ಓಪನ್ ಅಕ್ಸೆಸ್ ಮೂಲಕ ವಿದ್ಯುತ್ ಖರೀದಿ; ಸೆಂಟ್ರಲ್ ರೈಲ್ವೆಗೆ ಆರು ಸಾವಿರ ಕೋಟಿ ರೂ ಉಳಿತಾಯ

Indian Railways open access power procurement methods: ಓಪನ್ ಅಕ್ಸೆಸ್ ಮೂಲಕ ಭಾರತೀಯ ರೈಲ್ವೆ ವಿದ್ಯುತ್ ಖರೀದಿ ಮಾಡುತ್ತಿದೆ. ಈ ವಿಚಾರದಲ್ಲಿ ಸೆಂಟ್ರಲ್ ರೈಲ್ವೆ ಮುಂಚೂಣಿಯಲ್ಲಿದೆ. ಕಳೆದ 9-10 ವರ್ಷದಲ್ಲಿ ಸೆಂಟ್ರಲ್ ರೈಲ್ವೆ ಈ ನೀತಿಯಿಂದಾಗಿ 6,005 ಕೋಟಿ ರೂ ವೆಚ್ಚ ಉಳಿಸುವಲ್ಲಿ ಸಫಲವಾಗಿದೆ. ಭಾರತೀಯ ರೈಲ್ವೆಯ ಹಸಿರು ಇಂಧನ ಬಳಕೆಯ ಗುರಿ ಈಡೇರಿಕೆ ನಿಟ್ಟಿನಲ್ಲಿ ಸೆಂಟ್ರಲ್ ರೈಲ್ವೆ ಮಾದರಿ ಎನಿಸಿದೆ.

ಓಪನ್ ಅಕ್ಸೆಸ್ ಮೂಲಕ ವಿದ್ಯುತ್ ಖರೀದಿ; ಸೆಂಟ್ರಲ್ ರೈಲ್ವೆಗೆ ಆರು ಸಾವಿರ ಕೋಟಿ ರೂ ಉಳಿತಾಯ
ಭಾರತೀಯ ರೈಲ್ವೆ

Updated on: Feb 21, 2025 | 12:54 PM

ಮುಂಬೈ, ಫೆಬ್ರುವರಿ 21: ಸದಾ ಬಂಡವಾಳ ಕೊರತೆಯ ಸಮಸ್ಯೆ ಎದುರಿಸುವ ಭಾರತೀಯ ರೈಲ್ವೆ ತನ್ನ ವೆಚ್ಚ ಕಡಿತಗೊಳಿಸುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಸೆಂಟ್ರಲ್ ರೈಲ್ವೆ ಮಾದರಿಯೊಂದನ್ನು ತೋರಿದೆ. ತನಗೆ ಅಗತ್ಯವಾಗಿರುವ ವಿದ್ಯುತ್ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುವುದು, ಹಸಿರು ಇಂಧನ ಬಳಸವುದು ಇತ್ಯಾದಿ ಕ್ರಮಗಳನ್ನು ಅನುಸರಿಸುತ್ತಿದೆ. ಇದರಿಂದಾಗಿ ಒಂದು ದಶಕದಲ್ಲಿ ಸೆಂಟ್ರಲ್ ರೈಲ್ವೆ ಸುಮಾರು 6,005 ಕೋಟಿ ರೂ ಹಣ ಉಳಿಸಲು ಶಕ್ಯವಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾಗಿದೆ.

ಈ ವರದಿ ಪ್ರಕಾರ, ಭಾರತೀಯ ರೈಲ್ವೆ ತನ್ನ ಟ್ರೈನುಗಳಿಗೆ ವಿದ್ಯುತ್ ಪೂರೈಸಲು ಡಿಸ್ಕಾಂಗಳ (ವಿದ್ಯುತ್ ವಿತರಕ ಸಂಸ್ಥೆ) ಮೇಲೆ ಅವಲಂಬಿತವಾಗಿತ್ತು. ವಿದ್ಯುತ್ ದರ ದುಬಾರಿಯಾದ್ದರಿಂದ ರೈಲ್ವೇಸ್​ಗೆ ವೆಚ್ಚ ಅಧಿಕವಾಗುತ್ತಿತ್ತು. ಕಳೆದ ಏಳೆಂಟು ವರ್ಷಗಳಿಂದ ರೈಲ್ವೆ ಇಲಾಖೆ ತನ್ನ ವೆಚ್ಚ ಕಡಿತಕ್ಕೆ ವಿವಿಧ ಮಾರ್ಗೋಪಾಯಗಳನ್ನು ಯೋಜಿಸಿದೆ. ಡಿಸ್ಕಾಂಗಳನ್ನು ಬಿಟ್ಟು, ಕಡಿಮೆ ವೆಚ್ಚಕ್ಕೆ ಸಿಗುವ ಇತರ ಮೂಲಗಳಿಂದ ವಿದ್ಯುತ್ ಖರೀದಿಸುವ ಉಪಾಯ ಅನುಸರಿಸುತ್ತಿದೆ. ಇದರಿಂದ ರೈಲ್ವೇಸ್​ನ ವೆಚ್ಚ ಸಾಕಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ: ಪಿಎಂ ಇಂಟರ್ನ್​ಶಿಪ್ ಸ್ಕೀಮ್; 2ನೇ ಸುತ್ತಿನಲ್ಲಿ 1 ಲಕ್ಷ ಇಂಟರ್ನಿಗಳಿಗೆ ಅವಕಾಶ

ಈ ವಿಚಾರದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು ಸೆಂಟ್ರಲ್ ರೈಲ್ವೆ. 2015ರಲ್ಲಿ ಇದು ಮುಕ್ತ ಮಾರುಕಟ್ಟೆಯಲ್ಲಿ ವಿದ್ಯುತ್ ಖರೀದಿ ಆರಂಭಿಸಿತು. 2015-16ರಲ್ಲಿ ಸೆಂಟ್ರಲ್ ರೈವ್ವೆ ಉಳಿತಾಯವಾಗಿದ್ದು ಕೇವಲ 161 ಕೋಟಿ ರೂ ಆದರೂ, ನಂತರದ ವರ್ಷಗಳಲ್ಲಿ ಗಮನಾರ್ಹ ಉಳಿತಾಯವಾಗಿದೆ. 2024-25ರಲ್ಲಿ 690 ಕೋಟಿ ರೂ ಉಳಿತಾಯವಾಗಿತ್ತು. 2015ರಿಂದ ಒಟ್ಟಾರೆ ಸೆಂಟ್ರಲ್ ರೈಲ್ವೆ ವಲಯಕ್ಕೆ ಉಳಿತಾಯವಾದ ಮೊತ್ತ 6,005 ಕೋಟಿ ರೂ ಎನ್ನಲಾಗಿದೆ.

ಒಂದು ಕಿಲೋವ್ಯಾಟ್ ಗಂಟೆಗೆ 8.69 ರೂ ದರದಲ್ಲಿ ವಿದ್ಯುತ್ ವಿತರಣಾ ಸಂಸ್ಥೆಗಳಿಂದ ವಿದ್ಯುತ್ ಪೂರೈಕೆಯಾಗುತ್ತಿತ್ತು. ಆ ದರವನ್ನು ಆಧರಿಸಿ ಈಗ ರೈಲ್ವೆ ಇಲಾಖೆ ಎಷ್ಟು ಹಣ ಉಳಿಸಿದೆ ಎಂದು ಅಂದಾಜಿಸಲಾಗಿದೆ. ಮುಕ್ತ ಮಾರುಕಟ್ಟೆಯಿಂದ ವಿದ್ಯುತ್ ಖರೀದಿ ಮಾಡುವ ನೀತಿಯಿಂದಾಗಿ ಹಸಿರು ಇಂಧನ ಬಳಕೆ ಹೆಚ್ಚುತ್ತಿದೆ. ಸೆಂಟ್ರಲ್ ರೈಲ್ವೆ ಈಗ ಬಹುತೇಕ ಹಸಿರು ಇಂಧನದಿಂದ ಟ್ರೈನುಗಳನ್ನು ಓಡಿಸುತ್ತಿದೆ.

ಇದನ್ನೂ ಓದಿ: ಪುಣೆ ಬಳಿ ಟೆಸ್ಲಾ ಫ್ಯಾಕ್ಟರಿ ಸ್ಥಾಪನೆ? ಟಾಟಾ ಮೋಟಾರ್ಸ್ ಜೊತೆ ಟೆಸ್ಲಾ ಹೊಂದಾಣಿಕೆಗೆ ಮಾತುಕತೆ: ವರದಿ

ಸೆಂಟ್ರಲ್ ರೈಲ್ವೆ ವಲಯ ಮೂರು ರಾಜ್ಯಗಳ ಪ್ರದೇಶಗಳನ್ನು ಒಳಗೊಂಡಿದೆ. ಮಹಾರಾಷ್ಟ್ರದ ಬಹುತೇಕ ಭಾಗವು ಸೆಂಟ್ರಲ್ ರೈಲ್ವೆಗೆ ಬರುತ್ತದೆ. ಮಧ್ಯಪ್ರದೇಶದ ಉತ್ತರ ಮತ್ತು ದಕ್ಷಿಣ ಭಾಗ, ಹಾಗು ಕರ್ನಾಟಕದ ಈಶಾನ್ಯ ಭಾಗವು ಈ ಕೇಂದ್ರ ರೈಲ್ವೆ ವಲಯಕ್ಕೆ ಸೇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ