Centre Grants: ಕರ್ನಾಟಕ ಸೇರಿ 17 ರಾಜ್ಯಗಳಿಗೆ ಕೇಂದ್ರದಿಂದ 9871 ಕೋಟಿ ರೂ. ಅನುದಾನ ಬಿಡುಗಡೆ

| Updated By: Srinivas Mata

Updated on: Aug 10, 2021 | 5:17 PM

ಕೇಂದ್ರ ಸರ್ಕಾರವು ಕರ್ನಾಟಕ ಸೇರಿ 17 ರಾಜ್ಯಗಳಿಗೆ ಪೋಸ್ಟ್ ಡೆವ್ಯೂಲಷನ್ ಡೆಫಿಸಿಟ್ 9870 ಕೋಟಿ ರೂಪಾಯಿ ಬಿಡುಗಡೆ. ಆ ಬಗ್ಗೆ ವಿವರ ಇಲ್ಲಿದೆ.

Centre Grants: ಕರ್ನಾಟಕ ಸೇರಿ 17 ರಾಜ್ಯಗಳಿಗೆ ಕೇಂದ್ರದಿಂದ 9871 ಕೋಟಿ ರೂ. ಅನುದಾನ ಬಿಡುಗಡೆ
ಪ್ರಾತಿನಿಧಿಕ ಚಿತ್ರ
Follow us on

ಕೇಂದ್ರ ಹಣಕಾಸು ಸಚಿವಾಲಯದಿಂದ (Finance Ministry) ಪೋಸ್ಟ್ ಡೆವೊಲ್ಯೂಷನ್ ರೆವೆನ್ಯೂ ಡೆಫಿಸಿಟ್ (PDRD)ನ ಐದನೇ ತಿಂಗಳ ಕಂತನ್ನು ಬಿಡುಗಡೆ ಮಾಡಲಾಗಿದೆ. ಜುಲೈ ತಿಂಗಳ ಮೊತ್ತವಾಗಿ 9871 ಕೋಟಿ ರೂಪಾಯಿ ಅನುದಾನವನ್ನು ಸೋಮವಾರ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ FY22ರಲ್ಲಿ ಒಟ್ಟಾರೆ ಮೊತ್ತವಾಗಿ ಅರ್ಹತೆ ಪಡೆದ ರಾಜ್ಯಗಳಿಗೆ 49,355 ಕೋಟಿ ರೂಪಾಯಿ ನೀಡಲಾಗಿದೆ. ಸಂವಿಧಾನದ ಪರಿಚ್ಛೇದ 275ರ ಅಡಿಯಲ್ಲಿ PDRD ಅನುದಾನವನ್ನು ಕೇಂದ್ರದಿಂದ ನೀಡಲಾಗುತ್ತದೆ. ಡೆವೊಲ್ಯೂಷನ್ ನಂತರ ರಾಜ್ಯಗಳ ಆದಾಯ ವ್ಯತ್ಯಾಸವನ್ನು ಗಮನದಲ್ಲಿ ಇಟ್ಟುಕೊಂಡು ಹದಿನೈದನೇ ಹಣಕಾಸು ಆಯೋಗದ (FFC) ಶಿಫಾರಸಿನಂತೆ ಅನುದಾನ ಬಿಡುಗಡೆ ಮಾಡಲಾಗುವುದು. FY22ರಲ್ಲಿ ಆಯೋಗದಿಂದ ಹದಿನೇಳು ರಾಜ್ಯಗಳಿಗೆ PDRD ಅನುದಾನವನ್ನು ಶಿಫಾರಸು ಮಾಡಲಾಗಿದೆ.

ರಾಜ್ಯಗಳ ಅನುದಾನ ಪಡೆಯುವ ಅರ್ಹತೆ ಹಾಗೂ ಯಾವ ಪ್ರಮಾಣದಲ್ಲಿ ಅನುದಾನ ಎಂಬುದನ್ನು ಹದಿನೈದನೇ ಹಣಕಾಸು ಆಯೋಗವೇ ತೀರ್ಮಾನ ಮಾಡುತ್ತದೆ. FY22ಗೆ ಅಸೆಸ್ಡ್ ಡೆವೊಲ್ಯೂಷನ್ ಗಣನೆಗೆ ತೆಗೆದುಕೊಂಡು, ರಾಜ್ಯಗಳ ಆದಾಯ ಮತ್ತು ವ್ಯಯದ ವ್ಯತ್ಯಾಸವನ್ನು ಮೌಲ್ಯಮಾಪನ ಮಾಡಿದ ಮೇಲೆ ಹದಿನೈದನೇ ಹಣಕಾಸು ಆಯೋಗದಿಂದ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಆಯೋಗದಿಂದ ಒಟ್ಟು PDRD ಅನುದಾನ 1,18,452 ಕೋಟಿ ರೂಪಾಯಿಯನ್ನು 17 ರಾಜ್ಯಗಳಿಗೆ ಶಿಫಾರಸು ಮಾಡಲಾಗಿದೆ. ಇದರಲ್ಲಿ ಶೇ 41.67ರಷ್ಟು ಜುಲೈ ತನಕ ಬಿಡುಗಡೆ ಮಾಡಲಾಗಿದೆ.

ಹದಿನೈದನೇ ಹಣಕಾಸು ಆಯೋಗದಿಂದ PDRD ಅನುದಾನ ಶಿಫಾರಸು ಮಾಡಿದ ರಾಜ್ಯಗಳು ಹೀಗಿವೆ: ಆಂಧ್ರಪ್ರದೇಶ, ಅಸ್ಸಾಮ್, ಹರ್ಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ್, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ್, ಪಶ್ಚಿಮ ಬಂಗಾಲ.

ಈ ತನಕ ಅನುದಾನದ ಪಾಲು ಹೆಚ್ಚು ಪಡೆದಿರುವುದರಲ್ಲಿ ಕೇರಳ (8,288 ಕೋಟಿ ರೂ.), ಪಶ್ಚಿಮ ಬಂಗಾಲ (7336 ಕೋಟಿ ರೂ.), ಆಂಧ್ರಪ್ರದೇಶ (7,190 ಕೋಟಿ ರೂ.) ಅತಿ ಹೆಚ್ಚಿನ ಮೊತ್ತವನ್ನು ಪಡೆದುಕೊಂಡಿವೆ.

ಇದನ್ನೂ ಓದಿ: ಜಿಎಸ್​ಟಿ ಬಾಕಿ ಹಣ 11,400 ಕೋಟಿ ರೂ. ನೀಡಲು ಕೇಂದ್ರ ಒಪ್ಪಿಗೆ; ಕೊರೊನಾ ಲಸಿಕೆ ಪೂರೈಕೆ ಹೆಚ್ಚಿಸುವ ಭರವಸೆ: ಸಿಎಂ ಬೊಮ್ಮಾಯಿ

(Central Government Releases Rs 9871 Crore Post Devolution Deficit Grant To 17 States Including Karnataka)