರವಲ್ಲ, ಸಾಕಷ್ಟು ಸೇವೆಗಳು ಇವೆ. ಷೇರು ಮತ್ತು ಮ್ಯುಚುವಲ್ ಫಂಡ್ ವಹಿವಾಟು, ಟಿಕೆಟ್ ಬುಕಿಂಗ್, ಒನ್​ಎನ್​ಡಿಸಿ ಪ್ಲಾಟ್​ಫಾರ್ಮ್, ಪೇಟಿಎಂ ಹೆಲ್ತ್, ಪೇಟಿಎಂ ಫಾಸ್​ಟ್ಯಾಗ್ ಇತ್ಯಾದಿ ಸೇವೆಗಳಿವೆ. ಆದರೆ, ಆರ್​ಬಿಐ ನಿರ್ಬಂಧ ಹಾಕಿರುವುದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ (Paytm Payments Bank) ಮಾತ್ರವೇ. ಫಾಸ್​ಟ್ಯಾಗ್, ವ್ಯಾಲಟ್ ಇತ್ಯಾದಿಯಲ್ಲಿ ನಿಮ್ಮ ಹಣ ಇದ್ದರೆ ಎಲ್ಲಿಯೂ ಹೋಗಲ್ಲ, ಚಿಂತೆ ಬೇಕಿಲ್ಲ.

ಪೇಟಿಎಂ ಫಾಸ್​ಟ್ಯಾಗ್, ವ್ಯಾಲಟ್​ಗಳನ್ನು ಬಳಸಬಹುದಾ?

ಬಹಳಷ್ಟು ಜನರು ಪೇಟಿಎಂ ವ್ಯಾಲಟ್​ಗೆ ಹಾಗೂ ಫಾಸ್​ಟ್ಯಾಗ್​ಗೆ ಹಾಗೂ ಟ್ರಾನ್ಸಿಟ್ ಕಾರ್ಡ್​ಗಳಿಗೆ ರೀಚಾರ್ಜ್ ಮಾಡಿಸಿರುತ್ತಾರೆ. ಆರ್​ಬಿಐ ನಿರ್ಬಂಧ ಹಾಕಿರುವುದರಿಂದ ಇದರಲ್ಲಿರುವ ಹಣ ಹೋಗಬಹುದು ಎಂಬ ಸಹಜ ಭಯ ಎಲ್ಲರಲ್ಲೂ ಇದೆ. ಆದರೆ, ಈ ಪ್ರೀಪೇಡ್ ಇನ್​ಸ್ಟ್ರುಮೆಂಟ್​ಗಳಲ್ಲಿ ಹಾಕಲಾಗಿರುವ ಹಣ ಎಲ್ಲಿಯೂ ಹೋಗಲ್ಲ. ಆರ್​ಬಿಐ ನಿರ್ಬಂಧದ ಪ್ರಕಾರ ಫೆಬ್ರುವರಿ 29ರವರೆಗೆ ಇವುಗಳಿಗೆ ಹಣ ತುಂಬಿಸಬಹುದು. ಅದಾದ ಬಳಿಕ ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಹೊಸ ಡೆಪಾಸಿಟ್ ಪಡೆಯುವಂತಿಲ್ಲ; ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐ ನಿರ್ಬಂಧ; ಪೇಟಿಎಂ ಆ್ಯಪ್ ಬಳಸುವಂತಿಲ್ಲವಾ

ಈಗಾಗಲೇ ನೀವು ಫಾಸ್​ಟ್ಯಾಗ್, ವ್ಯಾಲಟ್ ಇತ್ಯಾದಿಯಲ್ಲಿ ಹಣ ತುಂಬಿಸಿದ್ದರೆ ಚಿಂತೆ ಪಡಬೇಕಿಲ್ಲ. ನೀವದನ್ನು ಆಯಾಚಿತವಾಗಿ ಬಳಸಬಹುದು.

ಪೇಟಿಎಂ ಮಾಡಿರುವ ಟ್ವೀಟ್ ಇದು…

‘ನೀವು ಪೇಟಿಎಂ ಫಾಸ್​ಟ್ಯಾಗ್​ನಲ್ಲಿ ಹಣ ಇದ್ದರೆ ಅದರ ಬಳಕೆಯನ್ನು ಮುಂದುವರಿಸಬಹುದು. ಕಳೆದ ಎರಡು ವರ್ಷದಲ್ಲಿ ಇತರ ಬ್ಯಾಂಕುಗಳೊಂದಿಗೆ ನಮ್ಮ ಪ್ರಯಾಣ ಆರಂಭಿಸಿದ್ದೆವು. ಈಗ ಆ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತೇವೆ,’ ಎಂದು ಪೇಟಿಎಂ ತನ್ನ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಪೋಸ್ಟ್ ಮಾಡಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ನೀವು ಖಾತೆ ಹೊಂದಿದ್ದು ಅದರಲ್ಲಿ ಹಣ ಹೊಂದಿದ್ದರೂ ಕೂಡ ಚಿಂತೆ ಪಡಬೇಕಿಲ್ಲ. ಹೊಸದಾಗಿ ಅಕೌಂಟ್​ಗೆ ಠೇವಣಿ ಹಾಕುವ ಬದಲು, ಇರುವ ಹಣವನ್ನು ಬಳಕೆ ಮಾಡಿ, ಅಥವಾ ಬೇರೆ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬಹುದು. ನಿಮ್ಮ ಹಣ ಏನೂ ಆಗುವುದಿಲ್ಲ. ಪೇಟಿಎಂ ಕೂಡ ಆರ್​ಬಿಐನ ಎಲ್ಲಾ ನಿಬಂಧನೆಗಳನ್ನು ಪಾಲಿಸುವುದಾಗಿ ಹೇಳಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ನಿರ್ಬಂಧ ಹಾಕಿದ್ದು ಯಾಕೆ?

ಬಾಹ್ಯ ಆಡಿಟರ್​ಗಳು ನಡೆಸಿದ ಪರಿಶೀಲನೆ ವೇಳೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಿಂದ ಕೆಲ ನಿಯಮ ಉಲ್ಲಂಘನೆಗಳಾಗಿರುವುದು ಕಂಡು ಬಂದಿದೆ. ಬ್ಯಾಂಕಿಂಗ್ ರೆಗ್ಯುಲೇಶನ್ ಕಾಯ್ದೆಯ ಸೆಕ್ಷನ್ 35ಎ ಅಡಿಯಲ್ಲಿ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್​ಬಿಐ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಸ್ಟೆಮ್ ಕೋರ್ಸ್‌ಗಳಲ್ಲಿ ಮಹಿಳೆಯರ ದಾಖಲಾತಿ ಶೇ 28 ಹೆಚ್ಚಾಗಿದೆ: ನಿರ್ಮಲಾ ಸೀತಾರಾಮನ್

ಪೇಟಿಎಂನಲ್ಲಿ ಷೇರು ವಹಿವಾಟು ನಡೆಸಬಹುದಾ?

ಪೇಟಿಎಂನಲ್ಲಿ ಷೇರು ಮಾರುಕಟ್ಟೆ, ಮ್ಯುಚುವಲ್ ಫಂಡ್ ಇತ್ಯಾದಿ ವಹಿವಾಟು ಸೇವೆ ಇದೆ. ಇದು ಪೇಟಿಎಂ ಮನಿ ಎಂಬ ಬೇರೆ ಪ್ಲಾಟ್​ಫಾರ್ಮ್​ನಲ್ಲಿ ಆಗುತ್ತದೆ. ಈ ಪೇಟಿಎಂ ಮನಿ ಎಂಬುದು ಸೆಬಿ ಅಧೀನಕ್ಕೆ ಒಳಪಟ್ಟಿರುತ್ತದೆ. ಹೀಗಾಗಿ, ಆರ್​ಬಿಐ ಹಾಕಿದ ನಿರ್ಬಂಧವು ಪೇಟಿಎಂ ಮನಿಗೆ ಅನ್ವಯ ಆಗುವುದಿಲ್ಲ.

ಇದಲ್ಲದೇ ಪೇಟಿಎಂನಲ್ಲಿ ಯುಪಿಐ ಸೇವೆ ಬಳಸಲು ಅಡ್ಡಿ ಇಲ್ಲ. ಪೇಟಿಎಂ ತನ್ನ ಯುಪಿಐ ಸೇವೆಗಾಗಿ ಪೇಮೆಂಟ್ಸ್ ಬ್ಯಾಂಕ್ ಅನ್ನು ಜೋಡಿಸಿಕೊಂಡಿತ್ತು. ಈಗ ಬೇರೆ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಯತ್ನಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Thu, 1 February 24