ಇನ್ಷೂರೆನ್ಸ್ ಮಾಹಿತಿ: ಪಾಲಿಸಿದಾರ ಮತ್ತು ನಾಮಿನಿ ಇಬ್ಬರೂ ಮೃತಪಟ್ಟರೆ ಯಾರು ಹಣ ಕ್ಲೇಮ್ ಮಾಡಬಹುದು?
Insurance rules: ಇನ್ಷೂರೆನ್ಸ್ ಪಾಲಿಸಿದಾರರು ಹಾಗೂ ನಾಮಿನಿ ಇಬ್ಬರೂ ಸತ್ತಾಗ ವಿಮಾ ಹಣ ಯಾರಿಗೆ ಹೋಗುತ್ತೆ? ಇನ್ಷೂರೆನ್ಸ್ ನಿಯಮಗಳು ಏನು ಹೇಳುತ್ತವೆ? ಎಷ್ಟು ನಾಮಿನಿಗಳನ್ನು ಹೆಸರಿಸಬಹುದು? ಪಾಲಿಸಿ ಮಧ್ಯದಲ್ಲಿ ನಾಮಿನಿಗಳ ಹೆಸರು ಬದಲಾಯಿಸಬಹುದಾ? ಈ ಬಗ್ಗೆ ನಿಯಮಗೇನಿವೆ... ಈ ಬಗ್ಗೆ ಒಂದಷ್ಟು ಮಾಹಿತಿ.

ಇನ್ಷೂರೆನ್ಸ್ ಪಾಲಿಸಿ (Insurance) ಮಾಡಿಸಿದವರು ಮೃತಪಟ್ಟರೆ, ಅವರು ಹೆಸರಿಸಿದ ನಾಮಿನಿ ಆ ಹಣಕ್ಕೆ ಕ್ಲೇಮ್ ಸಲ್ಲಿಸಬಹುದು. ಆದರೆ, ಕ್ಲೇಮ್ ಮಾಡುವ ಮುನ್ನವೇ ನಾಮಿನಿ ಮೃತಪಟ್ಟರೆ? ಅಥವಾ ಪಾಲಿಸಿದಾರ ಮತ್ತು ನಾಮಿನಿ ಇಬ್ಬರೂ ಒಟ್ಟಿಗೆ ಮೃತಪಟ್ಟರೆ ಏನಾಗುತ್ತದೆ? ಯಾರಿಗೆ ಹೋಗುತ್ತದೆ ಆ ಹಣ? ಯಾರು ಕ್ಲೇಮ್ ಸಲ್ಲಿಸಲು ಕಾನೂನಿನಲ್ಲಿ ಅವಕಾಶ ಇರುತ್ತದೆ?
ಇನ್ಷೂರೆನ್ಸ್ ಪಾಲಿಸಿಯ ನಾಮಿನಿ ವಿಚಾರದಲ್ಲಿ ಇರುವ ನಿಯಮಗಳು
- ಇನ್ಷೂರೆನ್ಸ್ ಪಾಲಿಸಿದಾರರು ಸತ್ತಾಗ ಹಣಕ್ಕಾಗಿ ನಾಮಿನಿ ಕ್ಲೇಮ್ ಮಾಡಬಹುದು.
- ಪಾಲಿಸಿದಾರ ಮತ್ತು ನಾಮಿನಿ ಇಬ್ಬರೂ ಮೃತಪಟ್ಟಾಗ, ಕಾನೂನು ಪ್ರಕಾರ ಪಾಲಿಸಿದಾರನ ವಾರಸುದಾರನಿಗೆ ಇನ್ಷೂರೆನ್ಸ್ ಹಣ ಹೋಗಬೇಕು.
- ಒಂದು ವೇಳೆ, ಪಾಲಿಸಿದಾರ ಉಯಿಲು ಬರೆದಿಟ್ಟಿದ್ದರೆ ಅದರ ಪ್ರಕಾರ ಆ ವ್ಯಕ್ತಿಗೆ ಇನ್ಷೂರೆನ್ಸ್ ಹಣ ಹೋಗಬೇಕಾಗುತ್ತದೆ.
- ಒಂದು ವೇಳೆ ವಿಲ್ ಬರೆಯದೇ ಇದ್ದರೆ, ಭಾರತೀಯ ವಾರಸುದಾರಿಕೆ ಕಾಯ್ದೆ ಅಡಿ ಇರುವ ನಿಯಮಗಳು ಅನ್ವಯ ಆಗುತ್ತದೆ. ಮೃತರ ಕುಟುಂಬ ಸದಸ್ಯರಾದ ಪತಿ ಅಥವಾ ಪತ್ನಿ, ಮಕ್ಕಳು, ಪೋಷಕರ ನಡುವೆ ಇನ್ಷೂರೆನ್ಸ್ ಹಣ ಹಂಚಿಕೆ ಆಗಬಹುದು.
ಇದನ್ನೂ ಓದಿ: ಯುಪಿಐ ಟ್ರಾನ್ಸಾಕ್ಷನ್ ಮಿತಿ ಹೆಚ್ಚಳ; ಇಲ್ಲಿದೆ ಡೀಟೇಲ್ಸ್
ಇನ್ಷೂರೆನ್ಸ್ ಪಾಲಿಸಿ; ಒಬ್ಬರಿಗಿಂತ ಹೆಚ್ಚು ನಾಮಿನಿಗಳು
ಇನ್ಷೂರೆನ್ಸ್ ಪಾಲಿಸಿ ಮಾಡಿಸಿದಾಗ ನಾಮಿನಿ ಹೆಸರಿಸುವುದು ಕಡ್ಡಾಯ. ಒಬ್ಬರೇ ನಾಮಿನಿಯನ್ನು ಹೆಸರಿಸಬೇಕೆಂಬ ಮಿತಿ ಇರುವುದಿಲ್ಲ. ಒಬ್ಬರಿಗಿಂತ ಹೆಚ್ಚು ಮಂದಿಯನ್ನು ನಾಮಿನಿಗಳಾಗಿ ಹೆಸರಿಸಬಹುದು. ಹೆಂಡತಿ, ಮಕ್ಕಳು, ಅಥವಾ ಪೋಷಕರನ್ನೂ ನಾಮಿನಿಗಳಾಗಿ ಹೆಸರಿಸಬಹುದು.
ಯಾವ ನಾಮಿನಿಗೆ ಎಷ್ಟು ಪ್ರಮಾಣದ ಪಾಲು ಹೋಗಬೇಕು ಎಂಬುದನ್ನೂ ನಿರ್ದಿಷ್ಟಪಡಿಸಬಹುದು. ಉದಾಹರಣೆಗೆ, ಇನ್ಷೂರೆನ್ಸ್ ಹಣದಲ್ಲಿ ಶೇ. 50ರಷ್ಟು ಮೊತ್ತವು ಪತ್ನಿಗೆ, ಶೇ. 25 ಮತ್ತು ಶೇ. 25ರಷ್ಟು ಹಣವು ಇಬ್ಬರು ಮಕ್ಕಳಿಗೆ ಹೋಗಬೇಕು ಎಂದು ನಾಮಿನಿ ಹೆಸರಿಸುವಾಗಲೇ ತಿಳಿಸಬಹುದು.
ಇದನ್ನೂ ಓದಿ: ಸೆ. 22ರಿಂದ ಇನ್ಷೂರೆನ್ಸ್ಗೆ ಜಿಎಸ್ಟಿಯೇ ಇಲ್ಲ; ಅಲ್ಲೀವರೆಗೂ ಪ್ರೀಮಿಯಮ್ ಕಟ್ಟೋದು ನಿಲ್ಲಿಸಬೇಕಾ?
ಪಾಲಿಸಿ ಅವಧಿ ವೇಳೆ ನಾಮಿನಿ ಬದಲಿಸಬಹುದಾ?
ನೀವು ಇನ್ಷೂರೆನ್ಸ್ ಪಾಲಿಸಿ ಮಾಡಿ ನಾಮಿನಿ ಹೆಸರಿಸುತ್ತೀರಿ. ಒಂದು ವೇಳೆ ಆ ನಾಮಿನಿ ಮೃತಪಟ್ಟರೆ, ಅಥವಾ ಆ ನಾಮಿನಿಗೆ ಹಣ ಹೋಗುವುದು ನಿಮಗೆ ಇಷ್ಟ ಇಲ್ಲ ಎನಿಸಿದಲ್ಲಿ ಬೇರೆ ನಾಮಿನಿಯ ಹೆಸರನ್ನು ಸೇರಿಸುವ ಅವಕಾಶ ಇದ್ದೇ ಇರುತ್ತದೆ. ಪಾಲಿಸಿದಾರ ಬದುಕಿದ್ದಾಗ ಮಾತ್ರ ಈ ಬದಲಾವಣೆ ಸಾಧ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Mon, 15 September 25




