ಪೆಟ್ರೋಲ್, ಡೀಸಲ್ ಮೇಲಿನ ರಫ್ತು ಸುಂಕ ತಗ್ಗಿಸಿದ ಸರ್ಕಾರ; ಇಂಧನ ಬೆಲೆ ಕಡಿಮೆಗೊಳ್ಳುತ್ತಾ?
Central govt reduces export tax on petrol, diesel and Jet Fuel: ಕೇಂದ್ರ ಸರ್ಕಾರ ಜೂನ್ 1ಕ್ಕೆ ಜಾರಿಗೆ ಬರುವಂತೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ರಫ್ತು ಸುಂಕವನ್ನು ಕಡಿಮೆ ಮಾಡಿದೆ. ಹಣಕಾಸು ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು 3 ರೂನಿಂದ ಒಂದೂವರೆ ರೂಗೆ ಇಳಿಸಲಾಗಿದೆ. ಡೀಸಲ್ ಮೇಲಿನ ರಫ್ತು ಸುಂಕವನ್ನು 16.5 ರೂನಿಂದ 13.5 ರೂಗೆ ತಗ್ಗಿಸಿದೆ. ಎಟಿಎಫ್ ರಫ್ತು ಸುಂಕವೂ ಕಡಿಮೆಗೊಂಡಿದೆ.

ನವದೆಹಲಿ, ಮೇ 31: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರಿಳಿತಗಳನ್ನು ಆಧರಿಸಿ, ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನಗಳ (ATF) ರಫ್ತಿನ ಮೇಲಿನ ವಿಶೇಷ ತೆರಿಗೆಯನ್ನು (Export Tax) ಕಡಿತಗೊಳಿಸಿದೆ. ನಾಳೆ, ಜೂನ್ 1 ರಿಂದಲೇ ಈ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಲೀಟರ್‌ಗೆ 3 ರೂನಿಂದ 1.50 ರೂಗೆ ಇಳಿಸಲಾಗಿದೆ. ಲೀಟರ್‌ಗೆ ಡೀಸಲ್ಗೆ 16.5 ರೂ ಇದ್ದ ರಫ್ತು ಸುಂಕವನ್ನು 13.5 ರೂಗೆ ಇಳಿಸಲಾಗಿದೆ. ಜೆಟ್ ಇಂಧನ ಅಥವಾ ಎಟಿಎಫ್ ಮೇಲಿನ ರಫ್ತು ಸುಂಕವನ್ನು 16 ರೂನಿಂದ 9.5 ರೂಗೆ ತಗ್ಗಿಸಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ (Crude Oil) ಹಾಗೂ ಇಂಧನಗಳ ಸರಾಸರಿ ಬೆಲೆಯನ್ನು ಪರಾಮರ್ಶಿಸಿ ಕೇಂದ್ರ ಹಣಕಾಸು ಸಚಿವಾಲಯವು ಹೊಸ ಆದೇಶ ಹೊರಡಿಸಿದೆ.
ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಉದ್ಭವಿಸಿ ತೈಲ ಪೂರೈಕೆಗೆ ಅಡಚಣೆಯಾದಾಗ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ರಫ್ತು ನಿರ್ಬಂಧ ಕ್ರಮ ತೆಗೆದುಕೊಂಡಿತ್ತು. ಪೆಟ್ರೋಲಿಯಂ ಉತ್ಪನ್ನಗಳು ದೇಶೀಯವಾಗಿ ಲಭ್ಯವಾಗಿರುವುದನ್ನು ಖಚಿತಪಡಿಸಲು ಸರ್ಕಾರ ಪೆಟ್ರೋಲಿಯಂ ರಫ್ತಿಗೆ ಸುಂಕ ಹೆಚ್ಚಿಸಿತ್ತು. ಇದೀಗ ಕಚ್ಚಾ ತೈಲ ಪೂರೈಕೆ ಸುಗಮಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಫ್ತು ಸುಂಕವನ್ನು ಸರ್ಕಾರ ಮತ್ತೆ ಕಡಿಮೆ ಮಾಡಿದೆ.
ಇದನ್ನೂ ಓದಿ: ವಾರಾಂತ್ಯದಲ್ಲಿ ತಗ್ಗಿದ ಚಿನ್ನದ ಬೆಲೆ; ಇಲ್ಲಿದೆ ದರಪಟ್ಟಿ
ಪೆಟ್ರೋಲಿಯಂ ರಫ್ತು ಸುಂಕದಲ್ಲಿ ಇಳಿಕೆ
- ಪೆಟ್ರೋಲ್ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ₹3 ರಿಂದ ₹1.5 ಕ್ಕೆ ಇಳಿಸಲಾಗಿದೆ. ಇದು ಸಂಪೂರ್ಣವಾಗಿ ‘ವಿಶೇಷ ಹೆಚ್ಚುವರಿ ಅಬಕಾರಿ ಸುಂಕ’ (SAED) ರೂಪದಲ್ಲಿರಲಿದ್ದು, ರಸ್ತೆ ಮತ್ತು ಮೂಲಸೌಕರ್ಯ ಸೆಸ್ (RIC) ಶೂನ್ಯವಾಗಿರುತ್ತದೆ.
- ಡೀಸೆಲ್ ರಫ್ತಿನ ಮೇಲಿನ ಸುಂಕವನ್ನು ಪ್ರತಿ ಲೀಟರ್‌ಗೆ ₹16.5 ರಿಂದ ₹13.5 ಕ್ಕೆ ಕಡಿತಗೊಳಿಸಲಾಗಿದೆ.
- ವಿಮಾನ ಇಂಧನ (ATF) ಅಥವಾ ಏವಿಯೇಷನ್ ಟರ್ಬೈನ್ ಫ್ಯುಯೆಲ್ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ₹16 ರಿಂದ ₹9.5 ಕ್ಕೆ ಇಳಿಸಲಾಗಿದೆ.
ಆಂತರಿಕವಾಗಿ ಇಂಧನ ಬೆಲೆ ಇಳಿಕೆ ಇರೋದಿಲ್ಲ
ಈ ತೆರಿಗೆ ಪರಿಷ್ಕರಣೆಯು ಕೇವಲ ವಿದೇಶಗಳಿಗೆ ರಫ್ತು ಮಾಡಲಾಗುವ ಇಂಧನಕ್ಕೆ ಮಾತ್ರ ಅನ್ವಯಿಸುತ್ತದೆ. ಭಾರತದ ಒಳಗಿನ ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ (Excise Duty) ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹಾಗಾಗಿ ದೇಶೀಯ ಇಂಧನ ದರಗಳು ಸ್ಥಿರವಾಗಿರಲಿವೆ.
ಇದನ್ನೂ ಓದಿ: ಚಿನ್ನಕ್ಕಿಂತಲೂ ಬಿಟ್ಕಾಯಿನ್ ಒಂದು ಕೈ ಮೇಲೆ ಎನ್ನುತ್ತಿದ್ದ ಮಾರ್ಕ್ ಕ್ಯೂಬನ್ ಈಗ ಕೈಚೆಲ್ಲಿ ಕೂತ ಕಥೆ..!
ರಫ್ತು ಸುಂಕದ ಹಿನ್ನೆಲೆ
ಭಾರತದ ತೈಲ ಕಂಪನಿಗಳು ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ಅದನ್ನು ಪೆಟ್ರೋಲ್, ಡೀಸಲ್, ಎಟಿಎಫ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳಾಗಿ ಸಂಸ್ಕರಿಸಿ, ಅವನ್ನು ದೇಶೀಯ ಮಾರುಕಟ್ಟೆಗೆ ಪೂರೈಕೆ ಮಾಡುತ್ತಿದ್ದುದು ಮಾತ್ರವಲ್ಲ, ಬೇರೆ ಬೇರೆ ದೇಶಗಳಿಗೂ ರಫ್ತು ಮಾಡುತ್ತವೆ. ಈ ರೀತಿ ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನಲ್ಲಿ ಭಾರತ ವಿಶ್ವದ ನಂ. 5ನೇ ದೇಶವಾಗಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟು ಉದ್ಭವವಾದಾಗ ಕಚ್ಚಾ ತೈಲ ಪೂರೈಕೆ ಕಡಿಮೆಗೊಂಡ ಹಿನ್ನೆಲೆಯಲ್ಲಿ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಬೇರೆ ದೇಶಗಳಿಗೆ ರಫ್ತು ಮಾಡುವುದನ್ನು ತಡೆಯಲು ಸರ್ಕಾರ ವಿಶೇಷ ರಫ್ತು ಸುಂಕ ವಿಧಿಸಿತ್ತು.
ಅಂತರರಾಷ್ಟ್ರೀಯ ತೈಲ ದರಗಳ ಏರಿಳಿತಕ್ಕೆ ಅನುಗುಣವಾಗಿ ಪ್ರತಿ 15 ದಿನಗಳಿಗೊಮ್ಮೆ (Fortnightly) ಈ ಸುಂಕವನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದಿನ ಪರಿಷ್ಕರಣೆಯನ್ನು ಮೇ 16 ರಂದು ಮಾಡಲಾಗಿತ್ತು. ಪ್ರಸ್ತುತ ಜಾಗತಿಕ ಇಂಧನ ಮಾರ್ಜಿನ್‌ನಲ್ಲಿನ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಜೂನ್ 1 ರಿಂದ ಅನ್ವಯವಾಗುವಂತೆ ದರಗಳನ್ನು ಕಡಿತಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





