ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ (Diwali) ಹಬ್ಬ (Festival). ಬೆಳಕಿನ ಹಬ್ಬದ ಸಂದರ್ಭದಲ್ಲಿ ಜನ ಸಿಹಿ ಹಂಚುವುದು, ಆಪ್ತ ಸ್ನೇಹಿತರಿಗೆ, ಸಬಂಧಿಕರಿಗೆ ಉಡುಗೊರೆಗಳನ್ನು (Gift) ನೀಡುವುದು ಸಾಮಾನ್ಯ. ಅದೇ ರೀತಿ ಕಚೇರಿಗಳಲ್ಲಿಯೂ ಉದ್ಯೋಗಿಗಳಿಗೆ ಬೋನಸ್, ಉಡುಗೊರೆ, ಸಿಹಿ ಹಂಚಿಕೆ ನಡೆಯುತ್ತದೆ. ಈ ಪ್ರಕ್ರಿಯೆಗಳು ದೀಪಾವಳಿ ಆಚರಣೆಯ ಪ್ರಮುಖ ಭಾಗವೇ ಆಗಿಬಿಟ್ಟಿದೆ. ಹಣಕಾಸು ವರ್ಷದಲ್ಲಿ ನಾವು ಸ್ವೀಕರಿಸುವ ಕೆಲವು ಉಡುಗೊರೆಗಳೂ ಆದಾಯ ತೆರಿಗೆ (Income Tax) ವ್ಯಾಪ್ತಿಯಲ್ಲಿ ಬರುತ್ತದೆ (IT Act) ಎಂಬ ಬಗ್ಗೆ ಬಹುತೇಕರಿಗೆ ಅರಿವಿರುವುದಿಲ್ಲ. ಅಥವಾ ಆ ಬಗ್ಗೆ ತಿಳಿಯುವ ಗೋಜಿಗೆ ಹೋಗುವುದಿಲ್ಲ.
ಆದಾಯ ತೆರಿಗೆ ನಿಯಮದ ಅಡಿಯಲ್ಲಿ ಕೆಲವು ನಿರ್ದಿಷ್ಟ ಉಡುಗೊರೆಗಳ ಮೇಲೆ ಅವುಗಳ ಮೌಲ್ಯ, ಯಾರು ಸ್ವೀಕರಿಸುತ್ತಿದ್ದಾರೆ ಎಂಬುದನ್ನು ಆಧರಿಸಿ ತೆರಿಗೆ ವಿಧಿಸಲು ಅವಕಾಶವಿದೆ. ವಿನಾಯಿತಿಯ ವ್ಯಾಪ್ತಿಯಲ್ಲಿ ಬಾರದೆ ಇರುವ ಉಡುಗೊರೆಗಳನ್ನು ಸ್ವೀಕರಿಸುವುದಾದರೆ, ಆ ಬಗ್ಗೆ ನಾವು ಆದಾಯ ತೆರಿಗೆ ಮಾಹಿತಿ ಸಲ್ಲಿಸುವಾಗ ಉಲ್ಲೇಖಿಸಬೇಕಾಗುತ್ತದೆ.
ಯಾವ ಉಡುಗೊರೆಗೆ ತೆರಿಗೆ, ಯಾವುದಕ್ಕೆ ವಿನಾಯಿತಿ?:
ಒಬ್ಬ ವ್ಯಕ್ತಿಯು ಒಂದು ಹಣಕಾಸು ವರ್ಷದಲ್ಲಿ ಪಡೆಯುವ ಉಡುಗೊರೆಯ ಮೊತ್ತ 50,000 ರೂ. ಮೀರಿದ್ದರೆ ಅದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 56(2) ಅಡಿಯಲ್ಲಿ ತೆರಿಗೆ ಪಾವತಿಸಲು ಅರ್ಹವಾಗಿದೆ. ಈ ಉಡುಗೊರೆಗಳು ನಗದಿನ ರೂಪದಲ್ಲಿರಬಹುದು ಅಥವಾ ಇತರ ರೂಪದಲ್ಲಿರಬಹುದು. ಆದರೆ, ಅತ್ಯಾಪ್ತ ಸಂಬಂಧಿಕರು ಅಥವಾ ಕುಟುಂಬದ ಸದಸ್ಯರು ನೀಡುವ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ಇದೆ. ಅಂದರೆ, ಸಹೋದರ, ಸಹೋದರಿ, ಪೋಷಕರು ಮತ್ತು ಸಂಗಾತಿ ನೀಡುವ ಉಡುಗೊರೆಗಳಿಗೆ ತೆರಿಗೆ ಪಾವತಿಸಬೇಕಾಗಿಲ್ಲ.
ಇದನ್ನೂ ಓದಿ: Diwali 2022: ಹಬ್ಬ ಆಚರಿಸಲು ಊರಿಗೆ ಮರಳುತ್ತಿರುವವರಿಗೆ ಶುಭಸುದ್ದಿ, ಮೂರು ವಿಶೇಷ ರೈಲುಗಳ ಸಂಚಾರ
ತೆರಿಗೆ ಕಾಯ್ದೆಗಳ ಪ್ರಕಾರ, ಸಂಬಂಧಿಕರ ವ್ಯಾಪ್ತಿಯಲ್ಲಿ ಸ್ನೇಹಿತರು ಬರುವುದಿಲ್ಲ. ಹೀಗಾಗಿ ಸ್ನೇಹಿತರಿಂದ ಪಡೆಯುವ ಉಡುಗೊರೆಗಳನ್ನು ಇತರ ಮೂಲಗಳಿಂದ ಬರುವ ಆದಾಯ ಎಂದೇ ಪರಿಗಣಿಸಲಾಗುತ್ತದೆ.
ಉಡುಗೊರೆಗಳನ್ನು ಸಹ ಹಲವು ರೀತಿಯಲ್ಲಿ ವಿಂಗಡಿಸಲಾಗಿದೆ. ನಗದು, ಡ್ರಾಫ್ಟ್ ಅಥವಾ ಚೆಕ್ ಮೂಲಕ ನೀಡುವುದನ್ನು ಹಣಕಾಸು ಉಡುಗೊರೆ ಎಂದು ಪರಿಗಣಿಸಲಾಗಿದೆ. ಇವುಗಳ ಮೊತ್ತ ಒಂದು ಹಣಕಾಸು ವರ್ಷದಲ್ಲಿ 50,000 ರೂ ಮೀರಿದ್ದರೆ ಅಂಥ ಉಡುಗೊರೆಗೆ ತೆರಿಗೆ ಪಾವತಿಸಬೇಕಾಗುತ್ತದೆ. ಭೂಮಿ, ಕಟ್ಟಡ ಅಥವಾ ಇತರ ಸ್ಥಿರಾಸ್ತಿ ರೂಪದ ಉಡುಗೊರೆಗೆ ಈ ಉಡುಗೊರೆಯ ಮುದ್ರಾಂಕ ತೆರಿಗೆ (ಸ್ಟ್ಯಾಂಪ್ ಡ್ಯುಟಿ) ಮೌಲ್ಯ 50,000 ರೂ. ಮೀರಿದ್ದರೆ ತೆರಿಗೆ ಪಾವತಿಸಬೇಕು.
ಆಭರಣ, ಪೈಂಟಿಂಗ್ಗಳು, ಡ್ರಾಯಿಂಗ್ಗಳು, ಷೇರು/ಸೆಕ್ಯೂರಿಟಿಗಳು ಹಾಗೂ ಇತರ ಚರಾಸ್ತಿ ಉಡುಗೊರೆ ಪಡೆಯುವಾಗ ಅವುಗಳ ಮಾರುಕಟ್ಟೆ ಮೌಲ್ಯ 50,000 ರೂ.ಗಿಂತ ಹೆಚ್ಚಿದ್ದರೆ ತೆರಿಗೆ ಪಾವತಿಸಬೇಕು. ಆಭರಣದ ಉಡುಗೊರೆ ತೆರಿಗೆ ವ್ಯಾಪ್ತಿಗೆ ಒಳಪಟ್ಟರೂ ಮೋಟಾರು ಕಾರನ್ನು ಚರಾಸ್ತಿ ವ್ಯಾಪ್ತಿಯಲ್ಲಿ ಒಳಪಡಿಸಿಲ್ಲ. ಹೀಗಾಗಿ ಕಾರು ಉಡುಗೊರೆ ಮೇಲೆ ತೆರಿಗೆ ಪಾವತಿಸಬೇಕಾಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:49 pm, Tue, 18 October 22