Coal Mines: 40 ಹೊಸ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಆರಂಭಿಸಿದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರದಿಂದ 40 ಹೊಸ ಕಲ್ಲಿದ್ದಲು ಗಣಿ ಹರಾಜು ಆರಂಭ ಮಾಡಲಾಗಿದೆ. ಅಕ್ಟೋಬರ್ 12ರಂದು ಈ ಪ್ರಕ್ರಿಯೆ ಶುರುವಾಗಿದ್ದು, ಹಿಂದಿನ ಬಾಕಿಯೂ ಸೇರಿದಂತೆ 88 ಗಣಿ ಉಳಿದಿದೆ ಎಂದು ತಿಳಿಸಲಾಗಿದೆ
ಕೇಂದ್ರ ಸರ್ಕಾರವು ಅಕ್ಟೋಬರ್ 12ರಂದು 40 ಹೊಸ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದೆ. ಕಲ್ಲಿದ್ದಲು ಸಚಿವಾಲಯವು 88 ಗಣಿಗಳನ್ನು ನೀಡುವುದಾಗಿ ಹೇಳಿದ್ದು, ಹಿಂದಿನ ಎರಡು ಹಂತಗಳಲ್ಲಿ ಬಾಕಿ ಉಳಿದದ್ದು ಸಹ ಇದರಲ್ಲಿ ಒಳಗೊಂಡಿದೆ. “ಮೊದಲ ಎರಡು ಕಂತುಗಳಲ್ಲಿ 28 ಕಲ್ಲಿದ್ದಲು ಗಣಿಗಳನ್ನು ಯಶಸ್ವಿಯಾಗಿ ಹರಾಜು ಮಾಡಿದ ನಂತರ ಕಲ್ಲಿದ್ದಲು ಸಚಿವಾಲಯವು ಇಂದು 40 ಹೊಸ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದೆ,” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 88 ಗಣಿಗಳಲ್ಲಿ 55 ಬಿಲಿಯನ್ ಟನ್ ಕಲ್ಲಿದ್ದಲು ಇದೆ ಮತ್ತು – ಜಾರ್ಖಂಡ್, ಛತ್ತೀಸ್ಗಢ, ಒಡಿಶಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಹೀಗೆ 10 ರಾಜ್ಯಗಳಲ್ಲಿ ಹರಡಿದೆ. ಇವುಗಳಲ್ಲಿ 57 ಸಂಪೂರ್ಣವಾಗಿ ಪರಿಶೋಧಿಸಲ್ಪಟ್ಟ ಗಣಿಗಳು ಮತ್ತು 31 ಭಾಗಶಃ ಪರಿಶೋಧಿಸಿದ ಗಣಿಗಳು. ಮಾರಾಟಕ್ಕೆ 4 ಕೋಕಿಂಗ್ ಕಲ್ಲಿದ್ದಲು ಗಣಿಗಳಿವೆ ಎಂದು ಸಚಿವಾಲಯ ತಿಳಿಸಿದೆ.
ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು, ನಿರ್ಣಾಯಕ ಆವಾಸಸ್ಥಾನಗಳು, ಶೇಕಡಾ 40ಕ್ಕಿಂತಲೂ ಹೆಚ್ಚಿನ ಅರಣ್ಯ ಪ್ರದೇಶವನ್ನು ಹೊಂದಿರುವ ಗಣಿಗಳು, ಭಾರೀ ಪ್ರಮಾಣದಲ್ಲಿ ನಿರ್ಮಾಣ ಇರುವ ಪ್ರದೇಶ ಇತ್ಯಾದಿಗಳನ್ನು ಹರಾಜಿನಿಂದ ಹೊರತುಪಡಿಸಲಾಗಿದೆ ಎಂದು ಕೇಂದ್ರ ಹೇಳಿದೆ. ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿಗೆ ಕಲ್ಲಿದ್ದಲು ಸಚಿವಾಲಯದ ಏಕೈಕ ವಹಿವಾಟು ಸಲಹೆಗಾರ ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಆಗಿದೆ. “ಈ ಕಂತಿನಿಂದ, ಕಲ್ಲಿದ್ದಲು ಸಚಿವಾಲಯವು (i) ಗಣಿ ಮುಚ್ಚುವಿಕೆ ಸೇರಿದಂತೆ ಸುಸ್ಥಿರವಾದ ಗಣಿಗಾರಿಕೆ ಕಾರ್ಯಾಚರಣೆಗೆ ಸಂಬಂಧಿಸಿದ ಒಪ್ಪಂದದಲ್ಲಿ ನಿಬಂಧನೆಗಳನ್ನು ಪರಿಚಯಿಸಿದೆ; (ii) ಕಲ್ಲಿದ್ದಲನ್ನು ಯಾಂತ್ರಿಕವಾಗಿ ಸ್ಥಳಾಂತರಿಸುವುದು; (iii) ಕಷ್ಟದ ಗಣಿಗಾರಿಕೆ ಸನ್ನಿವೇಶಗಳಲ್ಲಿ ಕಲ್ಲಿದ್ದಲು ಗಣಿಯನ್ನು ಯಶಸ್ವಿ ಬಿಡ್ಡರ್ ಹಿಂತಿರುಗಿಸುವುದಕ್ಕೆ ಅವಕಾಶ ನೀಡಲಾಗಿದೆ,” ಎಂದು ಕೇಂದ್ರ ಹೇಳಿದೆ.
ಹರಾಜು ಪ್ರಕ್ರಿಯೆಯ ಪ್ರಮುಖ ಲಕ್ಷಣಗಳೆಂದರೆ ರಾಷ್ಟ್ರೀಯ ಕಲ್ಲಿದ್ದಲು ಸೂಚ್ಯಂಕದ ಪರಿಚಯ (National Coal Index). ಮೊದಲಿನ ಕಲ್ಲಿದ್ದಲು ಗಣಿಗಾರಿಕೆ ಅನುಭವಕ್ಕೆ ಯಾವುದೇ ನಿರ್ಬಂಧವಿಲ್ಲದೆ ಭಾಗವಹಿಸುವಿಕೆ ಸುಲಭ ಮಾಡುವುದು, ಕಲ್ಲಿದ್ದಲು ಬಳಕೆ ಸಂಪೂರ್ಣ ಸಲೀಸುಗೊಳಿಸುವುದು, ಅತ್ಯುತ್ತಮ ಪಾವತಿ ರಚನೆ, ಆರಂಭಿಕ ಉತ್ಪಾದನೆಗೆ ಪ್ರೋತ್ಸಾಹದ ಮೂಲಕ ದಕ್ಷತೆ ಉತ್ತೇಜನ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನದ ಬಳಕೆ. ಸುಸ್ಥಿರತೆ ಮೇಲೆ ಕೇಂದ್ರೀಕರಿಸಿ, ಹೆಚ್ಚಿನ ಉತ್ತೇಜನವನ್ನು ಪರಿಗಣಿಸಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ: National Monetisation Pipeline: ರಾಷ್ಟ್ರೀಯ ನಗದೀಕರಣ ಪೈಪ್ಲೈನ್ ಏನಿದು? ಆ 6 ಲಕ್ಷ ಕೋಟಿ ರೂ. ಬಗ್ಗೆ ಇಲ್ಲಿದೆ ಮಾಹಿತಿ