AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರು ಹೆಲ್ತ್ ಇನ್ಷೂರೆನ್ಸ್ ತಿರಸ್ಕರಿಸಲು ಏನು ಕಾರಣ? ಪಾಲಿಸಿ ಮಾಡಿಸಲು ಏನು ಕಾರಣ? ಇಲ್ಲಿದೆ ಇಂಟರೆಸ್ಟಿಂಗ್ ಸೈಕಾಲಜಿ

Health Insurance Policy Updates: ಭಾರತದಲ್ಲಿ ಹೆಲ್ತ್ ಇನ್ಷೂರೆನ್ಸ್ ಬಗ್ಗೆ ಅರಿವು ಇರುವವರು ಮತ್ತು ಅದರ ಮಹತ್ವ ತಿಳಿದಿರುವವರ ಸಂಖ್ಯೆ ಕಡಿಮೆ. ನಾವಿ ಎಂಬ ಸಂಸ್ಥೆ ಆರೋಗ್ಯ ವಿಮೆ ಕುರಿತು ಸಮೀಕ್ಷೆ ನಡೆಸಿದೆ. ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಖರೀದಿಸಲು ಜನರು ಯಾವೆಲ್ಲ ಕಾರಣಕ್ಕೆ ಹಿಂದೇಟು ಹಾಕುತ್ತಾರೆ ಎಂಬುದನ್ನು ಈ ಸಮೀಕ್ಷೆ ಎತ್ತಿ ತೋರಿಸುತ್ತದೆ. ಹಾಗೆಯೇ, ಈಗಾಗಲೇ ಆರೋಗ್ಯ ವಿಮೆ ಪಾಲಿಸಿ ಪಡೆದವರು ಯಾವ ಪ್ರಭಾವದಿಂದ ಪಾಲಿಸಿ ಪಡೆದಿದ್ದಾರೆ ಎಂಬುದನ್ನೂ ತಿಳಿಸುತ್ತದೆ.

ಜನರು ಹೆಲ್ತ್ ಇನ್ಷೂರೆನ್ಸ್ ತಿರಸ್ಕರಿಸಲು ಏನು ಕಾರಣ? ಪಾಲಿಸಿ ಮಾಡಿಸಲು ಏನು ಕಾರಣ? ಇಲ್ಲಿದೆ ಇಂಟರೆಸ್ಟಿಂಗ್ ಸೈಕಾಲಜಿ
ಹೆಲ್ತ್ ಇನ್ಷೂರೆನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 12, 2024 | 1:56 PM

ಭಾರತದಲ್ಲಿ ಒಂದು ಅಂದಾಜು ಪ್ರಕಾರ ಇನ್ಷೂರೆನ್ಸ್ ಕವರೇಜ್ ಬಹಳ ಅತ್ಯಲ್ಪ. ಬೇರೆ ಪ್ರಮುಖ ದೇಶಗಳಿಗೆ ಹೋಲಿಸಿದರೆ ಇನ್ಷೂರೆನ್ಸ್ ಮಾಡಿಸುವವರ ಪ್ರಮಾಣ ಭಾರತದಲ್ಲಿ ಕಡಿಮೆ. ಅದರಲ್ಲೂ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ (Health Insurance Policy) ಭಾರತದಲ್ಲಿ ಹೆಚ್ಚು ಜನರನ್ನು ತಲುಪಿಲ್ಲ. ಮಾಜಿ ಫ್ಲಿಪ್​ಕಾರ್ಟ್ ಸಂಸ್ಥಾಪಕ ಸಚಿನ್ ಬನ್ಸಾಲ್ ಅವರ ನಾವಿ (Navi) ಎಂಬ ಫೈನಾನ್ಷಿಯಲ್ ಸರ್ವಿಸ್ ಕಂಪನಿ ಹೆಲ್ತ್ ಇನ್ಷೂರೆನ್ಸ್ ವಿಚಾರದಲ್ಲಿ ಅಧ್ಯಯನ ಮತ್ತು ಸಮೀಕ್ಷೆ ನಡೆಸಿದೆ. ಅದರಲ್ಲಿರುವ ಅಂಶ ಬಹಳ ಕುತೂಹಲಕಾರಿ ಎನಿಸುತ್ತದೆ.

ಜನರು ಹೆಲ್ತ್ ಇನ್ಷೂರೆನ್ಸ್​ನಿಂದ ಯಾಕೆ ದೂರ ಉಳಿದಿದ್ದಾರೆ? ಹಾಗೆ ದೂರ ಉಳಿಯಲು ಕಾರಣಗಳೇನು? ಇನ್ನು, ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಿರುವ ಜನರು ಯಾವ ಕಾರಣಕ್ಕೆ ಪಾಲಿಸಿ ಮಾಡಿಸಿದ್ದಾರೆ? ಇವೇ ಮುಂತಾದ ಹಲವು ಪ್ರಶ್ನೆಗಳಿಗೆ ಈ ಸಮೀಕ್ಷೆ ಉತ್ತರ ಕಂಡುಕೊಳ್ಳಲು ಯತ್ನಿಸಿದೆ. ನಾವಿ ಸಂಸ್ಥೆ 800 ಮಂದಿಯ ಸಮೀಕ್ಷೆ ಮಾಡಿದೆ.

ಆರೋಗ್ಯ ವಿಮೆ ಮಾಡಲು ಜನರು ಹಿಂದೇಟು ಹಾಕಲು ಪ್ರಮುಖ ಕಾರಣಗಳಿವು…

  • ಹೆಲ್ತ್ ಇನ್ಷೂರೆನ್ಸ್ ಮಾಡಿಸದವರಲ್ಲಿ ಅರ್ಧದಷ್ಟು ಜನರಿಗೆ ಈ ಪಾಲಿಸಿಯ ನಿಯಮಗಳು, ಅಂಶಗಳು ಸರಿಯಾಗಿ ಮನವರಿಕೆ ಆಗಿರುವುದಿಲ್ಲ.
  • ಮೂರರಲ್ಲಿ ಒಬ್ಬರು ತಾವು ಆರೋಗ್ಯವಂತರಾಗಿದ್ದು ಹೆಲ್ತ್ ಇನ್ಷೂರೆನ್ಸ್ ಅಗತ್ಯ ಇಲ್ಲ ಎಂದು ತಪ್ಪಾಗಿ ಭಾವಿಸಿದ್ದಾರೆ. ಆರೋಗ್ಯ ಒಂದೇ ತೆರನಾಗಿ ಇರುವುದಿಲ್ಲ, ಮತ್ತು ರಸ್ತೆ ಅಪಘಾತಗಳಿಗೂ ಫಿಟ್ನೆಸ್​ಗೂ ಸಂಬಂಧ ಇಲ್ಲ ಎಂಬುದೂ ಇವರಿಗೆ ತಿಳಿದಿರುವುದಿಲ್ಲ.
  • ಆರೋಗ್ಯ ವಿಮೆ ಪಾಲಿಸಿ ಮಾಡಿಸಿ, ಅದನ್ನು ಕ್ಲೇಮ್ ಮಾಡದಿದ್ದರೆ ಏನೂ ಸಿಗುವುದಿಲ್ಲ. ಸುಮ್ಮನೆ ಯಾಕೆ ಖರ್ಚು ಮಾಡಬೇಕು ಎಂಬ ಭಾವನೆ ಪ್ರತೀ ನಾಲ್ವರಲ್ಲಿ ಒಬ್ಬರಿಗೆ ಇದೆ. ಆದರೆ, ಆರೋಗ್ಯ ಯಾವಾಗ ಹದಗೆಡುತ್ತದೋ ಗೊತ್ತಿರುವುದಿಲ್ಲ. ಕಾಲ ಒಂದೇ ತೆರನಾಗಿ ಇರುವುದಿಲ್ಲ ಎಂಬುದು ಇವರಿಗೆ ಅರಿವಿರುವುದಿಲ್ಲ ಎನಿಸುತ್ತದೆ.
  • ಹೆಲ್ತ್ ಇನ್ಷೂರೆನ್ಸ್​ನ ಪ್ರೀಮಿಯಮ್ ಬಹಳ ದುಬಾರಿ ಆಯಿತು ಎಂಬ ಭಾವನೆ ಪ್ರತೀ ಐವರಲ್ಲಿ ಒಬ್ಬರಿಗೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಆಯಿತು ಎಂದು ಇವರು ಭಾವಿಸಬಹುದು.

ಇದನ್ನೂ ಓದಿ: ಕೆಲಸ ಬದಲಿಸಿದರೆ ಹಳೆಯ ಪಿಎಫ್ ಖಾತೆ ಬಗ್ಗೆ ಚಿಂತೆ ಬೇಡ; ತನ್ನಂತಾನೇ ಆಗುತ್ತೆ ಹಣ ವರ್ಗಾವಣೆ

ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಲು ಏನು ಕಾರಣ?

  • ಸಂಬಂಧಿಕರು, ಸ್ನೇಹಿತರ ಕುಟುಂಬಗಳಲ್ಲಿ ಯಾರಿಗಾದರೂ ಅನಾರೋಗ್ಯವಾಗಿ ಇನ್ಷೂರೆನ್ಸ್ ಕವರೇಜ್ ಇಲ್ಲದೇ ಸಾಕಷ್ಟು ಹಣ ವೆಚ್ಚವಾದ ಘಟನೆಗಳನ್ನು ಕಣ್ಣಾರೆ ಕಂಡಿರುತ್ತೇವೆ. ಆಗ ಹೆಲ್ತ್ ಇನ್ಷೂರೆನ್ಸ್ ಮಹತ್ವ ಗೊತ್ತಾಗುತ್ತದೆ. ಇಂಥ ಪ್ರತ್ಯಕ್ಷ ಘಟನೆಗಳು ಶೇ. 63ರಷ್ಟು ಜನರನ್ನು ಆರೋಗ್ಯ ವಿಮೆಯತ್ತ ನೂಕುತ್ತವೆ.
  • ಸೋಷಿಯಲ್ ಮೀಡಿಯಾದಲ್ಲಿ ಬರುವ ಇನ್​ಫ್ಲುಯನ್ಸರ್​ಗಳು ಬಹಳ ಸರಳ ಭಾಷೆಯಲ್ಲಿ ವಿಮೆಯ ಸಂಗತಿಗಳನ್ನು ತಿಳಿಸುವುದುಂಟು. ಇಂಥ ವಿಡಿಯೋಗಳಿಂದ ಸ್ಫೂರ್ತಿಗೊಂಡು ಶೇ. 58ರಷ್ಟು ಜನರು ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಿದ್ದಾರೆ.
  • ಆರೋಗ್ಯ ಹದಗೆಡವುವ ಸೂಚನೆ ಕಂಡುಬರುತ್ತಿದ್ದಂತೆಯೇ ಶೇ. 55ರಷ್ಟು ಜನರು ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಲು ಮುಂದಾಗುತ್ತಾರೆ ಎಂದು ನಾವಿ ನಡೆಸಿದ ಸಮೀಕ್ಷೆ ಹೇಳಿದೆ. ಆದರೆ, ಆ ಸಂದರ್ಭದಲ್ಲಿ ಇನ್ಷೂರೆನ್ಸ್ ಪ್ರೀಮಿಯಮ್ ಹೆಚ್ಚು ಮೊತ್ತದಾಗಿರುತ್ತದೆ. ವೈಟಿಂಗ್ ಪೀರಿಯಡ್ ಕೂಡ ಹೆಚ್ಚಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ