ನವದೆಹಲಿ, ಡಿಸೆಂಬರ್ 8: ಈರುಳ್ಳಿ ಬೆಲೆ ಹೆಚ್ಚಳವಾಗುವುದನ್ನು ತಡೆಯಲು ಮತ್ತು ಈರುಳ್ಳಿ ಲಭ್ಯತೆ ಹೆಚ್ಚಿಸಲು ಸರ್ಕಾರ ರಫ್ತು ನಿಷೇಧ ಕ್ರಮ (Onion export ban) ಕೈಗೊಂಡಿದೆ. 2024ರ ಮಾರ್ಚ್ ತಿಂಗಳವರೆಗೂ ಈರುಳ್ಳಿ ರಫ್ತನ್ನು ಸರ್ಕಾರ ನಿಷೇಧಿಸಿದೆ. ‘ಈರುಳ್ಳಿ ರಫ್ತು ನೀತಿಯನ್ನು ಬದಲಿಸಲಾಗಿದೆ. ಮುಕ್ತವಾಗಿದ್ದ ಈರುಳ್ಳಿ ರಫ್ತನ್ನು 2024ರ ಮಾರ್ಚ್ 31ರವರೆಗೂ ನಿಷೇಧ ಎಂದು ಬದಲಿಸಲಾಗಿದೆ,’ ಎಂದು ವಿದೇಶೀ ವ್ಯಾಪಾರ ಮಹಾ ನಿರ್ದೇಶನಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಈರುಳ್ಳಿ ಬೆಲೆ ಎರಡು ಪಟ್ಟು ಹೆಚ್ಚಾಗಿತ್ತು. ರಾಷ್ಟ್ರರಾಜಧಾನಿಯಲ್ಲಿ ಅಕ್ಟೋಬರ್ 25ರಂದು ಕಿಲೋಗೆ 40 ರೂ ಇದ್ದ ಈರುಳ್ಳಿ ಬೆಲೆ ನಾಲ್ಕು ದಿನದ ಅಂತರದಲ್ಲಿ 80 ರೂ ಆಗಿತ್ತು. ಅದಾದ ಬಳಿಕ ಈರುಳ್ಳಿ ರಫ್ತಿನ ಮೇಲೆ ಸರ್ಕಾರ ನಿರ್ಬಂಧ ಹೇರಿತ್ತು. ಇದೀಗ ನಿಷೇಧವನ್ನೇ ಜಾರಿಗೆ ತರಲಾಗಿದೆ.
ಈರುಳ್ಳಿ ಬೆಲೆ ಅಕ್ಟೋಬರ್ ಕೊನೆಯ ವಾರದಲ್ಲಿ ದಿಢೀರನೇ ಹೆಚ್ಚಾಗತೊಡಗಿದ್ದಾಗ ಸರ್ಕಾರ ರಫ್ತನ್ನು ನಿಯಂತ್ರಿಸಲು ಕೆಲ ನಿರ್ಬಂಧಗಳನ್ನು ಹಾಕಿತು. ಅದರಂತೆ ಈರುಳ್ಳಿಯ ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ಪ್ರತೀ ಮೆಟ್ರಿಕ್ ಟನ್ಗೆ 800 ಡಾಲರ್ಗೆ ಏರಿಸಿತು. ಅಂದರೆ, ಮೆಟ್ರಿಕ್ ಟನ್ ಈರುಳ್ಳಿಯನ್ನು ಇದಕ್ಕಿಂತ ಕಡಿಮೆ ಬೆಲೆಗೆ ರಫ್ತು ಮಾಡುವಂತಿರಲಿಲ್ಲ. ಕಿಲೋಗೆ 67 ರೂಗಿಂತ ಕಡಿಮೆ ಬೆಲೆಗೆ ಈರುಳ್ಳಿ ರಫ್ತು ಮಾಡುವಂತಿರಲಿಲ್ಲ. ದೇಶೀಯವಾಗಿ ಈರುಳ್ಳಿ ಲಭ್ಯತೆ ಹೆಚ್ಚಿಸಲು ಆ ಕ್ರಮ ಪಾಲಿಸಲಾಗಿತ್ತು.
ಇದನ್ನೂ ಓದಿ: 2023-24ರಲ್ಲಿ ರೀಟೇಲ್ ಹಣದುಬ್ಬರ ಶೇ. 5.4 ಸಾಧ್ಯತೆ; ಹೆಡ್ಲೈನ್ ಇನ್ಫ್ಲೇಶನ್ ಬಗ್ಗೆ ಆರ್ಬಿಐ ಸಮಾಧಾನ
ಇದೀಗ ಈರುಳ್ಳಿಯ ರಫ್ತನ್ನೇ ನಿಷೇಧಿಸಿದೆ ಸರ್ಕಾರ. ಹಣದುಬ್ಬರ ನಿರೀಕ್ಷಿತ ವೇಗದಲ್ಲಿ ಇಳಿಕೆ ಆಗದೇ ಇರುವುದು ಸರ್ಕಾರಕ್ಕೆ ತಲೆನೋವಾಗಿದೆ. ಆಹಾರ ವಸ್ತುಗಳ ಬೆಲೆ ಏರಿಕೆಯು ಹಣದುಬ್ಬರ ಇಳಿಕೆಗೆ ತಡೆಯಾಗಿದೆ. ಈ ಕಾರಣಕ್ಕೆ ಸರ್ಕಾರ ಈರುಳ್ಳಿ ಬೆಲೆ ಏರಿಕೆ ನಿಯಂತ್ರಿಸಲು ರಫ್ತು ನಿಷೇಧ ಕೈಗೊಂಡಿದೆ.
ಸರ್ಕಾರ ಈರುಳ್ಳಿ ರಫ್ತನ್ನು ನಿಷೇಧಿಸುವ ಕ್ರಮ ಕೈಗೊಂಡಿರುವುದಕ್ಕೆ ಮಹಾರಾಷ್ಟ್ರದಲ್ಲಿ ವಿರೋಧ ವ್ಯಕ್ತವಾಗಿದೆ. ಅಲ್ಲಿನ ರೈತರು ಮತ್ತು ವರ್ತಕರು ಸರಕಾರದ ಈ ಕ್ರಮವನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿರುವ ಸುದ್ದಿ ಬಂದಿದೆ. ಭಾರತದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯ ಮಹಾರಾಷ್ಟ್ರ. ರಫ್ತು ಮೂಲಕ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದ್ದ ರೈತರಿಗೆ ಮತ್ತು ವರ್ತಕರಿಗೆ ಈಗ ನಿಷೇಧ ಕ್ರಮ ಇರಿಸು ಮುರುಸು ತಂದಿದೆ.
ಇದನ್ನೂ ಓದಿ: ಬೆಂಗಳೂರು ಸಮೀಪ ದೇಶದ ಅತಿದೊಡ್ಡ ಐಫೋನ್ ಘಟಕ; ಹೊಸೂರಿನಲ್ಲಿ ಟಾಟಾ ಯೋಜನೆ; 50,000 ಮಂದಿಗೆ ಉದ್ಯೋಗ
ಅಕ್ಟೋಬರ್ನಲ್ಲಿ ಈರುಳ್ಳಿ ಬೆಲೆ ಏರಿಕೆಗೂ ಮುನ್ನ ಟೊಮೆಟೋ ಬೆಲೆ ದೇಶಾದ್ಯಂತ ದುಬಾರಿಯಾಗಿತ್ತು. ಕಿಲೋಗೆ 200-300 ರೂವರೆಗೂ ಟೊಮೆಟೋ ಬೆಲೆ ಏರಿಹೋಗಿತ್ತು. ಅದನ್ನು ನಿಯಂತ್ರಿಸುವಷ್ಟರಲ್ಲಿ ಸರ್ಕಾರಕ್ಕೆ ಸಾಕುಸಾಕಾಗಿ ಹೋಗಿತ್ತು. ಭಾರತೀಯ ಅಡುಗೆಗಳಲ್ಲಿ ಈರುಳ್ಳಿ ಮತ್ತು ಟೊಮೆಟೋ ಬಹಳ ಸಾಮಾನ್ಯವಾಗಿ ಬಳಕೆ ಆಗುತ್ತದಾದ್ದರಿಂದ ಇವೆರಡರ ಬೆಲೆ ಏರಿಕೆ ಪರಿಣಾಮವಾಗಿ ಜನಸಾಮಾನ್ಯರ ಅಡುಗೆ ವೆಚ್ಚವೂ ಹೆಚ್ಚಾಗಿದ್ದುದು ಇತ್ತೀಚಿನ ಕ್ರಿಸಿಲ್ ರಿಸರ್ಚ್ ವರದಿಯಿಂದ ತಿಳಿದುಬಂದಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ