ನವದೆಹಲಿ: ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ಗಳಿಂದ ಮಾಡಲಾಗುವ ವೆಚ್ಚವನ್ನು ಕೇಂದ್ರ ಸರ್ಕಾರ ಎಲ್ಆರ್ಎಸ್ ಸ್ಕೀಮ್ (LRS- Liberalized Remittance Scheme) ವ್ಯಾಪ್ತಿಗೆ ತರಲಾಗುವಂತೆ ಫೆಮಾ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಇದರ ಪರಿಣಾಮವಾಗಿ ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ವೆಚ್ಚಕ್ಕೆ ಶೇ. 20ರಷ್ಟು ಟಿಸಿಎಸ್ ವಿಧಿಸಲು ಸಾಧ್ಯವಾಗುತ್ತದೆ. ಟಿಸಿಎಸ್ ಎಂದರೆ ಟ್ಯಾಕ್ಸ್ ಕಲೆಕ್ಟೆಡ್ ಅಟ್ ಸೋರ್ಸ್. ಅಂದರೆ ವಹಿವಾಟುಗಳನ್ನು ನಡೆಸುವಾಗಲೇ ತೆರಿಗೆಯನ್ನು ಮುರಿದುಕೊಳ್ಳಲಾಗುತ್ತದೆ. ಭಾರತೀಯರು ವಿದೇಶಗಳಿಗೆ ಹೋಗಿ ಮಾಡುವ ವೆಚ್ಚಕ್ಕೆ ಶೇ. 20ರಷ್ಟು ತೆರಿಗೆ ಬೀಳುತ್ತದೆ. ಆರ್ಬಿಐ ಜೊತೆ ಸಮಾಲೋಚನೆ ನಡೆಸಿ ಕೇಂದ್ರ ಹಣಕಾಸು ಸಚಿವಾಲಯ ಈ ನಿರ್ಧಾರ ಕೈಗೊಂಡು ಮೊನ್ನೆ ಅಧಿಸೂಚನೆ ಹೊರಡಿಸಿದೆ. ಇದೇ ವೇಳೆ, ಐಟಿ ರಿಟರ್ನ್ ಫೈಲ್ ಮಾಡುವಾಗ ಈ ತೆರಿಗೆ ಮೊತ್ತದ ರೀಫಂಡ್ಗೆ ಬೇಕಾದರೆ ಮನವಿ ಸಲ್ಲಿಸುವ ಅವಕಾಶವಂತೂ ಇರುತ್ತದೆ. ಜುಲೈ 1ರಿಂದ ಈ ಹೊಸ ನಿಯಮ ಅನುಷ್ಠಾನಕ್ಕೆ ಬರಲಿದೆ.
ವಿದೇಶಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಮಾಡಲಾಗುವ ವೆಚ್ಚಕ್ಕೆ ಮಾತ್ರ ಈ ಟಿಸಿಎಸ್ ಶುಲ್ಕ ಇರುತ್ತದೆ. ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ ಬಳಸಿ ಭಾರತದಲ್ಲಿ ವಿದೇಶೀ ಸರಕು ಮತ್ತು ಸೇವೆಗಳನ್ನು ಖರೀದಿಸಿದರೆ ಈ ನಿಯಮ ಅನ್ವಯ ಆಗುವುದಿಲ್ಲ. ಹಾಗೆಯೇ ವಿದೇಶಗಳಲ್ಲಿ ವೈದ್ಯಕೀಯ ಮತ್ತು ಶಿಕ್ಷಣಕ್ಕಾಗಿ ಮಾಡುವ ವೆಚ್ಚಕ್ಕೂ ಟಿಸಿಎಸ್ ಕಟ್ಟಬೇಕಿಲ್ಲ.
ಈ ಹಿಂದೆ ಇದ್ದ ಫಾರೀನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ರೂಲ್ಸ್ನ ರೂಲ್ ನಂಬರ್ 7 ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ಗಳಿಂದ ಮಾಡಲಾಗುವು ವೆಚ್ಚವನ್ನು ಎಲ್ಆರ್ಎಸ್ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಕೇಂದ್ರ ಸರ್ಕಾರ ಈಗ ಈ ನಿಯಮದಲ್ಲಿ ತಿದ್ದುಪಡಿಸಿ ಮಾಡಿ ವಿದೇಶಗಳಲ್ಲಿ ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ ಮಾಡಲಾಗುವ ವೆಚ್ಚವನ್ನು ಎಲ್ಆರ್ಎಸ್ ವ್ಯಾಪ್ತಿಗೆ ತಂದಿದೆ. ದೇಶೀಯ ಪ್ರವಾಸೋದ್ಯಮದಿಂದ ಈ ಹೊಸ ನಿಯಮಕ್ಕಾಗಿ ಬೇಡಿಕೆ ಬಂದಿದ್ದರಿಂದ ಈ ಬದಲಾವಣೆ ಮಾಡಲಾಗಿರುವುದು ತಿಳಿದುಬಂದಿದೆ.
ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ಶೇ. 20ರಷ್ಟು ಟಿಸಿಎಸ್ ವಿಧಿಸಬೇಕೆನ್ನುವ ಬೇಡಿಕೆ ಬಂದಿದ್ದು ಭಾರತೀಯ ಪ್ರವಾಸೋದ್ಯಮದಿಂದ ಎಂಬುದು ಕುತೂಹಲ ಮೂಡಿಸುತ್ತದೆ. ಇದಕ್ಕೆ ಕಾರಣವೂ ಉಂಟು. ಭಾರತೀಯರು ವಿದೇಶ ಪ್ರವಾಸಕ್ಕೆ ಹೋಗಿ ಖರ್ಚು ಮಾಡುವುದು ಹೆಚ್ಚಾಗಿದೆಯಂತೆ. 2022-23ರ ಹಣಕಾಸು ವರ್ಷದಲ್ಲಿ ವಿದೇಶೀ ಪ್ರವಾಸಗಳಿಗೆ ಭಾರತೀಯರು 12.51 ಬಿಲಿಯನ್ ಡಾಲರ್ನಷ್ಟು ಹಣ ಖರ್ಚು ಮಾಡಿದ್ದಾರಂತೆ. ಅಂದರೆ, ಸುಮಾರು 1 ಲಕ್ಷ ಕೋಟಿ ರೂಪಾಯಿಯಷ್ಟು ಹಣವನ್ನು ಭಾರತೀಯರು ವಿದೇಶಗಳಿಗೆ ಹೋಗಿ ವೆಚ್ಚ ಮಾಡಿದ್ದಾರೆ.
ವಿದೇಶಗಳಲ್ಲಿ ಭಾರತೀಯರು ಮಾಡುವ ವೆಚ್ಚದ ಮೇಲೆ ಕಣ್ಗಾವಲು ಇಡಲು ಎಲ್ಆರ್ಎಸ್ ಅನ್ವಯ ಮಾಡಲಾಗಿದೆ. ಈವರೆಗೂ ಇಂಥ ಅಂತಾರಾಷ್ಟ್ರೀಯ ವೆಚ್ಚಕ್ಕೆ ಶೇ. 5ರಷ್ಟು ಮಾತ್ರವೇ ಟಿಸಿಎಸ್ ಇತ್ತು. ಈಗ ಅದನ್ನು ಶೇ. 20ಕ್ಕೆ ಏರಿಸಲಾಗಿದೆ. ಜೂನ್ 30ರವರೆಗೂ ಶೇ. 5ರಷ್ಟು ಮಾತ್ರವೇ ಟಿಸಿಎಸ್ ಇರುತ್ತದೆ.
ಹೊರ ದೇಶಗಳಿಗೆ ಹೋಗಿ ಅಲ್ಲಿ ಭಾರತೀಯರು ಕ್ರೆಡಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡಿದಾಗ ಕ್ರೆಡಿಟ್ ಕಾರ್ಡ್ನ ಬ್ಯಾಂಕ್ ಈ ಟಿಸಿಎಸ್ ವಿಧಿಸುತ್ತದೆ. ಅಂದರೆ ಟಿಸಿಎಸ್ ಶುಲ್ಕವನ್ನು ವಹಿವಾಟಿನ ವೇಳೆಯೇ ಕಟ್ಟಬೇಕಾಗುತ್ತದೆ. ಈ ಶುಲ್ಕವನ್ನು ಬ್ಯಾಂಕ್ನವರು ಕೇಂದ್ರಕ್ಕೆ ರವಾನಿಸಬೇಕಾಗುತ್ತದೆ.