81 ಕೋಟಿ ಬಡವರಿಗೆ ಉಚಿತ ಪಡಿತರ ವಿತರಣೆ; 5 ವರ್ಷ ಯೋಜನೆ ವಿಸ್ತರಣೆಗೆ ಕೇಂದ್ರ ಸಂಪುಟ ಅನುಮೋದನೆ
Cabinet approves PM Garib Kalyan Anna Yojana: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 5 ವರ್ಷ ಮುಂದುವರಿಸುವ ಸರ್ಕಾರದ ನಿರ್ಧಾರಕ್ಕೆ ಸಂಪುಟದ ಅನುಮೋದನೆ ಸಿಕ್ಕಿದೆ. 81 ಕೋಟಿಗೂ ಹೆಚ್ಚು ಬಡವರಿಗೆ ಪ್ರತೀ ತಿಂಗಳು 5 ಕಿಲೋ ಆಹಾರಧಾನ್ಯ ವಿತರಿಸುವ ಯೋಜನೆ ಇದು. 2028ರ ಡಿಸೆಂಬರ್ 31ರವರೆಗೂ ವಿಸ್ತರಣೆ ಆಗಿರುವ ಗರೀಬ್ ಕಲ್ಯಾಣ್ ಅನ್ನ ಯೋಜನೆಯಿಂದ ಸರ್ಕಾರಕ್ಕೆ ಆಗುವ ಅಂದಾಜು ವೆಚ್ಚ 11 ಕೋಟಿಗೂ ಹೆಚ್ಚು ಎನ್ನಲಾಗಿದೆ.
ನವದೆಹಲಿ, ನವೆಂಬರ್ 29: ದೇಶದೆಲ್ಲೆಡೆ 80 ಕೋಟಿಗೂ ಹೆಚ್ಚು ಬಡ ಜನರಿಗೆ ಪಡಿತರ ವಿತರಣೆ ಮಾಡುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (PM Garib Kalyan Anna Yojana) ಮತ್ತಷ್ಟು 5 ವರ್ಷಕ್ಕೆ ಮುಂದುವರಿಸುವ ನಿರ್ಧಾರಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಮಾಹಿತಿ ಮತ್ತು ಪ್ರಸರಣ ಖಾತೆ ಸಚಿವ ಅನುರಾಗ್ ಠಾಕೂರ್ ನವೆಂಬರ್ 29, ಬುಧವಾರದಂದು ಈ ವಿಷಯ ತಿಳಿಸಿದ್ದಾರೆ. ಗರೀಬ್ ಕಲ್ಯಾಣ್ ಅನ್ನ ಯೋಜನೆ 2028ರವರೆಗೂ ಲಭ್ಯ ಇರುತ್ತದೆ. ಸದ್ಯ ಈ ಯೋಜನೆ ಡಿಸೆಂಬರ್ 31ಕ್ಕೆ ಮುಗಿಯುತ್ತದೆ. ಜನವರಿ 1ರಿಂದ ಈ ಸ್ಕೀಮ್ ಹಾಗೇ ಮುಂದುವರಿಯುತ್ತದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಒಂದು ಕುಟುಂಬಕ್ಕೆ ಪ್ರತೀ ತಿಂಗಳು 5 ಕಿಲೋನಷ್ಟು ಆಹಾರಧಾನ್ಯಗಳನ್ನು ಉಚಿತವಾಗಿ ಕೊಡಲಾಗುತ್ತದೆ. ಈ ಯೋಜನೆಯಲ್ಲಿ 80 ಕೋಟಿ ಫಲಾನುಭವಿಗಳಿದ್ದಾರೆ. ಈ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸುವುದಾಗಿ ಸರ್ಕಾರ ಈ ಹಿಂದೆಯೇ ಸುಳಿವು ನೀಡಿತ್ತು. ಹೀಗಾಗಿ, ಸಂಪುಟದ ಅನುಮೋದನೆ ನಿರೀಕ್ಷಿತವೇ ಆಗಿದೆ.
ಇದನ್ನೂ ಓದಿ: ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ನಾಳೆ ಮೋದಿ ಸಂವಾದ
ಮುಂದಿನ 5 ವರ್ಷ ಪಿಎಂಜಿಕೆಎವೈ ಸ್ಕೀಮ್ನಿಂದ ಸರ್ಕಾರಕ್ಕೆ ಆಗುವ ವೆಚ್ಚ 11.8 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ, ಈ ಹಿಂದೆ ಆಹಾರ ಭದ್ರತಾ ಕಾಯ್ದೆ ಅಡಿಯ ಪಡಿತರ ಯೋಜನೆ ಅಸ್ತಿತ್ವದಲ್ಲಿತ್ತು. ಅದರ ಅಡಿಯಲ್ಲಿ ಸಬ್ಸಿಡಿ ದರದಲ್ಲಿ ಪ್ರತೀ ತಿಂಗಳು 5 ಕಿಲೋ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿತ್ತು.
ಆದರೆ, 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಡವರಿಗೆಂದು ಹೆಚ್ಚುವರಿಯಾಗಿ 5 ಕಿಲೋ ಆಹಾರಧಾನ್ಯಗಳನ್ನು ಉಚಿತವಾಗಿ ವಿತರಿಸುವ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಆರಂಭಿಸಿತು. 2022ರ ಡಿಸೆಂಬರ್ನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಗರೀಬ್ ಅನ್ನ ಯೋಜನೆಯನ್ನು ತಂದಿದ್ದು, ಉಚಿತ ಪಡಿತರ ವಿತರಣೆ ಮಾಡಲಾಗುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಕೋಟ್ಯಂತರ ಜನರಿಗೆ ಉಚಿತವಾಗಿ ಪಡಿತರ ವಿತರಣೆ ಮಾಡುವ ಕೇಂದ್ರ ಈ ಯೋಜನೆ ವಿಶ್ವಾದ್ಯಂತ ಬಹಳ ದೇಶಗಳಿಗೆ ಮೆಚ್ಚುಗೆ ಆಗಿದೆ.
ಇದನ್ನೂ ಓದಿ: Jeevan Utsav: ಎಲ್ಐಸಿಯಿಂದ ಇಂದು ಹೊಸ ಜೀವನ್ ಉತ್ಸವ್ ಪಾಲಿಸಿ ಬಿಡುಗಡೆ; ಇದರ ವಿಶೇಷತೆಗಳೇನು?
ಬೇರೆ ಯೋಜನೆಗಳಿಗೂ ಕ್ಯಾಬಿನೆಟ್ ಅನುಮೋದನೆ
- ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ಗಳನ್ನು ಒದಗಿಸುವ ಯೋಜನೆ
- ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್ಗಳ ಯೋಜನೆ ಮುಂದಿನ ಮೂರು ವರ್ಷ ಮುಂದುವರಿಕೆ
- 16ನೆ ಹಣಕಾಸು ಅಯೋಗದ ನಿಬಂಧನೆಗಳು
- ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Wed, 29 November 23