ಭಾರತದ ಲಸಿಕೆ ಹಾಕುವ ದರವು ಆರ್ಥಿಕತೆಗೆ ಸಹಾಯಕ ಎಂದ ಐಎಂಎಫ್​ನ ಗೀತಾ ಗೋಪಿನಾಥ್

ಭಾರತದ ಆರ್ಥಿಕತೆಗೆ ಕೊರೊನಾ ಲಸಿಕೆ ದರವು ಸಹಾಯಕ ಆಗಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಗೀತಾ ಗೋಪಿನಾಥ್ ಅಭಿಪ್ರಾಯ ಪಟ್ಟಿದ್ದಾರೆ.

ಭಾರತದ ಲಸಿಕೆ ಹಾಕುವ ದರವು ಆರ್ಥಿಕತೆಗೆ ಸಹಾಯಕ ಎಂದ ಐಎಂಎಫ್​ನ ಗೀತಾ ಗೋಪಿನಾಥ್
ಗೀತಾ ಗೋಪಿನಾಥ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Oct 13, 2021 | 1:41 PM

ಭಾರತವು ತನ್ನ ನಾಗರಿಕರಿಗೆ ಲಸಿಕೆ ಹಾಕುವ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಇದರಿಂದ ಆರ್ಥಿಕತೆಗೆ ಖಂಡಿತವಾಗಿಯೂ ಸಹಾಯವಾಗುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಅಧಿಕಾರಿ ಮಂಗಳವಾರ ಹೇಳಿದ್ದಾರೆ. ಅಂದ ಹಾಗೆ ಈಚೆಗೆ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಅಂದಾಜಿನ ಪ್ರಕಾರ, 2021ರಲ್ಲಿ ಭಾರತದ ಬೆಳವಣಿಗೆ ದರ ಶೇ 9.5 ಆಗಬಹುದು ಎನ್ನಲಾಗಿದೆ. “ಈ ವರ್ಷದ ಭಾರತದ ಬೆಳವಣಿಗೆಯ ಮುನ್ಸೂಚನೆಯಲ್ಲಿ ನಮ್ಮಲ್ಲಿ ಯಾವುದೇ ಬದಲಾವಣೆಯಿಲ್ಲ. ನನ್ನ ಪ್ರಕಾರ ಭಾರತವು ತುಂಬಾ ಕಠಿಣವಾದ ಎರಡನೇ ಅಲೆಯಿಂದ ಹೊರಬಂದಿತು ಮತ್ತು ಅದು ಜುಲೈನಲ್ಲಿ ದೊಡ್ಡ ಡೌನ್‌ಗ್ರೇಡ್‌ಗೆ ಕಾರಣವಾಯಿತು. ಆದರೆ ನಮ್ಮಲ್ಲಿ ಈವರೆಗೆ ಯಾವುದೇ ಬದಲಾವಣೆ ಇಲ್ಲ (ಅದರ ಬೆಳವಣಿಗೆಯ ದರದಲ್ಲಿ),” ಎಂದು ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಮಂಗಳವಾರ ವರ್ಚುವಲ್ ಸಮಾವೇಶದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇತ್ತೀಚಿನ ವರ್ಲ್ಡ್ ಎಕನಾಮಿಕ್ ಔಟ್‌ಲುಕ್​ನಿಂದ ಈ ಹಿಂದೆ ಬಿಡುಗಡೆ ಮಾಡಿದ್ದ ಭಾರತದ ಬೆಳವಣಿಗೆಯ ದರದ ಅಂದಾಜು ಜುಲೈನ ಈ ಬೇಸಿಗೆಯಲ್ಲಿ ಹಿಂದಿನ WEO ಅಪ್‌ಡೇಟ್‌ನಿಂದ ಯಾವುದೇ ಬದಲಾವಣೆ ಕಂಡಿಲ್ಲ. ಆದರೆ 2021ರಲ್ಲಿ ಶೇಕಡಾ ಮೂರು ಮತ್ತು ಏಪ್ರಿಲ್ ಅಂದಾಜಿಗಿಂತ ಶೇ 1.6ರಷ್ಟು ಇಳಿಕೆ ಆಗಿದೆ. ಐಎಂಎಫ್ ಮತ್ತು ವಿಶ್ವಬ್ಯಾಂಕ್​ನ ವಾರ್ಷಿಕ ಸಭೆಗೂ ಮುನ್ನ ಬಿಡುಗಡೆ ಮಾಡಲಾದ ಇತ್ತೀಚಿನ WEO ಅಪ್​ಡೇಟ್ ಪ್ರಕಾರ, ಕೊವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ಆರ್ಥಿಕತೆಯು ಶೇಕಡಾ 7.3ರಷ್ಟು ಸಂಕುಚಿತಗೊಂಡಿದ್ದು, 2021ರಲ್ಲಿ ಶೇಕಡಾ 9.5 ಮತ್ತು 2022ರಲ್ಲಿ 8.5ರಷ್ಟು ಬೆಳವಣಿಗೆಯಾಗುವ ನಿರೀಕ್ಷೆಯಿದೆ.

ವಿಶ್ವವು 2021ರಲ್ಲಿ ಶೇ 5.9 ಮತ್ತು 2022ರಲ್ಲಿ ಶೇ 4.9ಕ್ಕೆ ಬೆಳವಣಿಗೆಯ ನಿರೀಕ್ಷೆ ಇಟ್ಟುಕೊಂಡಿದೆ. ಅಮೆರಿಕ ಈ ವರ್ಷ ಶೇ 6 ಮತ್ತು ಮುಂದಿನ ವರ್ಷ ಶೇ 5.2ಕ್ಕೆ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ, ಚೀನಾ 2021ರಲ್ಲಿ ಶೇ 8 ಮತ್ತು 2022ರಲ್ಲಿ ಶೇ 5.6ರಷ್ಟು ಬೆಳವಣಿಗೆ ಹೊಂದಲಿದೆ ಎಂದು ಐಎಂಎಫ್ ಹೇಳಿದೆ. ಗೀತಾ ಗೋಪಿನಾಥ್ ಹೇಳುವಂತೆ, ಭಾರತದ ಆರ್ಥಿಕತೆಯು ಈಗಾಗಲೇ ಹಣಕಾಸು ಮಾರುಕಟ್ಟೆಗೆ ಸಂಬಂಧಿಸಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಕೊರೊನಾ ಇನ್ನೂ ಹೋಗಿಲ್ಲ. “ಭಾರತೀಯರು ಲಸಿಕೆ ಹಾಕುವ ದರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅದು ಖಂಡಿತವಾಗಿಯೂ ಸಹಾಯಕವಾಗಿದೆ,” ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ.

ಐಎಂಎಫ್‌ನ ಸಂಶೋಧನಾ ವಿಭಾಗದಲ್ಲಿ ವಿಶ್ವ ಆರ್ಥಿಕ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿರುವ ಮಲ್ಹರ್ ನಬಾರ್, ಸಾಂಕ್ರಾಮಿಕ ರೋಗವು ಕೆಟ್ಟದಕ್ಕೆ ತಿರುಗಿದರೆ ಅತ್ಯಂತ ಪರಿಣಾಮ ಬೀರುವ ಕುಟುಂಬಗಳು ಮತ್ತು ಸಂಸ್ಥೆಗಳಿಗೆ ಉದ್ದೇಶಿತ ರೀತಿಯಲ್ಲಿ ಇನ್ನೂ ಹೆಚ್ಚಿನ ಬೆಂಬಲವನ್ನು ನೀಡಲು ಅವಕಾಶವಿದೆ ಎಂದು ಹೇಳಿದ್ದಾರೆ. “ಆದರೆ ಮುಂದುವರಿದಂತೆ ಮಧ್ಯಮ ಅವಧಿಗೆ ಸಂಬಂಧಿಸಿದಂತೆ, ಜಿಡಿಪಿ ಅನುಪಾತಕ್ಕೆ ಸಾಲವನ್ನು ತಗ್ಗಿಸಲು ಒಂದು ವಿಶ್ವಾಸಾರ್ಹ ಮಧ್ಯಮ-ಅವಧಿಯ ಕಾರ್ಯತಂತ್ರವನ್ನು ರೂಪಿಸುವುದು ಮತ್ತು ಭಾರತದ ಆರ್ಥಿಕತೆಯ ಭವಿಷ್ಯದ ಅಭಿವೃದ್ಧಿ ಅಗತ್ಯಗಳು ಮತ್ತು ಮೂಲಸೌಕರ್ಯ ಅಗತ್ಯಗಳನ್ನು ಪೂರೈಸಲು ಅವಕಾಶವನ್ನು ಸೃಷ್ಟಿಸುವುದು ಮುಖ್ಯ,” ಎಂದು ನಬಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಇದನ್ನೂ ಓದಿ: GDP: ಭಾರತದ ಜಿಡಿಪಿ FY22ಕ್ಕೆ ಶೇ 9.5ರಷ್ಟಾಗುವ ಅಂದಾಜು ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ