ಪುಣೆ ಬಳಿ ಟೆಸ್ಲಾ ಫ್ಯಾಕ್ಟರಿ ಸ್ಥಾಪನೆ? ಟಾಟಾ ಮೋಟಾರ್ಸ್ ಜೊತೆ ಟೆಸ್ಲಾ ಹೊಂದಾಣಿಕೆಗೆ ಮಾತುಕತೆ: ವರದಿ
Tesla Cars in India: ಟೆಸ್ಲಾ ಕಾರುಗೆ ಆಮದು ಸುಂಕವನ್ನು ಸರ್ಕಾರ ಇಳಿಸಿದ ಬೆನ್ನಲ್ಲೇ ಈಗ ಟೆಸ್ಲಾ ಸಂಸ್ಥೆಯಿಂದ ಭಾರತದಲ್ಲಿ ಫ್ಯಾಕ್ಟರಿ ಸ್ಥಾಪನೆಗೆ ಸ್ಥಳ ಶೋಧ ಚುರುಕುಗೊಂಡಿದೆ. ವರದಿಗಳ ಪ್ರಕಾರ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮೊದಲಾದ ರಾಜ್ಯಗಳಲ್ಲಿ ಸ್ಥಳ ನೋಡಲಾಗುತ್ತಿದೆ. ಪುಣೆಯಲ್ಲಿ ಫ್ಯಾಕ್ಟರಿ ಸ್ಥಾಪನೆ ಆಗುವ ಸಾಧ್ಯತೆ ದಟ್ಟವಾಗಿದೆ.

ಮುಂಬೈ, ಫೆಬ್ರುವರಿ 20: ಭಾರತ ಸರ್ಕಾರಕ್ಕೆ ಕೊಟ್ಟ ಮಾತಿನ ಅನುಸಾರ ಟೆಸ್ಲಾ ಕಂಪನಿ ಭಾರತದಲ್ಲಿ ಫ್ಯಾಕ್ಟರಿ ಸ್ಥಾಪನೆ ಪ್ರಕ್ರಿಯೆ ಆರಂಭಿಸಿದೆ. ಮೊದಲ ಹಂತದಲ್ಲಿ ಅದು ಫ್ಯಾಕ್ಟರಿಗೆ ಸ್ಥಳಗಳನ್ನು ಶೋಧಿಸುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ಹರ್ಯಾಣ ಮೊದಲಾದ ರಾಜ್ಯಗಳಲ್ಲಿ ಅದು ಸೂಕ್ತ ಸ್ಥಳವನ್ನು ಹುಡುಕುತ್ತಿದೆ. ವರದಿಗಳ ಪ್ರಕಾರ, ಮಹಾರಾಷ್ಟ್ರದ ಪುಣೆ ನಗರದ ಸಮೀಪದಲ್ಲೇ ಟೆಸ್ಲಾದ ಫ್ಯಾಕ್ಟರಿ ಸ್ಥಾಪನೆ ಆಗಬಹುದು. ಇದೇ ವೇಳೆ, ಭಾರತದ ಟಾಟಾ ಮೋಟಾರ್ಸ್ ಸಂಸ್ಥೆ ಜೊತೆ ಹೊಂದಾಣಿಕೆಯಲ್ಲಿ ಟೆಸ್ಲಾ ತನ್ನ ಫ್ಯಾಕ್ಟರಿ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಟಾಟಾ ಮೋಟಾರ್ಸ್ ಮತ್ತು ಟೆಸ್ಲಾ ಅಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಿರುವುದು ತಿಳಿದುಬಂದಿದೆ.
ಪುಣೆಯಲ್ಲಿ ಟೆಸ್ಲಾ ಫ್ಯಾಕ್ಟರಿ ಯಾಕೆ?
ಭಾರತದ ಆಟೊಮೊಬೈಲ್ ಉತ್ಪಾದನಾ ಅಡ್ಡೆಗಳಲ್ಲಿ ಪುಣೆಯೂ ಒಂದು. ಮರ್ಸಿಡೆಸ್ ಬೆಂಜ್, ಮಹೀಂದ್ರ ಅಂಡ್ ಮಹೀಂದ್ರ, ವೋಲ್ಸ್ವ್ಯಾಗನ್, ಬಜಾಜ್ ಆಟೊ, ಟಾಟಾ ಮೋಟಾರ್ಸ್ ಮೊದಲಾದ ಆಟೊಮೊಬೈಲ್ ಕಂಪನಿಗಳ ಘಟಕಗಳು ಇಲ್ಲಿವೆ. ಟೆಸ್ಲಾಗೆ ಕಾಂಪೊನೆಂಟ್ಗಳನ್ನು ಸರಬರಾಜು ಮಾಡುವ ಸಂಸ್ಥೆಗಳ ಘಟಕಗಳೂ ಪುಣೆಯಲ್ಲಿವೆ. ಹೀಗಾಗಿ, ಟೆಸ್ಲಾದ ಕಾರು ಫ್ಯಾಕ್ಟರಿ ಪುಣೆಯಲ್ಲೇ ತಲೆ ಎತ್ತಿದರೆ ಅಚ್ಚರಿ ಇರದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಏಪ್ರಿಲ್ನಿಂದಲೇ ಟೆಸ್ಲಾ ಕಾರು ಭಾರತದಲ್ಲಿ ಮಾರಾಟ; ಬೆಲೆ ಕೇವಲ 21 ಲಕ್ಷ ರೂ?
ಟೆಸ್ಲಾ ಫ್ಯಾಕ್ಟರಿ ಯಾವಾಗ ಶುರುವಾಗುತ್ತದೆ ಇನ್ನೂ ನಿರ್ದಿಷ್ಟಪಡಿಸಿಲ್ಲ. 2026 ಅಥವಾ 2027ರ ಒಳಗೆ ಘಟಕ ಸ್ಥಾಪನೆ ಆಗಬಹುದು. ಅಲ್ಲಿಯವರೆಗೂ ಟೆಸ್ಲಾ ಕಾರುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಏಪ್ರಿಲ್ನಿಂದಲೇ ಟೆಸ್ಲಾ ಕಾರುಗಳ ಆಮದು ಶುರುವಾಗಬಹುದು. 25,000 ಡಾಲರ್ ಅಥವಾ 21-22 ಲಕ್ಷ ರೂ ಆಸುಪಾಸಿನ ಬೆಲೆಯಲ್ಲಿ ಭಾರತದಲ್ಲಿ ಟೆಸ್ಲಾ ಕಾರುಗಳನ್ನು ಮಾರಬಹುದು ಎನ್ನಲಾಗುತ್ತಿದೆ.
ಭಾರತದಲ್ಲಿ ಟೆಸ್ಲಾ ಮಾಡಲ್ ವೈ ಕಾರು?
ಟೆಸ್ಲಾದ ಮಾಡಲ್ 3 ಮತ್ತು ಮಾಡಲ್ ವೈ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗಬಹುದು. ಚೀನಾ ಮತ್ತು ಅಮೆರಿಕದಲ್ಲಿ ಟೆಸ್ಲಾದ ಎಲ್ಲಾ ಮಾಡಲ್ ಕಾರುಗಳೂ ತಯಾರಾಗುತ್ತಿವೆ. ಜರ್ಮನಿಯಲ್ಲಿ ಟೆಸ್ಲಾ ಮಾಡಲ್ ವೈ ಕಾರುಗಳನ್ನು ತಯಾರಿಸಲಾಗುತ್ತಿದೆ. ಟೆಸ್ಲಾ ಮಾಡಲ್ 3 ಕಾರುಗಳು ಅಮೆರಿಕ ಮತ್ತು ಚೀನಾದಲ್ಲಿ ತಯಾರಾಗುತ್ತಿವೆ. ಇವೆರಡೂ ಮಾಡಲ್ ಕಾರುಗಳ ಬೆಲೆ 50-70 ಲಕ್ಷ ರೂ ಆಸುಪಾಸು ಆಗುತ್ತದೆ. ಇದನ್ನು 21 ಲಕ್ಷ ರೂಗೆ ಇಳಿಸುವುದು ಅಸಾಧ್ಯದ ಮಾತು ಎನ್ನಲಾಗುತ್ತಿದೆ. ಅಥವಾ ಒಂದಷ್ಟು ಪ್ರಮುಖ ಫೀಚರ್ಗಳಿಲ್ಲದೇ ಸರಳವಾದ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಯೂ ಇಲ್ಲದಿಲ್ಲ.
ಡೊನಾಲ್ಡ್ ಟ್ರಂಪ್ ಅಸಮಾಧಾನ…
ಟೆಸ್ಲಾ ಕಾರಿನ ಫ್ಯಾಕ್ಟರಿಯನ್ನು ಭಾರತದಲ್ಲಿ ಸ್ಥಾಪನೆ ಮಾಡುವುದರ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೆಸ್ಲಾ ಫ್ಯಾಕ್ಟರಿ ಭಾರತದಲ್ಲಿ ಸ್ಥಾಪನೆಯಾದರೆ ಅಮೆರಿಕಕ್ಕೆ ಏನು ಲಾಭ ಎನ್ನುವುದು ಟ್ರಂಪ್ ಪ್ರಶ್ನೆ.
ಇದನ್ನೂ ಓದಿ: ಕಾರಿನ ಟೈರ್ ಯಾವ ಸಮಯದಲ್ಲಿ ಬದಲಾಯಿಸಬೇಕು?: ಈ ವಿಚಾರ ನಿಮಗೆ ತಿಳಿದಿರಲಿ
ಟೆಸ್ಲಾಗೆ ಭಾರತದ ಮಾರುಕಟ್ಟೆ ಬೇಕು…
ಟೆಸ್ಲಾ ಕಾರುಗಳಿಗೆ ಸದ್ಯ ದೊಡ್ಡ ಮಾರುಕಟ್ಟೆ ಇದ್ದದ್ದು ಅಮೆರಿಕ ಮತ್ತು ಚೀನಾ. ಚೀನಾ ದೇಶದಲ್ಲಿ ಬಿವೈಡಿ ಇತ್ಯಾದಿ ಕಾರ್ ಕಂಪನಿಗಳು ಟೆಸ್ಲಾಗೆ ತೀವ್ರ ಪೈಪೋಟಿ ನೀಡಿರುವುದು ಮಾತ್ರವಲ್ಲ, ಹೆಚ್ಚಿನ ಮಾರುಕಟ್ಟೆ ಆಕ್ರಮಿಸಿಕೊಂಡಿವೆ. ಹೀಗಾಗಿ, ಟೆಸ್ಲಾ ಭಾರತೀಯ ಮಾರುಕಟ್ಟೆಯತ್ತ ಮುಖ ಮಾಡುವುದು ಅನಿವಾರ್ಯ. ಇಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಆರಂಭಿಕ ಹಂತದಲ್ಲಿದೆ. ಇಲ್ಲಿ ಹೆಜ್ಜೆ ಇಡಲು ಸಕಾಲವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ