Business women’s Day 2023: ಸೆ. 22 ಮಹಿಳಾ ಉದ್ಯಮಿಗಳ ದಿನ; ಯಾವಾಗಿಂದ ಆರಂಭ; ಏನಿದರ ಮಹತ್ವ ಇತ್ಯಾದಿ ವಿವರ ತಿಳಿಯಿರಿ

|

Updated on: Sep 21, 2023 | 7:41 PM

1949ರ ಸೆಪ್ಟೆಂಬರ್ 22ರಂದು ಅಮೆರಿಕದ ಕಾನ್ಸಾಸ್ ನಗರದ ಉದ್ಯಮಿ ಹಿಲರಿ ಬಫ್ಟನ್ ಜೂನಿಯರ್ ಹಾಗೂ ಅದೇ ನಗರದ ಮೂವರು ಮಹಿಳಾ ಉದ್ಯಮಿಗಳು ಸೇರಿ ಅಮೆರಿಕನ್ ಬಿಸಿನೆಸ್ ವುಮೆನ್ಸ್ ಅಸೋಸಿಯೇಶನ್ ಸಂಘಟನೆಯ ಆರಂಭಿಸಿದರು. 1983ರಲ್ಲಿ ಅಮೆರಿಕದ ಸಂಸತ್ತಿನಲ್ಲಿ ಸೆಪ್ಟೆಂಬರ್ 22 ಅನ್ನು ಮಹಿಳಾ ಉದ್ಯಮಿಗಳ ದಿನವೆಂದು ಆಚರಿಸಲು ನಿರ್ಣಯಿಸಲಾಯಿತು. ಆಗಿನಿಂದಲೂ ಈ ದಿನದ ಆಚರಣೆ ನಡೆಯುತ್ತಾ ಬಂದಿದೆ.

Business women’s Day 2023: ಸೆ. 22 ಮಹಿಳಾ ಉದ್ಯಮಿಗಳ ದಿನ; ಯಾವಾಗಿಂದ ಆರಂಭ; ಏನಿದರ ಮಹತ್ವ ಇತ್ಯಾದಿ ವಿವರ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us on

ಸೆಪ್ಟೆಂಬರ್ 22. ಈ ದಿನದಂದು ಮಹಿಳಾ ಉದ್ಯಮಿಗಳ ದಿನವಾಗಿ (Business Women’s Day) ಆಚರಿಸಲಾಗುತ್ತಿದೆ. ಅಡುಗೆ ಮನೆಗೆ ಮಾತ್ರವೇ ಸೀಮಿತವಾಗಿದ್ದ ಮಹಿಳೆಯರು ಉದ್ಯಮಿಗಳಾಗುವ ಅವಕಾಶ ಸಿಗತೊಡಗಿದ್ದು 20ನೇ ಶತಮಾನದಿಂದ ಮಾತ್ರ. ಇವತ್ತು 21ನೇ ಶತಮಾನದಲ್ಲಿ ಮಹಿಳೆಯರು ಇಲ್ಲದ ಕ್ಷೇತ್ರಗಳಿಲ್ಲ. ದೈಹಿಕವಾಗಿ ಪುರುಷರಿಗಿಂತ ದುರ್ಬಲವೆನಿಸಿದರೂ ವ್ಯಾವಹಾರಿಕ ಚಾತುರ್ಯದಲ್ಲಿ ಒಂದು ಹೆಜ್ಜೆ ಮುಂದಿದ್ದಾಳೆ ನಾರಿ. ಈಗಲೂ ಕೂಡ ಕುಟುಂಬ ಜವಾಬ್ದಾರಿ, ಮಕ್ಕಳ ಪಾಲನೆ ಪೋಷಣೆಯ ಹೊರೆಯ ಮಧ್ಯೆಯೂ ಹೆಣ್ಣು ಸಾಧನೆಗೆ ಮುನ್ನುಗ್ಗುತ್ತಿದ್ದಾಳೆ. ಇಂಥ ಹೆಣ್ಣಿನ ಗೌರವಕ್ಕೆ ಒಂದು ದಿನ ಬೇಕಲ್ಲವೇ? ಆ ದಿನವೇ ಇಂದು.

ಬಿಸಿನೆಸ್ ವುಮೆನ್ಸ್ ಡೇ ಆಚರಣೆಗೆ ಬಂದಿದ್ದು ಹೇಗೆ?

ಮಹಿಳೆಯರಿಗೂ ವ್ಯಾಪಾರ ಅವಕಾಶಗಳು ಸಿಗಬೇಕು ಎನ್ನುವ ಕೂಗು ಅಮೆರಿಕದಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು. ಅಂತೆಯೇ, 1949ರ ಸೆಪ್ಟೆಂಬರ್ 22ರಂದು ಅಮೆರಿಕದ ಕಾನ್ಸಾಸ್ ನಗರದ ಉದ್ಯಮಿ ಹಿಲರಿ ಬಫ್ಟನ್ ಜೂನಿಯರ್ (Hilary bufton Jr) ಹಾಗೂ ಅದೇ ನಗರದ ಮೂವರು ಮಹಿಳಾ ಉದ್ಯಮಿಗಳು ಸೇರಿ ಅಮೆರಿಕನ್ ಬಿಸಿನೆಸ್ ವುಮೆನ್ಸ್ ಅಸೋಸಿಯೇಶನ್ ಸಂಘಟನೆಯ ಆರಂಭಿಸಿದರು.

ಇದನ್ನೂ ಓದಿ: Women Business Leaders: ಭಾರತದ ಅತಿ ಯಶಸ್ವಿ ಮಹಿಳಾ ಉದ್ಯಮಿಗಳು ಮತ್ತವರ ಶ್ರೀಮಂತಿಕೆ

‘ಪ್ರತಿಯೊಬ್ಬ ಮಹಿಳೆಯೂ ಕೂಡ ಸಮಾನ ವ್ಯವಹಾರ ಅವಕಾಶಗಳನ್ನು ನಿರೀಕ್ಷಿಸುತ್ತಾಳೆ ಎಂಬುದು ನನ್ನ ಭಾವನೆ… ಎರಡನೇ ಮಹಾಯುದ್ಧದಲ್ಲಿ ಅನಿವಾರ್ಯವಾಗಿ ಮಹಿಳೆಯರು ಬಹಳಷ್ಟು ವ್ಯವಹಾರ ಜ್ಞಾನ ಗಳಿಸಿದ್ದಾರೆ. ಮಹಿಳಾ ಉದ್ಯಮಿಗಳಿಗೆಂದೇ ಹೊಸ ಸಂಘಟನೆಯೊಂದು ಬೇಕೆನಿಸುತ್ತದೆ’ ಎಂದು ಈ ಸಂಘಟನೆಯ ಸ್ಥಾಪಕ ಹಿಲರಿ ಬಫ್ಟನ್ ಹೇಳಿದ್ದರು.

ಸೆಪ್ಟೆಂಬರ್ 22 ಅನ್ನು ಅಮೆರಿಕನ್ ಬಿಸಿನೆಸ್ ವುಮೆನ್ಸ್ ಡೇ ಆಗಿ ಅಚರಿಸಲು 1983ರಲ್ಲಿ ಅಮೆರಿಕದ ಸಂಸತ್​ನಲ್ಲಿ ನಿರ್ಣಯ ಸ್ವೀಕರಿಸಲಾಯಿತು. ಆ ವರ್ಷ ಮೊದಲ ದಿನಾಚರಣೆ ಆಯಿತು. ಉದ್ಯಮ ವಲಯದಲ್ಲಿ ಮಹಿಳೆಯರ ಕೊಡುಗೆಯನ್ನು ಗುರುತಿಸಿ ಸಂಭ್ರಮಿಸಲು ಮತ್ತು ಸಮಾನ ಅವಕಾಶಗಳನ್ನು ಸೃಷ್ಟಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಅಮೆರಿಕ ಮಾತ್ರವಲ್ಲ, ಈಗ ವಿಶ್ವಾದ್ಯಂತ ಈ ದಿನದ ಆಚರಣೆ ನಡೆಯುತ್ತಿದೆ.

ಇದನ್ನೂ ಓದಿ: ಈಕೆ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ; ಅಂಬಾನಿ, ಅದಾನಿಯನ್ನೂ ಮೀರಿಸಿದ ಸಂಪತ್ತಿನ ಒಡತಿ ಮೆಯೆರ್ಸ್

ಬಿಸಿನೆಸ್ ವುಮೆನ್ಸ್ ಡೇ ಆಚರಿಸುವುದು ಹೇಗೆ?

ಮಹಿಳಾ ಉದ್ಯಮಿಗಳ ದಿನವನ್ನು ಆಚರಿಸಲು ಹಲವಾರು ಮಾರ್ಗಗಳಿವೆ. ನೀವು ಕೆಲಸ ಮಾಡುವ ಕಂಪನಿಯ ಎಕ್ಸಿಕ್ಯೂಟಿವ್ ಹುದ್ದೆಯಲ್ಲಿ ಯಾರಾದರೂ ಮಹಿಳೆ ಇದ್ದರೆ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಬಹುದು. ಅಥವಾ ನಿಮ್ಮ ನಗರದ ಪ್ರಮುಖ ಮಹಿಳಾ ಉದ್ಯಮಿಯನ್ನು ಕಂಪನಿಗೆ ಕರೆಸಿ ಒಂದಷ್ಟು ಹೊತ್ತು ವಿಚಾರ ವಿನಿಮಯ ಮಾಡಬಹುದು. ಅವರ ಜೀವನದ ಘಟನೆಗಳು ಮತ್ತು ಸಲಹೆಗಳು ಕೆಲ ಮಹಿಳೆಯರಿಗಾದರೂ ಸ್ಫೂರ್ತಿ ನೀಡಬಹುದು.

ಕಿರಣ್ ಮಜುಮ್ದಾರ್

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಮೊದಲಾದ ಅನೇಕ ಯಶಸ್ವಿ ಮಹಿಳಾ ಉದ್ಯಮಿಗಳು ಬೆಂಗಳೂರಿನಲ್ಲಿ ಮತ್ತು ಭಾರತದಲ್ಲಿ ಇದ್ದಾರೆ. ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಯತ್ನಿಸಬಹುದು. ಸೋಷಿಯಲ್ ಮೀಡಿಯಾದಲ್ಲಿ ಯಶಸ್ವಿ ಮಹಿಳಾ ಉದ್ಯಮಿಗಳ ಸ್ಪೂರ್ತಿಯುತ ಕಥೆಗಳನ್ನು ಪೋಸ್ಟ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ