Karnataka vs Centre: ದುಡ್ಡು ಕೊಟ್ಟು ಖರೀದಿಸುತ್ತೇವೆಂದರೂ ಕರ್ನಾಟಕಕ್ಕೆ ಇಲ್ಲ ಹೆಚ್ಚುವರಿ ಅಕ್ಕಿ; ಕೇಂದ್ರ ಆಹಾರ ಕಾರ್ಯದರ್ಶಿ ಹೇಳುವುದಿದು
Rice Matter: ಕೇಂದ್ರ ಸರ್ಕಾರ ಜುಲೈ 5ರಂದು ನಡೆಸಿದ ಅಕ್ಕಿ ಇ-ಹರಾಜಿನಲ್ಲಿ ಬಹಳ ನೀರಸ ಪ್ರತಿಕ್ರಿಯೆ ಬಂದಿತ್ತು. ತಾವು ದುಡ್ಡುಕೊಟ್ಟು ಖರೀದಿಸುತ್ತೇವೆಂದರೂ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಕರ್ನಾಟಕ ಸರ್ಕಾರ ವ್ಯಗ್ರಗೊಂಡಿದೆ. ಈ ಬಗ್ಗೆ ಕೇಂದ್ರ ಆಹಾರ ಕಾರ್ಯದರ್ಶಿ ಸ್ಪಷ್ಟನೆ ಕೊಟ್ಟಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಮಧ್ಯೆ ಅಕ್ಕಿ ಜಗಳ ಗೊತ್ತಿರಬಹುದು. ತನ್ನ ಬಳಿ ಇರುವ ಹೆಚ್ಚುವರಿ ಅಕ್ಕಿಯನ್ನು ಖಾಸಗಿಯವರಿಗೆ ಕೊಡಲು ಮುಂದಾಗಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅದನ್ನು ಕೊಡಲು ನಿರಾಕರಿಸುತ್ತಿದೆ. ದುಡ್ಡು ಕೊಟ್ಟು ಖರೀದಿಸುತ್ತೇವೆಂದರೂ ಕೇಂದ್ರವು ಅಕ್ಕಿ ಕೊಡುತ್ತಿಲ್ಲ ಎಂಬುದು ರಾಜ್ಯ ಸರ್ಕಾರದ ತಗಾದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ, ಕರ್ನಾಟಕದಂತೆ ಎಲ್ಲಾ ರಾಜ್ಯಗಳೂ ಹೆಚ್ಚುವರಿ ಅಕ್ಕಿ ಪಡೆಯಲು ಮುಂದಾದರೆ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.
ಅಕ್ಕಿ ವಿಚಾರದಲ್ಲಿ ತಮಿಳುನಾಡು ಸೇರಿ ಹಲವು ರಾಜ್ಯಗಳಿಂದ ಕೇಂದ್ರದ ಅಭಿಪ್ರಾಯಕ್ಕೆ ಮನ್ನಣೆ?
ಪಿಟಿಐ ವರದಿ ಪ್ರಕಾರ ಕೇಂದ್ರ ಸರ್ಕಾರ ಇತ್ತೀಚೆಗೆ ನಡೆಸಿದ ಆಹಾರ ಸಚಿವರ ಸಭೆಯಲ್ಲಿ 15 ರಾಜ್ಯಗಳ ಸಚಿವರು ಪಾಲ್ಗೊಂಡಿದ್ದರು. ಇದರಲ್ಲಿ 14 ರಾಜ್ಯಗಳ ಸಚಿವರು ಕೇಂದ್ರದ ನಿಲುವಿಗೆ ಬೆಂಬಲ ನೀಡಿದರೆನ್ನಲಾಗಿದೆ. ‘ಕೇಂದ್ರದ ಹೆಚ್ಚುವರಿ ಆಹಾರ ಸಂಗ್ರಹವು 140 ಕೋಟಿ ಜನಸಂಖ್ಯೆಯ ಹಿತಾಸಕ್ತಿಗೆ ಬಳಕೆಯಾಗಬೇಕೇ ಹೊರತು ನಿರ್ದಿಷ್ಟ ವರ್ಗದ ಜನರಿಗೆ ಅಲ್ಲ,’ ಎಂಬ ಅಭಿಪ್ರಾಯ ಆ ಸಭೆಯಲ್ಲ ವ್ಯಕ್ತವಾದವಂತೆ. ತಮಿಳುನಾಡು, ಒಡಿಶಾ, ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ರಾಜಸ್ಥಾನ, ಪುದುಚೇರಿ, ಮಣಿಪುರ, ಮಹಾರಾಷ್ಟ್ರ, ಹರ್ಯಾಣ, ಅರುಣಾಚಲಪ್ರದೆಶ, ಉತ್ತರಾಖಂಡ್, ನಾಗಾಲ್ಯಾಂಡ್ ರಾಜ್ಯಗಳ ಸಚಿವರು ಈ ಅಭಿಪ್ರಾಯವನ್ನು ಅನುಮೋದಿಸಿರುವುದು ತಿಳಿದುಬಂದಿದೆ.
ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟವಾಗಲಿಲ್ಲವೇಕೆ?
ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS- Open Market Sale Scheme) ಅಡಿಯಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿಯನ್ನು ಮಾರಲು ಜುಲೈ 5ರಂದು ಹರಾಜು ಹಾಕಿತ್ತು. ಭಾರತೀಯ ಆಹಾರ ನಿಗಮವು 3.88 ಲಕ್ಷ ಟನ್ಗಳಷ್ಟು ಅಕ್ಕಿಯನ್ನು ಹರಾಜಿಗಿಟ್ಟಿದ್ದರೂ (e Auction) ಮಾರಾಟವಾಗಿದ್ದು ಕೇವಲ 170 ಟನ್ ಮಾತ್ರ. ಐದು ಬಿಡ್ಡರ್ಗಳು ಮಾತ್ರ ಅಕ್ಕಿ ಖರೀದಿಸಿದ್ದರು. ಕರ್ನಾಟಕ ಸರ್ಕಾರ ಈ ವಿಚಾರ ಇಟ್ಟುಕೊಂಡು ಕೇಂದ್ರ ಸರ್ಕಾರವನ್ನು ಹೀಗಳೆದಿದೆ.
ಇದನ್ನೂ ಓದಿ: Tata iPhone Deal: ಕೋಲಾರದಲ್ಲಿ ವಿಸ್ಟ್ರಾನ್ ಐಫೋನ್ ಘಟಕ ಖರೀದಿ: ಮುಂದಿನ ತಿಂಗಳೇ ಟಾಟಾ ಡೀಲ್?
ಈ ಹರಾಜು ಪ್ರಕ್ರಿಯೆ ಬಗ್ಗೆ ಕೇಂದ್ರ ಆಹಾರ ಇಲಾಖೆ ಕಾರ್ಯದರ್ಶಿ ಪ್ರತಿಕ್ರಿಯಿಸಿ, ಅದು ಮೊದಲ ಹರಾಜು ಮಾತ್ರವಾಗಿತ್ತು. ಇದೇ ರೀತಿ 2024ರ ಮಾರ್ಚ್ವರೆಗೆ ನಿಯಮಿತವಾಗಿ ಪ್ರತೀ ವಾರ ಇ–ಹರಾಜು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಮೊದಲ ಹರಾಜು ಜುಲೈ 5ರಂದು ನಡೆದಿದ್ದು, ಎರಡನೇ ಹರಾಜು ನಾಳೆ (ಜುಲೈ 12) ನಡೆಯಲಿದೆ. ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಪ್ರಕಾರ ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವ ಪ್ರಕ್ರಿಯೆ ಸಾಮಾನ್ಯವಾಗಿದೆ. ಆದರೆ, ಅಕ್ಕಿಯಲ್ಲಿ ಅಪರೂಪಕ್ಕೆ ನಡೆಯುತ್ತದೆ. ಹೀಗಾಗಿ, ಜುಲೈ 5ರ ಹರಾಜಿಗೆ ಹೆಚ್ಚು ಬಿಡ್ಗಳು ಸಲ್ಲಿಕೆಯಾಗಿಲ್ಲದೇ ಇರಬಹುದು.
ಮುಂದಿನ ಹರಾಜುಗಳಲ್ಲೂ ಅದೇ ರೀತಿ ನೀರಸ ಪ್ರತಿಕ್ರಿಯೆ ಬರುತ್ತಿದ್ದರೆ ಒಎಂಎಸ್ಎಸ್ ನೀತಿಯಲ್ಲಿ ಒಂದಷ್ಟು ಬದಲಾವಣೆ ತರಲೂ ಕೇಂದ್ರ ಸರ್ಕಾರ ನಿರ್ಧರಿಸಿರುವ ಸಂಗತಿಯನ್ನು ಚೋಪ್ರಾ ಬಹಿರಂಗಪಡಿಸಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ, ಗೋಧಿ ಮಾರಲು ಏನು ಕಾರಣ?
ಕೇಂದ್ರದ ಆಹಾರ ಭದ್ರತಾ ಕಾಯ್ದೆ ಪ್ರಕಾರ ಪ್ರಮುಖ ಆಹಾರ ದಾಸ್ತಾನನ್ನು ಸಂಗ್ರಹಿಸುವ ಮತ್ತು ಆ ಅಹಾರ ಧಾನ್ಯಗಳು ಎಲ್ಲಾ ಕಾಲಕ್ಕೂ ಲಭ್ಯ ಇರುವಂತೆ ನೋಡಿಕೊಳ್ಳುವ ಹೊಣೆ ಕೇಂದ್ರದ್ದಾಗಿದೆ. ಈ ವರ್ಷ ಕೇಂದ್ರವು ಖರೀದಿಸಿರುವ ಆಹಾರ ಧಾನ್ಯಗಳ ಮೊತ್ತ 560ರಿಂದ 670 ಲಕ್ಷ ಟನ್ಗಳೆನ್ನಲಾಗಿದೆ. ಇದರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಎಲ್ಲಾ ರಾಜ್ಯಗಳಿಗೂ 360 ಲಕ್ಷ ಟನ್ಗಳಷ್ಟು ಆಹಾರ ಧಾನ್ಯಗಳು ವಿತರಣೆ ಆಗುತ್ತವೆ. ಉಳಿದ ಆಹಾರ ಧಾನ್ಯಗಳಲ್ಲಿ ಒಂದಷ್ಟು ಭಾಗವನ್ನು ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಮಾರುತ್ತದೆ. ಆಹಾರ ಧಾನ್ಯಗಳ ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಈ ಕ್ರಮ ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: Anna Bhagya Scheme: ಅಕ್ಕಿ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಕಿಡಿಕಾರಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕರ್ನಾಟಕ ಸರ್ಕಾರ ಎಷ್ಟು ಅಕ್ಕಿ ಕೇಳುತ್ತಿದೆ?
ಕೇಂದ್ರ ಸರ್ಕಾರ ಪ್ರತೀ ವರ್ಷ ಕರ್ನಾಟಕಕ್ಕೆ 25 ಲಕ್ಷ ಟನ್ಗಳಷ್ಟು ಆಹಾರ ಧಾನ್ಯ ಸರಬರಾಜು ಮಾಡುತ್ತದೆ. ಈಗ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಕೇಂದ್ರ ಕೊಡುವ 5 ಕಿಲೋ ಜೊತೆಗೆ ಇನ್ನೈದು ಕಿಲೋ ಅಕ್ಕಿಯನ್ನು ಸೇರಿಸಿಕೊಡುವುದಿದೆ. ಒಂದು ವರ್ಷದಲ್ಲಿ ಇದಕ್ಕೆ 1ರಿಂದ 2 ಲಕ್ಷ ಟನ್ಗಳಷ್ಟು ಹೆಚ್ಚುವರಿ ಅಕ್ಕಿ ಬೇಕಾಗುತ್ತದೆ.
ಕರ್ನಾಟಕದಂತೆ ಬೇರೆ ರಾಜ್ಯಗಳೂ ಇದೇ ರೀತಿ ಅಕ್ಕಿ ಹಾಗೂ ಬೇರೆ ಧಾನ್ಯಗಳನ್ನು ಕೇಳಿದರೆ ಅದನ್ನು ಕೊಡುವಷ್ಟು ದಾಸ್ತಾನು ತನ್ನಲ್ಲಿ ಇರುವುದಿಲ್ಲ ಎಂಬುದು ಸರ್ಕಾರದ ನಿಲುವು.
ಅಕ್ಕಿ ಹರಾಜಿನಲ್ಲಿ ಸಣ್ಣ ವರ್ತಕರಿಗೆ ಪ್ರೋತ್ಸಾಹ
ದೊಡ್ಡ ಪ್ರಮಾಣದಲ್ಲಿ ಅಕ್ಕಿ ಸಂಗ್ರಹ ಮಾಡಿ ಬೆಲೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಮುಕ್ತ ಮಾರುಕಟ್ಟೆ ಮಾರಾಟ ನೀತಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ. ಒಂದು ರಾಜ್ಯದ ಒಬ್ಬ ಖರೀದಿದಾರರು 100 ಟನ್ ಅಕ್ಕಿ ಮಾತ್ರ ಪಡೆಯಬಹುದು. ಅದೂ ಅವರ ರಾಜ್ಯದಲ್ಲಿರುವ ಗೋದಾಮುಗಳಿಂದ ಮಾತ್ರ ಖರೀದಿ ಮಾಡಬಹುದು. ಒಂದು ರಾಜ್ಯದವರು ಬೇರೆ ರಾಜ್ಯಗಳಲ್ಲಿ ಖರೀದಿಸುವಂತಿಲ್ಲ. ಇ–ಹರಾಜಿನಲ್ಲಿ ಖರೀದಿಸಲಾದ ಆಹಾರಧಾನ್ಯವನ್ನು ಸರ್ಕಾರೀ ಸಂಸ್ಥೆಗಳಿಗೆ ಮಾರುವಂತಿಲ್ಲ ಎಂಬ ನಿಯಮವೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ