Deepavali car sales: ದೀಪಾವಳಿಗೆ ಡೆಲಿವರಿಗೆ ಸಿಗದ ಕಾರುಗಳು; ಬುಕಿಂಗ್​ ರದ್ದು ಮಾಡುತ್ತಿರುವ ಗ್ರಾಹಕರು

| Updated By: Srinivas Mata

Updated on: Nov 03, 2021 | 3:00 PM

ಕಾರು ಕಂಪೆನಿಗಳಿಂದ ದೀಪಾವಳಿಗೆ ಕಾರು ಡೆಲಿವರಿ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಅನೇಕ ಖರೀದಿದಾರರು ಬುಕಿಂಗ್ ರದ್ದು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Deepavali car sales: ದೀಪಾವಳಿಗೆ ಡೆಲಿವರಿಗೆ ಸಿಗದ ಕಾರುಗಳು; ಬುಕಿಂಗ್​ ರದ್ದು ಮಾಡುತ್ತಿರುವ ಗ್ರಾಹಕರು
ಸಾಂದರ್ಭಿಕ ಚಿತ್ರ
Follow us on

ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡಲು ತಯಾರಕರು ಹೆಣಗಾಡುತ್ತಿರುವ ಕಾರಣ ಹಬ್ಬದ ದಿನಗಳಲ್ಲಿ ಡೆಲಿವರಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಕಾರು ಖರೀದಿದಾರರು ತಾವು ಮಾಡಿದ ಬುಕಿಂಗ್ ಅನ್ನು ರದ್ದುಗೊಳಿಸಲು ಪ್ರಾರಂಭಿಸಿದ್ದಾರೆ. ವಾಹನ ವಿತರಕರು ಕಳೆದ ಕೆಲವು ವಾರಗಳಿಂದ ದೀಪಾವಳಿಗಾಗಿ ಬುಕಿಂಗ್ ಚಾಲನೆಯಲ್ಲಿತ್ತು. ಆದರೆ ಈಗ ಬುಕಿಂಗ್ ರದ್ದತಿ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಆಟೋಮೋಟಿವ್ ರೀಟೇಲ್ ವ್ಯಾಪಾರದಲ್ಲಿ ಬುಕಿಂಗ್ ರದ್ದತಿ ಸಾಮಾನ್ಯವಾಗಿದೆ. ಆದರೆ ಈ ವರ್ಷ ರದ್ದತಿಯ ಮಟ್ಟವು ಅಸಾಮಾನ್ಯವಾಗಿ ಹೆಚ್ಚಾಗಿದೆ ಎಂದು ವಿತರಕರು ಹೇಳುತ್ತಾರೆ. “ಪ್ರಯಾಣಿಕ ವಾಹನಗಳಿಗೆ ವಿಚಾರಣೆಯ ಮಟ್ಟ ಮತ್ತು ಬೇಡಿಕೆಯು ತುಂಬಾ ಪ್ರಬಲವಾಗಿದೆ. ಆದರೆ ಅದರ ಜೊತೆಗೆ ರದ್ದತಿಗಳು ಸಹ ಹೆಚ್ಚಾಗುತ್ತಿವೆ. ಏಕೆಂದರೆ ನಾವು ಡೆಲಿವರಿ ದಿನಾಂಕವನ್ನು ಒಪ್ಪಿಸಲು ಸಾಧ್ಯವಾಗುತ್ತಿಲ್ಲ. ಜನರು ಮಂಗಳಕರ ಸಂದರ್ಭಕ್ಕಾಗಿ ಕಾಯುತ್ತಾರೆ. ಆ ದಿನಾಂಕಗಳಲ್ಲಿ ಡೆಲಿವರಿ ಸಾಧ್ಯವಾಗದಿದ್ದಾಗ ಅವರು ಅವಧಿಯನ್ನು ವಿಸ್ತರಿಸುವ ಬದಲು ರದ್ದುಗೊಳಿಸುತ್ತಾರೆ,” ಎಂದು ಮಾಧ್ಯಮದೊಂದಿಗೆ ಮಾತನಾಡುತ್ತಾ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ ಅಸೋಸಿಯೇಷನ್ (ಎಫ್‌ಎಡಿಎ) ಅಧ್ಯಕ್ಷ ವಿಂಕೇಶ್ ಗುಲಾಟಿ ಹೇಳಿದ್ದಾರೆ.

ಸೆಮಿ ಕಂಡಕ್ಟರ್ ಕೊರತೆ
35-40 ದಿನಗಳ ಬದಲಾಗಿ ಡೀಲರ್‌ಗಳೊಂದಿಗಿನ ಸ್ಟಾಕ್ ಮಟ್ಟವು ಕೇವಲ 15-20 ದಿನಗಳ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಸೆಮಿ ಕಂಡಕ್ಟರ್ ಲಭ್ಯತೆಯ ಕೊರತೆಯಿಂದಾಗಿ ತಯಾರಕರು ಅಗತ್ಯ ಇರುವಂತೆ ಸರಬರಾಜು ಮಾಡಲು ಹೆಣಗಾಡುತ್ತಿದ್ದಾರೆ. ಇದು ಅಕ್ಟೋಬರ್‌ನಲ್ಲಿ ಅಗತ್ಯವಿರುವ ಸಂಖ್ಯೆಗಳ ಅರ್ಧದಷ್ಟು ಉತ್ಪಾದನೆಯನ್ನು ಸಾಧಿಸಲು ಉದ್ಯಮಕ್ಕೆ ಕಾರಣವಾಗಿದೆ. ನವೆಂಬರ್ 2ರಂದು FADA ಪ್ರಸ್ತುತ ಹಬ್ಬದ ಅವಧಿಯು ಒಂದು ದಶಕದಲ್ಲಿ ಅತ್ಯಂತ ಕೆಟ್ಟದಾಗಿದೆ ಎಂದು ಹೇಳಿಕೊಂಡಿದೆ. ಆದರೆ ಪ್ರಯಾಣಿಕ ವಾಹನ ಉದ್ಯಮವು 3,50,000 ಯೂನಿಟ್‌ಗಳಿಗಿಂತ ಹೆಚ್ಚು ಆರ್ಡರ್‌ಗಳನ್ನು ಬಾಕಿ ಉಳಿಸಿಕೊಂಡಿದೆ.

“ರದ್ದತಿಗಳು ಸಾಮಾನ್ಯಕ್ಕಿಂತ ದ್ವಿಗುಣಗೊಂಡಿದೆ. ನಾವು ಸಾಮಾನ್ಯವಾಗಿ ಶೇ 5ರಿಂದ 10ರಷ್ಟು ರದ್ದತಿಯನ್ನು ಹೊಂದಿದ್ದೇವೆ. ಆದರೆ ಈಗ ಅದು ಶೇ 20-25ರಷ್ಟಾಗಿದೆ. ಒಬ್ಬ ವ್ಯಕ್ತಿಯು ನಾಲ್ಕು ತಿಂಗಳಲ್ಲಿ ವಾಹನ ಪಡೆಯದಿದ್ದರೆ ಅವರ ಖರೀದಿಯಲ್ಲಿನ ಆಸಕ್ತಿಯು ಕ್ಷೀಣಿಸುತ್ತದೆ. ಬೇರೆ ಯಾವುದೇ ಕ್ಷೇತ್ರದಲ್ಲಿ ಹೂಡಿಕೆಯ ಅವಶ್ಯಕತೆಯು ಹೆಚ್ಚಾಗುತ್ತದೆ. ಹೀಗಾಗಿ, ಕಾರು ಖರೀದಿಸಲು ಇಟ್ಟಿರುವ ಹಣ ಬಳಕೆಯಾಗದೆ ಉಳಿದಿರುವುದರಿಂದ ಅದನ್ನು ಬೇರೆಡೆ ಖರ್ಚು ಮಾಡುವ ಸಾಧ್ಯತೆಯಿದೆ,” ಎಂದು ವಿಶ್ಲೇಷಕರು ಹೇಳುತ್ತಾರೆ. ಕಾರು ಮಾರುಕಟ್ಟೆಯ ನಾಯಕತ್ವ ಮಾರುತಿ ಸುಜುಕಿ ತನ್ನ ಬಾಕಿ ಇರುವ ಬುಕಿಂಗ್ 2,50,000 ಯೂನಿಟ್‌ಗಳನ್ನು ದಾಟಿದೆ ಎಂದು ಹೇಳುತ್ತಾರೆ. ಆದರೆ ರದ್ದುಗೊಳಿಸುವಿಕೆ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ. ದೆಹಲಿ ಮೂಲದ ಕಂಪೆನಿಯು ಅಕ್ಟೋಬರ್‌ನಲ್ಲಿ ಉತ್ಪಾದನೆಯನ್ನು ಶೇ 40ರಷ್ಟು ಕಡಿತಗೊಳಿಸಿತು. ಅದರ ಸಾಮಾನ್ಯ ಮಾಸಿಕ ಮಾರಾಟದ ಒಟ್ಟು ಮೊತ್ತದಲ್ಲಿ ಕೇವಲ ಶೇ 66ರಷ್ಟು ಮಾರಾಟ ಮಾಡಲು ನಿರ್ವಹಿಸುತ್ತಿದೆ.

ಕಾಯುವ ಅವಧಿ ಹೆಚ್ಚಾಗಿದೆ
ಮಾರುತಿ ಸುಜುಕಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಅವರು ಮಾಧ್ಯಮಗಳ ಜತೆ ಮಾತನಾಡಿ, “ಬುಕಿಂಗ್ ರದ್ದುಗೊಳಿಸುವಿಕೆ ದೀರ್ಘಾವಧಿಯ ಸರಾಸರಿಗಿಂತ ಸ್ವಲ್ಪ ಹೆಚ್ಚಾಗಿದೆ. ಆದರೆ ನಾನು ಅದನ್ನು ಅಸಾಮಾನ್ಯ ಎಂದು ಕರೆಯುತ್ತೇನೆ. ವಾರದ ಮೂರು ಮತ್ತು ಅಕ್ಟೋಬರ್ ನಾಲ್ಕನೇ ವಾರದಲ್ಲಿ ರದ್ದತಿಗಳು ಕಳೆದ ವರ್ಷದ ಮಟ್ಟಕ್ಕೆ ಸರಿಸುಮಾರು ಹೋಲುತ್ತವೆ. ಕಳೆದ ವರ್ಷಕ್ಕಿಂತ ಮೂರನೇ ವಾರ ಸ್ವಲ್ಪ ಹೆಚ್ಚಾಗಿದೆ. ರದ್ದತಿಗಳು ಕಳೆದ ವರ್ಷಕ್ಕಿಂತ ಶೇ 4.6-ಶೇ 5 ಹೆಚ್ಚಾಗಿದೆ.” MG ಆಸ್ಟರ್, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಟಾಟಾ ಪಂಚ್‌ನಂತಹ ಹೊಸ ಮಾದರಿಗಳು ಮೂರು ತಿಂಗಳಿಂದ ನಾಲ್ಕು ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿವೆ. ಮಹೀಂದ್ರಾ XUV700ನಂತಹ ಇತರ ಹೊಸ, ಬೇಡಿಕೆಯಲ್ಲಿರುವ ಮಾದರಿಗಳು ಒಂಬತ್ತು ತಿಂಗಳ ಕಾಯುವ ಅವಧಿಯನ್ನು ಹೊಂದಿವೆ. ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಸುಜುಕಿ ಎರ್ಟಿಗಾ (CNG)ನಂತಹ ಇತರ ಸಾಮಾನ್ಯ ಮಾದರಿಗಳು ನಾಲ್ಕರಿಂದ ಆರು ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿವೆ.

“ಹಲವಾರು ಖರೀದಿದಾರರು ಪೂರ್ವಸಿದ್ಧತೆಯಿಲ್ಲದ ಖರೀದಿಗೆ ಹೋಗುತ್ತಾರೆ ಮತ್ತು ಅವರು ಡೆಲಿವರಿಗಳಿಗಾಗಿ 3 ಅಥವಾ ಆರು ತಿಂಗಳವರೆಗೆ ಕಾಯುವವರಲ್ಲ. ಈ ಗ್ರಾಹಕರು 1-2 ಭೇಟಿಗಳಲ್ಲಿ ವಾಹನವನ್ನು ಖರೀದಿಸುತ್ತಾರೆ. ಒಂದು ವಾರದೊಳಗೆ ಒಪ್ಪಂದವನ್ನು ಅಂತಿಮಗೊಳಿಸುತ್ತಾರೆ. ಮತ್ತು ಇದು ಪ್ರತಿ ಹಬ್ಬದ ಋತುವಿನಲ್ಲಿ ನಡೆಯುತ್ತದೆ. ಈ ಗ್ರಾಹಕರನ್ನು ನಾವು ಕಳೆದುಕೊಂಡಿದ್ದೇವೆ,” ಎಂದು ಸಂಬಂಧಪಟ್ಟ ಕ್ಷೇತ್ರದ ತಜ್ಞರು ಹೇಳುತ್ತಾರೆ. Q2FY22 ಗಳಿಕೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಟಾಟಾ ಮೋಟಾರ್ಸ್ ಸಿಎಫ್‌ಒ ಪಿ.ಬಿ.ಬಾಲಾಜಿ, “ನಾವು ಗ್ರಾಹಕರನ್ನು ಡೆಲಿವರಿಗಾಗಿ ತುಂಬ ಕಾಯುವಂತೆ ಮಾಡುತ್ತಿರುವುದು ನಮಗೆ ಇಷ್ಟವಿಲ್ಲ. ನಾವು ಇಲ್ಲಿಯವರೆಗೆ ಯಾವುದೇ ಬುಕಿಂಗ್‌ಗಳನ್ನು ರದ್ದುಗೊಳಿಸಿರುವುದನ್ನು ನೋಡಿಲ್ಲ. ಮತ್ತು ಟಾಟಾ ಮೋಟಾರ್ಸ್‌ಗೆ ಬೇಡಿಕೆಯು ದೃಢವಾಗಿ ಉಳಿದಿದೆ,” ಎಂದು ಹೇಳಿದ್ದರು.

ಇದನ್ನೂ ಓದಿ: ಕಣ್ಣು ಹಾಯಿಸಿದ ಕಡೆಗೆಲ್ಲ ಕಾಣುವ ಸೆಮಿಕಂಡಕ್ಟರ್ ಎಂಬ ಸರ್ವಾಂತರ್ಯಾಮಿ ಬಗ್ಗೆ ನಿಮಗೆಷ್ಟು ಗೊತ್ತು?