ಐಟಿಆರ್ ಸಲ್ಲಿಸಲು ಸೆ. 15 ಡೆಡ್ಲೈನ್; ತಡವಾದರೆ ದಂಡ; ಫೈಲಿಂಗ್ ಮಾಡದಿದ್ದರೆ ಇನ್ನೂ ದೊಡ್ಡ ಅಪಾಯ
Know what happens for delayed ITR: ಸೆಪ್ಟೆಂಬರ್ 15ರೊಳಗೆ ಐಟಿಆರ್ ಸಲ್ಲಿಸಲು ಆದಾಯ ತೆರಿಗೆ ಇಲಾಖೆ ಗಡುವು ಕೊಟ್ಟಿದೆ. ಈ ದಿನದ ಬಳಿಕ ಡಿಸೆಂಬರ್ 31ರವರೆಗೆ ಕಟ್ಟುವ ಅವಕಾಶ ಇದೆಯಾದರೂ ವಿಳಂಬ ಐಟಿಆರ್ ಎಂದು ಪರಿಗಣಿಸಲಾಗುತ್ತದೆ. ತಡಪಾವತಿ ಶುಲ್ಕ, ಬಡ್ಡಿ ಇತ್ಯಾದಿ ವಿವಿಧ ದಂಡಗಳನ್ನು ಪಾವತಿಸಬೇಕು. ಈ ಬಗ್ಗೆ ಮಾಹಿತಿ...

ನವದೆಹಲಿ, ಸೆಪ್ಟೆಂಬರ್ 14: ಐಟಿ ರಿಟರ್ನ್ (IT returns) ಸಲ್ಲಿಸಲು ಸೆಪ್ಟೆಂಬರ್ 15, ಸೋಮವಾರ ಕೊನೆಯ ದಿನವಾಗಿದೆ. ಇನ್ಕಮ್ ಟ್ಯಾಕ್ಸ್ ಆಡಿಟ್ ಮಾಡುವವರಿಗೆ ಬೇರೆ ಕಾಲಾವಕಾಶ ಇದೆ. ಬಹುತೇಕ ಸಂಬಳದಾರರಿಗೆ ನಾಳೆಯೇ ಡೆಡ್ಲೈನ್. ಆದರೆ, ಸೆಪ್ಟೆಂಬರ್ 15ರ ನಂತರ ಐಟಿಆರ್ ಸಲ್ಲಿಸಲು ಆಗುವುದಿಲ್ಲ ಎಂದಲ್ಲ. ತಡವಾಗಿ ಐಟಿಆರ್ ಸಲ್ಲಿಸುವ ಅವಕಾಶ ಇರುತ್ತದೆ. ಆದರೆ, ತಡಪಾವತಿ ಶುಲ್ಕ ಮತ್ತಿತರ ದಂಡಗಳನ್ನು ತೆರಬೇಕಾಗುತ್ತದೆ. ಸೆ. 15ರ ಡೆಡ್ಲೈನ್ನಲ್ಲಿ ಫೈಲ್ ಮಾಡಲಾಗದವರು ಡಿಸೆಂಬರ್ 31ರವರೆಗೆ ದಂಡ ಸಮೇತವಾಗಿ ಐಟಿಆರ್ ಸಲ್ಲಿಸಬಹುದು.
ತಡವಾಗಿ ಐಟಿಆರ್ ಸಲ್ಲಿಸಿದರೆ ಆಗುವ ಸಮಸ್ಯೆಗಳಿವು…
ತಡ ಪಾವತಿ ಶುಲ್ಕ: ಸೆಕ್ಷನ್ 234ಎಫ್ ಅಡಿಯಲ್ಲಿ, ಐಟಿಆರ್ ಸಲ್ಲಿಕೆ ವಿಳಂಬವಾದಲ್ಲಿ 5,000 ರೂವರೆಗೆ ದಂಡ ಕಟ್ಟಬೇಕಾಗಬಹುದು. ವಾರ್ಷಿಕ ಆದಾಯ 5 ಲಕ್ಷ ರೂ ಒಳಗೆ ಇದ್ದು ಐಟಿಆರ್ ಸಲ್ಲಿಕೆ ವಿಳಂಬವಾದರೆ 1,000 ರೂ ಶುಲ್ಕ ಪಾವತಿಸಬೇಕು. ಐದು ಲಕ್ಷ ರೂಗಿಂತ ಹೆಚ್ಚಿದ್ದರೆ 5,000 ರೂ ಲೇಟ್ ಫೀ ಇದೆ.
ತೆರಿಗೆ ಬಾಕಿಯ ಮೇಲೆ ಬಡ್ಡಿ: ತೆರಿಗೆ ಬಾಧ್ಯತೆ ಇರುವ ಮೊತ್ತದ ಜೊತೆಗೆ ಅದಕ್ಕೆ ಬಡ್ಡಿಯನ್ನೂ ಸೇರಿಸಿ ಕಟ್ಟಬೇಕಾಗುತ್ತದೆ.
ಇದನ್ನೂ ಓದಿ: ಐಟಿ ರಿಟರ್ನ್ ಸಲ್ಲಿಕೆಗೆ ಸೆ. 15 ಡೆಡ್ಲೈನ್; ಈ ವಿಷಯಗಳು ತಿಳಿದಿರಲಿ
ನಷ್ಟ ಸರಿದೂಗಿಸುವ ಅವಕಾಶ ಇಲ್ಲ: ಆ ವರ್ಷ ನೀವು ಆಸ್ತಿ ಮಾರಾಟದಿಂದ ನಷ್ಟ ಕಂಡಿದ್ದರೆ ಅದನ್ನು ಮುಂದಿನ ಹಣಕಾಸು ವರ್ಷದ ಆದಾಯ ಲೆಕ್ಕಾಚಾರಕ್ಕೆ ಪರಿಗಣಿಸಬಹುದು. ನಷ್ಟವನ್ನು ಸರಿದೂಗಿಸಬಹುದು. ತಡವಾಗಿ ಐಟಿಆರ್ ಸಲ್ಲಿಸಿದಾಗ ನಷ್ಟವನ್ನು ಕ್ಯಾರಿ ಫಾರ್ವರ್ಡ್ ಮಾಡಲಾಗುವುದಿಲ್ಲ.
ರೀಫಂಡ್ ವಿಳಂಬವಾಗಬಹುದು: ತಡವಾಗಿ ಐಟಿ ರಿಟರ್ಸ್ ಫೈಲ್ ಮಾಡಿದರೆ ಸಹಜವಾಗಿ ರೀಫಂಡ್ ಕೂಡ ವಿಳಂಬವಾಗಿ ಸಿಗಬಹುದು.
ಐಟಿ ಇಲಾಖೆ ನಿಗಾ: ತಡವಾಗಿ ಐಟಿ ರಿಟರ್ನ್ಸ್ ಸಲ್ಲಿಸುವವರ ಮೇಲೆ ಆದಾಯ ತೆರಿಗೆ ಇಲಾಖೆ ಹೆಚ್ಚು ನಿಗಾ ಇಡುತ್ತದೆ. ಇದು ಗಮನದಲ್ಲಿರಲಿ.
ಕೆಲ ಡಿಡಕ್ಷನ್ ಅವಕಾಶ ಇರಲ್ಲ: ತಡವಾಗಿ ಐಟಿಆರ್ ಸಲ್ಲಿಸುತ್ತಿದ್ದರೆ ಹಲವು ಸೌಲಭ್ಯಗಳು ಸಿಕ್ಕೋದಿಲ್ಲ. ಹೆಚ್ಆರ್ಎ ಟ್ಯಾಕ್ಸ್ ಡಿಡಕ್ಷನ್, ಇಪಿಎಫ್ 8ಸಿ ಡಿಡಕ್ಷನ್, ಎಲ್ಟಿಎ ಕ್ಲೇಮ್ಸ್ ಇತ್ಯಾದಿ ಸೌಲಭ್ಯಗಳನ್ನು ಬಳಸಲು ಆಗುವುದಿಲ್ಲ.
ಇದನ್ನೂ ಓದಿ: ಮನೆ ಆಸ್ತಿ ಆದಾಯಕ್ಕೆ ತೆರಿಗೆ: ಹೊಸ ಇನ್ಕಮ್ ಟ್ಯಾಕ್ಸ್ ಮಸೂದೆಯಲ್ಲಿ ಕಾನೂನು ಸ್ಪಷ್ಟತೆ
ದಂಡ ಪಾವತಿಯಿಂದ ತಪ್ಪಿಸಿಕೊಳ್ಳಲು ಐಟಿಆರ್ ಸಲ್ಲಿಕೆ ಮಾಡದೇ ಇರುವುದು ಇನ್ನೂ ದೊಡ್ಡ ತಪ್ಪು…
ಐಟಿ ರಿಟರ್ನ್ಸ್ ಅನ್ನು ತಡವಾಗಿ ಸಲ್ಲಿಸಿದರೆ ದಂಡ ಕಟ್ಟಬೇಕಾದೀತೆಂದು ಐಟಿಆರ್ ಸಲ್ಲಿಕೆಯನ್ನೇ ಮಾಡದಿರುವುದು ಇನ್ನೂ ದೊಡ್ಡ ತಪ್ಪಾಗುತ್ತದೆ. 3 ತಿಂಗಳಿಂದ ಹಿಡಿದು 2 ವರ್ಷದವರೆಗೆ ಜೈಲುಶಿಕ್ಷೆಯಾಗಬಹುದು. ಟ್ಯಾಕ್ಸ್ ಬಾಧ್ಯತೆ 25 ಲಕ್ಷ ರೂ ಮೀರಿದರೆ ಜೈಲು ಶಿಕ್ಷೆ 6 ತಿಂಗಳಿಂದ 7 ವರ್ಷದವರೆಗೆ ಇರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




