ಬೆಂಗಳೂರು, ಏಪ್ರಿಲ್ 15: ಸಂಕಷ್ಟ ಮತ್ತು ವಿವಾದಗಳಿಂದ ಜರ್ಝರಿತವಾಗಿರುವ ಬೈಜುಸ್ ಸಂಸ್ಥೆಯ ಸಿಇಒ ಅರ್ಜುನ್ ಮೋಹನ್ (Arjun Mohan) ಪದತ್ಯಾಗ ಮಾಡಿದ್ದಾರೆ. ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್ (Byju Raveendran) ಅವರೇ ಸಿಇಒ ಆಗಿ ಕಂಪನಿಯ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಕಂಪನಿಯ ನಿತ್ಯದ ಚಟುವಟಿಕೆಗಳ ಮೇಲೆ ರವೀಂದ್ರನ್ ಅವರೇ ಖುದ್ದಾಗಿ ನಿಗಾ ಇಡಲಿದ್ದಾರೆ. ನಿರ್ಗಮಿತ ಅರ್ಜುನ್ ಮೋಹನ್ ಅವರು ಬಾಹ್ಯ ಸಲಹೆಗಾರರಾಗಿ ಬೈಜೂಸ್ ಜೊತೆ ನಂಟು ಹೊಂದಿರಲಿದ್ದಾರೆ. ಆಡಳಿತ ನಿರ್ಧಾರಗಳಲ್ಲಿ ಅವರ ಪಾತ್ರ ಇರುವುದಿಲ್ಲ. ಇದರೊಂದಿಗೆ ಅವರು ಬಹುತೇಕ ಬೈಜುಸ್ನಿಂದ ನಿರ್ಗಮಿಸಿದಂತಾಗುತ್ತದೆ.
ಅರ್ಜುನ್ ಮೋಹನ್ ಈ ಮೊದಲು ಬೈಜುಸ್ನಲ್ಲಿ ಚೀಫ್ ಬಿಸಿನೆಸ್ ಆಗಿದ್ದರು. 2020ರಲ್ಲಿ ರಾಜೀನಾಮೆ ನೀಡಿ ಅಪ್ಗ್ರಾಡ್ಗೆ ಸಿಇಒ ಆಗಿದ್ದರು. ಬೈಜುಸ್ಗೆ ಮರಳಿದ ಅವರು ಇಂಟರ್ನ್ಯಾಷನಲ್ ಬಿಸಿನೆಸ್ ವಿಭಾಗದ ಮುಖ್ಯಸ್ಥರಾಗಿದ್ದರು. ಕಳೆದ 10 ತಿಂಗಳಿಂದ ಅವರು ಸಿಇಒ ಆಗಿಯೂ ಆಡಳಿತ ನಡೆಸಿದ್ದಾರೆ.
ಇದನ್ನೂ ಓದಿ: ವೃದ್ಧರಿಗೆ ಬಿಜೆಪಿಯಿಂದ ಉಚಿತ ಆರೋಗ್ಯ ವಿಮೆ ಭರವಸೆ; ಏನಿದು ಆಯುಷ್ಮಾನ್ ಭಾರತ್ ಸ್ಕೀಮ್?
ಸಂಕಷ್ಟದ ಸಂದರ್ಭದಲ್ಲಿ ಬೈಜೂಸ್ ಅನ್ನು ಮುನ್ನಡೆಸಿರುವ ಅರ್ಜುನ್ ಮೋಹನ್, ಸುಮಾರು ನಾಲ್ಕರಿಂದ ಐದು ಸಾವಿರ ಉದ್ಯೋಗಿಗಳನ್ನು ಲೇ ಆಫ್ ಮಾಡುವ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಬೈಜೂಸ್ನ ವ್ಯವಹಾರ ಕಡಿಮೆ ಆಗುತ್ತಿದ್ದಂತೆಯೇ ಅರ್ಜುನ್ ಮೋಹನ್ ಪರ್ಯಾಯ ಮಾರ್ಗ ಅವಲೋಕಿಸಿದ್ದರು. ಬೈಜೂಸ್ನ ಮಾಲಕ ಸಂಸ್ಥೆ ಥಿಂಕ್ ಅಂಡ್ ಲರ್ನ್ನ ಸಹ-ಕಂಪನಿಯಾದ ಆಕಾಶ್ಗೆ ಸಿಇಒ ಆಗಲು ಅವರು ಪ್ರಯತ್ನಿಸಿದ್ದರು. ಆದರೆ, ಅದು ಬೇರೆಯವರಿಗೆ ಹೋಯಿತು. ಈಗ ಬೈಜುಸ್ನಲ್ಲಿ ತಮಗೆ ಸೂಕ್ತ ಹುದ್ದೆ ಅಥವಾ ಜವಾಬ್ದಾರಿ ಇಲ್ಲ ಎಂಬುದು ಖಾತ್ರಿಯಾದ ಬಳಿಕ ನಿರ್ಗಮಿಸುವ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ.
ಬೈಜುಸ್ ಸ್ಥಾಪನೆಯಾದ ಬಳಿಕ ಮೂರು ಬಾರಿ ನಾಯಕತ್ವ ಬದಲಾವಣೆ ಆಗಿದೆ. 2023ರಲ್ಲಿ ಅರ್ಜುನ್ ಮೋಹನ್ ಸಿಇಒ ಆಗಿದ್ದರು. ಈಗ ಬೈಜು ರವೀಂದ್ರನ್ ಮರಳಿದ್ದಾರೆ. ಬೈಜುಸ್ 3.0ನ ಹೊಸ ಆಡಳಿತ ಮೂರು ಅಂಶಗಳತ್ತ ಗಮನ ಕೊಡಲು ನಿರ್ಧರಿಸಿದೆ.
ಬೈಜುಸ್ ಲರ್ನಿಂಗ್ ಆ್ಯಪ್ ಒಂದು, ಆನ್ಲೈನ್ ಕ್ಲಾಸ್ ಮತ್ತು ಟ್ಯೂಷನ್ ಸೆಂಟರ್ಗಳ ಬಿಸಿನೆಸ್ ಇನ್ನೊಂದು. ಪರೀಕ್ಷಾ ಸಿದ್ಧತೆಗಳ ಬಿಸಿನೆಸ್ ಮೂರನೆಯದು. ಈ ಮೂರೂ ಘಟಕಗಳು ಪ್ರತ್ಯೇಕ ನಾಯಕತ್ವದೊಂದಿಗೆ ಸ್ವತಂತ್ರವಾಗಿ ಕಾರ್ಯ ವಹಿಸಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ