ಏಕೀಕೃತ ಪಿಂಚಣಿ ಯೋಜನೆಗೂ, ಎನ್​ಪಿಎಸ್, ಒಪಿಎಸ್​ಗೂ ವ್ಯತ್ಯಾಸಗಳೇನು?

|

Updated on: Aug 25, 2024 | 10:50 AM

Unified Pension Scheme vs NPS vs OPS: ಕೇಂದ್ರ ಸಂಪುಟ ಆಗಸ್ಟ್ 24ರಂದು ತನ್ನ ಸರ್ಕಾರಿ ಉದ್ಯೋಗಿಗಳಿಗೆ ರೂಪಿಸಿರುವ ಏಕೀಕೃತ ಪಿಂಚಣಿ ಯೋಜನೆಗೆ ಅನುಮೋದನೆ ನೀಡಿದೆ. ಇದರಲ್ಲಿ ನಿವೃತ್ತಿಗೆ ಮುಂಚಿನ 12 ತಿಂಗಳ ಸರಾಸರಿ ಮೂಲ ವೇತನದ ಶೇ. 50ರಷ್ಟು ಹಣವನ್ನು ಮಾಸಿಕ ಪಿಂಚಣಿಯಾಗಿ ಕೊಡಲಾಗುತ್ತದೆ. ಈಗ ಚಾಲನೆಯಲ್ಲಿರುವ ನ್ಯಾಷನಲ್ ಪೆನ್ಷನ್ ಸಿಸ್ಟಂ ಕೂಡ ಜಾರಿಯಲ್ಲಿರುತ್ತದೆ. ಉದ್ಯೋಗಿಗಳಿಗೆ ಯುಪಿಎಸ್ ಮತ್ತು ಎನ್​ಪಿಎಸ್ ಎರಡು ಆಯ್ಕೆಗಳಿರುತ್ತವೆ.

ಏಕೀಕೃತ ಪಿಂಚಣಿ ಯೋಜನೆಗೂ, ಎನ್​ಪಿಎಸ್, ಒಪಿಎಸ್​ಗೂ ವ್ಯತ್ಯಾಸಗಳೇನು?
ಪೆನ್ಷನ್ ಸ್ಕೀಮ್
Follow us on

ನವದೆಹಲಿ, ಆಗಸ್ಟ್ 25: ಸಾಕಷ್ಟು ಸಲಹೆ, ಸಮಾಲೋಚನೆಗಳ ಬಳಿಕ ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ಯೋಜನೆ ಅಥವಾ ಯೂನಿಫೈಡ್ ಪೆನ್ಷನ್ ಸ್ಕೀಮ್ (ಯುಪಿಎಸ್) ಜಾರಿಗೆ ತರಲು ಹೊರಟಿದೆ. ಈ ಯೋಜನೆಗೆ ಕೇಂದ್ರ ಸಂಪುಟ ನಿನ್ನೆ ಶನಿವಾರ (ಆ. 24) ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರೀ ಉದ್ಯೋಗಿಗಳಿಗೆ ಈಗ ಎನ್​ಪಿಎಸ್ ಜೊತೆಗೆ ಮತ್ತೊಂದು ಆಯ್ಕೆ ಸಿಕ್ಕಂತಾಗಿದೆ. ಈ ಪ್ರಸ್ತಾಪಿತ ಯೂನಿಫೈಡ್ ಪೆನ್ಷನ್ ಸ್ಕೀಮ್ ಹಿಂದಿನ ಹಳೆಯ ಪೆನ್ಷನ್ ವ್ಯವಸ್ಥೆಯ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಯೂನಿಫೈಡ್ ಪೆನ್ಷನ್ ಸ್ಕೀಮ್​ನ ಐದು ಪ್ರಮುಖ ಅಂಶಗಳಿವು…

  1. 25 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾಗುವಾಗ 12 ತಿಂಗಳ ಹಿಂದಿನ ಮೂಲ ವೇತನದ ಸರಾಸರಿಯಲ್ಲಿ ಶೇ. 50ರಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ.
  2. ಉದ್ಯೋಗಿ ವೃತ್ತಿಯಲ್ಲಿರುವಾಗಲೇ ಅಕಾಲಿಕವಾಗಿ ಮೃತಪಟ್ಟಲ್ಲಿ ಅವರ ಮೂಲ ವೇತನದ ಶೇ. 60ರಷ್ಟು ಹಣವನ್ನು ಕುಟುಂಬ ಸದಸ್ಯರಿಗೆ ಪಿಂಚಣಿ ಕೊಡಲಾಗುವುದು.
  3. ಕನಿಷ್ಠ 10 ವರ್ಷ ಸೇವೆ ಮಾಡಿ ನಿವೃತ್ತಿ ತೆಗೆದುಕೊಳ್ಳುವವರಿಗೆ 10,000 ರೂ ಕನಿಷ್ಠ ಪಿಂಚಣಿಯ ಗ್ಯಾರಂಟಿ ಇರುತ್ತದೆ.
  4. ನಿವೃತ್ತಿ ಬಳಿಕ ಗ್ರಾಚುಟಿ ಜೊತೆಗೆ ಹೆಚ್ಚುವರಿಯಾಗಿ ನಿರ್ದಿಷ್ಟ ಲಂಪ್ಸಮ್ ಹಣವನ್ನೂ ಕೊಡಲಾಗುತ್ತದೆ. ನಿಮ್ಮ ಸರ್ವಿಸ್​ನಲ್ಲಿ ಪ್ರತೀ ಆರು ತಿಂಗಳಿಗೊಮ್ಮೆ ಅನ್ವಯ ಆಗುವಂತೆ ನಿಮ್ಮ ಮಾಸಿಕ ಮೂಲ ವೇತನ ಮತ್ತು ತುಟ್ಟಿಭತ್ಯೆಯಲ್ಲಿ ಶೇ. 10ರಷ್ಟು ಮೊತ್ತವನ್ನು ಸೇರಿಸಿ, ನಿವೃತ್ತಿಯಾದಾಗ ಲಂಪ್ಸಮ್ ಆಗಿ ನೀಡಲಾಗುವುದು.
  5. ಇಲ್ಲಿ ಹಣದುಬ್ಬರದ ಪರಿಣಾಮಕ್ಕೆ ಅನುಗುಣವಾಗಿ ಪಿಂಚಣಿ ಹೆಚ್ಚಳದ ಅವಕಾಶವೂ ಇರುತ್ತದೆ.

ಇದನ್ನೂ ಓದಿ: Unified Pension Scheme: ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆಗೆ ಪ್ರಧಾನಿ ಮೋದಿ ಸಂಪುಟ ಅನುಮೋದನೆ

ಈಗ ಇರುವ ಎನ್​ಪಿಎಸ್ ಸಿಸ್ಟಂ ಹೇಗೆ?

ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ಉದ್ಯೋಗಿಯ ಸೇವಾವಧಿಯಲ್ಲಿ ಪಿಂಚಣಿ ನಿಧಿಗೆ ಹಣ ಜಮೆ ಆಗುತ್ತಾ ಹೋಗುತ್ತದೆ. ನಿವೃತ್ತಿ ಬಳಿಕ ಆ ಮೊತ್ತದ ಒಂದು ಭಾಗವನ್ನು ಲಂಪ್ಸಮ್ ಆಗಿ ಪಡೆಯಬಹುದು. ಇನ್ನುಳಿದ ಭಾಗವನ್ನು ಮಾಸಿಕ ಪಿಂಚಣಿಯಾಗಿ ವಿತರಣೆ ಮಾಡಲಾಗುತ್ತದೆ. ಗಮನಾರ್ಹ ಸಂಗತಿ ಎಂದರೆ, ಉದ್ಯೋಗಿಯ ಪಿಂಚಣಿ ನಿಧಿಯಲ್ಲಿ ಇರುವ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಅದರಿಂದ ಬರುವ ರಿಟರ್ನ್ಸ್​ನ ಲಾಭ ಆ ಸದಸ್ಯರಿಗೆ ಸಿಗುತ್ತದೆ.

ಎನ್​ಪಿಎಸ್ ಬರುವುದಕ್ಕೂ ಹಿಂದೆ ಇದ್ದ ಪಿಂಚಣಿ ವ್ಯವಸ್ಥೆಯಲ್ಲಿ ಉದ್ಯೋಗಿ ನಿವೃತ್ತಾದಾಗ ಪಡೆದ ಕೊನೆಯ ಸಂಬಳದ ಶೇ. 50ರಷ್ಟು ಹಣವನ್ನು ಮಾಸಿಕ ಪಿಂಚಣಿಯಾಗಿ ಕೊಡಲಾಗುತ್ತಿತ್ತು. ಅದನ್ನು ರದ್ದು ಮಾಡಿ ಎನ್​ಪಿಎಸ್ ಜಾರಿಗೆ ತರಲಾಯಿತು. ಇದು ಸಾಕಷ್ಟು ವಿರೋಧಗಳಿಗೆ ಎಡೆ ಮಾಡಿಕೊಟ್ಟಿತು. ಹೀಗಾಗಿ, ಸರ್ಕಾರ ತಜ್ಞರ ಸಮಿತಿ ರಚಿಸಿ ಸಮಾಲೋಚನೆಗಳ ಮೂಲಕ ಏಕೀಕೃತ ಪಿಂಚಣಿ ವ್ಯವಸ್ಥೆ ತಂದಿದೆ. ಈಗ ಕೇಂದ್ರ ಸರ್ಕಾರಿ ಉದ್ಯೋಗಿಗಳು ಎನ್​ಪಿಎಸ್ ಮತ್ತು ಯುಪಿಎಸ್, ಹೀಗೆ ಎರಡು ಆಯ್ಕೆಗಳನ್ನು ಹೊಂದಿರುತ್ತಾರೆ. ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ