ITR Filing Last Date: ಐಟಿಆರ್ ಫೈಲಿಂಗ್, ಡೆಡ್ಲೈನ್ ವಿಸ್ತರಿಸಲು ಎಲ್ಲೆಡೆ ಬೇಡಿಕೆ; ಸೆ. 30ರವರೆಗೂ ಕಾಲಾವಕಾಶ ಸಿಗುತ್ತಾ?
Income tax returns filing deadline: ಐಟಿಆರ್ ಫೈಲ್ ಮಾಡಲು ಸೆಪ್ಟೆಂಬರ್ 15ಕ್ಕೆ ಇರುವ ಡೆಡ್ಲೈನ್ ಅನ್ನು ಸೆ. 30ಕ್ಕೆ ವಿಸ್ತರಿಸಲಾಗಿದೆ ಎನ್ನುವ ಸುದ್ದಿ ಹರಡಿದೆ. ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಆ ರೀತಿ ಗಡುವನ್ನು ಬದಲಾಯಿಸಲಾಗಿಲ್ಲ ಎಂದು ಹೇಳಿದೆ. ಆದಾಯ ತೆರಿಗೆ ವೆಬ್ಸೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಗಡುವನ್ನು ಹೆಚ್ಚಿಸಬೇಕು ಎನ್ನುವ ಕೂಗು ಮುಂದುವರಿದಿದೆ.

ನವದೆಹಲಿ, ಸೆಪ್ಟೆಂಬರ್ 15: ಆದಾಯ ತೆರಿಗೆ ರಿಟರ್ನ್ (Income Tax) ಸಲ್ಲಿಸಲು ಇವತ್ತು ಸೆಪ್ಟೆಂಬರ್ 15 ಡೆಡ್ಲೈನ್ ಇದೆ. ಬೇರೆ ಬೇರೆ ಕಾರಣಗಳಿಂದಾಗಿ ಐಟಿಆರ್ ಫೈಲ್ ಮಾಡುವ ಗಡುವನ್ನು ಜುಲೈ 31ರಿಂದ ಸೆಪ್ಟೆಂಬರ್ 15ಕ್ಕೆ ವಿಸ್ತರಿಸಲಾಗಿತ್ತು. ಈ ಮಧ್ಯೆ ವೆಬ್ಸೈಟ್ ಕ್ರ್ಯಾಷ್ ಆಗಿರುವುದೂ ಸೇರಿದಂತೆ ಬೇರೆ ಬೇರೆ ಸಮಸ್ಯೆಗಳು ಎದುರಾಗಿ ಐಟಿಆರ್ ಸಲ್ಲಿಕೆ ವಿಳಂಬವಾಗಿದೆ ಎಂಬಂತಹ ದೂರುಗಳು ಸಾಕಷ್ಟು ಕೇಳಿಬಂದಿವೆ. ಈ ಕಾರಣಕ್ಕೆ ಹೆಚ್ಚಿನ ಕಾಲಾವಕಾಶ ಕೊಡಬೇಕು ಎಂದು ಕೇಳಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಚಾರ್ಟರ್ಟ್ ಅಕೌಂಟೆಂಟ್ಗಳು ಐಟಿ ವೆಬ್ಸೈಟ್ನಲ್ಲಿರುವ ಸಮಸ್ಯೆಯನ್ನು ಎತ್ತಿ ತೋರಿಸಿ, ಐಟಿಆರ್ ಸಲ್ಲಿಕೆಯ ಡೆಡ್ಲೈನ್ ಅನ್ನು ವಿಸ್ತರಿಸಬೇಕೆಂದು ಒತ್ತಾಯಿಸಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.
ಇದನ್ನೂ ಓದಿ: ಐಟಿಆರ್ ಸಲ್ಲಿಸಲು ಸೆ. 15 ಡೆಡ್ಲೈನ್; ತಡವಾದರೆ ದಂಡ; ಫೈಲಿಂಗ್ ಮಾಡದಿದ್ದರೆ ಇನ್ನೂ ದೊಡ್ಡ ಅಪಾಯ
ಈ ಮಧ್ಯೆ ಐಟಿ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗಿದೆ ಎನ್ನುವಂತಹ ಪೋಸ್ಟ್ವೊಂದು ಆನ್ಲೈನ್ನಲ್ಲಿ ವೈರಲ್ ಆಗಿದೆ. ಹಣಕಾಸು ಸಚಿವಾಲಯದಿಂದ ಹೊರಡಿಸಲಾಗಿದೆ ಎನ್ನಲಾದ ನೋಟೀಸ್ ಅನ್ನು ಉಲ್ಲೇಖಿಸಲಾಗಿದೆ.
ಆದರೆ, ಆದಾಯ ತೆರಿಗೆ ಇಲಾಖೆ ಈ ಸುದ್ದಿಯನ್ನು ಅಲ್ಲಗಳೆದಿದೆ. ಐಟಿಆರ್ ಡೆಡ್ಲೈನ್ ಅನ್ನು ಬದಲಾಯಿಸಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
‘ಐಟಿಆರ್ ಫೈಲಿಂಗ್ಗೆ ಇರುವ ಗಡುವನ್ನು ಸೆಪ್ಟೆಂಬರ್ 30ಕ್ಕೆ ಮತ್ತೆ ವಿಸ್ತರಿಸಲಾಗಿದೆ ಎನ್ನುವಂತಹ ಸುಳ್ಳು ಸುದ್ದಿ ಹರಡುತ್ತಿದೆ. ಆದರೆ, ಐಟಿಆರ್ ಸಲ್ಲಿಸಲು ಸೆಪ್ಟೆಂಬರ್ 15, ಡೆಡ್ಲೈನ್ ಆಗಿದೆ. ತೆರಿಗೆ ಪಾವತಿದಾರರು ಅಧಿಕೃತ ಮಾಹಿತಿಯ ಮೇಲೆ ಮಾತ್ರ ವಿಶ್ವಾಸ ಇರಿಸಬೇಕು’ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಇದನ್ನೂ ಓದಿ: ಮನೆ ಆಸ್ತಿ ಆದಾಯಕ್ಕೆ ತೆರಿಗೆ: ಹೊಸ ಇನ್ಕಮ್ ಟ್ಯಾಕ್ಸ್ ಮಸೂದೆಯಲ್ಲಿ ಕಾನೂನು ಸ್ಪಷ್ಟತೆ
ಐಟಿಆರ್ ಸಲ್ಲಿಕೆ: ಡೆಡ್ಲೈನ್ ಮೀರಿದರೆ ಏನು?
ಐಟಿಆರ್ ಸಲ್ಲಿಕೆಗೆ ಇರುವ ಡೆಡ್ಲೈನ್ ಒಳಗೆ ಪಾವತಿಸದೆ ವಿಳಂಬ ಮಾಡಿದರೆ ವಿವಿಧ ದಂಡಗಳು ಕಾದಿರುತ್ತವೆ. 1,000 ರೂನಿಂದ ಹಿಡಿದು 5,000 ರೂವರೆಗೆ ತಡಪಾವತಿ ಶುಲ್ಕ ತೆರಬೇಕಾಗುತ್ತದೆ. ತೆರಿಗೆ ಬಾಕಿ ಮೊತ್ತದ ಮೇಲೆ ಬಡ್ಡಿ ಕಟ್ಟುವುದು ಇವೇ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




