Business Tips: ಮನೆಯಲ್ಲಿದ್ದುಕೊಂಡೇ ಸಾವಿರಾರು ರೂಪಾಯಿ ಗಳಿಸಲು ಇಲ್ಲಿವೆ 5 ಮಾರ್ಗಗಳು

Business Tips: ಮನೆಯಲ್ಲಿದ್ದುಕೊಂಡೇ ಸಾವಿರಾರು ರೂಪಾಯಿ ಗಳಿಸಲು ಇಲ್ಲಿವೆ 5 ಮಾರ್ಗಗಳು
ಸಾಂದರ್ಭಿಕ ಚಿತ್ರ

Home Based Business Tips: ಮನೆಯಲ್ಲಿ ಇದ್ದುಕೊಂಡೇ ಸಣ್ಣ-ಪುಟ್ಟ ಆದಾಯಗಳನ್ನು ಮಾಡಿಕೊಳ್ಳುತ್ತಿದ್ದ ಸಾವಿರಾರು ಮಂದಿಗೆ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಸಮಸ್ಯೆಯಾಗಿದೆ. ಅಂಥವರಿಗೆ ಮನೆಯಲ್ಲಿದ್ದುಕೊಂಡೇ ಹಣ ಗಳಿಸಬಹುದಾದ 5 ಮಾರ್ಗಗಳು ಇಲ್ಲಿವೆ.

Srinivas Mata

|

Apr 17, 2021 | 12:48 PM


ಕೊರೊನಾ ಸಂದರ್ಭದಲ್ಲಿ ಕನಿಷ್ಠ ಪಕ್ಷ ಮನೆ ಖರ್ಚಿಗೆ ಆಗುವಷ್ಟಾದರೂ ಹಣ ಮಾಡೋದು ಹೇಗೆ ಎಂದು ತಿಳಿಯುವುದಕ್ಕೆ ಕಲಿತ ವಿದ್ಯೆಯನ್ನೆಲ್ಲ ಉಪಯೋಗಿಸುವವರನ್ನು ನೀವೆಲ್ಲ ನೋಡಿರಬಹುದು ಅಥವಾ ಅಂಥವರಲ್ಲಿ ನೀವೂ ಒಬ್ಬರಾಗಿರಬಹುದು. ಮನೆಯಿಂದ ಹೊರಗೆ ಹೋಗುವುದಕ್ಕೆ ಆತಂಕ ಒಂದು ಕಡೆ. ಅದರ ಜತೆಗೆ ಯಾವುದಾದರೂ ವ್ಯವಹಾರವನ್ನೋ ಉದ್ಯಮವನ್ನೋ ಶುರು ಮಾಡುವುದಕ್ಕೆ ಹಾಕಿದ ಬಂಡವಾಳ ಏನಾಗಿಬಿಡಬಹುದೋ ಎಂಬ ಚಿಂತೆ ಇನ್ನೊಂದು ಕಡೆ. ಇಂಥ ಸನ್ನಿವೇಶದಲ್ಲಿ ಮನೆಯಲ್ಲಿ ಇದ್ದೇ ಹಣ ಗಳಿಸುವ ಕೆಲವು ವ್ಯವಹಾರ- ಉದ್ಯಮವನ್ನು ಈ ಲೇಖನದಲ್ಲಿ ಸೂಚಿಸಲಾಗುತ್ತಿದೆ. ಇದೇನೋ ನಿಮಗೆ ಗೊತ್ತಿಲ್ಲ ಅಂತಲೋ ಅಥವಾ ಇದರಿಂದ ನಿಮ್ಮ ಹುಡುಕಾಟಕ್ಕೆ ಶೇ 100ರಷ್ಟು ಪರಿಹಾರ ಸಿಗುತ್ತದೆ ಅಂತಲೋ ಅಲ್ಲ. ಆದರೆ ನಿಮ್ಮ ಆಲೋಚನೆ ಕೂಡ ಇದೇ ದಿಕ್ಕಿನಲ್ಲಿದೆಯಾ ಅಥವಾ ನೀವು ಈ ಪೈಕಿ ಯಾವುದನ್ನಾದರೂ ಯೋಚಿಸಿಯೇ ಇರಲಿಲ್ಲವಾ ಎಂದು ಪರೀಕ್ಷೆ ಮಾಡಿಕೊಳ್ಳುವುದಕ್ಕಂತೂ ಸಹಾಯ ಆಗುತ್ತದೆ.

ಪ್ರತಿಭೆ ಯಾರಪ್ಪನ ಮನೆ ಸ್ವತ್ತೂ ಅಲ್ಲ. ಅದರಲ್ಲಿ ನಮ್ಮನಮ್ಮ ಸಾಮರ್ಥ್ಯ ಯಾವುದು ಮತ್ತು ಈ ಪೈಕಿ ಯಾವುದನ್ನು ಅತ್ಯುತ್ತಮವಾಗಿ ಮಾಡಬಲ್ಲೆವು ಎಂದು ಗುರುತಿಸಿ, ಗಟ್ಟಿಯಾದ ಪ್ರಯತ್ನ ಹಾಕಿದರೆ ಅಂದುಕೊಂಡ ಫಲಿತಾಂಶ ಪಡೆಯುವುದು ಹೆಚ್ಚು ಕಷ್ಟ ಅಲ್ಲ. ಆದರೆ ಅದನ್ನು ಗುರುತಿಸಿ, ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟುಕೊಂಡು ಮುಂದುವರಿಯುವುದು ಆರಂಭದ ಹಂತದಲ್ಲಿ ಮುಖ್ಯವಾಗುತ್ತದೆ. ಈ ಲೇಖನದಲ್ಲಿ ನೀಡಿರುವ ಮನೆಯಲ್ಲೇ ಇದ್ದು ಮಾಡಬಹುದಾದ 5 ವ್ಯವಹಾರಗಳ ಪೈಕಿ ನೀವೇನು ಮಾಡಬಲ್ಲಿರಿ ಎಂಬುದನ್ನು ಯೋಚಿಸಿ.

ಯೂಟ್ಯೂಬರ್
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅತಿಹೆಚ್ಚು ಮಂದಿ ಮೊರೆ ಹೋದದ್ದು ಯೂಟ್ಯೂಬ್​ ಪ್ಲಾಟ್​ಫಾರ್ಮ್ ವಿಡಿಯೋಗಳಿಗೆ. ಅದರಲ್ಲೂ ಅಡುಗೆ, ಎಜುಕೇಷನ್​ಗೆ ಸಂಬಂಧಿಸಿದ ಮಾಹಿತಿ, ಪಾಠ- ಪ್ರವಚನ, ಸಿನಿಮಾ, ಸ್ಟ್ಯಾಂಡ್​ಅಪ್ ಕಾಮಿಡಿ, ಫ್ಯಾಷನ್, ಬ್ಯೂಟಿ ಟಿಪ್ಸ್ ಇಂಥವುಗಳನ್ನು ಹೆಚ್ಚೆಚ್ಚು ನೋಡಿದ್ದಾರೆ. ಮನೆಯಲ್ಲಿ ಇರುವಾಗ ಬೇಸರ ಕಳೆಯುವುದಕ್ಕೆ ಯಾವ ಆಲ್ ಟೈಮ್ ಸೂಪರ್ ಸಿನಿಮಾಗಳನ್ನು ನೋಡಬಹುದು ಎಂಬುದರಿಂದ ಮೊದಲುಗೊಂಡು, ಕೊರೊನಾದಿಂದ ಎದುರಾಗುವ ಮಾನಸಿಕ ಸಮಸ್ಯೆಗಳಿಗೆ ಪರಿಹಾರಗಳೇನು ಎಂಬುದರ ತನಕ ಯೂಟ್ಯೂಬ್​ನಲ್ಲಿ ನೀವು ಮಾಹಿತಿಪೂರ್ಣವಾದ ಹಾಗೂ ಸೊಗಸಾದ ವಿಡಿಯೋ ಮಾಡಿ ಹಾಕಬಹುದು. ಯೂಟ್ಯೂಬ್​ನಲ್ಲಿ ಚಾನೆಲ್ ಆರಂಭಿಸಿ, ಅದು ಮಾನಟೈಸ್ ಆದಲ್ಲಿ ಸಂಪಾದನೆಗೆ ದಾರಿಯಾಗುತ್ತದೆ. ಅದಕ್ಕೆ ಕೆಲವು ನಿಬಂಧನೆಗಳಿವೆ. ಅವುಗಳನ್ನು ಪೂರ್ಣಗೊಳಿಸಿದರೆ ಹಣ ಗಳಿಕೆ ಶುರುವಾಗುತ್ತದೆ.

ಅನುವಾದ
ನಿಮಗೆ ಹಲವು ಭಾಷೆಗಳು ಬರುತ್ತವೆಯೇ? ಒಂದು ಭಾಷೆಯಿಂದ ಮತ್ತೊಂದಕ್ಕೆ ಪರಿಣಾಮಕಾರಿಯಾಗಿ ಅನುವಾದ ಮಾಡಬಲ್ಲಿರಾ? ಕಾನೂನು, ವಿಜ್ಞಾನ, ವೈದ್ಯಕೀಯ ವಿಜ್ಞಾನ, ವಾಣಿಜ್ಯ ಸೇರಿದಂತೆ ಯಾವುದಾದರೂ ಅಥವಾ ಇವುಗಳ ಪೈಕಿ ಒಂದಕ್ಕಿಂತ ಹೆಚ್ಚು ವಿಷಯಗಳ ಅನುವಾದ ಮಾಡುವುದರಲ್ಲಿ ನಿಮಗೆ ನಂಬಿಕೆ ಇದೆಯಾ? ಹಾಗಿದ್ದಲ್ಲಿ ಅನುವಾದ ಮಾಡುವುದಕ್ಕೆ ವಿಫುಲ ಅವಕಾಶಗಳಿವೆ. ಪದಕ್ಕೆ ಇಷ್ಟು ಎಂಬುದರಿಂದ ಆರಂಭವಾಗಿ ಪುಟಕ್ಕೆ ಇಷ್ಟು, ಪುಸ್ತಕಕ್ಕೆ ಇಷ್ಟು ಎಂಬಲ್ಲಿಯ ತನಕ ಅನುವಾದದ ಕೆಲಸಕ್ಕೆ ಹಣ ಪಾವತಿಸಲಾಗುತ್ತದೆ. ಆನ್​ಲೈನ್​ನಲ್ಲಿ ಈ ರೀತಿಯ ಅವಕಾಶಗಳು ಸಿಗುತ್ತವೆ. ಈ ಪೈಕಿ ಮಾರುಕಟ್ಟೆಯಲ್ಲಿ ಉತ್ತಮ ಹೆಸರಿರುವ ಹಾಗೂ ಹಣವನ್ನು ಸರಿಯಾಗಿ ಪಾವತಿಸುವಂತಹವರಿಗೆ ಅನುವಾದ ಮಾಡಿಕೊಟ್ಟು, ಹಣ ಗಳಿಸಿ.

ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆಯಲ್ಲಿ ತೊಡಗಿಕೊಳ್ಳುವುದಕ್ಕೆ ಖಂಡಿತಾ ಹೆಚ್ಚಿನ ಜ್ಞಾನ ಬೇಕಾಗುತ್ತದೆ. ಜತೆಗೆ ದಿನದಲ್ಲಿ ಒಂದಿಷ್ಟು ಸಮಯ ಮೀಸಲಿಡಲೇಬೇಕಾಗುತ್ತದೆ. ಕಲಿಕೆ, ಲೆಕ್ಕಾಚಾರ, ಓದು ಸೇರಿದಂತೆ ಇತರ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಇದರಲ್ಲಿ ನಿಮ್ಮ ಪ್ರತಿಭೆ, ಬುದ್ಧಿವಂತಿಕೆ ಎರಡರ ಜತೆಗೆ ಹಣವನ್ನೂ ತೊಡಗಿಸಬೇಕಾಗುತ್ತದೆ. ಹೇಗೆ ಹಣ ಗಳಿಸುವ ಸಾಧ್ಯತೆ ಇದೆಯೋ ಅದೇ ರೀತಿ ಕಳೆದುಕೊಳ್ಳುವ ಅಪಾಯವೂ ಇದೆ. ಮನೆಯಲ್ಲಿ ನಿಮ್ಮದೊಂದು ಸ್ಮಾರ್ಟ್​ಫೋನ್, ಅದಕ್ಕೆ ಇಂಟರ್​ನೆಟ್ ಇರಬೇಕು. ಇನ್ನು ಡಿಮ್ಯಾಟ್ ಖಾತೆ, ಅದರ ಜತೆಗೆ ಜೋಡಣೆಯಾದ ಬ್ಯಾಂಕ್ ಖಾತೆ ಇವೆಲ್ಲವೂ ಅಗತ್ಯ. ಮನೆಯಲ್ಲಿ ಇದ್ದುಕೊಂಡು ಡೇ ಟ್ರೇಡಿಂಗ್- ಅದರಲ್ಲಿ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಹಾಗೂ ಕಮಾಡಿಟಿ ಮಾರ್ಕೆಟ್, ಕರೆನ್ಸಿ ಇವುಗಳಲ್ಲೂ ವ್ಯವಹಾರ ಮಾಡಬಹುದು.

ಆನ್​ಲೈನ್ ಪಾಠ
ನೀವು ನಿರ್ದಿಷ್ಟ ವಿಷಯದಲ್ಲಿ ಆಳವಾದ ಜ್ಞಾನ ಹೊಂದಿದ್ದೀರಾ? ಆ ವಿಷಯವನ್ನು ವಿದ್ಯಾರ್ಥಿಗಳಿಗೆ ಆನ್​ಲೈನ್ ಮೂಲಕ ಅರ್ಥ ಮಾಡಿಸುತ್ತೀರಾ? ಹೀಗಾದಲ್ಲಿ ಆನ್​ಲೈನ್ ಮೂಲಕ ಪಾಠ ಮಾಡಬಹುದು. ಇದಕ್ಕೂ ಅಷ್ಟೇ ಸ್ಮಾರ್ಟ್​ಫೋನ್, ಇಂಟರ್​ನೆಟ್, ಇನ್ನೂ ಹೆಚ್ಚಿನ ಪಕ್ಷ ಕ್ಯಾಮೆರಾ ಹೊಂದಿದ ಡೆಸ್ಕ್​ಟಾಪ್ ಇರಬೇಕಾಗುತ್ತದೆ. ಈಗ ಶಾಲೆಗಳು ನಡೆಯುತ್ತಿಲ್ಲವಾದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುವ ವಿದ್ಯಾರ್ಥಿಗಳಿಗೆ ಸಹ ಆನ್​ಲೈನ್ ಮೂಲಕ ಪಾಠ ಮಾಡಬಹುದು. ಆದರೆ ಇದಕ್ಕಾಗಿ ಸಿದ್ಧತೆ ಮತ್ತು ಪರೀಕ್ಷೆಗೆ ಪ್ರಶ್ನೆಪತ್ರಿಕೆಗಳನ್ನು ಸಿದ್ಧ ಪಡಿಸುವ ರೀತಿ ಇವುಗಳ ಬಗ್ಗೆ ತಿಳಿದುಕೊಂಡಿರಬೇಕು.

ಡಿಟಿಪಿ- ಡೇಟಾ ಎಂಟ್ರಿ
ನೀವು ವೇಗವಾಗಿ ಟೈಪ್ ಮಾಡಬಲ್ಲಿರಾದರೆ ಡಿಟಿಪಿ- ಡೇಟಾ ಎಂಟ್ರಿ ಕೆಲಸಗಳನ್ನು ಪಡೆದುಕೊಂಡು, ಮನೆಗಳಿಂದಲೇ ಮಾಡುವುದು ಉತ್ತಮ ಆಯ್ಕೆ. ಪುಸ್ತಕಗಳು, ಡಾಕ್ಯುಮೆಂಟ್​ಗಳು ಸೇರಿದಂತೆ ನಾನಾ ದಾಖಲಾತಿಗಳನ್ನು ಟೈಪ್ ಮಾಡುವವರಿಗೆ ಬೇಡಿಕೆ ಇದ್ದೇ ಇದೆ. ಆ ರೀತಿಯ ಕೆಲಸಗಳನ್ನು ಪಡೆಯುವವರ ಜತೆಗೆ ಮಾತನಾಡಿಕೊಂಡು, ಡೆಡ್​ಲೈನ್​ನೊಳಗೆ ಅಚ್ಚುಕಟ್ಟಾಗಿ ಕೆಲಸ ಮಾಡಿಕೊಡುತ್ತೀರಿ ಎಂಬುದನ್ನು ಸಾಬೀತು ಮಾಡಿದರೆ ದುಡಿಮೆಗೆ ದಾರಿ ಆಗುತ್ತದೆ. ಫೋಟೋ ಎಡಿಟಿಂಗ್, ವಿಡಿಯೋ ಎಡಿಟಿಂಗ್, ಪುಸ್ತಕದ ಎಡಿಟಿಂಗ್, ಪ್ರೂಫ್ ರೀಡಿಂಗ್ ಸಹ ಮನೆಯಲ್ಲಿ ಇದ್ದುಕೊಂಡು ಮಾಡಿ, ಹಣ ಗಳಿಸಬಹುದಾದ ಮಾರ್ಗಗಳು.

ಇದನ್ನೂ ಓದಿ: Business loan: ಉದ್ಯಮಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಟಾಪ್ 10 ಬ್ಯಾಂಕ್​ಗಳಿವು

(Here are the 5 business tips which will help to earn money by work from home)

Follow us on

Related Stories

Most Read Stories

Click on your DTH Provider to Add TV9 Kannada