Byju’s: ಬೈಜುಸ್​ಗೆ ನಿಲ್ಲದ ಸಂಕಷ್ಟ; ಕಂಪನಿಯ ಲೆಕ್ಕಪತ್ರ ಪರಿಶೀಲನೆಗೆ ಕೇಂದ್ರದಿಂದ ಆದೇಶ

|

Updated on: Jul 11, 2023 | 6:17 PM

Centre Order To Inspect Byju's Account Books: ಎರಡು ಹಣಕಾಸು ವರ್ಷದ ಬೈಜೂಸ್ ವರದಿಗಳನ್ನು ಪರಿಶೀಲಿಸಿದ ಬೆನ್ನಲ್ಲೇ ಈಗ ಅದರ ಅಕೌಂಟ್ ಬುಕ್ ಇನ್ಸ್​ಪೆಕ್ಷನ್​ಗೆ ಕೇಂದ್ರ ಕಾರ್ಪೊರೇಟ್ ಸಚಿವಾಲಯ ಆದೇಶಿಸಿದೆ.

Byjus: ಬೈಜುಸ್​ಗೆ ನಿಲ್ಲದ ಸಂಕಷ್ಟ; ಕಂಪನಿಯ ಲೆಕ್ಕಪತ್ರ ಪರಿಶೀಲನೆಗೆ ಕೇಂದ್ರದಿಂದ ಆದೇಶ
ಬೈಜುಸ್
Follow us on

ನವದೆಹಲಿ: ಶಿಕ್ಷಣ ಕ್ಷೇತ್ರದ ಸ್ಟಾರ್ಟಪ್ ಬೈಜುಸ್ ಸಂಸ್ಥೆಯ ಅಕೌಂಟ್ ಬುಕ್​ಗಳ (Books of Account) ಪರಿಶೀಲನೆಗೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿರುವುದು ತಿಳಿದುಬಂದಿದೆ. ಬ್ಲೂಮ್​ಬರ್ಗ್ ನ್ಯೂಸ್​ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ 6 ವಾರದೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಬೈಜುಸ್​ನ ಆಡಿಟರ್ ಹಾಗು ಮೂವರು ಬೋರ್ಡ್ ಸದಸ್ಯರು ಕಳೆದ ತಿಂಗಳು ನಿರ್ಗಮಿಸಿದ ಬೆನ್ನಲ್ಲೇ ಈ ಬೆಳವಣಿಗೆ ಆಗಿದೆ. ಅಕೌಂಟ್ ಬುಕ್​ಗಳ ಪರಿಶೀಲನೆಗೆ ಆದೇಶಿಸುವ ಮುನ್ನ ಬೈಜೂಸ್​ನ ಹಣಕಾಸು ವರದಿಗಳನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು. ಸಿಎ ಇನ್ಸ್​ಟಿಟ್ಯೂಟ್​ನ ಎಫ್​ಆರ್​ಆರ್​ಬಿ (FRRB- Financial Reporting Review Board) ವಿಭಾಗದ ಅಧಿಕಾರಿಗಳು 2019-20 ಹಾಗೂ 2020-21ರ ಹಣಕಾಸು ವರ್ಷಗಳಲ್ಲಿನ ಬೈಜೂಸ್ ವರದಿಗಳನ್ನು ಪರಿಶೀಲನೆ ನಡೆಸಿದ್ದರು. ಅದರಲ್ಲಿ ಸಂಶಯ ಬರುವಂತಹ ಸಂಗತಿಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅಕೌಂಟ್ ಬುಕ್​ಗಳನ್ನು ಪರಿಶೀಲಿಸಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಆದೇಶಿಸಿದೆ ಎಂದು ಹೇಳಲಾಗಿದೆ.

ಜುಲೈ 8ರಂದು ದಿ ಹಿಂದೂ ಬ್ಯುಸಿನೆಸ್​ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ (Corporate Affairs Ministry) ಅಡಿಗೆ ಬರುವ ಎಸ್​ಎಫ್​ಐಒ (SFIO- Serious Fraud Investigating Office) ಬೈಜೂಸ್ ವಿರುದ್ಧ ತನಿಖೆ ಆರಂಭಿಸಿದೆ ಎಂದಿತ್ತು.

ಇದನ್ನೂ ಓದಿStrict Action: ಔಷಧ ಗುಣಮಟ್ಟದಲ್ಲಿ ರಾಜಿ ಇಲ್ಲ; ಕಳಪೆ ಔಷಧ ತಯಾರಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಎಸ್​ಎಫ್​ಐಒ ಎಂಬುದು ಗಂಭೀರ ವಂಚನೆ ಪ್ರಕರಣಗಳ ತನಿಖೆ ನಡೆಸುವ ಸಂಸ್ಥೆಯಾಗಿದೆ. ಆದರೆ, ಎಸ್​ಎಫ್​ಐಒದಿಂದ ತನಿಖೆ ನಡೆಯುತ್ತಿರುವ ವಿಚಾರವನ್ನು ಬೈಜೂಸ್ ತಳ್ಳಿಹಾಕಿದೆ. ತನಗೆ ಎಸ್​ಎಫ್​ಐಒದಿಂದ ಇಲ್ಲಿಯವರೆಗೆ ಯಾವ ಸಂವಹನವೂ ಬಂದಿಲ್ಲ ಎಂದು ಬೈಜೂಸ್ ಹೇಳಿದ್ದಾಗಿ ಲೈವ್ ಮಿಂಟ್ ವರದಿ ಮಾಡಿದೆ. ಬ್ಲೂಮ್​ಬರ್ಗ್ ವರದಿ ಪ್ರಕಾರ ಬೈಜೂಸ್​ನ ಅಕೌಂಟ್ ಬುಕ್ ಪರಿಶೀಲನೆ ವೇಳೆ ಗಂಭೀರ ಸಂಗತಿ ಕಂಡುಬಂದರೆ ಎಸ್​ಎಫ್​ಐಒಗೆ ತನಿಖೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೆಲ ದಿನಗಳ ಹಿಂದೆ ಬೈಜೂಸ್ ಮಂಡಳಿಯಿಂದ ಮೂವರು ನಿರ್ದೇಶಕರಾದ ಜಿವಿ ರವಿಶಂಕರ್, ರಸೆಲ್ ಡ್ರೇಸೆನ್​ಸ್ಟಾಕ್, ವಿವಿಯನ್ ವು ಅವರು ಹೊರಹೋಗಿದ್ದಾರೆ. ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಜೊತೆ ಭಿನ್ನಾಭಿಪ್ರಾಯದ ಕಾರಣಕ್ಕೆ ಅವರು ನಿರ್ಗಮಿಸಿದರೆನ್ನಲಾಗಿದೆ. ಕುತೂಹಲ ಎಂದರೆ ಅದೇ ದಿನ ಬೈಜೂಸ್​ನ ಆಡಿಟರ್ ಕೂಡ ಹೊರಬಿದ್ದಿದ್ದರು.

ಇದನ್ನೂ ಓದಿKarnataka vs Centre: ದುಡ್ಡು ಕೊಟ್ಟು ಖರೀದಿಸುತ್ತೇವೆಂದರೂ ಕರ್ನಾಟಕಕ್ಕೆ ಇಲ್ಲ ಹೆಚ್ಚುವರಿ ಅಕ್ಕಿ; ಕೇಂದ್ರ ಆಹಾರ ಕಾರ್ಯದರ್ಶಿ ಹೇಳುವುದಿದು

ಇವೆಲ್ಲ ಬೆಳವಣಿಗೆಯಿಂದ ಕಾರ್ಪೊರೇಟ್ ಆಡಳಿತದ ಕಾನೂನು ತೊಡಕು ಉಂಟಾಗುವುದನ್ನು ತಪ್ಪಿಸಲು ಬೈಜೂಸ್ ಸಂಸ್ಥೆ ಬೋರ್ಡ್ ಅಡ್ವೈಸರಿ ಕಮಿಟಿ (ಬಿಎಸಿ) ಸ್ಥಾಪಿಸಲು ನಿರ್ಧರಿಸಿದೆ. ಬೈಜೂಸ್​ನ ಮಂಡಳಿ ಮತ್ತು ಆಡಳಿತದ ರಚನೆ ಹೇಗಿರಬೇಕು ಎಂಬ ಬಗ್ಗೆ ಬಿಎಸಿಯಿಂದ ರವೀಂದ್ರನ್​ಗೆ ಸಲಹೆ ನೀಡಲಾಗುವ ನಿರೀಕ್ಷೆ ಇದೆ.

ಇದೆಲ್ಲದರ ಮಧ್ಯೆ ಬೈಜುಸ್ ಸಂಸ್ಥೆ ಅಮೆರಿಕದಲ್ಲಿ ಎರಡು ಕೋರ್ಟ್​ಗಳಲ್ಲಿ ಪ್ರಕರಣ ಎದುರಿಸುತ್ತಿದೆ. ಕಳೆದ ವರ್ಷ ಬೈಜೂಸ್​ಗೆ ಸೇರಿದ ವಿವಿಧ ಸ್ಥಳಗಳಲ್ಲಿ ಇಡಿ ರೇಡ್​ಗಳು ನಡೆದಿದ್ದವು. 2020-21ರ ಹಣಕಾಸು ವರ್ಷದಲ್ಲಿ ಬೈಜುಸ್ ಹಣಕಾಸು ಲೆಕ್ಕ ಪ್ರಕಟಿಸಿಲ್ಲ. ಅದರ ಅಕೌಂಟನ್ನು ಆಡಿಟ್ ಮಾಡಲಾಗಿಲ್ಲ ಎಂಬುದು ಇಡಿ ಆರೋಪ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ