Business Ideas: ಸಣ್ಣ ಬಂಡವಾಳದಲ್ಲಿ ಮಾಡಬಹುದಾದ 5 ಬಿಜಿನೆಸ್ ಐಡಿಯಾಗಳು

Business Ideas: ಸಣ್ಣ ಬಂಡವಾಳದಲ್ಲಿ ಮಾಡಬಹುದಾದ 5 ಬಿಜಿನೆಸ್ ಐಡಿಯಾಗಳು
ಪ್ರಾತಿನಿಧಿಕ ಚಿತ್ರ

Business Ideas During Covid: ಸಣ್ಣ ಪ್ರಮಾಣದಲ್ಲಿ ಉದ್ಯಮ ಮಾಡಬೇಕು ಎಂದು ಬಯಸುವವರಿಗೆ ಇಲ್ಲಿ ಕೆಲವು ಐಡಿಯಾಗಳಿವೆ. ಇವುಗಳಿಂದ ನಿಮಗೆ ಖಂಡಿತಾ ಸಹಾಯ ಆಗಬಹುದು. ಅಳೆದು- ತೂಗಿ ನಿರ್ಧಾರ ಕೈಗೊಳ್ಳಿ.

Srinivas Mata

|

Apr 17, 2021 | 9:29 PM


ಹೊಸ ಬಿಜಿನೆಸ್ ಶುರು ಮಾಡಬೇಕು ಅಂದರೆ, ಅದಕ್ಕೂ ಮುಂಚೆ ಸರ್ವೇ ಮಾಡೋದು ಅತ್ಯಗತ್ಯ. ಎಷ್ಟು ಬಂಡವಾಳ ಬೇಕು, ಯಾವ ಬಿಜಿನೆಸ್, ಮಾರಾಟಕ್ಕೆ ಇಡಲಿರುವ ವಸ್ತುಗಳಿಗೆ ಬೇಡಿಕೆ ಹೇಗಿರಲಿದೆ ಇತ್ಯಾದಿ ವಿಚಾರಗಳ ಬಗ್ಗೆ ಒಂದು ಸುತ್ತಿನ ಮಾಹಿತಿ ಕಲೆ ಹಾಕದಿದ್ದರೆ ಕೈ ಸುಟ್ಟುಕೊಳ್ಳಬೇಕಾದೀತು. ಕಡಿಮೆ ಬಂಡವಾಳ ಇದೆ. ಆದರೂ ಒಂದೊಳ್ಳೆ ಬಿಜಿನೆಸ್ ಇದ್ದರೆ ಹೇಳಿ ಸ್ವಾಮಿ ಅನ್ನೋರಿಗೆ 5 ವ್ಯವಹಾರಗಳನ್ನು ಇಲ್ಲಿ ಉದಾಹರಣೆಯಾಗಿ ನೀಡಲಾಗುತ್ತಿದೆ. ಆದರೆ ಈ ಬಿಜಿನೆಸ್​ಗಳ ಬಗ್ಗೆ ನಿಮಗೆ ಒಂದಿಷ್ಟಾದರೂ ತಿಳಿವಳಿಕೆ ಹಾಗೂ ಆಸಕ್ತಿ ಎರಡೂ ಇರಬೇಕು. ಆಗಷ್ಟೇ ಯಶಸ್ಸು ಕಾಣೋದಿಕ್ಕೆ ಸಾಧ್ಯ.

ಇನ್ನು ಯಾಕೆ ತಡ, ಕಡಿಮೆ ಬಂಡವಾಳದಲ್ಲಿ- ಕೊರೊನಾ ಕಾಲದಲ್ಲಿ ಮಾಡಬಹುದಾದ ಈ 5 ಉದ್ಯಮಗಳ ಬಗ್ಗೆ ತಿಳಿದುಕೊಳ್ಳಿ.

1. ಎಣ್ಣೆ ಮಾರಾಟ
ಕಡ್ಲೇಕಾಯಿ ಎಣ್ಣೆ, ಕೊಬ್ಬರಿ ಎಣ್ಣೆ ಹಾಗೂ ಎಳ್ಳೆಣ್ಣೆಯನ್ನು ಸ್ಥಳದಲ್ಲೇ ಮಾಡಿಕೊಡುವುದಕ್ಕೆ ಸಣ್ಣ- ಸಣ್ಣ ಯಂತ್ರಗಳು ಬರುತ್ತವೆ. ಒಂದೋ ಗ್ರಾಹಕರೇ ಕಡ್ಲೇಕಾಯಿ ಬೀಜ, ಕೊಬ್ಬರಿ ಅಥವಾ ಎಳ್ಳು ತಂದು ಅದರಿಂದ ಎಣ್ಣೆಯನ್ನು ತೆಗೆಸಿಕೊಂಡು ಹೋಗಬಹುದು. ಅಥವಾ ಒಳ್ಳೆ ಕ್ವಾಲಿಟಿಯ ಕಡ್ಲೇಬೀಜ, ಕೊಬ್ಬರಿ ಅಥವಾ ಎಳ್ಳನ್ನು ಅಂಗಡಿಯಿಂದ ತಂದಿಟ್ಟುಕೊಂಡು, ಅದರಿಂದ ಎಣ್ಣೆ ತೆಗೆದುಕೊಡಬಹುದು. ಈ ರೀತಿಯದಕ್ಕೆ ಬೇಡಿಕೆ ಇದೆ. ತುಂಬ ದೊಡ್ಡ ಮಟ್ಟದ ಬಂಡವಾಳ ಬೇಕಿಲ್ಲ.

2. ವಿಟ್ರಿಫೈಡ್ ಟೈಲ್ಸ್
ವಿಟ್ರಿಫೈಡ್ ಟೈಲ್ಸ್​ಗಳ ಮಾರಾಟ ಇತ್ತೀಚೆಗೆ ತುಂಬ ದೊಡ್ಡ ವ್ಯವಹಾರ. ಕಡಿಮೆ ಮಾರ್ಜಿನ್ ಎಂದಿಟ್ಟುಕೊಂಡರೂ ಲಾಭಕ್ಕೆ- ದುಡಿಮೆಗೆ ಮೋಸ ಆಗಲ್ಲ. ಹೆಚ್ಚಿನ ಬಂಡವಾಳ ಹೂಡಬೇಕು ಅಂತಲೂ ಇಲ್ಲ. ಆರ್ಡರ್ ಬಂದಂತೆಯೇ ಹೋಲ್​ಸೇಲ್ ಮಾರಾಟಗಾರರಿಂದ ತರಿಸಿಕೊಂಡು, ಮಾರುವುದು ಉತ್ತಮ ಆಯ್ಕೆ. ಇದರ ಜತೆಗೆ ಬೇಕು ಅಂದರೆ, ಸಿಮೆಂಟ್, ಕಬ್ಬಿಣವನ್ನೂ ಸೇರಿಸಿಕೊಳ್ಳಬಹುದು. ಮನೆ ನಿರ್ಮಾಣಕ್ಕೆ, ಅದರಲ್ಲೂ ಕಡಿಮೆ ಬಜೆಟ್ ಮನೆ ನಿರ್ಮಾಣಕ್ಕೆ ಸರ್ಕಾರವೇ ಒತ್ತು ನೀಡುತ್ತಿರುವ ಈ ಸಮಯದಲ್ಲಿ ಇದರಿಂದ ಒಳ್ಳೆ ವ್ಯವಹಾರ ನಿರೀಕ್ಷೆ ಮಾಡಬಹುದು.

3. ಸಾವಯವ ಉತ್ಪನ್ನಗಳು
ಇತ್ತೀಚಿನ ದಿನಮಾನದಲ್ಲಿ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಜಾಸ್ತಿ ಆಗಿದೆ. ಅದರಲ್ಲೂ A2 ಹಾಲು, ತುಪ್ಪ ಇದಕ್ಕೆ ಬೇಡಿಕೆ ಹೆಚ್ಚು. ಇದರ ಜತೆಗೆ ಕೆಂಪಕ್ಕಿ, ಸಾವಯವ ಬೆಲ್ಲ, ಅವಲಕ್ಕಿ, ಸಿರಿ ಧಾನ್ಯಗಳು ಇಂಥವನ್ನೂ ಸೇರಿಸಿಕೊಂಡು ಮಾರಾಟ ಮಾಡುವುದಾದರೆ ಈಗಿನ ಸಂದರ್ಭ ಸರಿಯಾದ ಆರಂಭ ಆಗುತ್ತದೆ. ಸಾವಯವ ಉತ್ಪನ್ನಗಳ ಬಗ್ಗೆ ನಿಮಗೂ ಮಾಹಿತಿ ಇರಲಿ, ಜನರಲ್ಲೂ ಅರಿವು ಮೂಡಿಸಿ.

4. ಮನೆಯನ್ನು ಕೆಡವಿ ಸಾಗಿಸುವ ಕೆಲಸ
ಇರುವ ಮನೆಯನ್ನು ಕೆಡವಿ, ಹೊಸ ಮನೆಯನ್ನು ಕಟ್ಟಬೇಕು ಎಂದಿರುವವರು ಸಾಮಾನ್ಯವಾಗಿ ಪೂರ್ತಿ ಕಾಂಟ್ರ್ಯಾಕ್ಟ್ ನೀಡಿಬಿಡುತ್ತಾರೆ. ಮನೆ ಕೆಡವಿದವರಿಗೆ ಆ ಮೇಲೆ ಅದರಲ್ಲಿನ ಬಾಗಿಲು, ಕಿಟಕಿ, ಕಬ್ಬಿಣ ಇಂಥವೆಲ್ಲ ನೀಡುತ್ತಾರೆ. ಅದೇ ನಿಮ್ಮ ಪಾಲಿನ ಹಣ. ಇದಕ್ಕೆ ತುಂಬ ದೊಡ್ಡ ಬಂಡವಾಳದ ಅಗತ್ಯ ಇಲ್ಲ. ಆದರೆ ಲಾಭಕ್ಕೆ ಮೋಸ ಇಲ್ಲ.

5. ಸಂಪ್- ಟ್ಯಾಂಕ್ ಸ್ವಚ್ಛತೆ
ಮನೆ- ಕಚೇರಿಗಳಲ್ಲಿನ ಸಂಪ್- ಟ್ಯಾಂಕ್​ಗಳನ್ನು ನಿಯಮಿತವಾಗಿ ಸ್ವಚ್ಛ ಮಾಡಲೇಬೇಕು. ಇದಕ್ಕೆ ಕೆಲವು ಕೆಲಸದವರನ್ನು ಜತೆಗಿಟ್ಟುಕೊಂಡು ಮಾಡಿದರೆ ಒಂದಲ್ಲ ಒಂದು ಕಡೆ ಕೆಲಸ ಇದ್ದೇ ಇರುತ್ತದೆ. ದೊಡ್ಡ ಕಚೇರಿಯೋ ಮತ್ತೊಂದೋ ಬೇಕು ಅಂತಿಲ್ಲ. ಯಾವಾಗ ಈ ಕೆಲಸ ನಿಂತು ಹೋಗುತ್ತದೋ ಎಂಬ ಆತಂಕವೂ ಇಲ್ಲ. ನಿಯಮಿತವಾಗಿ ಸಂಪ್- ಟ್ಯಾಂಕ್ ಸ್ವಚ್ಛ ಮಾಡಿಸುತ್ತಾರೆಯಾದ್ದರಿಂದ ಒಮ್ಮೆ ಗ್ರಾಹಕರ ವಿಶ್ವಾಸ ಗಳಿಸಿಕೊಂಡಲ್ಲಿ ಕಳೆದುಕೊಳ್ಳುವ ಆತಂಕ ಇಲ್ಲ.

ದೊಡ್ಡ ಬಂಡವಾಳ ಹಾಕಿದರಷ್ಟೇ ದೊಡ್ಡ ಮಟ್ಟದ ಹಣ ಗಳಿಸಲು ಸಾಧ್ಯ ಎಂಬುದು ಭ್ರಮೆಯಷ್ಟೇ. ಏಕೆಂದರೆ ಸ್ಕ್ರಾಪ್ ಅಂಗಡಿಗಳು ಮಾಡುವಷ್ಟು ವ್ಯವಹಾರವನ್ನು ಸಹ ಎಷ್ಟೋ ಸಲ ಹೊಸ ಕಾರು ತಯಾರಕರು ಮಾಡೋದು ಕಷ್ಟ. ಹೆಜ್ಜೆ ಸಣ್ಣದಿದ್ದರೂ ದೃಢವಾಗಿರಲಿ. ಅದೆಂಥ ದೊಡ್ಡ ಮರವಾಗಿದ್ದರೂ ಹಿಂದೊಮ್ಮೆ ಗಿಡವೇ ಆಗಿತ್ತು ಎಂಬುದು ನೆನಪಿನಲ್ಲಿರಲಿ.

ಇದನ್ನೂ ಓದಿ: Gold investments: ಭಾರತದ ಯುವಜನತೆಗೆ ಚಿನ್ನದ ಹೂಡಿಕೆ ಮೇಲಿನ ವ್ಯಾಮೋಹ ಉಳಿದಿದೆಯಾ?

(Business ideas that required low investment to succeed amidst Covid- 19 pandemic)

Follow us on

Related Stories

Most Read Stories

Click on your DTH Provider to Add TV9 Kannada