Campa Cola: ಎಪ್ಪತ್ತದ ದಶಕದಲ್ಲಿ ಜನಪ್ರಿಯವಾಗಿದ್ದ ಕ್ಯಾಂಪಾ ಕೋಲ, ಆರೆಂಜ್, ಲೆಮನ್ ಪಾನೀಯಗಳು ಮತ್ತೆ ಮಾರುಕಟ್ಟೆಗೆ

|

Updated on: Mar 10, 2023 | 12:17 PM

Reliance Group To Re-introduce Campa: 2022ರ ಸೆಪ್ಟಂಬರ್ ತಿಂಗಳಲ್ಲಿ ರಿಲಾಯನ್ಸ್ ಗ್ರೂಪ್ ಸಂಸ್ಥೆ ಕ್ಯಾಂಪಾ ಬ್ರ್ಯಾಂಡನ್ನು 22 ಕೋಟಿ ರುಪಾಯಿಗೆ ಖರೀದಿ ಮಾಡಿತು. ಇದೀಗ ಕೋಲಾ, ಆರೆಂಜ್ ಮತ್ತು ಲೆಮನ್ ಫ್ಲೇವರ್​ಗಳ ಕ್ಯಾಂಪಾ ಪಾನೀಯಗಳನ್ನು ಮತ್ತೆ ಮುನ್ನೆಲೆಗೆ ತರಲು ರಿಲಾಯನ್ಸ್ ಯತ್ನಿಸುತ್ತಿದೆ.

Campa Cola: ಎಪ್ಪತ್ತದ ದಶಕದಲ್ಲಿ ಜನಪ್ರಿಯವಾಗಿದ್ದ ಕ್ಯಾಂಪಾ ಕೋಲ, ಆರೆಂಜ್, ಲೆಮನ್ ಪಾನೀಯಗಳು ಮತ್ತೆ ಮಾರುಕಟ್ಟೆಗೆ
ಕ್ಯಾಂಪಾ ಬ್ರ್ಯಾಂಡ್
Follow us on

ನವದೆಹಲಿ: ಎಪ್ಪತ್ತರ ದಶಕದಲ್ಲಿ ಜನಪ್ರಿಯವಾಗಿದ್ದ ಕ್ಯಾಂಪಾ ಬ್ರ್ಯಾಂಡ್​ನ (Campa Brand) ಕೋಲಾ ಮತ್ತಿತರ ಪಾನೀಯಗಳು ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಮುಕೇಶ್ ಅಂಬಾನಿಯವರ ರಿಲಾಯನ್ಸ್ ರೀಟೇಲ್ ವೆಂಚರ್ಸ್ ಕಂಪನಿಯು ಕ್ಯಾಂಪಾ ಪೇಯಗಳಿಗೆ ಮರುಜೀವ ನೀಡಿದೆ. ಸದ್ಯದಲ್ಲೇ ಈ ಪಾನೀಯಗಳು ಮಾರುಕಟ್ಟೆಗೆ ಬಿಡುಗಡೆ ಆಗಲಿವೆ. ಸದ್ಯ ಕ್ಯಾಂಪಾ ಕೋಲಾ (Campa cola), ಕ್ಯಾಂಪಾ ಲೆಮನ್ ಮತ್ತು ಕ್ಯಾಂಪಾ ಆರೆಂಜ್ ಪಾನೀಯಗಳು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪ್ರತ್ಯಕ್ಷವಾಗಲಿವೆ. ಆ ಬಳಿಕ ದೇಶಾದ್ಯಂತ ಇವುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಇದೆ.

ದೇಶದಲ್ಲಿ ಬಹಳ ಲಾಭಕಾರಿ ಎನಿಸಿರುವ ಮತ್ತು ಬೃಹತ್ ಮಾರುಕಟ್ಟೆ ಹೊಂದಿರುವ ಎಫ್​ಎಂಸಿಜಿ ಕ್ಷೇತ್ರದಲ್ಲಿ (FMCG- Fast Moving Consumer Goods) ರಿಲಾಯನ್ಸ್ ಇಂಡಸ್ಟ್ರೀಸ್ ಹಿಡಿತ ಸಾಧಿಸಲು ಯತ್ನಿಸುತ್ತಿದ್ದು ಕ್ಯಾಂಪಾ ಬ್ರ್ಯಾಂಡ್ ಮರಳಿ ತರಲಾಗುತ್ತಿರುವುದು ಈ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ರಿಲಾಯನ್ಸ್ ರೀಟೇಲ್ ಸಂಸ್ಥೆ (Reliance Retail) ದೇಶಾದ್ಯಂತ 17,225 ವಿವಿಧ ಮಳಿಗೆಗಳನ್ನು ಹೊಂದಿದ್ದು, ದಿನಸಿ ಪದಾರ್ಥಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್​ವರೆಗೆ ಬಹುತೇಕ ಎಲ್ಲಾ ರೀತಿಯ ಉತ್ಪನ್ನಗಳನ್ನು ಮಾರುತ್ತಿದೆ. ಇದರ ಜೊತೆಗೆ ತನ್ನದೇ ಬ್ರ್ಯಾಂಡ್​ನ ಹಲವು ಉತ್ಪನ್ನಗಳ ತಯಾರಿಕೆಗೂ ರಿಲಾಯನ್ಸ್ ಈಗ ಹೆಚ್ಚು ಒತ್ತು ಕೊಡುತ್ತಿದೆ.

ಇದನ್ನೂ ಓದಿFoxconn: ಮಹಿಳೆಯರಿಗೆ ರಾತ್ರಿಪಾಳಿ, 12ಗಂಟೆ ಶಿಫ್ಟ್; ಆ್ಯಪಲ್, ಫಾಕ್ಸ್​ಕಾನ್ ಬೇಡಿಕೆಗೆ ಮಣಿಯಿತಾ ಕರ್ನಾಟಕ? ಕಾನೂನು ತಿದ್ದಿದ ಸರ್ಕಾರ

ಬೆಸ್ಟ್ ಫಾರ್ಮ್ಸ್ ಬ್ರ್ಯಾಂಡ್ ಅಡಿಯಲ್ಲಿ ಅಕ್ಕಿ, ಬೇಳೆ ಕಾಳು ಇತ್ಯಾದಿ ಉತ್ಪನ್ನಗಳನ್ನು ರಿಲಾಯನಸ್ ಹೊಂದಿದೆ. ಸ್ನ್ಯಾಕ್ಸ್, ಕಾಸ್ಮೆಟಿಕ್ಸ್, ಸೋಪು, ಶಾಂಪು, ಕುಕೀಸ್ ಬಿಸ್ಕತ್ ಇತ್ಯಾದಿ ಉತ್ಪನ್ನಗಳನ್ನು ಹೊಂದಿರುವ 25ಕ್ಕೂ ಹೆಚ್ಚು ಬ್ರ್ಯಾಂಡ್​ಗಳನ್ನು ರಿಲಾಯನ್ಸ್ ಹೊಂದಿದೆ.

ತಂಪು ಪಾನೀಯ ಕ್ಷೇತ್ರದಲ್ಲೂ ರಿಲಾಯನ್ಸ್ ಹಿಡಿತ ಸಾಧಿಸುವ ಪ್ರಯತ್ನದಲ್ಲಿದೆ. ಅದರ ಬಳಿ ಈಗಾಗಲೇ ಫಿಜ್ಜಿ ಮತ್ತು ಸೋಸ್ಯೋ ಬ್ರ್ಯಾಂಡ್ ಅಡಿಯಲ್ಲಿ ತಂಪು ಪಾನೀಯಗಳಿವೆ. ಈಗ ಕ್ಯಾಂಪಾ ಮೂಲಕ ಇನ್ನೂ ಕೆಲವಿಷ್ಟು ಪಾನೀಯಗಳನ್ನು ಹೊರತರುತ್ತಿದೆ.

ಇದನ್ನೂ ಓದಿHallmark Gold: ಏಪ್ರಿಲ್ 1ರಿಂದ ಹಾಲ್​ಮಾರ್ಕ್ ಇಲ್ಲದ ಚಿನ್ನಕ್ಕೆ ನಿಷೇಧ; ಹಳೆಯ ಒಡವೆ ಹೊಂದಿದವರು ಏನು ಮಾಡಬೇಕು?

ಕ್ಯಾಂಪಾ ವಿಶೇಷತೆ?

ಕ್ಯಾಂಪಾ ಬ್ರ್ಯಾಂಡ್ ಎಪ್ಪತ್ತರ ದಶಕದಲ್ಲಿ ಬಹಳ ಜನಪ್ರಿಯವೆನಿಸಿತ್ತು. ಪ್ಯೂರ್ ಡ್ರಿಂಕ್ಸ್ ಗ್ರೂಪ್ ಕಂಪನಿಯ ಉತ್ಪನ್ನ ಇದು. ಮುಂಬೈ ಮೂಲದ ಈ ಗ್ರೂಪ್ 1949ರಿಂದ ಕೋಕ ಕೋಲಾದ ಡಿಸ್ಟ್ರಿಬ್ಯೂಟರ್ ಆಗಿತ್ತು. ಎಪ್ಪತ್ತರ ದಶಕದಲ್ಲಿ ಕ್ಯಾಂಪಾ ಬ್ರ್ಯಾಂಡ್ ಅಡಿಯಲ್ಲಿ ಕ್ಯಾಂಪಾ ಕೋಲಾವನ್ನು ಪರಿಚಯಿಸಿತು. ಅದು ಬಹಳ ಬೇಗ ಮಾರುಕಟ್ಟೆ ಆಕ್ರಮಿಸಿತ್ತು. ಆದರೆ, ಎಂಬತ್ತು, ತೊಂಬತ್ತರ ದಶಕದಷ್ಟರಲ್ಲಿ ಬಹುರಾಷ್ಟ್ರೀಯ ಕೋಕಾ ಕೋಲ ನೇರ ಪ್ರವೇಶದೊಂದಿಗೆ ಕ್ಯಾಂಪಾ ಬ್ರ್ಯಾಂಡ್ ತನ್ನ ಮಾರುಕಟ್ಟೆ ಹಿಡಿತ ಕಳೆದುಕೊಂಡಿತ್ತು. ಕಳೆದ ವರ್ಷ, ಅಂದರೆ 2022ರ ಸೆಪ್ಟಂಬರ್ ತಿಂಗಳಲ್ಲಿ ರಿಲಾಯನ್ಸ್ ಗ್ರೂಪ್ ಸಂಸ್ಥೆಯು ಪ್ಯೂರ್ ಡ್ರಿಂಕ್ಸ್ ಗ್ರೂಪ್​ನಿಂದ ಕ್ಯಾಂಪಾ ಬ್ರ್ಯಾಂಡನ್ನು 22 ಕೋಟಿ ರುಪಾಯಿಗೆ ಖರೀದಿ ಮಾಡಿತು. ಇದೀಗ ಕೋಲಾ, ಆರೆಂಜ್ ಮತ್ತು ಲೆಮನ್ ಫ್ಲೇವರ್​ಗಳ ಕ್ಯಾಂಪಾ ಪಾನೀಯಗಳನ್ನು ಮತ್ತೆ ಮುನ್ನೆಲೆಗೆ ತರಲು ರಿಲಾಯನ್ಸ್ ಯತ್ನಿಸುತ್ತಿದೆ.

ಕ್ಯಾಂಪಾ ಪಾನೀಯಗಳು ಅನೇಕ ಗಾತ್ರಗಳಲ್ಲಿ ಲಭ್ಯ ಇರಲಿವೆ. 200 ಎಂಎಲ್​ನಿಂದ ಹಿಡಿದು 2,000 ಎಂಎಲ್ (2 ಲೀಟರ್) ವರೆಗೂ ವಿವಿಧ ಪ್ಯಾಕ್​ಗಳಲ್ಲಿ ಕ್ಯಾಂಪಾ ಕೋಲ, ಕ್ಯಾಂಪಾ ಆರೆಂಜ್ ಮತ್ತು ಕ್ಯಾಂಪಾ ಲೆಮನ್ ದೊರಲಿವೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ