ಕ್ಯಾಲಿಫೋರ್ನಿಯಾ, ನವೆಂಬರ್ 29: ಅಮೆರಿಕದ ವಿಶ್ವಖ್ಯಾತ ಹೂಡಿಕೆದಾರ ವಾರನ್ ಬಫೆಟ್ (Warren Buffett) ಅವರ ಬಿಸಿನೆಸ್ ಪಾರ್ಟ್ನರ್ ಮತ್ತು ಆಪ್ತ ಸ್ನೇಹಿತರಾಗಿದ್ದ ಚಾರ್ಲೀ ಮುಂಗರ್ (Charlie Munger) ಅವರ ಮಂಗಳವಾರ (ನ. 28) ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು. ಡಿಸೆಂಬರ್ 31 ಕಳೆದಿದ್ದರೆ ಅವರು ಶತಾಯುಷಿ ಆಗಿರುತ್ತಿದ್ದರು. ಬರ್ಕ್ಶೈರ್ ಹಾಥವೇ ಸಂಸ್ಥೆಯಲ್ಲಿ ಹಲವಾರು ದಶಕಗಳಿಂದ ಅವರು ವೈಸ್ ಛೇರ್ಮನ್ ಆಗಿ ಕೆಲಸ ಮಾಡಿದ್ದರು. ಬರ್ಕ್ಶೈರ್ ಹಾಥವೇ ಸಂಸ್ಥೆ ಈ ನಿಧನವಾರ್ತೆಯನ್ನು ಮಾಧ್ಯಮಗಳಿಗೆ ತಿಳಿಸಿದೆ.
‘ಕ್ಯಾಲಿಫೋರ್ನಿಯಾ ಆಸ್ಪತ್ರೆಯೊಂದರಲ್ಲಿ ಇಂದು ಬೆಳಗ್ಗೆ ಚಾರ್ಲೀ ಮುಂಗರ್ ಅವರು ನಿಧನ ಹೊಂದಿದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ,’ ಎಂದು ಬರ್ಕ್ಶೈರ್ ಹಾಥವೇ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
‘ಚಾರ್ಲೀ ಅವರ ಪಾಲ್ಗೊಳ್ಳುವಿಕೆ, ಹಿತನುಡಿ ಇಲ್ಲದೇ ಇವತ್ತು ಬರ್ಕ್ಶೈರ್ ಹಾತವೇ ಇವತ್ತಿನ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಸಂಸ್ಥೆಯ ಸಂಸ್ಥಾಪಕ ವಾರನ್ ಬಫೆಟ್ ಕೂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆ, ಏನು ಲಾಭ, ಅರ್ಜಿ ಸಲ್ಲಿಕೆ ಹೇಗೆ, ವಯೋಮಿತಿ ಎಷ್ಟು? ಇಲ್ಲಿದೆ ಡೀಟೇಲ್ಸ್
ವಾರನ್ ಬಫೆಟ್ ಅವರಿಗೆ 93 ವರ್ಷ ವಯಸ್ಸಾಗಿದ್ದರೆ, ಚಾರ್ಲೀ ಮುಂಗರ್ ಅವರಿಗೆ 99 ವರ್ಷ ವಯಸ್ಸಾಗಿತ್ತು. ಇಬ್ಬರೂ ಕೂಡ ಅಮೆರಿಕದ ನೆಬ್ರಾಸ್ಕ ರಾಜ್ಯದ ಒಮಾಹ ಪ್ರದೇಶದಲ್ಲಿ ಜನಿಸಿ ಅಲ್ಲಿಯೇ ಬೆಳೆದವರು. ಆರು ದಶಕಗಳ ಕಾಲ ಅವರಿಬ್ಬರ ಗಾಢ ಸ್ನೇಹ ಇತ್ತು. 1959ರಲ್ಲಿ ಇಬ್ಬರು ಮೊದಲ ಬಾರಿಗೆ ಸಂಧಿಸಿದ್ದು. ಅಲ್ಲಿಂದ ಅವರ ಸ್ನೇಹ ಪರ್ವ 60 ವರ್ಷಕ್ಕೂ ಹೆಚ್ಚು ಕಾಲ ಇತ್ತು. ಇಬ್ಬರೂ ಕೇವಲ ಆಪ್ತ ಸ್ನೇಹಿತರು ಮಾತ್ರವೇ ಆಗಿರಲಿಲ್ಲ, ಒಳ್ಳೆಯ ಬಿಸಿನೆಸ್ ಪಾರ್ಟ್ನರ್ಸ್ ಆಗಿದ್ದರು. ಬಿಸಿನೆಸ್ ಮತ್ತು ಸ್ನೇಹ ಎರಡೂ ಅವರಿಬ್ಬರನ್ನು ಹೆಚ್ಚು ಆಪ್ತರನ್ನಾಗಿಸಿದ್ದು ವಿಶೇಷ.
ಚಾರ್ಲೀ ಮುಂಗರ್ 1978ರಲ್ಲಿ ಬರ್ಕ್ಶೈರ್ ಹಾಥವೇ ಸಂಸ್ಥೆಗೆ ವೈಸ್ ಛೇರ್ಮನ್ ಆಗಿ ಕೆಲಸಕ್ಕೆ ಸೇರಿದರು. ಆಗ ಅದು ಒಂದು ಸಣ್ಣ ಜವಳಿ ಸಂಸ್ಥೆಯಾಗಿತ್ತು. ಇವರ ವ್ಯಾವಹಾರಿಕ ಚತುರತೆಯಿಂದ ಇವತ್ತು ಅದು 780 ಬಿಲಿಯನ್ ಡಾಲರ್ಗೂ ಹೆಚ್ಚು ಮೌಲ್ಯದ ಬೃಹತ್ ಸಮೂಹ ಸಂಸ್ಥೆಯಾಗಿ ಬೆಳೆದಿದೆ.
ಇದನ್ನೂ ಓದಿ: ಅದಾನಿ ಗ್ರೂಪ್ ಷೇರುಸಂಪತ್ತು ಒಂದೇ ದಿನದಲ್ಲಿ 1 ಲಕ್ಷ ಕೋಟಿ ರೂನಷ್ಟು ಹೆಚ್ಚಳ; ಹಿಂಡನ್ಬರ್ಗ್ ಘಟನೆ ಬಳಿಕ ಇಂಥದ್ದು ಇದೇ ಮೊದಲು
99 ವರ್ಷ ವಯಸ್ಸಾದರೂ ಚಾರ್ಲೀ ಮುಂಗರ್ ಕಾಯಕ ಬಿಟ್ಟಿರಲಿಲ್ಲ. ಹೂಡಿಕೆ ಬಗ್ಗೆ ಅಪಾರ ಜ್ಞಾನ ಮತ್ತು ಚಾಕಚಕ್ಯತೆ ಹೊಂದಿದ್ದರು. ವಾರನ್ ಬಫೆಟ್ ಒಬ್ಬ ಅಪ್ರತಿಮ ಮತ್ತು ಯಶಸ್ವಿ ಹೂಡಿಕೆದಾರರಾಗಿ ಹೊರಹೊಮ್ಮಲು ಮುಖ್ಯ ಕಾರಣವೆ ಚಾರ್ಲೀ ಅವರಾಗಿದ್ದರು. ಹೂಡಿಕೆಗೆ ಒಳ್ಳೆಯ ಕಂಪನಿಗಳನ್ನು ಗುರುತಿಸುವ ಮತ್ತು 5, 10, 20 ವರ್ಷ ಅವಧಿಗೆ ಯಾವುದು ಉತ್ತಮ ಹೂಡಿಕೆ ಎಂಬುದನ್ನು ಗುರುತಿಸುವ ಕಲೆ ಅವರಿಗೆ ಸಿದ್ಧಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ