ಬೆಂಗಳೂರು ಸಮೀಪ ದೇಶದ ಅತಿದೊಡ್ಡ ಐಫೋನ್ ಘಟಕ; ಹೊಸೂರಿನಲ್ಲಿ ಟಾಟಾ ಯೋಜನೆ; 50,000 ಮಂದಿಗೆ ಉದ್ಯೋಗ
Tata Group To Build iPhone Assembly Unit in Hosur: ದೇಶದ ಅತಿದೊಡ್ಡ ಐಫೋನ್ ಫ್ಯಾಕ್ಟರಿ ತಮಿಳುನಾಡಿನ ಹೊಸೂರಿನಲ್ಲಿ ತಲೆಎತ್ತುತ್ತಿದೆ. ಟಾಟಾ ಗ್ರೂಪ್ ಈ ಘಟಕ ನಿರ್ಮಿಸುತ್ತಿದೆ. ಬೆಂಗಳೂರು ಸಮೀಪದ ತಮಿಳುನಾಡು ಗಡಿಭಾಗದ ಹೊಸೂರಿನಲ್ಲಿ ಟಾಟಾ ಸಂಸ್ಥೆ ಐಫೋನ್ ಕೇಸ್ ತಯಾರಿಕೆಯ ಘಟಕ ಹೊಂದಿದೆ. ಹೊಸೂರಿನ ಐಫೋನ್ ಫ್ಯಾಕ್ಟರಿ ಇನ್ನೆರಡು ವರ್ಷದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಲಿದ್ದು, 50 ಸಾವಿರ ಮಂದಿಗೆ ಉದ್ಯೋಗಾವಕಾಶ ಸಿಗುವ ನಿರೀಕ್ಷೆ ಇದೆ.
ಬೆಂಗಳೂರು, ಡಿಸೆಂಬರ್ 8: ಬೆಂಗಳೂರು ಸಮೀಪದ ತಮಿಳುನಾಡು ಗಡಿಭಾಗದಲ್ಲಿರುವ ಹೊಸೂರಿನಲ್ಲಿ ಟಾಟಾ ಗ್ರೂಪ್ ಹೊಸ ಐಫೋನ್ ಅಸೆಂಬ್ಲಿ ಘಟಕಗಳನ್ನು (iPhone Assembly Unit in Hosur) ಸ್ಥಾಪಿಸಲಿದೆ. ಕೋಲಾರದ ನರಸಾಪುರದಲ್ಲಿಯೂ ಟಾಟಾ ಐಫೋನ್ ಫ್ಯಾಕ್ಟರಿ ಹೊಂದಿದೆ. ಈಗ ಹೊಸೂರಿನಲ್ಲಿ ನಿರ್ಮಾಣವಾಗಲಿರುವುದು ಭಾರತದ ಅತಿದೊಡ್ಡ ಐಫೋನ್ ತಯಾರಿಕಾ ಘಟಕವಾಗಲಿದೆ ಎಂಬ ಮಾಹಿತಿ ಸದ್ಯಕ್ಕೆ ತಿಳಿದುಬರಲಿದೆ. ಭಾರತದಲ್ಲಿ ಐಫೋನ್ ತಯಾರಿಕೆ ಪ್ರಮಾಣ ಹೆಚ್ಚಿಸುವ ಆ್ಯಪಲ್ ಸಂಸ್ಥೆಯ ಪ್ರಯತ್ನದ ಭಾಗವಾಗಿ ಟಾಟಾ ಗ್ರೂಪ್ನ ಈ ಹೊಸ ಘಟಕಗಳು ತಲೆ ಎತ್ತುತ್ತಿವೆ.
ಬ್ಲೂಮ್ಬರ್ಗ್ ಸುದ್ದಿಸಂಸ್ಥೆ ಮಾಹಿತಿ ಪ್ರಕಾರ ಹೊಸೂರಿನಲ್ಲಿ ಬರಲಿರುವ ಟಾಟಾ ಐಫೋನ್ ಫ್ಯಾಕ್ಟರಿಯಲ್ಲಿ 20 ಅಸೆಂಬ್ಲಿ ಲೈನ್ಗಳಿರಲಿವೆ. ಒಂದರಿಂದ ಒಂದೂವರೆ ವರ್ಷದಲ್ಲಿ ಈ ಘಟಕ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ. ಎರಡು ವರ್ಷದಲ್ಲಿ 50,000 ಉದ್ಯೋಗಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಗುರಿ ಇದೆ.
ಇದನ್ನೂ ಓದಿ: ಕಾರ್ಬನ್ ಟ್ಯಾಕ್ಸ್ ಹೇರಿಕೆ ಕ್ರಮ ನೈತಿಕವಲ್ಲ; ಶ್ರೀಮಂತ ದೇಶಗಳ ವಿರುದ್ಧ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿ
ಆ್ಯಪಲ್ನ ಇತರ ಐಫೋನ್ ತಯಾರಕರಾದ ಫಾಕ್ಸ್ಕಾನ್ ಮತ್ತು ಪೆಗಾಟ್ರಾನ್ ಕಂಪನಿಗಳೂ ಕೂಡ ತಮಿಳುನಾಡಿನಲ್ಲಿ ಅಸೆಂಬ್ಲಿ ಯೂನಿಟ್ಗಳನ್ನು ಹೊಂದಿವೆ. ಸದ್ಯಕ್ಕೆ ಫಾಕ್ಸ್ಕಾನ್ ಸಂಸ್ಥೆಯ ಘಟಕ ದೇಶದಲ್ಲೇ ದೊಡ್ಡ ಐಫೋನ್ ಅಸೆಂಬ್ಲಿ ಯೂನಿಟ್ ಎನಿಸಿದೆ. ಹೊಸೂರಿನಲ್ಲಿ ಟಾಟಾ ಗ್ರೂಪ್ ಈ ದಾಖಲೆ ಮುರಿಯಲಿದೆ. ಕೋಲಾರದಲ್ಲಿರುವ ವಿಸ್ಟ್ರಾನ್ ಐಫೋನ್ ಘಟಕದಲ್ಲಿ ಸುಮಾರು 10,000 ಮಂದಿ ಕೆಲಸ ಮಾಡುತ್ತಾರೆ. ಇತ್ತೀಚೆಗಷ್ಟೇ ಟಾಟಾ ಗ್ರೂಪ್ ಈ ಘಟಕ ಹಾಗೂ ವಿಸ್ಟ್ರಾನ್ನ ಬಿಸಿನೆಸ್ ಅನ್ನು ಖರೀದಿ ಮಾಡಿತ್ತು.
ಟಾಟಾ ಗ್ರೂಪ್ ಮತ್ತು ಆ್ಯಪಲ್ನ ನಡುವೆ ಸಹಭಾಗಿತ್ವ ದಿನೇದಿನೇ ಹೆಚ್ಚುತ್ತಲೇ ಇದೆ. ಐಫೋನ್ನ ಕವಚ ಅಥವಾ ಮೊಬೈಲ್ ಕೇಸ್ಗಳನ್ನು (iPhone Enclosure) ಟಾಟಾ ಸಂಸ್ಥೆ ತಯಾರಿಸಿಕೊಡುತ್ತಿದೆ. ಈ ಘಟಕ ಕೂಡ ಹೊಸೂರಿನಲ್ಲೇ ಇದೆ. ಈಗ ಪ್ರತ್ಯೇಕವಾಗಿ ಐಫೋನ್ ಅಸೆಂಬ್ಲಿ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಟಾಟಾ ಗ್ರೂಪ್ ದೇಶಾದ್ಯಂತ ಆ್ಯಪಲ್ ಉತ್ಪನ್ನಗಳ ಮಾರಾಟಕ್ಕೆ ರೀಟೇಲ್ ಅಂಗಡಿಗಳನ್ನು ತೆರೆಯಲು ಯೋಜಿಸಿದೆ.
ಇದನ್ನೂ ಓದಿ: Starbucks: ಒಂದು ಟ್ವೀಟ್ ಕಾರಣಕ್ಕೆ ಲಕ್ಷ ಕೋಟಿ ರೂ ನಷ್ಟ ಮಾಡಿಕೊಂಡ ಸ್ಟಾರ್ಬಕ್ಸ್
ಆ್ಯಪಲ್ ಸಂಸ್ಥೆಯೇ ಖುದ್ದಾಗಿ ಎರಡು ಕಡೆ ಸ್ಟೋರ್ಗಳನ್ನು ತೆರೆದಿದೆ. ಮುಂಬೈ ಮತ್ತು ದೆಹಲಿಯಲ್ಲಿ ಆ್ಯಪಲ್ ಸ್ಟೋರ್ಗಳಿವೆ. ಇನ್ನೂ ಮೂರು ಸ್ಟೋರ್ಗಳನ್ನು ಆರಂಭಿಸುವ ಸಾಧ್ಯತೆ ಇದೆ. ಆದರೆ, ಟಾಟಾ ಗ್ರೂಪ್ನಿಂದ ನಡೆಸಲಾಗುವುದು ರೀಟೇಲ್ ಔಟ್ಲೆಟ್ಗಳು ಮಾತ್ರ. ಅಂದರೆ ಆ್ಯಪಲ್ ಉತ್ಪನ್ನಗಳ ಮಾರಾಟ ಮಾತ್ರ ಆಗುತ್ತವೆ. ಆ್ಯಪಲ್ ಸ್ಟೋರ್ನಲ್ಲಿ ಎಕ್ಸ್ಪೀರಿಯೆನ್ಸ್ ಸೆಂಟರ್ ಇತ್ಯಾದಿ ಸಮಗ್ರ ಸೌಲಭ್ಯಗಳು ಇರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:59 am, Fri, 8 December 23