
ನವದೆಹಲಿ: ಕೇಂದ್ರ ಸರ್ಕಾರದ ನೌಕರರಿಗೆ ಯುಗಾದಿ ಹಬ್ಬದ ಗಿಫ್ಟ್ ಈ ಬಾರಿ ಸಖತ್ತಾಗಿ ಸಿಗುತ್ತಿರುವಂತಿದೆ. ಕೇಂದ್ರ ಸರ್ಕಾರ ತನ್ನ 1 ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು (DA- Dearness Allowance) ಶೇ. 4ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಈಗ ನೀಡಲಾಗುತ್ತಿರುವ ಶೇ. 38ರಷ್ಟು ಡಿಎ ಅನ್ನು ಶೇ. 42ಕ್ಕೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ ಎಂಬಂತಹ ಮಾಹಿತಿಯನ್ನು ಪಿಟಿಐ ಸುದ್ದಿ ಸಂಸ್ಥೆ ತನ್ನ ವರದಿಯೊಂದರಲ್ಲಿ ತಿಳಿಸಿದೆ. ಈ ಸುದ್ದಿ ನಿಜವೇ ಆದಲ್ಲಿ ಸರ್ಕಾರಿ ನೌಕರರಿಗೆ ಹಬ್ಬದೂಟದ ರುಚಿ ಹೆಚ್ಚಾಗುವುದಂತೂ ಹೌದು.
ಡಿಯರ್ನೆಸ್ ಅಲೋಯನ್ಸ್ ಅಥವಾ ತುಟ್ಟಿಭತ್ಯೆ ಹೆಚ್ಚಳವಾಗಬೇಕಾ ಅಥವಾ ಎಷ್ಟು ಹೆಚ್ಚಳ ಆಗಬೇಕು ಎಂಬುದನ್ನು ತೀರ್ಮಾನಿಸುವುದಕ್ಕೆ ಸರ್ಕಾರದ ಬಳಿ ಒಂದು ವ್ಯವಸ್ಥೆ ಇದೆ. ಕೇಂದ್ರದ ಕಾರ್ಮಿಕ ಸಚಿವಾಲಯದ ಒಂದು ಭಾಗವಾಗಿರುವ ಕಾರ್ಮಿಕ ದಳ (ಲೇಬರ್ ಬ್ಯೂರೋ) ಪ್ರತೀ ತಿಂಗಳು ಔದ್ಯಮಿಕ ಕಾರ್ಮಿಕರ ಗ್ರಾಹಕ ಬೆಲೆ ಸೂಚಿ (CPI-IW) ಬಗ್ಗೆ ವರದಿ ನೀಡುತ್ತಿರುತ್ತದೆ. ಇದರ ಆಧಾರದ ಮೇಲೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳದ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
ಅಂತೆಯೇ, 2022ರ ಡಿಸೆಂಬರ್ ತಿಂಗಳಿನ ವರದಿಯನ್ನು ಸಿಪಿಐ–ಐಡಬ್ಲ್ಯೂ ಜನವರಿ 31ರಂದು ಬಿಡುಗಡೆ ಮಾಡಿದೆ. 4.23 ಪ್ರತಿಶತದಷ್ಟು ಡಿಎ ಹೆಚ್ಚಳ ಮಾಡುವುದಕ್ಕೆ ಶಿಫಾರಸು ಮಾಡಲಾಯಿತು. ಸರ್ಕಾರ ಅಂತಿಮವಾಗಿ ಶೇ. 4ರ ಹೆಚ್ಚಳಕ್ಕೆ ತೀರ್ಮಾನ ಮಾಡುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ರೈಲ್ವೆ ಉದ್ಯೋಗಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ ಹೇಳಿದ್ದಾರೆನ್ನಲಾಗಿದೆ.
ಒಂದು ವೇಳೆ ಕೇಂದ್ರ ಸರ್ಕಾರ ಡಿಎ ಹೆಚ್ಚಳಕ್ಕೆ ನಿರ್ಧರಿಸಿದ್ದೇ ಆದಲ್ಲಿ ಅದು 2023 ಜನವರಿ 1ರಿಂದ ಜಾರಿಗೆ ಬರುತ್ತದೆ. ಕಳೆದ ವರ್ಷ ಸರ್ಕಾರ ಡಿಎ ಅನ್ನು ಶೇ. 34ರಿಂದ ಶೇ. 38ಕ್ಕೆ ಹೆಚ್ಚಿಸಿತ್ತು. ಈ ಬಾರಿಯೂ ಅದೇ ಗತಿಯಲ್ಲಿ ತುಟ್ಟಿಭತ್ಯೆ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ. ಕೇಂದ್ರ ಸರ್ಕಾರದ ಸುಪರ್ದಿಯಲ್ಲಿ ಒಂದು ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರಿದ್ದಾರೆ.