ಮಾರುಕಟ್ಟೆ ಬಂಡವಾಳ ಮೌಲ್ಯದ ದೃಷ್ಟಿಯಿಂದ ದೇಶದ ಮೂರನೇ ಅತಿದೊಡ್ಡ ಐಟಿ (ಮಾಹಿತಿ ತಂತ್ರಜ್ಞಾನ) ಸೇವಾ ಕಂಪೆನಿಯಾದ ವಿಪ್ರೋದಿಂದ 2021ರ ಸೆಪ್ಟೆಂಬರ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ. 2,930.7 ಕೋಟಿಗಳ ಕನ್ಸಾಲಿಡೇಟೆಡ್ ಲಾಭವನ್ನು ದಾಖಲಿಸಲಾಗಿದೆ. ವೇತನ ಹೆಚ್ಚಳ ಮತ್ತು ಕ್ಯಾಪ್ಕೊ ಸ್ವಾಧೀನದಲ್ಲಿ ಅಮಾರ್ಟೈಸೇಷನ್ ಶುಲ್ಕದ ನಂತರ ಮಾರ್ಜಿನ್ ಇಳಿಕೆಯಾಗಿ, ಶೇ 9.6ರಷ್ಟು ಕಡಿಮೆಯಾಗಿದೆ. ಆದರೂ ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭವು ಶೇ 18.9ರಷ್ಟು ಹೆಚ್ಚಾಗಿದೆ. 2021ರ ಸೆಪ್ಟೆಂಬರ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಳೆದ ತ್ರೈಮಾಸಿಕಕ್ಕಿಂತ ಒಟ್ಟು ಆದಾಯವು ಅನುಕ್ರಮವಾಗಿ ಶೇ 7.8ರಷ್ಟು ಜಾಸ್ತಿಯಾಗಿ 19,760.7 ಕೋಟಿಗೆ ಏರಿಕೆಯಾಗಿದೆ ಮತ್ತು ವರ್ಷದಿಂದ ವರ್ಷಕ್ಕೆ ಶೇ 30.1ರಷ್ಟು ಹೆಚ್ಚಾಗಿದೆ. ವಿಪ್ರೋ ಟ್ರ್ಯಾಕ್ ಮಾಡುತ್ತಿರುವ ವಿಶ್ಲೇಷಕರು ಅಂದಾಜು ಮಾಡಿದ್ದಂತೆ, ಈ ಐಟಿ ಸೇವೆಗಳು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 2,580 ಮಿಲಿಯನ್ ಡಾಲರ್ನಷ್ಟಿದ್ದು, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 6.9ರಷ್ಟು ಮತ್ತು ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಶೇ 29.5 ಆಗಬಹುದು ಎಂದುಕೊಂಡಿದ್ದರು. ಸ್ಥಿರ ಕರೆನ್ಸಿಯಲ್ಲಿ ಆದಾಯದ ಬೆಳವಣಿಗೆ ಅನುಕ್ರಮವಾಗಿ ಶೇ 8.1 ಆಗಿದ್ದು, ಇದು ತ್ರೈಮಾಸಿಕದಲ್ಲಿ ವಿಶ್ಲೇಷಕರು ಅಂದಾಜು ಮಾಡಿದ್ದ ಶೇ 6.5ರಿಂದ ಶೇ 7.4ಕ್ಕಿಂತ ಬಹಳ ಮುಂದಿದೆ. ಆದರೆ ಇದು ವರ್ಷದಿಂದ ವರ್ಷಕ್ಕೆ ಶೇ 28.8ರಷ್ಟು ಹೆಚ್ಚಾಗಿದೆ.
“Q2 (ಎರಡನೇ ತ್ರೈಮಾಸಿಕ) ಫಲಿತಾಂಶಗಳು ವ್ಯಾಪಾರ ತಂತ್ರವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ನಾವು ಸತತ ಎರಡನೇ ತ್ರೈಮಾಸಿಕದಲ್ಲಿ ಶೇ 4.5ರಷ್ಟು ಆರ್ಗಾನಿಕ್ ಅನುಕ್ರಮ ಬೆಳವಣಿಗೆಯನ್ನು ಸಾಧಿಸಿದ್ದೇವೆ. ಇದರ ಪರಿಣಾಮವಾಗಿ ಈ ಆರ್ಥಿಕ ವರ್ಷದ ಮೊದಲರ್ಧದಲ್ಲಿ ಶೇ 28ರಷ್ಟು YoY (ವರ್ಷದಿಂದ ವರ್ಷಕ್ಕೆ) ಬೆಳವಣಿಗೆಯಾಗಿದೆ,” ಎಂದು ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಥಿಯೆರಿ ಡೆಲಾಪೋರ್ಟೆ ಹೇಳಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿ, ವಿಪ್ರೋ ವಾರ್ಷಿಕ ಆದಾಯ ರನ್ ರೇಟ್‌ನ 10 ಬಿಲಿಯನ್ ಯುಎಸ್ಡಿ ಮೈಲುಗಲ್ಲನ್ನು ಮೀರಿಸಿದೆ. Q3FY22ರ ಮೇಲ್ನೋಟದಲ್ಲಿ ಮಾಹಿತಿ ತಂತ್ರಜ್ಞಾನ ಸೇವೆಗಳ ವ್ಯಾಪಾರದಿಂದ ಆದಾಯವು 2,631 ದಶಲಕ್ಷ ಡಾಲರ್ನಿಂದ 2,683 ಮಿಲಿಯನ್ ಯುಎಸ್ಡಿ ವ್ಯಾಪ್ತಿಯಲ್ಲಿರುತ್ತದೆ ಎಂದು ಕಂಪೆನಿಯು ನಿರೀಕ್ಷಿಸುತ್ತದೆ. ಇದು ಅನುಕ್ರಮ ಬೆಳವಣಿಗೆಯಲ್ಲಿ ಶೇ 2ರಿಂದ ಶೇ 4ರಷ್ಟಾಗುತ್ತದೆ. 2021ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 17.8ರ ಐಟಿ ಸೇವೆಗಳ ಆಪರೇಟಿಂಗ್ ಮಾರ್ಜಿನ್ ಅನ್ನು ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ 104 ಬಿಪಿಎಸ್ ಇಳಿಕೆಯಾಗಿದೆ ಮತ್ತು ವರ್ಷದಿಂದ ವರ್ಷಕ್ಕೆ 140 ಬಿಪಿಎಸ್ ಕುಸಿದಿದೆ.
“ಇತ್ತೀಚಿನ ಸ್ವಾಧೀನ, ಉದ್ಯಮದ ಮಾರಾಟ ವಲಯಗಳಲ್ಲಿ ಸಾಮರ್ಥ್ಯ ಹೆಚ್ಚಳ ಹಾಗೂ ಪ್ರತಿಭೆಗಳಲ್ಲಿ ಹೂಡಿಕೆ ಮಾಡಿದ ನಂತರವೂ ಎರಡನೇ ತ್ರೈಮಾಸಿಕದಲ್ಲಿ ಆಪರೇಟಿಂಗ್ ಮಾರ್ಜಿನ್ ಬಹಳ ಸಣ್ಣ ಪ್ರಮಾಣದಲ್ಲಿ ವ್ಯತ್ಯಾಸ ಆಗಿದೆ,” ಎಂದು ಮುಖ್ಯ ಹಣಕಾಸು ಅಧಿಕಾರಿ ಜತಿನ್ ದಲಾಲ್ ಹೇಳಿದ್ದಾರೆ. ವಿಪ್ರೋದಿಂದ ಶೇ 80ರಷ್ಟು ಸಹೋದ್ಯೋಗಿಗಳನ್ನು ಒಳಗೊಂಡ ವೇತನ ಹೆಚ್ಚಳವನ್ನು ಪೂರ್ಣಗೊಳಿಸಿದ್ದು, ಈ ಕ್ಯಾಲೆಂಡರ್ ವರ್ಷದಲ್ಲಿ ಎರಡನೇ ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ. ಬೆಂಗಳೂರು ಮೂಲದ ಐಟಿ ಸೇವಾ ಸಂಸ್ಥೆ ವಿಪ್ರೋ ಲಂಡನ್ ಪ್ರಧಾನ ಕಚೇರಿಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ಸಲಹಾ ಸಂಸ್ಥೆಯಾಗಿರುವ ಕ್ಯಾಪಿಟಲ್ ಮಾರ್ಕೆಟ್ಸ್ ಕಂಪೆನಿ ಕ್ಯಾಪ್ಕೊವನ್ನು 1.45 ಬಿಲಿಯನ್ ಡಾಲರ್ಗೆ ಸ್ವಾಧೀನಪಡಿಸಿಕೊಂಡಿದೆ. ಇದು ಕಂಪೆನಿಯಿಂದ ಇದುವರೆಗಿನ ಅತಿದೊಡ್ಡ ಖರೀದಿಯಾಗಿದೆ. ವಿಪ್ರೋ ಸ್ಟಾಕ್ ಬೆಲೆಯು ಪ್ರಸಕ್ತ ಹಣಕಾಸು ವರ್ಷ FY22ರಲ್ಲಿ ಶೇ 59ರಷ್ಟು ಬೃಹತ್ ಆದಾಯವನ್ನು ದಾಖಲಿಸಿದೆ ಮತ್ತು ಜುಲೈನಿಂದ ಇಂದಿನವರೆಗೆ ಶೇ 21ರಷ್ಟನ್ನು ಗಳಿಸಿದೆ.
ಇದನ್ನೂ ಓದಿ: Salary Hike: ಹೊಸ ಉದ್ಯೋಗಿಗಳಿಗೆ ಶೇ 120ರಷ್ಟು ವೇತನ ಹೆಚ್ಚಳಕ್ಕೆ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಯೋಜನೆ