Pakistan Economic Crisis: ಐಎಂಎಫ್ ಷರತ್ತು ಒಪ್ಪಿದರೆ ರಾಜಕೀಯ ಬಿಕ್ಕಟ್ಟು, ಒಪ್ಪದಿದ್ದರೆ ದಿವಾಳಿ; ಅಡಕತ್ತರಿಯಲ್ಲಿ ಪಾಕಿಸ್ತಾನ
IMF Bailout: ಐಎಂಎಫ್ ನೆರವು ಬಿಡುಗಡೆಯಾದ ನಂತರವೇ ತಾವು ಸಹಾಯ ನೀಡುವುದಾಗಿ ಪಾಕಿಸ್ತಾನದ ಹಲವು ಮಿತ್ರ ರಾಷ್ಟ್ರಗಳು ತಿಳಿಸಿವೆ.
ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ನೆರವು (Pakistan Economic Crisis) ನೀಡುವುದಾಗಿ ಕೊನೆಗೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (International Monetary Fund – IMF) ಭರವಸೆ ನೀಡಿದೆ. ಆದರೆ ಸಾಲಮನ್ನಾ ಘೋಷಣೆಗಾಗಿ ಐಎಂಎಫ್ ವಿಧಿಸಿರುವ ಕಠಿಣ ಷರತ್ತುಗಳನ್ನು ಒಪ್ಪಿಕೊಳ್ಳುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಐಎಂಎಫ್ ನೆರವಿನ ಬಗ್ಗೆ ಹಲವು ತಿಂಗಳುಗಳಿಂದ ಪಾಕಿಸ್ತಾನ ಮನವಿ ಸಲ್ಲಿಸುತ್ತಲೇ ಇದೆ. ಮಾತುಕತೆಗಳೂ ನಡೆಯುತ್ತಿವೆ. ಕಳೆದ ಮಂಗಳವಾರ (ಜ 31) ಪಾಕಿಸ್ತಾನಕ್ಕೆ ಬಂದಿದ್ದ ಐಎಂಎಫ್ ಪ್ರತಿನಿಧಿಗಳು ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರು.
ತೆರಿಗೆ ಹೆಚ್ಚಳ ಮತ್ತು ಸಹಾಯಧನ (ಸಬ್ಸಿಡಿ) ಕಡಿತದ ಬಗ್ಗೆ ಐಎಂಎಫ್ ಸೂಚನೆಗಳನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಡಲು ಪಾಕ್ ಸರ್ಕಾರವು ಯತ್ನಿಸುತ್ತಲೇ ಇದೆ. ಈ ನಿರ್ಧಾರಗಳನ್ನು ಪ್ರಕಟಿಸಿದರೆ ಅಕ್ಟೋಬರ್ಗೆ ನಿಗದಿಯಾಗಿರುವ ಚುನಾವಣೆಯಲ್ಲಿ ಹಿನ್ನಡೆಯಾಗಬಹುದು ಎನ್ನುವುದು ಪ್ರಧಾನಿ ಶೆಹಬಾಜ್ ಷರೀಫ್ ಅವರ ಭೀತಿಯಾಗಿದೆ. ‘ನಾನು ಹೆಚ್ಚಿನ ವಿವರಗಳಿಗೆ ಹೋಗುವುದಿಲ್ಲ. ಆದರೆ ಇಷ್ಟು ಮಾತ್ರ ನಿಜ, ನಾವು ಎದುರಿಸುತ್ತಿರುವ ಆರ್ಥಿಕ ಸವಾಲುಗಳು ಮಾತ್ರ ಊಹೆಗೆ ನಿಲುಕದಂತಿವೆ. ಐಎಂಎಫ್ ವಿಧಿಸಿರುವ ಷರತ್ತುಗಳನ್ನು ಒಪ್ಪಿಕೊಳ್ಳುವುದು ತೀರಾ ಕಷ್ಟವಾಗುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಒಪ್ಪಿಕೊಳ್ಳದಿರುವುದು ಅಸಾಧ್ಯ’ ಎಂದು ಶಹಬಾಜ್ ಷರೀಫ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ರಾಜಕೀಯ ಅಸ್ಥಿರತೆ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಇದೀಗ ಭಯೋತ್ಪಾದಕರ ಪ್ರಭಾವ ಹೆಚ್ಚಾಗುತ್ತಿದೆ. ಆಂತರಿಕ ಮತ್ತು ಬಾಹ್ಯ ಭದ್ರತಾ ಆತಂಕದಿಂದ ಕಂಗಾಲಾಗಿರುವ ಪಾಕಿಸ್ತಾನವನ್ನು ವಿದೇಶಿ ಸಾಲದ ಹೊರೆ ಮತ್ತು ವಿದೇಶಿ ವಿನಿಮಯ ಮೀಸಲು ಕೊರತೆ ಬಾಧಿಸುತ್ತಿದೆ. ಹಡಗುಗಳಲ್ಲಿ ಬಂದರುಗಳಿಗೆ ಬಂದಿರುವ ಅತ್ಯಗತ್ಯ ವಸ್ತುಗಳನ್ನು ಇಳಿಸಿಕೊಳ್ಳಲು ಬೇಕಿರುವಷ್ಟೂ ಹಣ ಪಾಕ್ ಸರ್ಕಾರದ ಬಳಿ ಇಲ್ಲ. ಆಹಾರ ಕೊರತೆ ಮತ್ತು ಹಣದುಬ್ಬರದಿಂದ ಜನಸಾಮಾನ್ಯರು ಹತಾಶರಾಗುತ್ತಿದ್ದಾರೆ.
ಪಾಕಿಸ್ತಾನದ ವಿದೇಶಿ ಮೀಸಲು ನಿಧಿಯು 3.1 ಶತಕೋಟಿ ಡಾಲರ್ಗಳಿಗೆ ಕುಸಿದಿದೆ. ಇದರಿಂದ ಕೇವಲ ಮೂರು ವಾರಗಳ ಅತ್ಯಗತ್ಯ ವಸ್ತುಗಳ ಆಮದು ನಿರ್ವಹಣೆ ಸಾಧ್ಯವಾಗುತ್ತದೆ. ವಿಶ್ವದಲ್ಲಿ 5ನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವೆನಿಸಿರುವ ಪಾಕಿಸ್ತಾನವು ಪ್ರಸ್ತುತ ಆಹಾರ ಮತ್ತು ಔಷಧ ಹೊರತುಪಡಿಸಿದರೆ ಉಳಿದ ಯಾವುದೇ ಸರಕುಗಳಿಗೆ ಪಾವತಿ ಖಾತ್ರಿ ಪತ್ರ (Letters of Credit) ಕೊಡುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಹಣದುಬ್ಬರ ಪ್ರಮಾಣವು ಶೇ 48ರಷ್ಟು ಹೆಚ್ಚಾಗಿದ್ದು, ಸಾಮಾನ್ಯ ಪಾಕಿಸ್ತಾನಿಯರು ಆಹಾರಕ್ಕಾಗಿ ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಮಿತ್ರರಾಷ್ಟ್ರಗಳ ತಿರಸ್ಕಾರ, ಐಎಂಎಫ್ ಕಠಿಣ ಷರತ್ತು; ದಿವಾಳಿಯಾಗುವತ್ತ ಪಾಕಿಸ್ತಾನ
ಒತ್ತಡಕ್ಕೆ ಮಣಿಯಲೇ ಬೇಕಾಗಿದೆ ಪಾಕಿಸ್ತಾನ
ದಿವಾಳಿಯಾಗುವುದು ನಿಶ್ಚಿತ ಎಂಬುದು ಮನವರಿಕೆಯಾದ ನಂತರ ಪಾಕಿಸ್ತಾನವು ಐಎಂಎಫ್ ಷರತ್ತುಗಳಿಗೆ ಮಣಿಯಲು ಆರಂಭಿಸಿತು. ಕರೆನ್ಸಿ ಮೇಲಿನ ಹಿಡಿತವನ್ನು ಬಿಟ್ಟುಕೊಟ್ಟಿದ್ದು, ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಿಸಿದ್ದು ಸಹ ಇಂಥ ಷರತ್ತುಗಳ ಭಾಗವಾಗಿಯೇ. ಒಮ್ಮೆ ಕರೆನ್ಸಿ ಮೇಲೆ ಸರ್ಕಾರದ ಹಿಡಿತ ಸಡಿಲವಾದ ನಂತರ ಅಮೆರಿಕದ ಡಾಲರ್ ಎದುರು ಪಾಕಿಸ್ತಾನದ ಕರೆನ್ಸಿ ಮೌಲ್ಯ ಸತತವಾಗಿ ಕುಸಿಯಿತು. ಪೆಟ್ರೋಲ್ ಬೆಲೆಯು ಶೇ 16ರಷ್ಟು ಹೆಚ್ಚಾಯಿತು.
ಆದರೆ ಐಎಂಎಫ್ ಇಷ್ಟಕ್ಕೇ ತೃಪ್ತಿಯಾಗಿಲ್ಲ. ಪೆಟ್ರೋಲ್, ವಿದ್ಯುತ್ ಮತ್ತು ಅಡುಗೆ ಅನಿಲಕ್ಕೆ ಕೊಡುತ್ತಿರುವ ಸಬ್ಸಿಡಿ ನಿಲ್ಲಿಸಲು ಸೂಚಿಸಿದೆ. ರಫ್ತು ವಲಯಗಳಿಗೆ ನೀಡುತ್ತಿರುವ ತೆರಿಗೆ ವಿನಾಯ್ತಿಯನ್ನು ಹಿಂಪಡೆದು ತೆರಿಗೆ ಸಂಗ್ರಹ ಹೆಚ್ಚಿಸಿಕೊಳ್ಳಬೇಕು ಎಂದು ಐಎಂಎಫ್ ಸೂಚಿಸಿದೆ. ಈ ಷರತ್ತುಗಳಿಗೆ ಒಪ್ಪಲು ಪಾಕ್ ಸರ್ಕಾರ ಹಿಂದೇಟು ಹಾಕುತ್ತಿದೆ. ‘ಐಎಂಎಫ್ ಷರತ್ತುಗಳನ್ನು ಒಪ್ಪಿಕೊಂಡರೆ ಪಾಕಿಸ್ತಾನದಲ್ಲಿ ಬೆಲೆಗಳು ಖಚಿತವಾಗಿ ಹೆಚ್ಚಾಗುತ್ತವೆ. ಆದರೆ ಪಾಕಿಸ್ತಾನಕ್ಕೆ ಬೇರೆ ಯಾವುದೇ ಆಯ್ಕೆ ಉಳಿದಿಲ್ಲ’ ಎಂದು ಆರ್ಥಿಕ ವಿಶ್ಲೇಷಕ ಅಬಿದ್ ಹುಸೇನ್ ಹೇಳಿದರು. ‘ಈ ಹಂತದಲ್ಲಿ ನಮಗೆ ಐಎಂಎಫ್ ನೆರವು ಸಿಗದಿದ್ದರೆ ಶ್ರೀಲಂಕಾ ಮತ್ತು ಲೆಬನಾನ್ ರೀತಿಯಲ್ಲಿ ಪಾಕಿಸ್ತಾನವು ಕುಸಿಯುತ್ತದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
‘ಐಎಂಎಫ್ ಷರತ್ತು ಒಪ್ಪಿಕೊಂಡರೆ ಪಾಕಿಸ್ತಾನದಲ್ಲಿ ದೈನಂದಿನ ಜೀವನ ದುಸ್ತರವಾಗಿ ಜನರು ದಂಗೆ ಏಳುತ್ತಾರೆ. ರಾಜಕೀಯ ಬಿಕ್ಕಟ್ಟು ತಲೆದೋರುತ್ತದೆ. ಷರತ್ತು ಒಪ್ಪದಿದ್ದರೆ ನೆರವು ಸಿಗದೆ ದೇಶ ದಿವಾಳಿಯಾಗಿದೆ ಎಂದು ಘೋಷಿಸಬೇಕಾಗುತ್ತದೆ. ಏನು ಮಾಡಿದರೆ ಸರಿ, ಏನು ಮಾಡಿದರೆ ತಪ್ಪು ಎಂದು ತೋಚದ ಪರಿಸ್ಥಿತಿಯಲ್ಲಿ ಸರ್ಕಾರವು ಷರತ್ತು ಒಪ್ಪುವುದೇ ಅನಿವಾರ್ಯ ಎಂಬ ನಿಲುವು ತಳೆಯುವುದು ಅನಿವಾರ್ಯವಾಗಬಹುದು’ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ತನಗೆ ತುರ್ತಾಗಿ 6.5 ಶತಕೋಟಿ ಅಮೆರಿಕನ್ ಡಾಲರ್ ನೆರವು ಬೇಕು ಎಂದು ಪಾಕಿಸ್ತಾನವು ಐಎಂಎಫ್ ಎದುರು ಕೋರಿಕೆ ಸಲ್ಲಿಸಿತ್ತು. ಈವರೆಗೆ ಐಎಂಎಫ್ನಿಂದ ಪಾಕಿಸ್ತಾನಕ್ಕೆ 4 ಶತಕೊಟಿ ಡಾಲರ್ಗಳಷ್ಟು ನೆರವು ಸಿಕ್ಕಿದೆ. ಬಾಕಿ 1.5 ಶತಕೋಟಿ ಡಾಲರ್ ನೆರವಿಗೆ ಐಎಂಎಫ್ ಕಠಿಣ ಷರತ್ತುಗಳನ್ನು ವಿಧಿಸಿದೆ. ಐಎಂಎಫ್ ನೆರವು ಬಿಡುಗಡೆಯಾದ ನಂತರವೇ ತಾವು ಸಹಾಯ ನೀಡುವುದಾಗಿ ಪಾಕಿಸ್ತಾನದ ಹಲವು ಮಿತ್ರ ರಾಷ್ಟ್ರಗಳು ತಿಳಿಸಿವೆ. ಹೀಗಾಗಿ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನವು ಐಎಂಎಫ್ ನೆರವು ಪಡೆದುಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಇದನ್ನೂ ಓದಿ: ಸರ್ಕಾರಿ ನೌಕರರ ಸಂಬಳ ಕಡಿತ, ಪೆಟ್ರೋಲ್ ಮೇಲೆ ಸುಂಕ ಹೆಚ್ಚಳ; ಪಾಕಿಸ್ತಾನಕ್ಕೆ ಕಠಿಣ ಷರತ್ತು ವಿಧಿಸಿದ ಐಎಂಎಫ್
ಮತ್ತಷ್ಟು ವಿದೇಶ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ