ನೀವು ಸ್ಮೋಕಿಂಗ್ ಬಿಟ್ಟರೂ ಕಡಿಮೆ ಆಗದು ಇನ್ಷೂರೆನ್ಸ್ ಪ್ರೀಮಿಯಮ್; ಕಾರಣ ಇದು

Smoking and drinking habits' effect on insurance premium: ಆರೋಗ್ಯ ವಿಮೆ ಮಾಡಿಸಬೇಕಾದರೆ ಧೂಮಪಾನ, ಮದ್ಯಪಾನದಂತಹ ದುಶ್ಚಟಗಳು, ಈಗಾಗಲೇ ಇರುವ ಕಾಯಿಲೆಗಳ ಬಗ್ಗೆ ಮಾಹಿತಿ ಕೊಡಬೇಕು. ಯಾವುದನ್ನೇ ಮುಚ್ಚಿಟ್ಟರೂ ಇನ್ಷೂರೆನ್ಸ್ ಹಣಕ್ಕೆ ಮಾಡಲಾಗುವ ಕ್ಲೇಮ್ ರಿಜೆಕ್ಟ್ ಆಗುವ ಸಾಧ್ಯತೆ ಇರುತ್ತದೆ. ಧೂಮಪಾನ, ಮದ್ಯಪಾನ ಅಭ್ಯಾಸ ಇದ್ದವರಿಗೆ ಇನ್ಷೂರೆನ್ಸ್ ಪ್ರೀಮಿಯಮ್ ಹೆಚ್ಚಿರುತ್ತದೆ. ಒಂದು ವೇಳೆ, ಚಟ ತ್ಯಜಿಸಿದಾಗ ಪ್ರೀಮಿಯಮ್ ಕಡಿಮೆ ಆಗುತ್ತಾ?

ನೀವು ಸ್ಮೋಕಿಂಗ್ ಬಿಟ್ಟರೂ ಕಡಿಮೆ ಆಗದು ಇನ್ಷೂರೆನ್ಸ್ ಪ್ರೀಮಿಯಮ್; ಕಾರಣ ಇದು
ಇನ್ಷೂರೆನ್ಸ್

Updated on: Nov 14, 2025 | 5:39 PM

ನೀವು ಹೆಲ್ತ್ ಇನ್ಷೂರೆನ್ಸ್ ಪಾಲಿಸಿ (Health Insurance) ಮಾಡಿಸಬೇಕಾದರೆ ಕಂಪನಿಗಳು ನಿಮ್ಮ ಆರೋಗ್ಯ ಪರಿಸ್ಥಿತಿ ತಿಳಿಯಲು ಬಯಸುತ್ತವೆ. ಬಿಪಿ, ಶುಗರ್​ನಂತಹ ಕಾಯಿಲೆಗಳು ಮೊದಲೇ ಅಸ್ತಿತ್ವದಲ್ಲಿದ್ದರೆ ಇನ್ಷೂರೆನ್ಸ್ ಪ್ರೀಮಿಯಮ್ ಹೆಚ್ಚಿರುತ್ತದೆ. ಪಾಲಿಸಿದಾರರಿಗೆ ಧೂಮಪಾನ ಮತ್ತು ಮದ್ಯಪಾನದ ಅಭ್ಯಾಸ ಇದ್ದಾಗಲೂ ಪ್ರೀಮಿಯಮ್ ಹೆಚ್ಚಿರುತ್ತದೆ. ಯಾಕೆಂದರೆ, ಇವೆರಡು ದುಶ್ಚಟಗಳು ಅನೇಕ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತವೆ, ಬೇಗ ಅನಾರೋಗ್ಯ ಬರುವಂತೆ ಮಾಡುತ್ತವೆ. ಹೀಗಾಗಿ, ಹೆಚ್ಚಿನ ಪ್ರೀಮಿಯಮ್ ವಸೂಲಿ ಮಾಡಲಾಗುತ್ತದೆ.

ಸ್ಮೋಕಿಂಗ್ ಅಭ್ಯಾಸ ಬಿಟ್ಟುಬಿಟ್ಟರೆ ಪ್ರೀಮಿಯಮ್ ಮೊತ್ತ ಕಡಿಮೆ ಆಗುತ್ತಾ?

ನೀವು ಸ್ಮೋಕಿಂಗ್ ಮತ್ತು ಡ್ರಿಂಕಿಂಗ್ ಅಭ್ಯಾಸವನ್ನು ನಿಲ್ಲಿಸಿದರೆ ಇನ್ಷೂರೆನ್ಸ್ ಪ್ರೀಮಿಯಮ್ ಕಡಿಮೆ ಆಗುತ್ತದೆಂದು ಗ್ಯಾರಂಟಿ ಇಲ್ಲ. ಹೆಚ್ಚಿನ ಇನ್ಷೂರೆನ್ಸ್ ಕಂಪನಿಗಳು ಪ್ರೀಮಿಯಮ್ ಅನ್ನು ಕಡಿಮೆಗೊಳಿಸುವುದಿಲ್ಲ. ಕೆಲ ಕಂಪನಿಗಳು ನೀವು ಸ್ಮೋಕಿಂಗ್, ಡ್ರಿಂಕಿಂಗ್ ಬಿಟ್ಟ 2 ವರ್ಷದ ಬಳಿಕ ಪ್ರೀಮಿಯಮ್ ಕಡಿಮೆ ಮಾಡಬಹುದು. ಕೆಲ ಕಂಪನಿಗಳು ಐದಾರು ವರ್ಷದ ಬಳಿಕ ಕಡಿಮೆ ಮಾಡಬಹುದು. ಕೆಲ ಕಂಪನಿಗಳು ಕಡಿಮೆ ಮಾಡದೇ ಇರಬಹುದು.

ಇದನ್ನೂ ಓದಿ: ಕೋಟಿ ರೂ ಸಂಬಳ ಕೊಡ್ತೀನಂದ್ರೂ ಅಮೆರಿಕದಲ್ಲಿ ಸಿಗುತ್ತಿಲ್ಲ ಕೆಲಸಗಾರರು; ಮೆಕ್ಯಾನಿಕ್ಸ್ ಇತ್ಯಾದಿ ಕಾರ್ಮಿಕರಿಗೆ ಸಖತ್ ಬೇಡಿಕೆ

ಸ್ಮೋಕಿಂಗ್ ಬಿಟ್ಟರೂ ಪ್ರೀಮಿಯಮ್ ಕಡಿಮೆ ಮಾಡದೇ ಇರಲು ಏನು ಕಾರಣ?

ಧೂಮಪಾನ ಮತ್ತು ಮದ್ಯಪಾನದಂತಹ ದುಶ್ಚಟಗಳು ದೇಹದ ಮೇಲೆ ದೀರ್ಘಾವಧಿ ಪರಿಣಾಮ ಬೀರುತ್ತವೆ. ಧೂಮಪಾನದಿಂದ ಶ್ವಾಸಕೋಶದ ಮೇಲಷ್ಟೇ ಅಲ್ಲ, ಪ್ರತಿಯೊಂದು ಅಂಗದ ಮೇಲೂ ಒಂದಿಲ್ಲೊಂದು ದುಷ್ಪರಿಣಾಮ ಹೊಂದಿರುತ್ತದೆ. ಮದ್ಯಪಾನ ಕೂಡ ಯಕೃತ್ತನ್ನು ಮಾತ್ರವಲ್ಲ ಎಲ್ಲಾ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ. ಇವುಗಳು ಸೆಕೆಂಡರಿ ಕಾಯಿಲೆಗಳಿಗೆ ಸುಲಭವಾಗಿ ಎಡೆ ಮಾಡಿಕೊಡುತ್ತವೆ. ಶ್ವಾಸಕೋಶದ ಕಾಯಿಲೆಗಳಿಗೆ ಬಹುತೇಕ ಕಾರಣವಾಗುವುದು ಧೂಮಪಾನವೇ.

ನೀವು ದುಶ್ಚಟಗಳನ್ನು ಈಗ ಬಿಟ್ಟಿದ್ದರೂ, ಹಲವು ಅಂಗಗಳಿಗೆ ಅವು ಘಾಸಿ ಮಾಡಿಯಾಗಿರುತ್ತದೆ. ಅದರಲ್ಲೂ 10ಕ್ಕೂ ಹೆಚ್ಚು ವರ್ಷ ಕಾಲ ನಿರಂತರವಾಗಿ ಧೂಮಪಾನ ಮತ್ತು ಮದ್ಯಪಾನ ಮಾಡಿ ಅಭ್ಯಾಸ ಹೊಂದಿದವರು, ಚಟ ಬಿಟ್ಟು 20 ವರ್ಷವಾದರೂ ಅದರ ಪರಿಣಾಮ ಎದುರಿಸುತ್ತಲೇ ಇರುತ್ತಾರೆ. ಅದರಲ್ಲೂ ಧೂಮಪಾನವಂತೂ ಅತಿಹೆಚ್ಚು ಅಪಾಯಕಾರಿ ತರುವಂತಹ ಚಟ. ಬಿಪಿ, ಶುಗರ್, ಶ್ವಾಸಕೋಶ ಕಾಯಿಲೆ, ಆರ್ಥ್ರೈಟಿಸ್, ಲೈಂಗಿಕ ಸಮಸ್ಯೆ ಇತ್ಯಾದಿ ನಾನಾ ಕಾಯಿಲೆಗಳಿಗೆ ಮುಖ್ಯ ಕಾರಣವಾಗಿರುತ್ತದೆ.

ಇದನ್ನೂ ಓದಿ: ಇನ್ಷೂರೆನ್ಸ್ ಮಾಹಿತಿ: ಪಾಲಿಸಿದಾರ ಮತ್ತು ನಾಮಿನಿ ಇಬ್ಬರೂ ಮೃತಪಟ್ಟರೆ ಯಾರು ಹಣ ಕ್ಲೇಮ್ ಮಾಡಬಹುದು?

ಪ್ರಾಮಾಣಿಕವಾಗಿ ಮಾಹಿತಿ ನೀಡಿ…

ಇನ್ಷೂರೆನ್ಸ್ ಪಾಲಿಸಿ ಮಾಡಿಸುವಾಗ ನಿಮ್ಮ ಆರೋಗ್ಯ ಪರಿಸ್ಥಿತಿ ಬಗ್ಗೆ ಪೂರ್ಣ ಮಾಹಿತಿ ಒದಗಿಸುವುದು ಮುಖ್ಯ. ಹಿಂದೆ ಇದ್ದ, ಈಗ ಇರುವ ಕಾಯಿಲೆ, ಚಟ ಇತ್ಯಾದಿ ವಿವರವನ್ನು ನೀಡಬೇಕು. ನಿಮಗೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿದ್ದಾಗ ಇನ್ಷೂರೆನ್ಸ್ ಕಂಪನಿಗಳಿಗೆ ಅದು ರಿಸ್ಕಿ ಎನಿಸುತ್ತದೆ. ಹೀಗಾಗಿ, ಹೆಚ್ಚಿನ ಪ್ರೀಮಿಯಮ್ ಕೇಳುತ್ತವೆ.

ಒಂದು ವೇಳೆ ನೀವು ಅನಾರೋಗ್ಯ ಸ್ಥಿತಿಯನ್ನು ಮುಚ್ಚಿಟ್ಟು ಇನ್ಷೂರೆನ್ಸ್ ಪಾಲಿಸಿ ಮಾಡಿಸಿದಾಗ ಮುಂದೆ ಸಮಸ್ಯೆಯಾಗಬಹುದು. ನೀವು ಕಾಯಿಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಇನ್ಷೂರೆನ್ಸ್ ಹಣ ಕ್ಲೇಮ್ ಮಾಡುತ್ತಿದ್ದರೆ, ವಿಮಾ ಕಂಪನಿಗಳು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತವೆ. ಯಾವುದರಿಂದ ಆಸ್ಪತ್ರೆಗೆ ದಾಖಲಾಗಿ ಬಂತು ಎಂಬುದನ್ನು ಗಮನಿಸುತ್ತವೆ. ಧೂಮಪಾನ, ಮದ್ಯಪಾನ ಮೊದಲಾದ ಮುಚ್ಚಿಟ್ಟ ದುಶ್ಚಟಗಳು ಅನಾರೋಗ್ಯಕ್ಕೆ ಕಾರಣವಾಗಿದ್ದರೆ, ಅಂಥ ಕ್ಲೇಮ್ ಅನ್ನು ತಿರಸ್ಕರಿಸಬಹುದು. ಕ್ಲೇಮ್ ರಿಜೆಕ್ಟ್ ಆಗಿರುವ ಹೆಚ್ಚಿನ ಪ್ರಕರಣಗಳಲ್ಲಿ ಇದೇ ಕಾರಣವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ