ಸರಕುಗಳ ಜಾಗತಿಕ ಬೆಲೆಯ ಏರಿಕೆಯಿಂದ ಗ್ರಾಹಕರಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಬುಧವಾರ ಖಾದ್ಯ ತೈಲಗಳ ಆಮದು ಸುಂಕವನ್ನು ಕಡಿತಗೊಳಿಸಿದೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಎರಡು ಪ್ರತ್ಯೇಕ ಆದೇಶಗಳಲ್ಲಿ ಮೂಲ ಕಸ್ಟಮ್ಸ್ ಸುಂಕ ಮತ್ತು ನಿರ್ದಿಷ್ಟ ಖಾದ್ಯ ತೈಲಗಳ ಮೇಲಿನ ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೆಸ್ ಅನ್ನು ಕಡಿತಗೊಳಿಸಿದೆ. ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾ-ಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಬೀಜದ ಎಣ್ಣೆಯ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ 2.5ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಕಚ್ಚಾ ತಾಳೆ ಎಣ್ಣೆಯು ಕೃಷಿ ಸೆಸ್ ಅನ್ನು ಶೇ 20ರಿಂದ ಶೇ 7.5ಕ್ಕೆ ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಿರುವುದರ ಅನುಕೂಲ ಗ್ರಾಹಕರಿಗೆ ಆಗಲಿದೆ. ಕಚ್ಚಾ ಸೋಯಾ-ಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಎರಡರ ಮೇಲಿನ ಕೃಷಿ ಸೆಸ್ ಅನ್ನು ಶೇ 20ರಿಂದ ಶೇ 5ಕ್ಕೆ ಇಳಿಸಲಾಗಿದೆ. ಈ ಎಲ್ಲ ಬದಲಾವಣೆಗಳು ಗುರುವಾರದಿಂದ (ಅಕ್ಟೋಬರ್ 14, 2021ರಿಂದ 2021ರ ಮಾರ್ಚ್ ರ ಅಂತ್ಯದವರೆಗೆ) ಜಾರಿಯಲ್ಲಿರುತ್ತವೆ ಎಂದು ಆದೇಶಗಳಲ್ಲಿ ತೋರಿಸಲಾಗಿದೆ.
ಅಲ್ಲದೆ, ಖಾದ್ಯ ದರ್ಜೆಯ ಸೋಯಾಬೀನ್ ಎಣ್ಣೆ, ಖಾದ್ಯ ದರ್ಜೆಯ ಸೂರ್ಯಕಾಂತಿ ಎಣ್ಣೆ, ಸಂಸ್ಕರಿಸಿದ ಬ್ಲೀಚ್ ಡಿಯೋಡರೈಸ್ಡ್ (ಆರ್ಬಿಡಿ) ಪಾಮ್ ಆಯಿಲ್, ಆರ್ಬಿಡಿ ಪಾಮೋಲಿನ್, ಆರ್ಬಿಡಿ ಪಾಮ್ ಸ್ಟೀರಿನ್ ಮತ್ತು ಕಚ್ಚಾ ತಾಳೆ ಎಣ್ಣೆಯನ್ನು ಹೊರತುಪಡಿಸಿ ಯಾವುದೇ ಪಾಮ್ ಎಣ್ಣೆಯನ್ನು ಶೇ 32.5ರಿಂದ ಶೇ 17.5ಕ್ಕೆ ಕಡಿಮೆ ಮಾಡಲಾಗಿದೆ. ಅಕ್ರಮವಾಗಿ ಸಂಗ್ರಹಣೆ ತಡೆಯಲು ಮತ್ತು ಬೆಲೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ಮಾರ್ಚ್ ಅಂತ್ಯದವರೆಗೆ ಖಾದ್ಯ ತೈಲಗಳು ಮತ್ತು ಎಣ್ಣೆಬೀಜಗಳ ಮೇಲೆ ಸ್ಟಾಕ್ ಮಿತಿಗಳನ್ನು ಹೇರಿದ ನಂತರ ಈ ಕ್ರಮವು ಬಂದಿದೆ. ಅಕ್ಟೋಬರ್ 8ರಿಂದ ಜಾರಿಗೆ ಬರುವಂತೆ ನ್ಯಾಷನಲ್ ಕಮಾಡಿಟಿ ಮತ್ತು ಡೆರಿವೇಟಿವ್ಸ್ ಎಕ್ಸ್‌ಚೇಂಜ್ ಲಿಮಿಟೆಡ್ (NCDEX)ನಲ್ಲಿ ಸಾಸಿವೆ ಎಣ್ಣೆ ಮತ್ತು ಎಣ್ಣೆಬೀಜಗಳ ಮೇಲೆ ಸ್ಪೆಕ್ಯುಲೆಟಿವ್ (ಸಟ್ಟಾ) ವ್ಯಾಪಾರವನ್ನು ಸರ್ಕಾರ ಸ್ಥಗಿತಗೊಳಿಸಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಹೆಚ್ಚಿನ ಬೆಲೆಗಳು ದೇಶೀಯ ಬೆಲೆಯ ಮೇಲೆ ಗಣನೀಯ ಪರಿಣಾಮ ಬೀರುತ್ತವೆ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ತೈಲಗಳು ಮತ್ತು ಫ್ಯಾಟ್ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ವರ್ಷದಿಂದ ವರ್ಷಕ್ಕೆ ಶೇ 34.19 ಹೆಚ್ಚಾಗಿದೆ ಎಂದು ಅಂಕಿಅಂಶಗಳ ಸಚಿವಾಲಯದಿಂದ ಲಭ್ಯವಿರುವ ಮಾಹಿತಿಯ ಪ್ರಕಾರ ತಿಳಿದುಬಂದಿದೆ. ಗ್ರಾಹಕರ ಆಹಾರ ಬೆಲೆ ಸೂಚ್ಯಂಕವನ್ನು ಆಧರಿಸಿದ ಒಟ್ಟಾರೆ ಆಹಾರ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ 0.68ರಷ್ಟಿತ್ತು, ಇದು ಹಿಂದಿನ ವರ್ಷದ ಅವಧಿಯಲ್ಲಿ ಶೇ 10.68ರಷ್ಟಿತ್ತು.
ಆಮದು ಸುಂಕವನ್ನು ಕಡಿಮೆ ಮಾಡುವುದು ಖಾದ್ಯ ತೈಲ ಬೆಲೆಗಳನ್ನು ಇಳಿಕೆ ಮಾಡುವ ಸರ್ಕಾರದ ಪ್ರಮುಖ ಕಾರ್ಯತಂತ್ರದ ಒಂದು ಭಾಗವಾಗಿದೆ. ಖಾದ್ಯ ತೈಲಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಸರ್ಕಾರವು ಪ್ರಸ್ತುತ ರಾಷ್ಟ್ರೀಯ ಪ್ರಾಯೋಜಿತ ಯೋಜನೆ ಮಿಷನ್ ಆನ್ ಎಡಿಬಲ್ ಆಯಿಲ್ಸ್-ಆಯಿಲ್ ಪಾಮ್ (NMEO-OP) ಎಂದು ಕರೆಯುತ್ತಿದೆ. ಅಂದಹಾಗೆ ಮಲೇಷ್ಯಾ ಮತ್ತು ಇಂಡೋನೇಷ್ಯಾ ದೇಶಗಳು ಭಾರತಕ್ಕೆ ಖಾದ್ಯ ತೈಲ ಆಮದುಗಳ ಪ್ರಮುಖ ಮೂಲಗಳಾಗಿವೆ.
ಇದನ್ನೂ ಓದಿ: Edible Oil: ಖಾದ್ಯ ತೈಲ ಬೆಲೆ ತಗ್ಗಿಸಲು ಅವುಗಳ ದಾಸ್ತಾನು ಮಿತಿ ಮೇಲೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ