Canara Bank: ಕೆನರಾ ಬ್ಯಾಂಕ್​ನ ಎಂಸಿಎಲ್​ಆರ್ ದರ ಹೆಚ್ಚಳ; ಸಾಲಗಳು ದುಬಾರಿ

|

Updated on: Apr 13, 2023 | 11:46 AM

MCLR Rates Hike: ಕೆನರಾ ಬ್ಯಾಂಕ್ ತನ್ನ 6 ತಿಂಗಳು ಮತ್ತು 1 ತಿಂಗಳ ಅವಧಿಗೆ ಎಂಸಿಎಲ್​ಆರ್ ದರಗಳನ್ನು ಹೆಚ್ಚಿಸಿದೆ. ಎಂಸಿಎಲ್​ಆರ್ ಎಂಬುದು ಸಾಲಕ್ಕೆ ನೀಡಲಾಗುವ ಕನಿಷ್ಠ ಬಡ್ಡಿ ದರ. ಎಂಸಿಎಲ್​ಆರ್ ಹೆಚ್ಚಾದರೆ ಸಾಲಕ್ಕೆ ಬಡ್ಡಿ ದರವೂ ಹೆಚ್ಚುತ್ತದೆ.

Canara Bank: ಕೆನರಾ ಬ್ಯಾಂಕ್​ನ ಎಂಸಿಎಲ್​ಆರ್ ದರ ಹೆಚ್ಚಳ; ಸಾಲಗಳು ದುಬಾರಿ
ಕೆನರಾ ಬ್ಯಾಂಕ್
Follow us on

ನವದೆಹಲಿ: ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ಇದೀಗ ತನ್ನ ಎಂಸಿಎಲ್​ಆರ್ (MCLR) ದರವನ್ನು 5 ಮೂಲಾಂಕಗಳಷ್ಟು (Basis Point) ಹೆಚ್ಚಳ ಮಾಡಿದೆ. ಅಂದರೆ ಶೇ. 0.05ರಷ್ಟು ದರ ಹೆಚ್ಚಳವಾಗಿದೆ. ಈ ಬ್ಯಾಂಕಿನಲ್ಲಿ 15 ದಿನಗಳಿಂದ ಹಿಡಿದು ಒಂದು ವರ್ಷದವರೆಗಿನ ಎಂಸಿಎಲ್​ಆರ್ ದರಗಳು ಶೇ. 7.90ರಿಂದ ಶೇ. 8.65ರಷ್ಟು ಇವೆ. ಒಂದು ತಿಂಗಳ ಎಂಸಿಎಲ್​ಆರ್ ದರ ಶೇ. 8ರಷ್ಟು ಇದೆ. 6 ತಿಂಗಳ ಎಂಸಿಎಲ್​ಆರ್ ಶೇ. 8.45ಕ್ಕೆ ಏರಿದೆ. ಇಲ್ಲಿ 6 ತಿಂಗಳು ಮತ್ತು 1 ವರ್ಷದ ಅವಧಿಯ ಎಂಸಿಎಲ್​ಆರ್ ದರ ಮಾತ್ರ ಏರಿಕೆ ಆಗಿರುವುದು. ಇನ್ನುಳಿದ ಅವಧಿಗೆ ದರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಒಂದು ವರ್ಷಕ್ಕೆ ಎಂಸಿಎಲ್​ಆರ್ ದರ ಶೇ. 8.65 ಇದೆ.

ಎಂಸಿಎಲ್​ಆರ್ ದರ ಎಂದರೇನು?

ಎಂಸಿಎಲ್​ಆರ್ ಎಂದರೆ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್. ಇದು ಬ್ಯಾಂಕ್ ಸಾಲದ ಕನಿಷ್ಠ ಬಡ್ಡಿ ದರ. ಅಂದರೆ ಈ ದರಕ್ಕಿಂತ ಕಡಿಮೆ ಬಡ್ಡಿಗೆ ಬ್ಯಾಂಕ್ ಯಾರಿಗೂ ಸಾಲ ಕೊಡುವುದಿಲ್ಲ. ರೆಪೋ ದರ ಇತ್ಯಾದಿ ಪರಿಷ್ಕರಿಸುವ ಸಮಯದಲ್ಲೇ ಆರ್​ಬಿಐ ಕೂಡ ಎಂಸಿಎಲ್​ಆರ್ ದರಗಳನ್ನೂ ಪರಿಷ್ಕರಿಸುತ್ತದೆ. ಇಂತಿಷ್ಟು ಪ್ರಮಾಣಕ್ಕಿಂತ ಕಡಿಮೆ ಬಡ್ಡಿಗೆ ಸಾಲ ಕೊಡುವುವಂತಿಲ್ಲ ಎಂದು ತನ್ನ ಅಧೀನದ ಬ್ಯಾಂಕುಗಳಿಗೆ ಆರ್​ಬಿಐ ಲಕ್ಷ್ಮಣ ರೇಖೆ ಹಾಕುತ್ತದೆ.

ಇದನ್ನೂ ಓದಿSSY: ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ 40 ಮೂಲಾಂಕಗಳಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ; ಹೆಣ್ಮಕ್ಕಳ ಈ ಸ್ಕೀಮ್​ನಿಂದ ಎಷ್ಟು ಲಾಭ?

ಎಂಸಿಎಲ್​ಆರ್ ಹೆಚ್ಚಾದರೆ ಸಾಲದ ಬಡ್ಡಿ ದರ ಹೆಚ್ಚಬಹುದು. ಎಲ್ಲಾ ಸಾಲಗಳ ಬಡ್ಡಿ ದರವೂ ಹೆಚ್ಚುತ್ತದೆ ಎಂದು ನಿಶ್ಚಿತವಾಗಿ ಹೇಳಲು ಆಗುವುದಿಲ್ಲ. ಅದೆಲ್ಲವೂ ಬ್ಯಾಂಕ್ ನಿರ್ಧಾರಕ್ಕೆ ಬಿಟ್ಟಿದ್ದು. ಆದರೆ ಕನಿಷ್ಠ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಿದ್ದ ವಿಶೇಷ ಗ್ರಾಹಕರು ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ.

ಕೆನರಾ ಬ್ಯಾಂಕ್​ನ ಹೊಸ ಎಂಸಿಎಲ್​ಆರ್ ದರಗಳು

  • 15 ದಿನಗಳ ಎಂಸಿಎಲ್​ಆರ್: ಶೇ. 7.90
  • 1 ತಿಂಗಳ ಎಂಸಿಎಲ್​ಆರ್: ಶೇ. 8.00
  • 3 ತಿಂಗಳ ಎಂಸಿಎಲ್​ಆರ್: ಶೇ. 8.15
  • 6 ತಿಂಗಳ ಎಂಸಿಎಲ್​ಆರ್: ಶೇ. 8.45
  • 1 ವರ್ಷದ ಎಂಸಿಎಲ್​ಆರ್: ಶೇ. 8.65

2023 ಏಪ್ರಿಲ್ 12ಕ್ಕೆ ಹಾಗೂ ಆ ಬಳಿಕ ಮಾಡಲಾಗುವ ಹೊಸ ಸಾಲಗಳುಗಳಿಗೆ ಈ ಮೇಲಿನ ಎಂಸಿಎಲ್​ಆರ್ ದರಗಳು ಅನ್ವಯ ಆಗುತ್ತವೆ. ಅಥವಾ ಈ ಮೇಲಿನ ದಿನಕ್ಕೆ ಹಾಗೂ ಆ ಬಳಿಕ ಎಂಸಿಎಲ್​ಆರ್ ಆಧಾರಿತ ಬಡ್ಡಿ ದರ ವ್ಯವಸ್ಥೆಗೆ ಬದಲಾವಣೆ ಆದರೆ, ಈ ಹೊಸ ದರಗಳು ಅನ್ವಯ ಆಗುತ್ತವೆ. ಮುಂದಿನ ಪರಿಷ್ಕರಣೆವರೆಗೂ ಈ ಮೇಲಿನ ಎಂಸಿಎಲ್​ಆರ್ ಜಾರಿಯಲ್ಲಿರುತ್ತದೆ ಎಂದು ಕೆನರಾ ಬ್ಯಾಂಕ್ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

ಇದನ್ನೂ ಓದಿIncome Tax: ಹೊಸ ಅದಾಯ ತೆರಿಗೆ ವ್ಯವಸ್ಥೆಯೋ ಹಳೆಯದ್ದೋ? ಆಯ್ಕೆ ಮಾಡಿಕೊಳ್ಳದಿದ್ದರೆ ಏನಾಗುತ್ತದೆ? ಸಿಬಿಡಿಟಿ ಹೊಸ ನೋಟೀಸ್​ನಲ್ಲಿ ಏನು ಹೇಳಿದೆ?

ಕೆನರಾ ಬ್ಯಾಂಕಿನಲ್ಲಿ ಸಾಲ ಪಡೆದಿರುವ ಗ್ರಾಹಕರು ಎಂಸಿಎಲ್​ಆರ್ ಆಧಾರಿತ ಬಡ್ಡಿ ದರ ವ್ಯವಸ್ಥೆಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕೊಡಲಾಗಿದೆ. ಇಂಥವರು ಬ್ಯಾಂಕ್​ನ ಶಾಖಾ ಕಚೇರಿಗೆ ಹೋಗಿ ವಿಚಾರಿಸಬಹುದು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ.

ಕೆನರಾ ಬ್ಯಾಂಕ್ 4ನೇ ಅತಿದೊಡ್ಡ ಬ್ಯಾಂಕ್

ಮಂಗಳೂರಿನಲ್ಲಿ 1906ರಲ್ಲಿ ಆರಂಭಗೊಂಡ ಕೆನರಾ ಬ್ಯಾಂಕ್ ದೇಶದ ನಾಲ್ಕನೇ ಅತಿದೊಡ್ಡ ಬ್ಯಾಂಕ್ ಎನಿಸಿದೆ. ಬೆಂಗಳೂರಿನಲ್ಲಿ ಇದರ ಮುಖ್ಯ ಕಚೇರಿ ಇದೆ. ಆರು ದಶಕಗಳ ಕಾಲ ಕರ್ನಾಟಕದ ಪ್ರಮುಖ ಖಾಸಗಿ ಬ್ಯಾಂಕ್ ಆಗಿದ್ದ ಕೆನರಾ ಬ್ಯಾಂಕ್ ಅನ್ನು 1969ರಲ್ಲಿ ರಾಷ್ಟ್ರೀಕರಣ ಮಾಡಲಾಯಿತು. ಐಎಸ್​ಒ ಸರ್ಟಿಫೀಕೇಶನ್ ಪಡೆದ ಭಾರತದ ಮೊದಲ ಬ್ಯಾಂಕ್ ಎಂಬ ಶ್ರೇಯಸ್ಸು ಕೆನರಾ ಬ್ಯಾಕಿನದ್ದು.

ದೇಶಾದ್ಯಂತ ಹತ್ತಿರ ಹತ್ತಿರ 10 ಸಾವಿರದಷ್ಟು ಶಾಖಾ ಕಚೇರಿಗಳನ್ನು ಹೊಂದಿರುವ ಕೆನರಾ ಬ್ಯಾಂಕ್​ನಲ್ಲಿ 86 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಇದರ ವಾರ್ಷಿಕ ಆದಾಯ 80,000 ಕೋಟಿಗೂ ಹೆಚ್ಚು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ