
ನವದೆಹಲಿ, ನವೆಂಬರ್ 4: ಕೆಲವೇ ಪ್ರತಿಷ್ಠಿತ ಶಾಲೆಗಳಲ್ಲಿ ಇರುವಂತಹ, ಹಾಗೂ ಅಮೆರಿಕ, ಸಿಂಗಾಪುರ್, ಚೀನಾದಂತಹ ದೇಶಗಳಲ್ಲಿ ಇರುವಂತಹ ರೀತಿಯ ಟ್ರ್ಯಾಕಿಂಗ್ ಸಿಸ್ಟಂಗಳನ್ನು ಎಲ್ಲಾ ಶಾಲೆಗಳಲ್ಲೂ ಭಾರತದಲ್ಲಿ ತರಲು ಸರ್ಕಾರ ಯೋಜಿಸುತ್ತಿದೆ. ಶಾಲಾ ಮಕ್ಕಳ ಸುರಕ್ಷತೆಗೆ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ರೇಡಿಯೋ ಫ್ರೀಕ್ವೆನ್ಸಿ ಐಡಿ ಆಧಾರಿತವಾದ ಟ್ರ್ಯಾಕಿಂಗ್ ಸಿಸ್ಟಂ (RFID based tracking system) ಅನ್ನು ಅಳವಡಿಸಬಹುದು ಎಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಈ ಬಗ್ಗೆ ಮಿಂಟ್ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿದ್ದು, ಈ ಯೋಜನೆ ಜಾರಿಗೆ ಬಂದರೆ, ಮಕ್ಕಳ ಸುರಕ್ಷತೆಯನ್ನು ಪೋಷಕರು ಮತ್ತು ಶಾಲೆಗಳು ಖಚಿತಪಡಿಸಿಕೊಳ್ಳಬಹುದಾದಂತಹ ವ್ಯವಸ್ಥೆ ಏರ್ಪಡಲಿದೆ.
ಈ ವರದಿ ಪ್ರಕಾರ, ಮಕ್ಕಳನ್ನು ರಿಯಲ್ ಟೈಮ್ನಲ್ಲಿ ಟ್ರ್ಯಾಕ್ ಮಾಡಲು ಸಾಧ್ಯವಾಗುವಂತಹ ಮಾದರಿ ವ್ಯವಸ್ಥೆಯನ್ನು ಬಿಐಎಸ್ ಅಥವಾ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಭಿವೃದ್ಧಿಪಡಿಸುತ್ತಿದೆ. ಶಾಲಾ ಬಸ್ಸುಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಹೇಗೆ ಖಚಿತಪಡಿಸಬಹುದು ಎಂದು ಇದೇ ಬಿಐಎಸ್ ಒಂದು ರಿಸರ್ಚ್ ಪ್ರಾಜೆಕ್ಟ್ ಕೈಗೊಳ್ಳುತ್ತಿದೆ.
ಬೇರೆ ಕೆಲ ದೇಶಗಳಲ್ಲಿ ಬಳಕೆಯಾಗುತ್ತಿರುವ ಆರ್ಎಫ್ಐಡಿ ಮತ್ತು ಜಿಪಿಎಸ್ ತಂತ್ರಜ್ಞಾನಗಳನ್ನು ಬಳಸಿ ಶಾಲಾ ಬಸ್ಸುಗಳನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆ ಇದೆ. ಈ ಮಾದರಿಯನ್ನು ಭಾರತದಲ್ಲಿ ತರುವ ಬಗ್ಗೆ ಬಿಐಎಸ್ ತನ್ನ ರಿಸರ್ಚ್ ಪ್ರಾಜೆಕ್ಟ್ನಲ್ಲಿ ಅವಲೋಕಿಸಲಿದೆ.
ಇದನ್ನೂ ಓದಿ: ವಂದೇ ಭಾರತ್ ಸ್ಲೀಪರ್ ಟ್ರೈನುಗಳ ಬಿಡುಗಡೆ ಮತ್ತಷ್ಟು ವಿಳಂಬ; ಕೆಲ ಸಮಸ್ಯೆಗಳು ಪತ್ತೆ
ಮಕ್ಕಳಿಗೆ ರೇಡಿಯೋ ಫ್ರೀಕ್ವೆನ್ಸಿ ಐಡಿ ಟ್ಯಾಗ್ಗಳನ್ನು ನೀಡಲಾಗುತ್ತದೆ. ಶಾಲಾ ಬಸ್ಸುಗಳಲ್ಲಿ ಆರ್ಎಫ್ಐಡಿ ರೀಡರ್ಗಳನ್ನು ಇಡಲಾಗುತ್ತದೆ. ಇದರ ಜೊತೆಗೆ ಜಿಪಿಎಸ್, ಜಿಎಸ್ಎಂ ಕಮ್ಯೂನಿಕೇಶನ್ ಮಾಡ್ಯೂಲ್, ಮತ್ತು ಐಪಿ ಆಧಾರಿತ ಕ್ಯಾಮೆರಾಗಳನ್ನೂ ಬಸ್ಸುಗಳಲ್ಲಿ ಅಳವಡಿಸಲಾಗಿರುತ್ತದೆ.
ಮಗು ಬಸ್ಸು ಹತ್ತಿದಾಗ ಆರ್ಎಫ್ಐಡಿ ಟ್ಯಾಗ್ ಮೂಲಕ ಟ್ರ್ಯಾಕ್ ಆಗತೊಡಗುತ್ತದೆ. ಮಗು ಬಸ್ಸಿನಿಂದ ಕೆಳಗಿಳಿದಾಗಲೂ ಅದು ದಾಖಲಾಗುತ್ತದೆ. ಮಗು ಬಸ್ಸನ್ನು ಎಲ್ಲಿ ಹತ್ತಿದ್ದು, ಎಲ್ಲಿ ಇಳಿದಿದ್ದು ಎಂಬುದೆಲ್ಲವೂ ರಿಯಲ್ ಟೈಮ್ನಲ್ಲಿ ದಾಖಲಾಗುತ್ತದೆ. ಮಗುವಿನ ಪೋಷಕರು ಇದನ್ನು ರಿಯಲ್ ಟೈಮ್ನಲ್ಲಿ ನೋಡಬಹುದು. ಶಾಲಾ ಆಡಳಿತವೂ ಕೂಡ ಎಲ್ಲಾ ಶಾಲಾ ಬಸ್ಸುಗಳಲ್ಲಿನ ಮಕ್ಕಳ ಚಲನವಲನಗಳನ್ನು ರಿಯಲ್ ಟೈಮ್ನಲ್ಲಿ ನೋಡಬಹುದು.
ಬೆಂಗಳೂರು, ದೆಹಲಿ, ಮುಂಬೈ ಮೊದಲಾದ ನಗರಗಳಲ್ಲಿ ಕೆಲ ಪ್ರತಿಷ್ಠಿತ ಶಾಲೆಗಳಲ್ಲಿ ಬಸ್ಸುಗಳಿಗೆ ಜಿಎಸ್ಎಂ ಅಥವಾ ಜಿಪಿಎಸ್ ಆಧಾರಿತ ಟ್ರ್ಯಾಕಿಂಗ್ ಸಿಸ್ಟಂ ಚಾಲನೆಯಲ್ಲಿವೆ. ಆರ್ಎಫ್ಐಡಿ ಆಧಾರಿತವಾದ ಟ್ರ್ಯಾಕಿಂಗ್ ಸಿಸ್ಟಂ ಅಮೆರಿಕ ಮೊದಲಾದ ದೇಶಗಳಲ್ಲಿ ಅಳವಡಿಕೆ ಆಗಿದೆ.
ಇದನ್ನೂ ಓದಿ: ಕೇವಲ 1,850 ರೂಗೆ ಹಂಪಿಗೆ ಫ್ಲೈಟ್ ಹತ್ತಿ; ಬೆಂಗಳೂರಿನಿಂದ ಜಿಂದಾಲ್ ಏರ್ಪೋರ್ಟ್ಗೆ ಸ್ಟಾರ್ ಏರ್ ಫ್ಲೈಟ್ ಸೇವೆ ಆರಂಭ
ಆರ್ಎಫ್ಐಡಿಯಿಂದ ಶಾಲಾ ಮಕ್ಕಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಾಧ್ಯವಾದರೂ ಅದು ದುರ್ಬಳಕೆಯಾಗುವ ಸಾಧ್ಯತೆ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸುತ್ತಿರುವುದುಂಟು. ಆರ್ಎಫ್ಐಡಿ ಟ್ರ್ಯಾಕಿಂಗ್ ಸಿಸ್ಟಂ ಆನ್ಲೈನ್ನಲ್ಲಿ ಇರುವುದರಿಂದ, ಮಕ್ಕಳಿರುವ ಸ್ಥಳ ಮತ್ತಿತರ ದತ್ತಾಂಶವು ತಪ್ಪಾದ ಜನರ ಕೈಗೆ ಸಿಕ್ಕಿಬಿಟ್ಟರೆ ದುರ್ಬಳಕೆಯಾಗಬಹುದು ಎಂದು ಸೈಬರ್ ಸೆಕ್ಯೂರಿಟಿ ತಜ್ಞರು ಹಾಗೂ ಸುಪ್ರೀಂಕೋರ್ಟ್ ವಕೀಲರೂ ಆದ ಪವನ್ ದುಗ್ಗಲ್ ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ