ನವದೆಹಲಿ: ಕೆಲ ಮಾರ್ಗಗಳಲ್ಲಿ ವಿಮಾನ ಟಿಕೆಟ್ ದರವನ್ನು ಅಸಹಜ ರೀತಿಯಲ್ಲಿ ಏರಿಸದಿರಿ ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಿಮಾನ ಸಂಸ್ಥೆಗಳಿಗೆ ತಿಳಿಸಿದ್ದಾರೆ. ಮಣಿಪುರ ಇತ್ಯಾದಿ ಕೆಲ ಮಾರ್ಗಗಳಲ್ಲಿ ವಿಮಾನ ಟಿಕೆಟ್ ದರದಲ್ಲಿ ಅಸಹಜ ಏರಿಕೆ ಆಗುತ್ತಿರುವ ಬಗ್ಗೆ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸಲಹೆ ನೀಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಏರ್ಲೈನ್ಸ್ ಅಡ್ವೈಸರಿ ಗ್ರೂಪ್ ಜೊತೆ ಒಂದು ಗಂಟೆ ಅವಧಿ ಸಭೆ ನಡೆಸಿದ ಜ್ಯೋತಿರಾದಿತ್ಯ ಸಿಂಧಿಯಾ, ಆ ವೇಳೆ ಫ್ಲೈಟ್ ದರ ವಿಚಾರವನ್ನೂ ಚರ್ಚಿಸಿದ್ದರೆಂದು ಹೇಳಲಾಗಿದೆ.
ಕೆಲ ಆಯ್ದ ಮಾರ್ಗಗಳಲ್ಲಿ ಇತ್ತೀಚೆಗೆ ವಿಮಾನ ಟಿಕೆಟ್ ದರ ವಿಪರೀತ ಹೆಚ್ಚಾಗಿದೆ. ಅದರಲ್ಲೂ ಕಡಿಮೆ ಬೆಲೆಗೆ ವಿಮಾನ ಪ್ರಯಾಣ ಸೌಲಭ್ಯ ಒದಗಿಸುತ್ತಿದ್ದ ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆ ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಿದ ಬಳಿಕ ಬೆಲೆ ಏರಿಕೆ ಹೆಚ್ಚಾಗಿದೆ. ಗೋಫಸ್ಟ್ ಏರ್ಲೈನ್ಸ್ ವಿಮಾನ ಹಾರಾಡುತ್ತಿದ್ದ ಮಾರ್ಗಗಳಲ್ಲಿ ಇತರ ಏರ್ಲೈನ್ಸ್ ಸಂಸ್ಥೆಗಳು ಟಿಕೆಟ್ ದರವನ್ನು ವಿಪರೀತ ಏರಿಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: Byju’s vs Lenders: ಸಾಲಗಾರರಿಂದ ಹಿಂಸೆ; ಅಮೆರಿಕದ ಕೋರ್ಟ್ ಮೆಟ್ಟಿಲೇರಿದ ಬೆಂಗಳೂರಿನ ಬೈಜೂಸ್
ಉದಾಹರಣೆಗೆ, ಪ್ರವಾಸಿಗರು ಹೆಚ್ಚಾಗಿ ಹೋಗುವ ಮಾರ್ಗಗಳಾದ ದೆಹಲಿಯಿಂದ ಲೆಹ್, ಮತ್ತು ದೆಹಲಿಯಿಂದ ಶ್ರೀನಗರದ ಮಾರ್ಗಗಳಲ್ಲಿ ದ್ವಿಮುಖ ಪ್ರಯಾಣದ ಟಿಕೆಟ್ ಬೆಲೆ 50,000 ರೂ ವರೆಗೂ ಹೆಚ್ಚಾಗಿದೆ. ಹಿಂಸಾಚಾರ ಎದುರಿಸುತ್ತಿರುವ ಮಣಿಪುರದಿಂದ ಹೊರಹೋಗುವ ವಿಮಾನಗಳ ಟಿಕೆಟ್ ಬೆಲೆಯೂ ಬಹಳ ದುಬಾರಿಯಾಗಿದೆ ಎನ್ನುವಂತಹ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ.
ಜಾಗತಿಕವಾಗಿ ಇರುವಂತೆ ಭಾರತದಲ್ಲೂ ಏರ್ಲೈನ್ ವಲಯವನ್ನು ಡೀರೆಗ್ಯುಲೇಟ್ ಮಾಡಲಾಗಿದೆ. ಅಂದರೆ ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಲಾಗಿದೆ. ವಿಮಾನ ಟಿಕೆಟ್ ದರವು ಮಾರುಕಟ್ಟೆಯ ಬೇಡಿಕೆ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಒಂದು ಮಾರ್ಗದಲ್ಲಿ ಟಿಕೆಟ್ಗೆ ಬೇಡಿಕೆ ಹೆಚ್ಚಿದ್ದರೆ ಬೆಲೆಯೂ ಹೆಚ್ಚುತ್ತದೆ. ಅಂಥದ್ದೊಂದು ಮಾರುಕಟ್ಟೆ ನಿಯಂತ್ರಿತ ಬೆಲೆ ವ್ಯವಸ್ಥೆ ವೈಮಾನಿಕ ಕ್ಷೇತ್ರದಲ್ಲಿ ಇದೆ. ಹೀಗಾಗಿ, ಇತ್ತೀಚೆಗೆ ಆಗುತ್ತಿರುವ ಅಸಹಜ ಬೆಲೆ ಏರಿಕೆಯನ್ನು ಸರ್ಕಾರ ಹತಾಶೆಯಿಂದ ನೋಡುವಂತಾಗಿದೆ.
ಇದನ್ನೂ ಓದಿ: Go First: ಗೋ ಫಸ್ಟ್ ಭವಿಷ್ಯ ಅಭಿಲಾಷ್ ಲಾಲ್ ಕೈಯಲ್ಲಿ; ಇವರ ಬೆಂಗಳೂರು ಕನೆಕ್ಷನ್ ಬಗ್ಗೆ ಒಂದು ಮಾಹಿತಿ
ಆದರೆ, ನಿನ್ನೆ (ಜೂನ್ 5) ನಡೆದ ಸಭೆಯಲ್ಲಿ ವಿಮಾನಯಾನ ಸಚಿವರು ವಿಮಾನ ಟಿಕೆಟ್ ಬೆಲೆ ವಿಚಾರದಲ್ಲಿ ವೈಮಾನಿಕ ಸಂಸ್ಥೆಗಳು ಸ್ವಯಂ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ. ಹೆಚ್ಚು ಬೇಡಿಕೆ ಇರುವ ಮಾರ್ಗಗಳಲ್ಲಿ ತೀರಾ ಹೆಚ್ಚು ಬೆಲೆ ಏರಿಕೆ ಆಗದೇ ಇರುವಂತೆ ನಿಯಂತ್ರಿಸುವ ಒಂದು ವ್ಯವಸ್ಥೆಯನ್ನು ವಿಮಾನ ಸಂಸ್ಥೆಗಳು ಅಳವಡಿಸಿಕೊಳ್ಳಬೇಕೆಂದು ತಿಳಿಸಿದ್ದು, ವಿಮಾನ ನಿಯಂತ್ರಣ ಪ್ರಾಧಿಕಾರ ಡಿಜಿಸಿಎ ಕೂಡ ಪ್ರಯಾಣ ದರದ ಬಗ್ಗೆ ನಿಗಾ ವಹಿಸುತ್ತದೆ ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Tue, 6 June 23