ನವದೆಹಲಿ, ಜುಲೈ 16: ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಪಡೆದು ಕೋಟ್ಯಂತರ ರೂ ಹಣ ನೀಡದ ಬೈಜುಸ್ ವಿರುದ್ಧ ಬಿಸಿಸಿಐ ಸಲ್ಲಿಸಿದ್ದ ಇನ್ಸಾಲ್ವೆನ್ಸಿ ಅರ್ಜಿಯನ್ನು ನ್ಯಾಯಮಂಡಳಿ ಸ್ವೀಕರಿಸಿದೆ. ಬೈಜುಸ್ನ ಮಾಲೀಕ ಸಂಸ್ಥೆ ಥಿಂಕ್ ಅಂಡ್ ಲರ್ನ್ ಪ್ರೈ ಲಿ ವಿರುದ್ಧ ಇನ್ಸಾಲ್ವೆನ್ಸಿ ಕ್ರಮ (Insolvency proceedings) ಜರುಗಿಸುವಂತೆ ಎನ್ಸಿಎಲ್ಟಿ ಮುಂದೆ ಬಿಸಿಸಿಐ ಕಳೆದ ವರ್ಷ ಮನವಿ ಅರ್ಜಿ ಸಲ್ಲಿಸಿತ್ತು. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (NCLT) ಬಿಸಿಸಿಐನ ಈ ಅರ್ಜಿಯನ್ನು ಸ್ವೀಕರಿಸಿದೆ. ಬೆಂಗಳೂರು ಪೀಠದ ನ್ಯಾಯಮಂಡಳಿಯಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ.
ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವದಲ್ಲಿ ಬಿಸಿಸಿಐಗೆ ಬೈಜುಸ್ 158 ಕೋಟಿ ರೂ ಹಣ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎನ್ಸಿಎಲ್ಟಿಯ ಬೆಂಗಳೂರು ಪೀಠದಲ್ಲಿ ಬಿಸಿಸಿಐ ಕಳೆದ ವರ್ಷ ಇನ್ಸಾಲ್ವೆನ್ಸಿ ಕ್ರಮಕ್ಕೆ ಮನವಿ ಮಾಡಿ ಅರ್ಜಿ ಸಲ್ಲಿಸಿತ್ತು. ಬೈಜುಸ್ನ ಸಾಲು ಸಾಲು ಸಂಕಷ್ಟಕ್ಕೆ ಇದು ಮತ್ತೊಂದು ಸೇರ್ಪಡೆಯಾಗಿದೆ.
ಇನ್ಸಾಲ್ವೆನ್ಸಿ ಅಂಡ್ ಬ್ಯಾಂಕ್ರಪ್ಟ್ಸಿ ಕೋಡ್ (Insolvency and Bankruptcy Code) ಅನ್ನು ದಿವಾಳಿ ಸಂಹಿತೆ ಎಂದು ಕರೆಯಲಾಗುತ್ತದೆ. ಇಲ್ಲಿ ಇನ್ಸಾಲ್ವೆನ್ಸಿ ಎಂದರೆ ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸಲು ವಿಫಲವಾಗುವುದು. ಹಣ ಪಾವತಿಸಲು ಡೀಫಾಲ್ಟ್ ಆದಾಗ ಇನ್ಸಾಲ್ವೆನ್ಸಿ ಕಾನೂನು ಅನ್ವಯ ಆಗುತ್ತದೆ.
ಇದನ್ನೂ ಓದಿ: ಜುಲೈ 17, ಮೊಹರಂ ಹಬ್ಬಕ್ಕೆ ಬ್ಯಾಂಕ್ ಮತ್ತು ಷೇರುಮಾರುಕಟ್ಟೆಗೆ ರಜೆ ಇದೆಯಾ? ಇಲ್ಲಿದೆ ಪಟ್ಟಿ
ಇನ್ನು ಬ್ಯಾಂಕ್ರಪ್ಟ್ಸಿ ಎಂದರೆ ಸಾಲ ಪಡೆದ ವ್ಯಕ್ತಿ ಅಥವಾ ಸಂಸ್ಥೆ ಸಾಲ ಮರುಪಾವತಿಸಲು ಸಾಧ್ಯವಿಲ್ಲ ಎಂದಾಗ ಆ ಸ್ಥಿತಿಯನ್ನು ಬ್ಯಾಂಕ್ರಪ್ಟ್ಸಿ ಅಥವಾ ದಿವಾಳಿತನ ಎಂದು ಪರಿಗಣಿಸಲಾಗುತ್ತದೆ. ವ್ಯಕ್ತಿ ಅಥವಾ ಸಂಸ್ಥೆ ತನ್ನ ದಿವಾಳಿತವನ್ನು ಸ್ವಯಂ ಆಗಿ ಘೋಷಿಸಿಕೊಳ್ಳಬಹುದು. ಅಥವಾ ಸಾಲಗಾರರು ಕೋರ್ಟ್ ಮೂಲಕ ಹೋಗಿ ದಿವಾಳಿ ಘೋಷಿಸಬಹುದು.
ಬಿಸಿಸಿಐಗೆ ಬಾಕಿ ಇರುವ ಹಣವನ್ನು ಬೈಜುಸ್ ಕೊಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಇನ್ಸಾಲ್ವೆನ್ಸಿ ಕ್ರಮಕ್ಕೆ ಅರ್ಜಿ ಹಾಕಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ಆಗಿ ಬೈಜುಸ್ ವಿರುದ್ಧ ಇನ್ಸಾಲ್ವೆನ್ಸಿ ಕ್ರಮಕ್ಕೆ ಆದೇಶ ಕೊಟ್ಟರೆ, ಆಗ ಬೈಜುಸ್ ಬಳಿ ಇರುವ ಆಸ್ತಿಪಾಸ್ತಿಗಳನ್ನು ಜಫ್ತಿ ಮಾಡಿಕೊಂಡು, ಅದನ್ನು ಮಾರಿ, ಬಂದ ಹಣದಲ್ಲಿ ಸಾಲಕ್ಕೆ ಜಮೆ ಮಾಡಲಾಗುತ್ತದೆ.
ಇದನ್ನೂ ಓದಿ: Bengaluru Real Estate: ಮನೆ ಖರೀದಿಸಲು ಎನ್ಆರ್ಐಗಳಿಗೆ ಬೆಂಗಳೂರೇ ಇಷ್ಟವಂತೆ; ಕಾರಣಗಳಿವು…
ಇನ್ಸಾಲ್ವೆನ್ಸಿ ಮಾತ್ರವಲ್ಲ ಬ್ಯಾಂಕ್ರಪ್ಸಿಯಲ್ಲೂ ಇದೇ ಕ್ರಮವನ್ನು ಅನುಸರಿಸಲಾಗುತ್ತದೆ. ಗೋಲ್ಡ್ ಲೋನ್ ಪಡೆದು ಸಾಲ ಮರುಪಾವತಿಸದೇ ಇದ್ದಾಗ ಅಡ ಇಡಲಾಗಿದ್ದ ಚಿನ್ನವನ್ನು ಬ್ಯಾಂಕುಗಳು ಹರಾಜಿಗೆ ಹಾಕಿ ಅದರಿಂದ ಬಂದ ಹಣವನ್ನು ಸಾಲಕ್ಕೆ ವಜಾ ಹಾಕಿಕೊಳ್ಳುತ್ತವೆ. ಅಂಥದ್ದೇ ರೀತಿಯ ಪ್ರಕ್ರಿಯೆ ಇನ್ಸಾಲ್ವೆನ್ಸಿ ಕಾನೂನಿನಡಿ ಮಾಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Tue, 16 July 24