ನವದೆಹಲಿ: ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ವೇತನಕ್ಕೆ ಸಂಬಂಧಿಸಿರದ ತ್ರೈಮಾಸಿಕ ಟಿಡಿಎಸ್ (TDS) ವಿವರ ಸಲ್ಲಿಕೆಯ ಗಡುವನ್ನು ನವೆಂಬರ್ 30ರ ವರೆಗೆ ವಿಸ್ತರಿಸಿದೆ. ವೇತನಕ್ಕೆ ಸಂಬಂಧಿಸಿರದ ತ್ರೈಮಾಸಿಕ ಟಿಡಿಎಸ್ ವಿವರವನ್ನು ಸಲ್ಲಿಸಲು ‘ಫಾರ್ಮ್ 26ಕ್ಯೂ’ (Form 26Q) ಬಳಸಲಾಗುತ್ತಿದೆ. ‘ಫಾರ್ಮ್ 26ಕ್ಯೂ’ನಲ್ಲಿ ವಿವರ ಸಲ್ಲಿಸಲು ಇರುವ ಕಷ್ಟಗಳನ್ನು ಪರಿಗಣಿಸಿ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ತಿಳಿಸಿದೆ.
‘ಫಾರ್ಮ್ 26ಕ್ಯೂನಲ್ಲಿ ಟಿಡಿಎಸ್ ವಿವರ ಸಲ್ಲಿಸಲು ಇರುವ ತೊಂದರೆಗಳನ್ನು ಗಮನಿಸಲಾಗಿದೆ. ಹೀಗಾಗಿ 2022-23ನೇ ಸಾಲಿನ ಎರಡನೇ ತ್ರೈಮಾಸಿಕ ಅವಧಿಯ ವೇತನಕ್ಕೆ ಸಂಬಂಧಿಸಿರದ ಟಿಡಿಎಸ್ ವಿವರ ಸಲ್ಲಿಕೆಯ ಗಡುವನ್ನು ವಿಸ್ತರಿಸಲಾಗಿದೆ’ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ITR: ಉದ್ದಿಮೆಗಳ ಐಟಿಆರ್ ಸಲ್ಲಿಕೆ ಗಡುವು 7 ದಿನ ವಿಸ್ತರಣೆ
ತ್ರೈಮಾಸಿಕ ಅವಧಿಯಲ್ಲಿ ಪಾವತಿಸಿದ ಒಟ್ಟು ಮೊತ್ತ ಮತ್ತು ಅದಕ್ಕೆ ಕಡಿತವಾದ ತೆರಿಗೆ ವಿವರ ಫಾರ್ಮ್ 26ಕ್ಯೂನಲ್ಲಿ ಅಡಕವಾಗಿರುತ್ತದೆ. ಇದರಲ್ಲಿ ಸೆಕ್ಯುರಿಟೀಸ್ ಮೇಲಿನ ಬಡ್ಡಿ, ಲಾಭಾಂಶ, ಲಾಟರಿ ಮತ್ತು ಕ್ರಾಸ್‌ವರ್ಡ್ ಪಜಲ್‌ಗಳ ಗೆಲುವಿನಿಂದ ದೊರೆತ ಮೊತ್ತ, ಬಾಡಿಗೆ, ಸೆಕ್ಯುರಿಟೀಸ್ ಮೇಲಿನ ಬಡ್ಡಿಯನ್ನು ಹೊರತುಪಡಿಸಿದ ಬಡ್ಡಿ, ವೃತ್ತಿಪರ ಅಥವಾ ತಾಂತ್ರಿಕ ಸೇವೆಗಳಿಗೆ ಶುಲ್ಕವನ್ನು ಒಳಗೊಂಡಿರುತ್ತದೆ.
ಸಮಸ್ಯೆ ಸಿಬಿಡಿಟಿ ಗಮನಕ್ಕೆ ಬಂದಿದೆ
‘ತೆರಿಗೆ ಪಾವತಿಸುವವರು ಇತ್ತೀಚೆಗೆ ಚಲನ್ ಹೊಂದಾಣಿಕೆಯಾಗದಿರುವುದು, ಚಲನ್ ದೃಢೀಕರಣ ವೈಫಲ್ಯ, ಅಟೊ ಅಜಸ್ಟ್ಮೆಂಟ್ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಫಾರ್ಮ್ 26ಕ್ಯೂನಲ್ಲಿ ಟಿಡಿಎಸ್ ವಿವರ ಸಲ್ಲಿಸುವುದು ಕಷ್ಟಕರವಾಗಿ ಪರಿಣಮಿಸಿದೆ. ಸಿಬಿಡಿಟಿಗೆ ಇದರ ಅರಿವಾಗಿದೆ. ಹೀಗಾಗಿ ಗಡುವನ್ನು ವಿಸ್ತರಿಸಲಾಗುತ್ತಿದೆ ಎಂದು ಎಎಂಆರ್ಜಿ, ಕಾರ್ಪೊರೇಟ್ ಹಾಗೂ ಅಂತಾರಾಷ್ಟ್ರೀಯ ತೆರಿಗೆಗಳ ನಿರ್ದೇಶಕ ಓಂ ರಾಜಪುರೋಹಿತ್ ತಿಳಿಸಿದ್ದಾರೆ.
ಐಟಿಆರ್ ಗಡುವು ವಿಸ್ತರಿಸಿದ್ದ ಸಿಬಿಡಿಟಿ
ಉದ್ದಿಮೆಗಳ ಆದಾಯ ತೆರಿಗೆ ವಿವರ ಸಲ್ಲಿಕೆಗೆ ನಿಗದಿಪಡಿಸಲಾಗಿದ್ದ ಗಡುವನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಇತ್ತೀಚೆಗಷ್ಟೇ 7 ದಿನಗಳ ಕಾಲ ವಿಸ್ತರಣೆ ಮಾಡಿತ್ತು. ಉದ್ದಿಮೆಗಳ ಐಟಿಆರ್ ಸಲ್ಲಿಕೆಗೆ ಈ ಹಿಂದೆ ಅಕ್ಟೋಬರ್ 30ರ ಗಡುವು ವಿಧಿಸಲಾಗಿತ್ತು. ಇದನ್ನು ಪರಿಷ್ಕರಿಸಿದ್ದ ಸಿಬಿಡಿಟಿ ನವೆಂಬರ್ 7ರ ವರೆಗೆ ಗಡುವನ್ನು ವಿಸ್ತರಣೆ ಮಾಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ