ಇವನಿಂದೇನು ಪ್ರಯೋಜನ ಇಲ್ಲ, ತೊಲಗಿಸಿ ಎಂದಿದ್ದರು ನಂಟರು; ಈ ಹುಟ್ಟಾ ಕುರುಡ ಇವತ್ತು ಸಿಇಒ

Srikanth Bolla, A blind man Who Became CEO: ಆಂಧ್ರದ ಮಚಿಲಿಪಟ್ಟಣಂ ಜಿಲ್ಲೆಯ ಶ್ರೀಕಾಂತ್ ಬೊಲ್ಲಾ ಹುಟ್ಟಾ ಕುರುಡರು. ಬೊಲ್ಲಾಂತ್ ಇಂಡಸ್ಟ್ರೀಸ್​ನ ಸಿಇಒ ಆಗಿರುವ ಇವರು ಜೀವನದಲ್ಲಿ ಎದುರಿಸಿದ ಸವಾಲುಗಳು, ಮಾಡಿದ ಸಾಧನೆಗಳು ನಿಜಕ್ಕೂ ಸರ್ವರಿಗೂ ಸ್ಫೂರ್ತಿ ತರುವಂಥದ್ದು. ಶಾಲೆಯಲ್ಲಿ ಪಿಟಿ ಆಡಲು ಅವಕಾಶ ಇರಲಿಲ್ಲ. ಇವರು ಕ್ರಿಕೆಟ್, ಚೆಸ್​ನಲ್ಲಿ ಮೇರು ಸಾಧನೆ ಮಾಡಿದರು. ವಿಜ್ಞಾನ ಓದಲು ಬಿಡಲ್ಲ ಎಂದ ಸರ್ಕಾರವನ್ನೇ ಕೋರ್ಟ್ ಕಟೆಕಟೆಗೆ ಹತ್ತಿಸಿ ನ್ಯಾಯ ಪಡೆದರು. ಐಐಟಿಗೆ ಅವಕಾಶ ಇಲ್ಲದ್ದಕ್ಕೆ ಪಟ್ಟು ಬಿಡದೆ ಅಮೆರಿಕದ ಎಂಐಟಿಯಲ್ಲಿ ಓದಿದರು.

ಇವನಿಂದೇನು ಪ್ರಯೋಜನ ಇಲ್ಲ, ತೊಲಗಿಸಿ ಎಂದಿದ್ದರು ನಂಟರು; ಈ ಹುಟ್ಟಾ ಕುರುಡ ಇವತ್ತು ಸಿಇಒ
ಶ್ರೀಕಾಂತ್ ಬೊಲ್ಲ
Follow us
|

Updated on: Apr 12, 2024 | 11:42 AM

ಬೌದ್ಧಿಕವಾಗಿ ಮತ್ತು ದೈಹಿಕವಾಗಿ ಊನವಾಗಿರುವ ಬಹಳ ಮಂದಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಆಂಧ್ರದ ಶ್ರೀಕಾಂತ್ ಬೊಲ್ಲಾ (Srikanth Bolla) ನಮ್ಮ ನಡುವೆ ಜೀವಂತವಾಗಿರುವ ಉದಾಹರಣೆ ಆಗಿದ್ದಾರೆ. ಮಚಿಲಿಪಟ್ಟಣಂ ಜಿಲ್ಲೆಯವರಾದ ಇವರು ಹುಟ್ಟಾ ಕುರುಡರು. ಇವತ್ತು ಈ 32 ವರ್ಷದ ವ್ಯಕ್ತಿ ಬೊಲ್ಲಾಂತ್ ಇಂಡಸ್ಟ್ರೀಸ್​ನ (Bollant Industries) ಸಿಇಒ ಆಗಿದ್ದಾರೆ. ಇದರ ಹೂಡಿಕೆದಾರರಲ್ಲಿ ರತನ್ ಟಾಟಾ ಕೂಡ ಒಬ್ಬರು. ಶ್ರೀಕಾಂತ್ ಬೊಲ್ಲಾ ಹುಟ್ಟಿದಾಗ ಕೆಲ ಸಂಬಂಧಿಕರು ಈ ಮಗು ಮುಂದೆ ಯಾತಕ್ಕೂ ಉಪಯೋಗಕ್ಕೆ ಬಾರದು, ಮುಗಿಸಿಬಿಡಿ ಎಂದು ಅಪ್ಪ ಅಮ್ಮನಿಗೆ ಸಲಹೆ ನೀಡಿದ್ದರಂತೆ. ಆದರೆ, ಇದೇ ಮಗು ಓದಿನಲ್ಲಿ ಮಿಂಚುತ್ತಾ, ಇವತ್ತು ಉದ್ಯಮಪತಿಯಾಗಿ ಮಿಂಚುತ್ತಿದ್ದಾರೆ.

ಟೀಮ್ ಇಂಡಿಯಾ ಕ್ರಿಕೆಟಿಗ…

ಶ್ರೀಕಾಂತ್ ಬೊಲ್ಲಾ ಮಾಡಿದ ಸಾಧನೆ, ಎದುರಿಸಿದ ಸವಾಲು ಒಂದೇ ಎರಡೇ. ಇಡೀ ಶಿಕ್ಷಣ ವ್ಯವಸ್ಥೆ ವಿರುದ್ಧವೇ ಕೋರ್ಟ್ ಮೆಟ್ಟಿಲೇರಲು ಅಣಿಗೊಂಡವರು ಅವರು. ಕುರುಡ ಎಂದು ಶಾಲೆಯಲ್ಲಿ ಇವರಿಗೆ ಪಿಟಿ ಕ್ಲಾಸ್​ಗೆ ಅವಕಾಶ ಇರಲಿಲ್ಲ. ಮುಂದೆ ಇವರು ಅಂಧರ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಆಡಿದ್ದರು. ರಾಷ್ಟ್ರಮಟ್ಟದ ಚೆಸ್ ಚಾಂಪಿಯನ್​ಶಿಪ್​ನಲ್ಲಿ ಪಾಲ್ಗೊಂಡಿದ್ದರು.

ಆಂಧ್ರ ಶಿಕ್ಷಣ ಮಂಡಳಿ ವಿರುದ್ಧವೇ ಕೇಸ್

ಅಂಧರು ರೇಖಾಚಿತ್ರಗಳಿರುವ ವಿಜ್ಞಾನವನ್ನು ಓದಲು ಆಗುವುದಿಲ್ಲ ಎಂದು ಆಂಧ್ರದ ಶಿಕ್ಷಣ ಮಂಡಳಿ ಹೇಳಿತ್ತು. ಆದರೆ, ತಾನು ಓದಿದರೆ ವಿಜ್ಞಾನವನ್ನೇ ಓದುವುದಾಗಿ ಹೇಳಿ ಇವರು ತಮ್ಮ ಶಿಕ್ಷಕರೊಬ್ಬರ ಸಹಾಯದಿಂದ ಕೋರ್ಟ್ ಮೆಟ್ಟಿಲೇರಿದರು. ಶ್ರೀಕಾಂತ್ ಬೊಲ್ಲಾ ಪರವಾಗಿ ಕೋರ್ಟ್ ತೀರ್ಪು ನೀಡಿತು.

ಇದನ್ನೂ ಓದಿ: ಮೆಟ್ರೋದಲ್ಲಿ ಪ್ರಯಾಣಿಸಲು ರಿಸ್ಟ್​ಬ್ಯಾಂಡ್ ಇದ್ರೆ ಸಾಕು, ಟಿಕೆಟ್ ಬೇಕಿಲ್ಲ: ಮುಂಬೈನಲ್ಲಿ ಹೊಸ ವಿಧಾನದ ಟಿಕೆಟಿಂಗ್

ಐಐಟಿ ಬೇಡ ಅಂದಿತು, ಎಂಐಟಿ ಕರೆಯಿತು…!

ಶೇ. 98ರಷ್ಟು ಅಂಕ ಪಡೆದರೂ ಐಐಟಿಯಲ್ಲಿ ಇವರಿಗೆ ಅವಕಾಶ ಸಿಗಲಿಲ್ಲ. ಓದಲು ತುಂಬಾ ಸಬ್ಜೆಕ್ಟ್ಸ್ ಇರುತ್ತೆ. ಅಂಧರಿಗೆ ಇದು ಆಗಲ್ಲ ಎಂದು ಟಾಪ ಕೋಚಿಂಗ್ ಇನ್ಸ್​ಟಿಟ್ಯೂಟ್​ಗಳು ಇವರನ್ನು ತಿರಸ್ಕರಿಸಿದ್ದವಂತೆ. ಆದರೆ, ಅಮೆರಿಕದ ಯೂನಿವರ್ಸಿಟಿಗಳು ಇವರನ್ನು ಬರಮಾಡಿಕೊಳ್ಳಲು ಸಿದ್ಧವಾದವು. ಅಮೆರಿಕದ ಮೆಸಾಚುಸೆಟ್ಸ್​ನ ಕೇಂಬ್ರಿಡ್ಜ್​ನಲ್ಲಿರುವ ಎಂಐಟಿಯಲ್ಲಿ ಇವರು ಮ್ಯಾನೇಜ್ಮೆಂಟ್ ಸೈನ್ಸ್ ಕೋರ್ಸ್ ಸೇರಿಕೊಂಡರು. ಅಲ್ಲಿ ಸಂಪೂರ್ಣ ಸಹಾಯಧನದೊಂದಿಗೆ ಕೋರ್ಸ್ ಸೇರಿದ ಮೊದಲ ಅಂಧ ವ್ಯಕ್ತಿ ಶ್ರೀಕಾಂತ್ ಬೊಲ್ಲಾ.

ಐಐಟಿಯಲ್ಲಿ ಅವಕಾಶ ಸಿಗದ್ದಕ್ಕೆ ಬೊಲ್ಲಾಗೆ ಬೇಸರ ಇಲ್ಲ. ‘ಐಐಟಿಗಳಿಗೆ ನಾನು ಬೇಕಿರಲಿಲ್ಲ. ನನಗೂ ಐಐಟಿ ಬೇಕಿರಲಿಲ್ಲ,’ ಎಂದು ಅವರು ಹೇಳುತ್ತಾರೆ.

‘ಇವತ್ತು ಈ ಪ್ರಪಂಚ ನನ್ನನ್ನು ನೋಡಿ, ಹೇ ಶ್ರೀಕಾಂತ್ ನಿನ್ನಿಂದ ಏನೂ ಆಗೊಲ್ಲ ಎಂದು ಹೇಳಿದರೆ, ನಾನು ಈಗ ಹಿಂದಿರುಗಿ, ಏನು ಬೇಕಾದರೂ ಮಾಡಬಲ್ಲೆ ಎಂದು ಈ ಪ್ರಪಂಚಕ್ಕೆ ಹೇಳಬಲ್ಲೆ,’ ಎನ್ನುತ್ತಾರೆ.

ಇದನ್ನೂ ಓದಿ: ಗಾಳಿಯಿಂದ ನೀರು ತಯಾರಿಸುವ ಬೆಂಗಳೂರಿನ ಉರವು ಲ್ಯಾಬ್ಸ್; ನೀರಿನ ಸಮಸ್ಯೆಗೆ ಸ್ಟಾರ್ಟಪ್ ಪರಿಹಾರ

ಬೊಲ್ಲಾಂಟ್ ಇಂಡಸ್ಟ್ರೀಸ್ ಸಿಇಒ

ಶ್ರೀಕಾಂತ್ ಬೊಲ್ಲ ಅಮೆರಿಕದಿಂದ ಹೈದರಾಬಾದ್​ಗೆ ವಾಪಸ್ ಬಂದು 2012ರಲ್ಲಿ ಬೊಲ್ಲಾಂಟ್ ಇಂಡಸ್ಟ್ರೀಸ್ ಎಂಬ ಸಂಸ್ಥೆಯನ್ನು ಸ್ಥಾಪಿಸುತ್ತಾರೆ. ಹೈದರಾಬಾದ್​ನಲ್ಲಿ ಎರಡು, ಕರ್ನಾಟಕದ ಹುಬ್ಬಳ್ಳಿ ಮತ್ತು ತೆಲಂಗಾಣದ ನಿಜಾಮಾಬಾದ್​ನಲ್ಲಿ ತಲಾ ಒಂದೊಂದು, ಒಟ್ಟು ನಾಲ್ಕು ಫ್ಯಾಕ್ಟರಿಗಳನ್ನು ಬೊಲ್ಲಾಂತ್ ಇಂಡಸ್ಟ್ರೀಸ್ ಹೊಂದಿದೆ. ಇದು ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸುತ್ತದೆ. ವಿಶೇಷ ಎಂದರೆ ಇವರ ಸಂಸ್ಥೆ ಇವರಂತೆಯೇ ವಿಶೇಷ ಚೇತನ ವ್ಯಕ್ತಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತದೆ.

ತ್ಯಾಜ್ಯ ಕಾಗದಗಳು, ತ್ಯಾಜ್ಯ ಪ್ಲಾಸ್ಟಿಕ್​ಗಳನ್ನು ರೀಸೈಕಲ್ ಮಾಡಿ ಅದರಿಂದ ವಿವಿಧ ಉತ್ಪನ್ನಗಳನ್ನೂ ಇವರ ಸಂಸ್ಥೆ ತಯಾರಿಸುತ್ತದೆ.

ಅಷ್ಟೇ ಅಲ್ಲ, ಅವರು ಬೊಲ್ಲಾಂಟ್ ಇಂಡಸ್ಟ್ರೀಸ್ ಸ್ಥಾಪನೆಗೆ ಒಂದು ವರ್ಷ ಮುನ್ನ, ಅಂದರೆ 2011ರಲ್ಲಿ ಅವರು ವಿಶೇಷ ಚೇತನ ಮಕ್ಕಳಿಗೆ ಸಮನ್ವಯ್ ಸೆಂಟರ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು.

ಇದನ್ನೂ ಓದಿ: ಅಪೋಲೋ ಹಿಂದಿಕ್ಕಿ ಭಾರತದ ಅತಿದೊಡ್ಡ ಹಾಸ್ಪಿಟಲ್ ಚೈನ್ ಆಗುವತ್ತ ಮಣಿಪಾಲ್ ಹಾಸ್ಪಿಟಲ್ಸ್

ಶ್ರೀಕಾಂತ್ ಹೆಸರಿನಲ್ಲಿ ಬಾಲಿವುಡ್ ಸಿನಿಮಾ; ಮೇ 10ಕ್ಕೆ ರಿಲೀಸ್

ಶ್ರೀಕಾಂತ್ ಬೊಲ್ಲಾ ಅವರ ಜೀವನ ಎಲ್ಲರಿಗೂ ಸ್ಫೂರ್ತಿ ತರುವಂಥದ್ದು. ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಅವರೇ ತಾಜಾ ಉದಾಹರಣೆ. ಇವರ ಜೀವನಕಥೆ ಬಾಲಿವುಡ್​ನಲ್ಲಿ ಸಿನಿಮಾವಾಗುತ್ತಿದೆ. ‘ಶ್ರೀಕಾಂತ್’ ಎನ್ನುವ ಹೆಸರಿನಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ನಟ ರಾಜಕುಮಾರ್ ರಾವ್ ಅವರು ಶ್ರೀಕಾಂತ್ ಬೊಲ್ಲರ ಪಾತ್ರ ಮಾಡಿದ್ದಾರೆ. ತುಷಾರ್ ಹೀರಾನಂದಾನಿ ಚಿತ್ರ ನಿರ್ದೇಶಿಸಿದ್ದಾರೆ. 2024ರ ಮೇ 10ರಂದು ಚಿತ್ರಮಂದಿರಗಳಲ್ಲಿ ಇದು ಬಿಡುಗಡೆ ಆಗಲಿದೆ.

ಶ್ರೀಕಾಂತ್ ಚಿತ್ರದ ಟ್ರೇಲರ್ ನೋಡಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ